Site icon Vistara News

Ram Navami 2023 : ರಘುಕುಲತಿಲಕ ಶ್ರೀರಾಮನ ಪೂಜಿಸುವ ಮಹಾಪರ್ವ ರಾಮನವಮಿ

history, significance, rituals and all you need to know about ram Navami

ramanavami

ಮೈಥಿಲೀ ರಾಘವನ್
ಶ್ರೀರಾಮನವಮಿ (Ram Navami 2023) ಹಬ್ಬವು ನಮ್ಮ ದೇಶದಾದ್ಯಂತ ಎಲ್ಲ ಜನಾಂಗದವರೂ ಆಚರಿಸುವ ಪ್ರಮುಖ ಪರ್ವವಾಗಿದೆ. ಶ್ರೀರಾಮನನ್ನು ಪರಾದೇವತೆಯೆಂದು ಭಾವಿಸಿ ಪೂಜಿಸುವ ಪದ್ಧತಿ ಬೆಳೆದುಬಂದಿದೆ.

ವಿದೇಶವಾಸಿಗಳಾದ ಭಾರತೀಯರೂ ಸಹ ಶ್ರೀರಾಮನವಮಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಈ ಆರಾಧನೆಯನ್ನು ಯುಗಾದಿಯ ದಿನದಿಂದ ಪ್ರಾರಂಭಮಾಡಿ ಶ್ರೀರಾಮನವಮಿಯಂದು ಮಂಗಳಮಾಡುವ ಪದ್ಧತಿಯೂ ಕೆಲವೆಡೆ ಉಂಟು. ನವಮಿಯಂದು ಉಪವಾಸವಿದ್ದು ಶ್ರೀರಾಮನಿಗೆ ಪೂಜೆಯನ್ನು ಸಲ್ಲಿಸುವಕ್ರಮ ಹಾಗೂ ಪೂಜೆಯನ್ನು ಸಲ್ಲಿಸಿ ರಾಮಭಾವವನ್ನು ತುಂಬಿಕೊಂಡವರಾಗಿ ಆತನ ಪ್ರಸಾದವನ್ನು ಸ್ವೀಕರಿಸುವ ಕ್ರಮ – ಎರಡೂ ರೀತಿಯ ಆಚರಣೆಗಳೂ ಕಂಡುಬರುತ್ತವೆ.

ರಾಮನು ದೇವನೋ? ಮಾನವನೋ?

ಶ್ರೀರಾಮನನ್ನು ಉತ್ತಮಗುಣಗಳಿಂದ ಕೂಡಿದ ಮಹಾಧೀರ, ದುಷ್ಟನಿಗ್ರಹ-ಶಿಷ್ಟಪರಿಪಾಲನೆಗಳನ್ನು ಕೈಗೊಂಡ ನರಶ್ರೇಷ್ಠ ಎಂದು ಕೊಂಡಾಡುವವರು ಕೆಲವರಾದರೆ ಆತನು ತನ್ನ ಉತ್ತಮಗುಣ-ಕೃತ್ಯಗಳಿಂದ ದೈವತ್ತ್ವಕ್ಕೆ ಏರಿಸಲ್ಪಟ್ಟವನು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುವವರು ಇನ್ನಷ್ಟು ಮಂದಿ. ಪ್ರಕೃತ ಈ ವಿಚಾರದಲ್ಲಿ ಜ್ಞಾನಿಗಳ ಮತವನ್ನು ಮಾತ್ರ ಗಮನಿಸುತ್ತೇವೆ.

ರಾಮಾಯಣವನ್ನು ರಚಿಸಿದ ವಾಲ್ಮೀಕಿಮಹರ್ಷಿಗಳು ತಮ್ಮ ಕಾವ್ಯದ ಪ್ರಾರಂಭದಲ್ಲೂ ಮತ್ತು ಕೊನೆಯಲ್ಲೂ ಆತನು ಭಗವಂತನೆಂಬುದನ್ನು ಸ್ಪಷ್ಟವಾಗಿಯೇ ತಿಳಿಸಿದ್ದಾರೆ. ಕಾವ್ಯದ ಮಧ್ಯದಲ್ಲಿ ಸೂಚ್ಯವಾಗಿಯೂ ಹೇಳಿರುವುದುಂಟು. ಅಂತೆಯೇ ಆತನನ್ನು ಆದರ್ಶಮಾನವನಾಗಿಯೂ ಭಾವಿಸಿ ಧನ್ಯತೆಯನ್ನು ಪಡೆಯಬೇಕೆನ್ನುವುದೂ ಅವರ ಅಶಯವಾಗಿತ್ತು. ’ರಾಮ’ ಶಬ್ದವೇ ’ಯೋಗಿಗಳ ಹೃದಯದಲ್ಲಿ ರಮಿಸುವವನು’, ’ಯೋಗಿಗಳು ಯಾವನಲ್ಲಿ ರಮಿಸುತ್ತಾರೆಯೋ ಅವನು’ ಎಂಬ ಅರ್ಥವನ್ನೊಳಗೊಂಡಿದೆ. ಹೀಗೆ ಯೋಗಿಗಳ ಆತ್ಮಕ್ರೀಡೆಗೆ ವಿಷಯನಾದವನಾದ್ದರಿಂದ ಅವನು ಆತ್ಮಸ್ವರೂಪನಾದ ಭಗವಂತನೇ ಎಂಬುದು ಸ್ಪಷ್ಟವಾಗುತ್ತದೆ.

ಆತ್ಮಾರಾಮನನ್ನು ಕಂಡ ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳ ಮಾತನ್ನು ಸ್ಮರಿಸುವುದಾದರೆ “ವಾಲ್ಮೀಕಿಯ ರಾಮನು ಸ್ಥೂಲದೃಷ್ಟಿಗೆ ಮನುಷ್ಯ, ಸೂಕ್ಷ್ಮದೃಷ್ಟಿಗೆ ದೇವತೆ ಮತ್ತು ಪರಾದೃಷ್ಟಿಗೆ ಪರಂಜ್ಯೋತಿ”.

ರಾಮನವಮೀ; ತಾತ್ತ್ವಿಕ ವಿವರಣೆ ಏನು?

ಶ್ರೀರಾಮನು ಆವಿರ್ಭವಿಸಿದ (ಹುಟ್ಟಿದ) ದಿನವೇ ಶ್ರೀರಾಮನವಮಿಯೆಂದು ಆಚರಿಸಲ್ಪಡುತ್ತದೆ. ಆದರೆ ತಾತ್ತ್ವಿಕವಾಗಿ ನೋಡುವುದಾದರೆ “ಶ್ರೀರಾಮನು ಎಲ್ಲರ ಹೃದಯಗುಹೆಯಲ್ಲಿ ವಿರಾಜಮಾನನಾಗಿರುವ ಪರಂಜ್ಯೋತಿ. ಶುದ್ಧವಾದ ಪ್ರಕೃತಿಯೇ ಕೌಸಲ್ಯೆ. ಕೌಸಲ್ಯೆಯಿಂದ ಪ್ರತಿನಿಧಿಸಲ್ಪಡುವ ಶುದ್ಧಾಂತರಂಗದಲ್ಲಿ ರಾಮನ ಆವಿರ್ಭಾವವು ಅಂದರೆ ದರ್ಶನವು ಯಾವ ಸಮಯದಲ್ಲಿ ಆಗುವುದೋ ಅದೇ ಶ್ರೀರಾಮನವಮೀ” ಎಂಬ ಮಹಾಗುರುಗಳ ಮಾತನ್ನು ಇಲ್ಲಿ ಉಲ್ಲೇಖಿಸುತ್ತೇವೆ.

ಆಚರಣೆಯ ಕಾಲ ಯಾವುದು?

ಭಾರತೀಯ ಮಹರ್ಷಿಗಳು ಕಾಲಗರ್ಭದಲ್ಲೂ ಅಂತಹ ಅಂತರಂಗದರ್ಶನಕ್ಕೆ ಪೋಷಕವಾದ ಸಮಯವನ್ನು ಅನ್ವೇಷಣೆಯಿಂದ ಪತ್ತೆಹಚ್ಚಿ ಆ ದಿನವನ್ನು ವಿಶೇಷವಾಗಿ ಶ್ರೀರಾಮನ ಪೂಜೆಗೆ ವಿಧಿಸಿದ್ದಾರೆ. ಪ್ರತಿತಿಂಗಳ ಶುಕ್ಲಪಕ್ಷದ ನವಮಿಯಂದು ಆ ಶುಭಕಾಲವು ಕೂಡಿಬರುವುದಾದರೂ ಚೈತ್ರಮಾಸದ ಶುಕ್ಲಪಕ್ಷ ನವಮಿಯದಿವಸ ವಿಶೇಷವಾದ ಪ್ರಭಾವದಿಂದ ಕೂಡಿರುವುದರಿಂದ ಆ ದಿನವನ್ನೇ ಶ್ರೀರಾಮನವಮಿಯೆಂದು ಕರೆಯಲಾಗಿದೆ. ಅಂದು ಪುನರ್ವಸು ನಕ್ಷತ್ರದ ಯೋಗವೂ ಇದ್ದರೆ ಇನ್ನೂ ಉತ್ಕೃಷ್ಟವಾದ ಪರ್ವವಾಗುತ್ತದೆ.

ಆಚರಣೆಯ ವಿಧಾನ

ಆಚರಣೆಯ ಅಂಗವಾಗಿ ವಿಶೇಷಪೂಜೆ ಹಾಗೂ ರಾಮಾಯಣ ಪಾರಾಯಣಗಳನ್ನು ಮಾಡುವ ಪದ್ಧತಿ ಉಂಟು. ರಾಮಕಥೆಯನ್ನು ನೃತ್ಯ, ಗೀತ, ವಾದ್ಯಗಳ ಮೂಲಕವೂ ಅನುಸಂಧಾನ ಮಾಡುವವರುಂಟು. ವಿಧಾನ ಯಾವುದೇ ಆಗಿದ್ದರೂ ಅಲ್ಲಿ ಅವಶ್ಯವಾಗಿರಬೇಕಾದ ಅಂಶವೆಂದರೆ ಶ್ರದ್ಧಾ-ಭಕ್ತಿಗಳಿಂದ ಕೂಡಿದ ಶುದ್ಧವಾದ ಮಾನೋಧರ್ಮ ಎಂಬುದನ್ನು ಜ್ಞಾನಿಗಳು ಒತ್ತಿ ಹೇಳುತ್ತಾರೆ.

ಹಾಗಿದ್ದರೆ ಮಾತ್ರವೇ ರಾಮಾಯಣದ ಫಲಶ್ರುತಿಯು ಸಾರುವಂತೆ ಅನಿಷ್ಟನಿವಾರಣೆ ಮತ್ತು ಪುರುಷಾರ್ಥಗಳ ಪ್ರಾಪ್ತಿಯು ಉಂಟಾಗುತ್ತದೆ. ರಾಮಕಥಾಪಾರಾಯಣ, ಕೀರ್ತನೆಗಳನ್ನು ಮಾಡುವವರು ತಾವು ಎಕಾಗ್ರತೆಯಿಂದ, ತನ್ಮಯರಾಗಿ, ರಾಮಭಾವವನ್ನು ಅನುಭವಿಸಿ, ಶ್ರಾವಕರಿಗೂ ಆ ಭಾವವು ಅನುಭವವಾಗುವಂತೆ ಮಾಡುವ ದೊಡ್ಡ ಹೊಣೆಗಾರಿಕೆಯನ್ನು ಹೊತ್ತಿರಬೇಕೆಂಬ ಎಚ್ಚರಿಕೆಯ ಮಾತನ್ನೂ ಜ್ಞಾನಿಗಳು ತಿಳಿಸುತ್ತಾರೆ.

ನೈವೇದ್ಯ ಮಾಡುವುದೇಕೆ?

ಪೂಜಾಕಲ್ಪದಲ್ಲಿ ದೇವತೆಗಳಿಗೆ ನೈವೇದ್ಯವನ್ನು ಶಾಸ್ತ್ರಗಳು ಹೇಳುತ್ತವೆ. ಆಯಾ ದೇವತೆಗೆ ಪ್ರಿಯವಾದದ್ದನ್ನು ಅವರಿಗೆ ನೈವೇದ್ಯ ಮಾಡುವುದು ಎನ್ನುವ ವಿವರಣೆಯನ್ನು ಕೆಲವರು ಹೇಳುತ್ತಾರೆ. ಹಾಗಿದ್ದರೆ “ನಮ್ಮಂತೆಯೇ ದೇವತೆಗಳಿಗೂ ನಾಲಿಗೆಯ ಚಾಪಲ್ಯವೇ?” ಎನ್ನುವ ಪ್ರಶ್ನೆ ಏಳುತ್ತದೆ. ಈ ಪ್ರಶ್ನೆಗೆ ಶ್ರೀರಂಗಮಹಾಗುರುಗಳ ಉತ್ತರ–ಪದಾರ್ಥಗಳನ್ನು ನೈವೇದ್ಯ ಮಾಡುವುದು ದೇವತೆಗಳ ನಾಲಿಗೆಯ ಚಾಪಲ್ಯ ತೀರಿಸುವುದಕ್ಕಲ್ಲ. ಏಕೆಂದರೆ ನೈವೇದ್ಯವನ್ನು ದೇವತೆಗಳು ತಿನ್ನುವುದಿಲ್ಲವಷ್ಟೇ. ದೇವತೆಗಳಿಂದ ನಮಗೆ ಲಭಿಸಿರುವ ಪದಾರ್ಥಗಳನ್ನು ಕೃತಜ್ಞತಾಭಾವದೊಡನೆ ಅವರಿಗೆ ಸಮರ್ಪಿಸಿ ಪ್ರಸಾದವಾಗಿ ಸ್ವೀಕರಿಸಿದಪಕ್ಷದಲ್ಲಿ ಅದು ನಮ್ಮ ಪ್ರಸನ್ನತೆಗೆ ಕಾರಣವಾಗುತ್ತದೆ.

ಆಯಾ ದೇವತೆಗಳಿಗೆ ಅವರದೇ ಆದ ನೈವೇದ್ಯವೇಕೆ? ಗಣೇಶನಿಗೆ ಕಾಯಿಕಡುಬು ನೈವೇದ್ಯವೇಕೆ ಎಂದರೆ “ಆನೆಯ ಮುಖದ ದೇವನಾದ್ದರಿಂದ ಆನೆಗೆ ಪ್ರಿಯವಾದದ್ದು ಆತನಿಗೆ ನೈವೇದ್ಯ” ಎನ್ನುವ ವಿವರಣೆಯನ್ನು ಕೊಡುವವರುಂಟು. ಇದು ಸರಿಯೆನ್ನುವುದಾದರೆ ನರಸಿಂಹದೇವರಿಗೆ ಏನನ್ನು ಅರ್ಪಿಸೋಣ?! ಈ ವಿಧಿಯ ಮರ್ಮ-ಯಾವ ಪದಾರ್ಥಗಳು ನಮ್ಮೊಳಗೆ ಯಾವ ದೇವತಾ ಕೇಂದ್ರವನ್ನು ತೆರೆದು ನಮಗೆ ದೇವತಾದರ್ಶನವನ್ನು ಮಾಡಲು ಅನುವು ಮಾಡುತ್ತವೆ ಎನ್ನುವುದನ್ನು ಅರಿತು ತಂದ ವ್ಯವಸ್ಥೆಯಿದು. ಆದ್ದರಿಂದ ಆ ಪದಾರ್ಥಗಳನ್ನು ನೈವೇದ್ಯಮಾಡಿ ಪ್ರಸಾದಬುದ್ಧಿಯಿಂದ ಸ್ವೀಕರಿಸಿದರೆ ಆ ದೇವತಾಭಾವಕ್ಕೆ ನಮ್ಮನ್ನು ಏರಿಸಿ, ದೇವತಾಧ್ಯಾನಕ್ಕೆ ಪುಷ್ಟಿನೀಡುತ್ತದೆ ಎಂಬುದು ಮಹಾಗುರು ನೀಡಿರುವ ವಿವರಣೆ.

ಶ್ರೀರಾಮನವಮಿಯ ನೈವೇದ್ಯದ್ರವ್ಯಗಳೇನು?

