ಅಯೋಧ್ಯೆ: ಕೋಟ್ಯಂತರ ಭಕ್ತರ ರಾಮ ಮಂದಿರ (Ram Mandir) ಕನಸು ನನಸಾಗುವ ದಿನ ಸನ್ನಿಹಿತವಾಗಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ರಾಮಮಂದಿರದಲ್ಲಿ ಜನವರಿ 22ರಂದು ರಾಮಲಲ್ಲಾ (Ram Lalla) ಮೂರ್ತಿಯ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆ ನಡೆಯುತ್ತಿವೆ. ಈ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಲು ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಸಹಿತ ಹಲವು ನಾಯಕರು ಅಯೋಧ್ಯೆಗೆ ಆಗಮಿಸಲಿದ್ದಾರೆ. ಈ ಮಧ್ಯೆ ರಾಮ ಮಂದಿರಕ್ಕಾಗಿ ಭಕ್ತರು ನೀಡಿದ ದೇಣಿಗೆ ಸುಮಾರು 5,000 ಕೋಟಿ ರೂ. ಎಂದು ಮೂಲಗಳು ತಿಳಿಸಿವೆ.
ವಿಶ್ವದಾದ್ಯಂತ ಇರುವ ಭಕ್ತರು ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ್ದಾರೆ. 3 ವರ್ಷಗಳಲ್ಲಿ ಒಟ್ಟು 5,000 ಕೋಟಿ ರೂ. ದೇಣಿಗೆ ಮೊತ್ತ ಸಂಗ್ರಹವಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ಈ ದೇಣಿಯನ್ನು ಟ್ರಸ್ಟ್ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಹೆಚ್ಚುವರಿಯಾಗಿ, ಆನ್ಲೈನ್ ವಹಿವಾಟು, ಚೆಕ್ ಮತ್ತು ನಗದು ಮುಂತಾದ ವಿವಿಧ ಮಾರ್ಗಗಳ ಮೂಲಕ ಪ್ರತಿದಿನ 2 ಲಕ್ಷ ರೂ.ಗಳವರೆಗೆ ದೇಣಿಗೆಗಳನ್ನು ಸ್ವೀಕರಿಸಲಾಗುತ್ತಿದೆ. ವರದಿಗಳ ಪ್ರಕಾರ, ಮಾಸಿಕ ದೇಣಿಗೆ ಸುಮಾರು 1 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳೋದೇನು?
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವೆಬ್ಸೈಟ್ ಪ್ರಕಾರ, ಪ್ರಸಿದ್ಧ ಆಧ್ಯಾತ್ಮಿಕ ಗುರು ಮೊರಾರಿ ಬಾಪು ಅತ್ಯಧಿಕ ವೈಯಕ್ತಿಕ ದೇಣಿಗೆ ನೀಡಿದ್ದಾರೆ. ಅವರು ಅಯೋಧ್ಯೆ ರಾಮ ಮಂದಿರಕ್ಕಾಗಿ ಬರೋಬ್ಬರಿ 11.3 ಕೋಟಿ ರೂ. ನೀಡಿದ್ದಾರೆ. ಇನ್ನು ಅಮೆರಿಕ, ಕೆನಡಾ ಮತ್ತು ಇಂಗ್ಲೆಂಡ್ನಲ್ಲಿರುವ ಮೊರಾರಿ ಬಾಪು ಅವರ ಅನುಯಾಯಿಗಳು ಹೆಚ್ಚುವರಿಯಾಗಿ 8 ಕೋಟಿ ರೂ.ಗಳ ಕೊಡುಗೆ ನೀಡಿದ್ದಾರೆ. ಗುಜರಾತ್ನ ವಜ್ರದ ವ್ಯಾಪಾರಿ, ಶ್ರೀ ಕೃಷ್ಣ ಎಕ್ಸ್ಪೋರ್ಟ್ ಮಾಲಕ ಗೋವಿಂದ್ಭಾಯ್ ಧೋಲಾಕಿಯ ರಾಮ ಮಂದಿರ ನಿರ್ಮಾಣಕ್ಕೆ 11 ಕೋಟಿ ರೂ. ಒದಗಿಸಿದ್ದಾರೆ.
‘ರಾಮ ಕಥೆ’ ಮೂಲಕ ಜನಪ್ರಿಯರಾಗಿರುವ ಮೊರಾರಿ ಬಾಪು
‘ರಾಮ ಕಥೆ’ ಮೂಲಕ ಮೊರಾರಿ ಬಾಪು ಅವರು ಜನಪ್ರಿಯರಾಗಿದ್ದಾರೆ. ಅವರು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಹಿಂದಿನಿಂದಲೂ ಬೆಂಬಲ ನೀಡುತ್ತ ಬಂದಿದ್ದಾರೆ. ಇವರು ಪೌರಾಣಿಕ ಮಹಾ ಕಾವ್ಯ ʼರಾಮ ಚರಿತ ಮಾನಸʼದ ಪ್ರಖ್ಯಾತ ವಿದ್ವಾಂಸರಾಗಿದ್ದು, ಐವತ್ತು ವರ್ಷಗಳಿಂದ ಪ್ರಪಂಚದಾದ್ಯಂತ ಇದರ ನಿರೂಪಣೆಯನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ: Ram Mandir: ಮಂದಿರ ಉದ್ಘಾಟನೆ ದಿನ ಮದ್ಯ ಮಾರಾಟ ಇಲ್ಲ; ಯೋಗಿ ಖಡಕ್ ಆರ್ಡರ್
ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಕಾರ್ಯ 2021ರ ಜನವರಿ 14ರಂದು ಆರಂಭವಾಗಿತ್ತು. ಅಂದಿನ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಈ ಮಹತ್ವದ ಕಾರ್ಯಕ್ಕೆ ಚಾಲನೆ ನೀಡಿದ್ದರು. ರಾಮ ಮಂದಿರ ನಿರ್ಮಾಣಕ್ಕೆ ಅವರು ಮೊದಲ ದೇಣಿಗೆ ನೀಡಿದ್ದರು. ಕೋವಿಂದ್ ಅವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ 5 ಲಕ್ಷ ರೂ,ಗಳ ಚೆಕ್ ಹಸ್ತಾಂತರಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