ಅಯೋಧ್ಯೆ: ಕೋಟ್ಯಂತರ ಹಿಂದೂಗಳ ಕನಸು ನನಸಾಗಿಸಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ (Ram Mandir) ತಲೆ ಎತ್ತುತ್ತಿದೆ. ಜನವರಿ 22ರಂದು ಮಧ್ಯಾಹ್ನ 12.20ಕ್ಕೆ ಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನರವೇರಲಿದೆ. ಹೀಗಾಗಿ ರಾಮಮಂದಿರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಈ ಮಧ್ಯೆ ಯಾತ್ರಾರ್ಥಿಗಳಿಗೆ ಅಯೋಧ್ಯೆ ಆಡಳಿತ ಗುಡ್‌ನ್ಯೂಸ್ ನೀಡಿದೆ. ಪ್ರವಾಸಿಗರ ಅನುಕೂಲಕ್ಕಾಗಿ ʼಹೋಲಿ ಅಯೋಧ್ಯಾʼ (Holy Ayodhya) ಎಂಬ ಹೊಸ ಅಪ್ಲಿಕೇಷನ್‌ನನ್ನು ಪರಿಚಯಿಸಿದೆ.
ಆ್ಯಪ್‌ನ ವೈಶಿಷ್ಟ್ಯ
ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (Ayodhya Development Authority-ADA) ʼಹೋಲಿ ಅಯೋಧ್ಯಾʼ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದೆ. ಇದು ಅಯೋಧ್ಯೆಯಲ್ಲಿ ಕಡಿಮೆ ಬೆಲೆಯ ಹೋಂ ಸ್ಟೇಗಳನ್ನು ಹುಡುಕಲು ಪ್ರಯಾಣಿಕರಿಗೆ ಸಹಾಯ ಮಾಡುತ್ತದೆ. ಪ್ರಸ್ತುತ ಈ ಆ್ಯಪ್ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯ. ಈ ಆ್ಯಪ್ ಮೂಲಕ ಕನಿಷ್ಠ 1,000 ರೂ.ಗಳಿಂದ ಆರಂಭವಾಗುವ ಕೊಠಡಿಗಳು ದೊರೆಯುತ್ತವೆ. ಇದರಲ್ಲಿ ಹೋಟೆಲ್‌ಗಿಂತ ಹೆಚ್ಚಾಗಿ ಹೋಂಸ್ಟೇಗಳಿಗೆ ಆದ್ಯತೆ ನೀಡಲಾಗಿದೆ. ಅಯೋಧ್ಯೆ ನಗರದ ಸುಮಾರು 500 ಕಟ್ಟಡಗಳ 2,200 ಕೊಠಡಿಗಳು ಹೋಮ್ ಸ್ಟೇಗಳಾಗಿ ನೋಂದಣಿ ಮಾಡಿದ್ದು, ಪ್ರವಾಸಿಗರು ಇಲ್ಲಿ ತಂಗಬಹುದು ಎಂದು ಮೂಲಗಳು ತಿಳಿಸಿವೆ.
ಬುಕ್ಕಿಂಗ್ ವಿವರ
ಈ ಆ್ಯಪ್ ಬಳಸಿ ಯಾವುದೇ ಹೋಂಸ್ಟೇಯಲ್ಲಿ ಕೊಠಡಿಯನ್ನು ಕಾಯ್ದಿರಿಸಲು ಪ್ರಯಾಣಿಕರು ಮುಂಗಡ ಪಾವತಿ ಮಾಡುವುದು ಕಡ್ಡಾಯ. ಜತೆಗೆ ಪ್ರಸ್ತುತ ಬಳಸುತ್ತಿರುವ ಫೋನ್ ಸಂಖ್ಯೆ ಒದಗಿಸಬೇಕು. ಚೆಕ್-ಇನ್ ಸಮಯದ 24 ಗಂಟೆಗಳ ಮೊದಲು ಕಾಯ್ದಿರಿಸುವಿಕೆಯನ್ನು ರದ್ದುಗೊಳಿಸಬೇಕು. ಬಳಿಕ ಕ್ಯಾನ್ಸಲ್ ಮಾಡಿದರೆ ಯಾವುದೇ ಮರುಪಾವತಿ ದೊರೆಯುವುದಿಲ್ಲ. ಕೊಠಡಿಗಳು ಮಧ್ಯಾಹ್ನ 2 ಗಂಟೆಗೆ ಚೆಕ್ ಇನ್ ಆಗುತ್ತವೆ.
