ಮರ್ಯಾದಾ ಪುರುಷೋತ್ತಮ ರಾಮನ ಹುಟ್ಟುಹಬ್ಬ (Ram Navami 2023) ಎಂದರೆ, ಭಾರತದ ಪ್ರಮುಖ ಹಬ್ಬಗಳಲ್ಲೊಂದು. ರಾಮನಿಗೆ ಪ್ರಿಯವಾದ ಭಕ್ಷ್ಯಗಳನ್ನು ಮನೆಯಲ್ಲೇ ಮಾಡುವುದು ಹಬ್ಬದ ಖುಷಿಗಳಲ್ಲೊಂದು. ಹಬ್ಬದ ಹೆಸರಿನಲ್ಲಿ ಇಂದು ಪುರಾತನ, ತಲೆತಲಾಂತರಗಳಿಂದ ನಡೆದುಬಂದ ದೇಸೀ ತಿನಿಸುಗಳನ್ನು ಮಾಡಲು ಪ್ರಯತ್ನಿಸುವುದು ಹಾಗೂ ಸಂಪ್ರದಾಯ, ಆಚರಣೆ, ಸಂಸ್ಕೃತಿಯನ್ನು ಜೀವಂತವಾಗಿರುಸುವುದನ್ನು ನಮ್ಮ ಕಿರಿಯರಿಗೆ ದಾಟಿಸುವುದೂ ಕೂಡಾ ಅತ್ಯಂತ ಅಗತ್ಯ. ಹಾಗಾಗಿ ರಾಮನವಮಿಯ ಪ್ರಮುಖ ಭಕ್ಷ್ಯಗಳನ್ನು ಇಲ್ಲಿ ನೋಡೋಣ.
೧. ಕೋಸಂಬರಿ ಹಾಗೂ ಪಾನಕ: ಸಲಾಡ್ ಅಥವಾ ಕೋಸಂಬರಿ ಹಾಗೂ ತಂಪು ಪಾನೀಯ ಪಾನಕ ರಾಮನವಮಿಯ ವಿಶೇಷತೆಗಳಲ್ಲೊಂದು. ರಾಮನವಮಿಯ ದಿನ ಸಿಹಿತಿಂಡಿ ಮಾಡಲಾಗದಿದ್ದರೂ ಬಹುತೇಕರು ಪಾನಕ ಹಾಗೂ ಕೋಸಂಬರಿ ಮಾಡುವುದುಂಟು. ಸಣ್ಣಕ್ಕೆ ಹೆಚ್ಚಿದ ಸೌತೆಕಾಯಿ, ನೆನೆಸಿದ ಹೆಸರು ಬೇಳೆ, ಕಾಯಿತುರಿ, ತುರಿದ ಕ್ಯಾರೆಟ್, ಸಣ್ಣಕ್ಕೆ ಹೆಚ್ಚಿದ ಹಸಿಮೆಣಸು ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿ ಒಂದು ಒಗ್ಗರಣೆ ಹಾಕಿದರೆ ಈ ಕೋಸಂಬರಿ ರೆಡಿ. ಬೆಲ್ಲದ ತುರಿ, ಕರಿಮೆಣಸು ಏಲಕ್ಕಿ ಹಾಗೂ ಒಣ ಶುಂಠಿ ಪುಡಿ ಹಾಕಿ ಮಾಡಿದ ಸಿಹಿಯಾದ ತಂಪು ತಂಪು ಪಾನಕವೂ ರಾಮನಿಗೆ ಪ್ರಿಯ. ಇವೆರಡನ್ನಾದರೂ ರಾಮನ ಮುಂದಿಟ್ಟು ಪೂಜೆ ಮಾಡಿ ಸೇವಿಸದರೆ, ರಾಮನವಮಿ ಆಚರಿಸಿದ ಸಂತಸ.
೨. ಚಲಿಮಿಡಿ: ಆಂದ್ರಪ್ರದೇಶ, ತೆಲಂಗಾಣಗಳಲ್ಲಿ ರಾಮನವಮಿಯಂದು ಮಾಡುವ ಸಾಂಪ್ರದಾಯಿಕ ಸಿಹಿತಿಂಡಿ. ಇದು ರಾಂನಿಷ್ಟ ಎಂಬ ನಂಬಿಕೆ ರಾಮ ಭಕ್ತರದ್ದು. ಅಕ್ಕಿಯನ್ನು ನೆನೆಸಿ ರುಬ್ಬಿ ಕಾಯಿಸಿ ಅದಕ್ಕೆ ಬೆಲ್ಲ, ಕಾಯಿತುರಿ, ತುಬ್ಬ, ಏಲಕ್ಕಿ ಹಾಕಿ ಲಡ್ಡಿನ ಹಾಗೆ ಉಂಡೆ ಕಟ್ಟಿ ಹಬೆಯಲ್ಲಿ ಬೇಯಸಿಸುವ ಅಪರೂಪದ ಸಾಂಪ್ರದಾಯಿಕ ತಿನಿಸಿದು. ರಾಮನವಮಿಯ ದಿನ ಆಂದ್ರ ಪ್ರದೇಶದಲ್ಲಿ ಮಾಡುವ ವಿಶೇಷ ಭಕ್ಷ್ಯಗಳಲ್ಲಿ ಇದೂ ಒಂದು.
೩. ರೋಟ್: ರಾಮ ಬಂಟ ಹನುಂತನಿಗೆ ಪ್ರಿಯವಾದ ತಿನಿಸು ಈ ರೋಟ್. ಈ ತಿನಿಸು ಇತ್ತೀಚೆಗಿನ ದಿನಗಳಲ್ಲಿ ಕಾಣಸಿಗುವುದೇ ಅಪರೂಪ. ಗೋಧಿ ಹಿಟ್ಟು, ತುಪ್ಪ, ಸಕ್ಕರೆ ಅಥವಾ ಬೆಲ್ಲ, ಏಲಕ್ಕಿ ಪುಡಿ, ಪುಡಿ ಮಾಡಿದ ಒಣಹಣ್ಣು ಹಾಗೂ ಬೀಜಗಳನ್ನು ಹಾಕಿ ವಡೆಯ ರೂಪದಲ್ಲಿ ಎಣ್ಣೆಯಲ್ಲಿ ಕರಿದು ಮಾಡುವ ತಿನಿಸಿದು.
೪. ನೀರು ಮಜ್ಜಿಗೆ: ಪಾನಕದಂತೆಯೇ ರಾಮನವಮಮಿಯ ದಿನದಂದು ವ್ಯಾಪಕವಾಗಿ ಮಾಡುವ ಇನ್ನೊಂದು ಪಾನೀಯ ನೀರು ಮಜ್ಜಿಗೆ. ಮೊಸರನ್ನು ಕಡೆದು ಮಜ್ಜಿಗೆ ಮಾಡಿ, ಮಜ್ಜಿಗೆಯನ್ನು ನೀರು ಮಾಡಿ ಅದಕ್ಕೆ, ಹಸಿಮೆಣಸು, ಶುಂಠಿ, ಚಾಟ್ ಮಸಾಲೆ, ಜೀರಿಗೆ ಪುಡಿ, ಇಂಗು, ಕೊತ್ತಂಬರಿ ಸೊಪ್ಪು ಅಥವಾ ಕರಿಬೇವಿನ ಒಗ್ಗರಣೆ, ರುಚಿಗೆ ಉಪ್ಪು ಇಷ್ಟಿದ್ದರೆ ಈ ಮಜ್ಜಿಗೆ ಲೋಟಗುಟ್ಟಲೆ ಸುರಿ ಸುರಿದು ಕುಡಿಯಬಹುದು.
೫. ಸಾಬುದಾನ ಪಾಯಸ: ಸಬ್ಬಕ್ಕಿ ಅಥವಾ ಸಾಬುದಾನ ಪಾಯಸ ರಾಮನಿಗೆ ಅತ್ಯಂತ ಪ್ರಿಯವಂತೆ! ಹಾಗಂತ ರಾಮನ ಭಕ್ತರ ನಂಬಿಕೆ. ಹೀಗಾಗಿ ರಾಮನವಮಿಯ ದಿನ ಸಬ್ಬಕ್ಕಿಯ ಪಾಯಸ ಖಂಡಿತವಾಗಿಯೂ ಎಲ್ಲರೂ ರಾಮನಿಗಾಗಿ ತಮ್ಮ ಮನೆಗಳಲ್ಲಿ ಮಾಡಿ ನೈವೇದ್ಯ ಇಡುತ್ತಾರೆ.
೬. ರಘುಪತಿ ಲಡ್ಡು: ರಾಮನಿಗೆ ಗೋಧಿಹಿಟ್ಟಿನ ಲಡ್ಡು ಬಹಳ ಪ್ರಿಯವಂತೆ. ಇದಕ್ಕೆ ರಘುಪತಿ ಲಡ್ಡು ಎಂಬ ಹೆಸರೂ ಇದೆ. ಬಾಣಲೆಯಲ್ಲಿ ಎರಡು ಚಮಚ ತುಪ್ಪ ಬಿಸಿ ಮಾಡಿ ಅದಕ್ಕೆ ಗೋಡಂಬಿ, ಬಾದಾಮಿ ಹಾಕಿ ಹುರಿದುಕೊಂಡು ಬದಿಯಲ್ಲಿಡಿ. ಬಾಣಲೆಯಲ್ಲಿ ಒಂದು ಕಪ್ ಗೋಧಿ ಹುಡಿ ಹುರಿದುಕೊಂಡು ಅದಕ್ಕೆ ಒಂದು ಕಪ್ ತುಪ್ಪ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಇದಕ್ಕೆ ಅರ್ಧ ಕಪ್ ತುರಿದ ಬೆಲ್ಲ ಸೇರಿಸಿ. ಏಲಕ್ಕಿ ಪುಡಿ, ಸ್ವಲ್ಪ ಒಣ ದ್ರಾಕ್ಷಿ, ಹುರಿದುಕೊಂಡ ಬಾದಾಮಿ ಹಾಗೂ ಗೋಡಂಬಿ ಸೇರಿಸಿ ಬಿಸಿಯಾಗಿರುವಾಗಲೇ ಲಡ್ಡಿನ ರೂಪದಲ್ಲಿ ಉಂಡೆ ಕಟ್ಟಿ. ಉಂಡೆ ಕಟ್ಟಲು ಬರದಿದ್ದರೆ ಬೇಕಾದಷ್ಟು ತುಪ್ಪ ಸೇರಿಸಿಕೊಳ್ಳಿ. ಇದಾಗ್ಯೂ ಉಂಡೆ ಕಟ್ಟಲು ಕಷ್ಟವಾದರೆ, ಒಂದೆರಡು ಹಾಲಿನ ಹನಿ ಹಾಕಿ ಉಂಡೆ ಕಟ್ಟಲು ಪ್ರಯತ್ನಿಸಬಹುದು.
ಇದನ್ನೂ ಓದಿ: Ram Navami 2023 : ರಾಮನವಮಿಯಂದು ಶ್ರೀರಾಮನ ಪೂಜೆ ಎಷ್ಟು ಹೊತ್ತಿಗೆ? ಆಚರಣೆ ಹೇಗೆ?