ಅಯೋಧ್ಯೆ: ಕೋಟ್ಯಂತರ ಹಿಂದೂಗಳ ಕನಸು ನನಸಾಗಿಸಿ ಅಯೋಧ್ಯೆಯಲ್ಲಿ ರಾಮ ಮಂದಿರ (Ram Mandir) ನಿರ್ಮಾಣವಾಗುತ್ತಿದೆ. ಜನವರಿ 22ರಂದು ಭವ್ಯ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ರಾಮ ಜನ್ಮ ಭೂಮಿಯಲ್ಲಿ ಭರದ ಸಿದ್ಧತೆ ನಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಯೋಧ್ಯೆಗೆ ಪ್ರವಾಸಿಗರು ಆಗಮಿಸತೊಡಗಿದ್ದಾರೆ. ಇದು ಅಯೋಧ್ಯೆಯ ರಿಯಲ್ ಎಸ್ಟೇಟ್ ಮಾರುಕಟ್ಟೆಯ (Real estate market) ಮೇಲೂ ಪರಿಣಾಮ ಬೀರಿದೆ. ಇಲ್ಲಿ ರಿಯಲ್ ಎಸ್ಟೇಟ್ ಬೆಲೆ ನಾಲ್ಕು ಪಟ್ಟು ಹೆಚ್ಚಾಗಿದೆ. ಉತ್ತರ ಪ್ರದೇಶದ ಇತರ ದೊಡ್ಡ ನಗರಗಳಿಗೆ ಹೋಲಿಸಿದರೆ ಅಯೋಧ್ಯೆಯಲ್ಲಿ ರಿಯಲ್ ಎಸ್ಟೇಟ್ ಬೆಲೆಗಳು ಹೆಚ್ಚಾಗುತ್ತಿವೆ.
ಬೆಲೆ ಏರಿಕೆಯ ಈ ಪ್ರವೃತ್ತಿ ಸ್ವಲ್ಪ ಸಮಯದವರೆಗೆ ಹೀಗೆ ಮುಂದುವರಿಯಲಿದೆ ಮತ್ತು ಸದ್ಯ ನಿಧಾನಗೊಳ್ಳುವ ಯಾವುದೇ ಲಕ್ಷಣಗಳಿಲ್ಲ ಎಂದು ಮಾರುಕಟ್ಟೆ ತಜ್ಞರು ಊಹಿಸಿದ್ದಾರೆ. ಹೊರಗಿನ ಹೂಡಿಕೆದಾರರ ಜತೆಗೆ ಸ್ಥಳೀಯರೂ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ದೊಡ್ಡ ಹೋಟೆಲ್ ಗುಂಪುಗಳಾದ ತಾಜ್ ಮತ್ತು ರಾಡಿಸನ್ ಇಲ್ಲಿ ಭೂಮಿ ಖರೀದಿಸಲು ಆಸಕ್ತಿ ತೋರುತ್ತಿವೆ.
ಹೊರವಲಯದಲ್ಲೂ ಬೇಡಿಕೆ ಹೆಚ್ಚಳ
ವಿಶೇಷ ಎಂದರೆ ರಾಮ ಮಂದಿರ ಇರುವ ಅಯೋಧ್ಯೆ ಮಾತ್ರವಲ್ಲ ನಗರದ ಹೊರ ವಲಯದಲ್ಲಿಯೂ ಭೂಮಿಗೆ ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಫೈಜಾಬಾದ್ ರಸ್ತೆಯ ಭಾಗ. 2019ರಲ್ಲಿ ಇಲ್ಲಿ ಚದರ ಅಡಿಯ ಭೂಮಿಗೆ 400ರಿಂದ 700 ರೂ. ಇತ್ತು. 2023ರ ಅಕ್ಟೋಬರ್ ವೇಳೆಗೆ ಚದರ ಅಡಿಗೆ 1,500 ರೂ.ಗಳಿಂದ 3,000 ರೂ.ಗೆ ಬೆಲೆ ಏರಿಕೆಯಾಗಿದೆ. ಅದೇ ರೀತಿ ಅಯೋಧ್ಯೆ ನಗರದಲ್ಲಿ ಭೂಮಿಯ ಬೆಲೆ 2019ರಲ್ಲಿ ಪ್ರತಿ ಚದರ ಅಡಿಗೆ 1,000-2,000 ರೂ.ಗಳಿಂದ ಪ್ರಸ್ತುತ ಪ್ರತಿ ಚದರ ಅಡಿಗೆ 4,000-6,000 ರೂ.ಗೆ ಹೆಚ್ಚಳವಾಗಿದೆ.
ಅಭಿನಂದನ್ ಲೋಧಾ ಹೌಸ್ ಅಯೋಧ್ಯೆಯಲ್ಲಿ 25 ಎಕರೆ ವಸತಿ ನಿವೇಶನ ಅಭಿವೃದ್ಧಿ ಯೋಜನೆಯನ್ನು ಶೀಘ್ರದಲ್ಲಿಯೇ ಆರಂಭಿಸಲಿದೆ. ರಾಮ ಮಂದಿರ ನಿರ್ಮಾಣ ಮತ್ತು ನಗರದಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಿದ ಬಳಿಕ ಅಯೋಧ್ಯೆ ಜಾಗತಿಕ ಧಾರ್ಮಿಕ ಕೇಂದ್ರವಾಗಿ ಗಮನ ಸೆಳೆಯುತ್ತಿದೆ. ಅಯೋಧ್ಯೆಯ ಧಾರ್ಮಿಕ ಮಹತ್ವವನ್ನು ಪರಿಗಣಿಸಿ ಹೂಡಿಕೆದಾರರು ಈಗ ಈ ನಗರವನ್ನು ರಿಯಲ್ ಎಸ್ಟೇಟ್ ಹೂಡಿಕೆಗೆ ಅತ್ಯಂತ ಲಾಭದಾಯಕ ಸ್ಥಳವೆಂದು ಪರಿಗಣಿಸುತ್ತಿದ್ದಾರೆ.
ಭರದ ಸಿದ್ಧತೆ
ರಾಮ ಮಂದಿರದ ಉದ್ಘಾಟನೆ ದಿನ ಸಮೀಪಿಸುತ್ತಿರುವಂತೆ ಅಯೋಧ್ಯೆಯಲ್ಲಿ ಸಮರೋಪಾದಿಯಲ್ಲಿ ಸಿದ್ಧತೆ ನಡೆಯುತ್ತಿದೆ. ಅಯೋಧ್ಯೆಯ 4.40 ಎಕರೆಯಲ್ಲಿ ಪ್ರವಾಸೋದ್ಯಮ ಸೌಲಭ್ಯ ಕೇಂದ್ರವನ್ನು ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಯೋಜನೆಯಡಿ ಪ್ರವಾಸೋದ್ಯಮ ಕಚೇರಿ, ಪ್ರಯಾಣಿಕರ ವಸತಿ, ಕಲೆ ಮತ್ತು ಕರಕುಶಲ ಕೇಂದ್ರ, ಫುಡ್ ಕೋರ್ಟ್, ಶಾಪಿಂಗ್ ಮಾರ್ಟ್ ಮತ್ತು ಪಾರ್ಕಿಂಗ್ ಸ್ಥಳ ಸೇರಿದಂತೆ ವಿವಿಧ ವಾಣಿಜ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಇತ್ತೀಚೆಗೆ ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣವನ್ನು ಉದ್ಘಾಟಿಸಲಾಗಿತ್ತು.
ಇದನ್ನೂ ಓದಿ: Ram Mandir: ಸಹೋದರರ ಆತ್ಮಕ್ಕೆ ಈಗ ಶಾಂತಿ; ಆಯೋಧ್ಯೆಯಲ್ಲಿ ಗೋಲಿಬಾರ್ಗೆ ಬಲಿಯಾದ ಕೊಠಾರಿ ಸಹೋದರರ ತಂಗಿಯ ನುಡಿ