ಏತನ್ಮಧ್ಯೆ ಸುಮಾರು 8,000 ಆಹ್ವಾನಿತರನ್ನು ಸ್ವಾಗತಿಸಲು ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುತ್ತಿದೆ. ಸುಮಾರು 5,000 ಸಂತರು ಪ್ರಾನ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜನವರಿ 22ರಂದು ಅತಿ ಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಪ್ರತ್ಯೇಕ ಪಥ ನಿರ್ಮಿಸಲಾಗುವುದು. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿಯಲ್ಲಿ ಅಯೋಧ್ಯೆಗೆ ನಿತ್ಯ 3ರಿಂದ 5 ಲಕ್ಷ ಜನರ ಭೇಟಿ ನಿರೀಕ್ಷೆ!
ಜನವರಿ 22ರಂದು ರಾಮ ಮಂದಿರ ಉದ್ಘಾಟನೆಯಾಗಲಿದ್ದು, ಅಯೋಧ್ಯೆಯಲ್ಲಿ ಈಗ ಪ್ರವಾಸೋದ್ಯಮ ಚಟುವಟಿಕೆಗಳ ಗರಿಗೆದರಿವೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಹೊಸದಾಗಿ ಅಭಿವೃದ್ಧಿ ಪಡಿಸಿರುವ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳನ್ನು ಉದ್ಘಾಟಿಸಿದ್ದರು. ಇದರೊಂದಿಗೆ ಅಯೋಧ್ಯೆಗೆ ಸಂಪರ್ಕಿಸುವ ಮಾರ್ಗಗಳು ಸುಲಭಗೊಂಡಿವೆ. ಹಾಗಾಗಿ ಅಯೋಧ್ಯೆಯಲ್ಲಿ ಈಗ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಾಗಿದ್ದು, ಜನವರಿಯಲ್ಲಿ ಪ್ರತಿ ದಿನ ಅಯೋಧ್ಯೆಗೆ ಸುಮಾರು 3ರಿಂದ 5 ಲಕ್ಷ ಜನರು ಭೇಟಿ ನೀಡಲಿದ್ದಾರೆಂದು ಅಂದಾಜಿಸಲಾಗಿದೆ.
ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಉದ್ಘಾಟನೆಗೆ 8,000 ಜನರು ಮತ್ತು ದೇವಾಲಯವನ್ನು ತೆರೆದ ನಂತರ ಕನಿಷ್ಠ ಒಂದು ತಿಂಗಳವರೆಗೆ ಪ್ರತಿದಿನ 3-5 ಲಕ್ಷ ಸಂದರ್ಶಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದೆ. ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯು 2022ರಲ್ಲಿ 8,342.7% ವಾರ್ಷಿಕ ಪ್ರವಾಸೋದ್ಯಮ ಬೆಳವಣಿಗೆಯೊಂದಿಗೆ ನಂಬಲಾಗದ ರೀತಿಯಲ್ಲಿ ಏರಿಕೆಯನ್ನು ದಾಖಲಿಸಿತ್ತು. ಈ ಪೈಕಿ ಅಯೋಧ್ಯೆ ಜಿಲ್ಲೆಯಲ್ಲಿ 2.36 ಕೋಟಿ ದೇಶೀಯ ಮತ್ತು 1,465 ವಿದೇಶಿ ಪ್ರವಾಸಿಗರನ್ನು ಆಗಮಿಸಿದ್ದಾರೆ.
ಇದನ್ನೂ ಓದಿ: Ram Mandir: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ 7 ದಿನ ಯಾವೆಲ್ಲ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ?