Site icon Vistara News

Ram Mandir: ಜ.22ರಂದು ಅಯೋಧ್ಯೆಗೆ ಬರಬೇಡಿ; ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಹೀಗೆ ಹೇಳಿದ್ಯಾಕೆ?

ayodhye rama mandir

ayodhye rama mandir

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ (Ram Mandir) ಜನವರಿ 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠೆ (Pran-Pratishta) ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದ್ದು, ಭರದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಂದು ದೇವಾಲಯದ ಗರ್ಭಗುಡಿ ಅಥವಾ ‘ಗರ್ಭಗೃಹ’ದಲ್ಲಿ ‘ರಾಮ್ ಲಲ್ಲಾ’ನ ಹೊಸ ವಿಗ್ರಹವನ್ನು ಇರಿಸಲಾಗುತ್ತದೆ. ಅಂದು ದೇಶಾದ್ಯಂತ ಇರುವ ಭಕ್ತ ಜನ ಪ್ರವಾಹವೇ ಅಯೋಧ್ಯೆಯತ್ತ ಹರಿದು ಬರಲಿದೆ. ʼʼಸುರಕ್ಷತೆ ದೃಷ್ಟಿಯಿಂದ ಜನವರಿ 22ರಂದು ಅಯೋಧ್ಯೆಗೆ ಬರಬೇಡಿ. ಅದು ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ನಿಮ್ಮ ಹತ್ತಿರದ ದೇವಾಲಯದಲ್ಲಿ ಒಟ್ಟುಗೂಡಿ” ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ (Champat Rai) ಮನವಿ ಮಾಡಿದ್ದಾರೆ.

ಬಹು ವರ್ಷಗಳ ಕನಸು ನನಸು

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎನ್ನುವುದು ಕೋಟ್ಯಂತರ ಹಿಂದೂಗಳ ಬಹು ವರ್ಷಗಳ ಕನಸಾಗಿತ್ತು. ಹೀಗಾಗಿ ಸಾವಿರಾರು ಮಂದಿ ಭಕ್ತರು ಮುಂದಿನ ತಿಂಗಳು ಅಯೋಧ್ಯೆಗೆ ಭೇಟಿ ನೀಡಲು ಯೋಜನೆ ರೂಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಪ್ರವಾಸಿ ಕೇಂದ್ರವಾಗಿ ಬದಲಾಗುತ್ತಿದೆ. ಜನರು ತಮ್ಮ ಮನೆಗಳಲ್ಲಿ ಹೋಮ್‌ ಸ್ಟೇಗಳನ್ನಾಗಿ ಪರಿವರ್ತಿಸುವುದರೊಂದಿಗೆ ಪ್ರವಾಸಿಗರ ಗಮನ ಸೆಳೆಯಲು ಮುಂದಾಗಿದ್ದಾರೆ. ಉದ್ಘಾಟನೆಯ ದಿನಾಂಕ ಸಮೀಪಿಸುತ್ತಿದ್ದಂತೆ ಆಸ್ತಿ ಬೆಲೆಗಳು ಉತ್ತುಂಗಕ್ಕೇರುತ್ತಿವೆ. ಹೂಡಿಕೆದಾರರು, ಹೋಟೆಲ್ ಮಾಲೀಕರು ಮತ್ತು ವ್ಯಾಪಾರಿಗಳು ಅಯೋಧ್ಯೆ ನಗರಕ್ಕೆ ಧಾವಿಸುತ್ತಿದ್ದಾರೆ.

ರಾಮ ಮಂದಿರದ ‘ಪ್ರಾಣ ಪ್ರತಿಷ್ಠಾ’ ಕಾರ್ಯಕ್ರಮದ ಪ್ರಯುಕ್ತ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳು ಸಜ್ಜಾಗುತ್ತಿದ್ದಾರೆ. ಭದ್ರತಾ ಕ್ರಮಗಳನ್ನು ಹೆಚ್ಚಿಸುತ್ತಿದ್ದಾರೆ. ನಗರಾದ್ಯಂತ ಸಿಸಿ ಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ ಮತ್ತು ಭದ್ರತೆಯನ್ನು ಪರಿಶೀಲಿಸಲು ಡ್ರೋನ್‌ಗಳನ್ನು ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 4,000 ಸಂತರು ಭಾಗವಹಿಸುವ ನಿರೀಕ್ಷೆಯಿದೆ. ಜತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ಆಗಮಿಸಲಿದ್ದಾರೆ.

ಚಂಪತ್ ರಾಯ್ ಹೇಳಿದ್ದೇನು?

ʼʼಸುರಕ್ಷತೆ ದೃಷಿಯಿಂದ ಜನವರಿ 22ರಂದು ಅಯೋಧ್ಯೆಗೆ ಬರಬೇಡಿ. ನಿಮ್ಮ ಹತ್ತಿರದ ದೇವಾಲಯದಲ್ಲಿ ಒಟ್ಟುಗೂಡಿ. ಆಗಮಿಸುವ ಭಕ್ತರಿಗೆ ಹವಾನಿಯಂತ್ರಿತ ಕೊಠಡಿಗಳಲ್ಲದಿದ್ದರೂ ಮೂಲಭೂತ ಸೌಕರ್ಯ, ಊಟ ಮತ್ತು ಮಲಗಲು ಸ್ಥಳ ಸಿಗಲಿದೆʼʼ ಎಂದು ರಾಯ್ ಹೇಳಿದ್ದಾರೆ. ʼʼಗರ್ಭಗುಡಿ ಸಿದ್ಧವಾಗಿದೆ, ವಿಗ್ರಹವೂ ಸಿದ್ಧವಾಗಿದೆ. ಇಡೀ ದೇವಾಲಯವನ್ನು ನಿರ್ಮಿಸಲು ಇನ್ನೂ ಎರಡು ವರ್ಷಗಳು ಬೇಕಾಗಬಹುದು. ಪ್ರಾಣ ಪ್ರತಿಷ್ಠಾ ಸಮಾರಂಭದ ವೈದಿಕ ಆಚರಣೆಗಳು ಜನವರಿ 16ರಂದು ಪ್ರಾರಂಭವಾಗುತ್ತವೆ. ಪ್ರತಿಷ್ಠಾಪನಾ ಸಮಾರಂಭದಲ್ಲಿ ಮುಖ್ಯ ಆಚರಣೆಗಳನ್ನು ಲಕ್ಷ್ಮಿ ಕಾಂತ್ ದೀಕ್ಷಿತ್ ನಿರ್ವಹಿಸಲಿದ್ದಾರೆʼʼ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Ram Mandir: ಅಯೋಧ್ಯೆ ರಾಮ ಮಂದಿರ ಮೊದಲ ಮಹಡಿ ನಿರ್ಮಾಣದ ಫೋಟೋಗಳು ವೈರಲ್

ಅಯೋಧ್ಯೆಯ 4.40 ಎಕರೆಯಲ್ಲಿ ಪ್ರವಾಸೋದ್ಯಮ ಸೌಲಭ್ಯ ಕೇಂದ್ರವನ್ನು ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಯೋಜನೆಯಡಿ ಪ್ರವಾಸೋದ್ಯಮ ಕಚೇರಿ, ಪ್ರಯಾಣಿಕರ ವಸತಿ, ಕಲೆ ಮತ್ತು ಕರಕುಶಲ ಕೇಂದ್ರ, ಫುಡ್ ಕೋರ್ಟ್, ಶಾಪಿಂಗ್ ಮಾರ್ಟ್ ಮತ್ತು ಪಾರ್ಕಿಂಗ್ ಸ್ಥಳ ಸೇರಿದಂತೆ ವಿವಿಧ ವಾಣಿಜ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುವುದು. ʼʼಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆʼʼ ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

Exit mobile version