ನೈವೇದ್ಯಕ್ರಮದ ಮರ್ಮವನ್ನರಿತು ಶ್ರೀರಾಮನ ಪೂಜೆಗೆ, ರಾಮಧ್ಯಾನ-ಉಪಾಸನೆಗಳಿಗೆ ಬೇಕಾದ
ಸ್ಥಿತಿಯನ್ನುಂಟುಮಾಡುವ ಹೆಸರುಬೇಳೆ-ಕಡಲೆಬೇಳೆಗಳ ಕೋಸಂಬರಿ, ಶುಂಠಿ, ಬೆಲ್ಲ, ಪಾನಕ ಮುಂತಾದ ದ್ರವ್ಯಗಳನ್ನು ವಿಧಿಸಿದೆ. ಸಂಸ್ಕಾರವಂತರಾದವರು ಪ್ರಾಮಾಣಿಕವಾಗಿ ಉಪಾಸನೆಯನ್ನು ಮಾಡಿದಾಗ ಈ ದ್ರವ್ಯಗಳ ಪ್ರಭಾವ ಅನುಭವಕ್ಕೆ ಸಿಗುವ ವಿಷಯವೇ ಆಗಿದೆ ಎಂಬುದು ಜ್ಞಾನಿಗಳ ನಿಶ್ಚಿತ ಮತ. ಅಲ್ಲದೆ, ಮೇಲೆ ಹೇಳಿದ ದ್ರವ್ಯಗಳು ರಾಮನವಮಿಆಚರಣೆಯ ಋತುವಿಗೆ ಅನುಕೂಲವಾಗಿದೆಯೆನ್ನುವುದನ್ನೂ ಗಮನಿಸಬಹುದು. ಬಿರುಬೇಸಿಗೆಯಲ್ಲಿ ಈ ದ್ರವ್ಯಗಳ ಯೋಗವು ತಂಪನ್ನೂ, ಅರೋಗ್ಯಕ್ಕೆ ಪುಷ್ಟಿಯನ್ನೂ ನೀಡುತ್ತವೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಇಂದಿನ ಪೂಜಾವಿಧಾನಗಳ ಸ್ಥಿತಿ ಹೇಗಿದೆ?

ಇಂದು ರಾಮನವಮೀ ಪೂಜೆಗಳು ಎಲ್ಲೆಡೆಯಲ್ಲೂ ನಡೆಯುತ್ತಿದ್ದರೂ ಬಹುಪಾಲು ಅಲ್ಲಿ ಯಾಂತ್ರಿಕತೆ,ಆಡಂಬರಗಳೇ ಕಾಣುತ್ತಿದೆಯೆನ್ನುವುದು ಸರ್ವರಿಗೂ ವೇದ್ಯವಾದದ್ದೆ. ಈ ಪರಿಸ್ಥಿತಿ ತೊಲಗಿ ಜ್ಞಾನಿಗಳು ವಿಧಿಸಿದಂತೆ ಶ್ರದ್ಧಾಭಕ್ತಿಗಳಿಂದ ಆಚರಣೆಯು ಜರುಗಬೇಕಾಗಿದೆ.

ಬಡತನ, ಕಾಲಾವಕಾಶವಿಲ್ಲದಿರುವುದು ಇತ್ಯಾದಿ ಕಾರಣಗಳು ಪೂಜೆಗೆ ಭಂಗವಾಗಬೇಕಿಲ್ಲ. ಯಥಾಶಕ್ತಿ ಕಾಲಾವಕಾಶವನ್ನು ಕೂಡಿಸಿಕೊಂಡು, ಸಿಕ್ಕಿದಷ್ಟು ದ್ರವ್ಯಗಳಿಂದಲೇ ಹೃದಯೇಶ್ವರನಾದ ಭಗವಂತನನ್ನು ಧ್ಯಾನ-ಆರಧನೆಗಳಿಂದ ಪೂಜಿಸಬೇಕು ಎನ್ನುವ ಮಹಾತ್ಮರ ಆದೇಶವನ್ನು ಸ್ಮರಿಸಿಕೊಂಡು ಬರಲಿರುವ ರಾಮನವಮೀಪರ್ವವನ್ನು ಆಚರಿಸಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗೋಣ.

– ಲೇಖಕರು ಸಂಸ್ಕೃತಿ ಚಿಂತಕರು
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ : Ram Navami 2023: ರಾಮನವಮಿಯ ದಿನ ಮನೆಯಲ್ಲೇ ಮಾಡಬಹುದಾದ ರಾಮನ ಪ್ರಿಯವಾದ ಭಕ್ಷ್ಯಗಳಿವು!

Exit mobile version