Site icon Vistara News

Ram Navami 2023 : ರಾಮನವಮಿಯಂದು ಶ್ರೀರಾಮನ ಪೂಜೆ ಎಷ್ಟು ಹೊತ್ತಿಗೆ? ಆಚರಣೆ ಹೇಗೆ?

Mythological history, Date, When Is Chaitra Navratri Ram Navami Puja Vidhi and more in

RAMA

ಹಿಂದೂ ಪಂಚಾಂಗ ಪ್ರಕಾರ ಚೈತ್ರಮಾಸದ ಶುಕ್ಲಪಕ್ಷದ ನವಮಿಯಂದು ಪುನರ್ವಸು ನಕ್ಷತ್ರದಲ್ಲಿ ಶ್ರೀರಾಮನ ಅವತಾರವಾಯಿತು. ಶ್ರೀ ರಾಮನನ್ನು ವಿಷ್ಣುವಿನ ಏಳನೇಯ ಅವತಾರವೆಂದು ಪರಿಗಣಿಸಲಾಗುತ್ತದೆ. ಈ ಪುಣ್ಯ ದಿನವನ್ನು ʼರಾಮನವಮಿʼ (Ram Navami 2023) ಎಂದು ಆಚರಿಸಲಾಗುತ್ತದೆ.

ಈ ಬಾರಿ ಶ್ರೀ ರಾಮನವಮಿಯು ಏಪ್ರಿಲ್‌ 30 ರಂದು ಆಚರಿಸಲ್ಪಡುತ್ತದೆ. ಅಂದು ಮುಖ್ಯವಾಗಿ ಶ್ರೀ ರಾಮನ ದೇವಾಲಯ ಹಾಗೂ ಶ್ರೀ ಆಂಜನೇಯನ ದೇಗುಲಗಳಲ್ಲಿ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವ, ಭಜನೆ, ಮೆರವಣಿಗೆ ನಡೆಯುತ್ತದೆ. ಶ್ರೀ ರಾಮ ಸೇವಾ ಸಮಿತಿಗಳು ವಿಶೇಷವಾಗಿ ಸಂಗೀತ ಕಾರ್ಯಕ್ರಮ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ.

ಧೈರ್ಯ, ಕರ್ತವ್ಯನಿಷ್ಠೆ , ಪಿತೃವಾಕ್ಯ ಪರಿಪಾಲನೆ, ರಾಜ್ಯಾಡಳಿತ, ಪ್ರಜಾಪರಿಪಾಲನೆ, ಕರ್ತವ್ಯ, ಗೌರವ, ಏಕಪತ್ನೀವ್ರತ, ಸೋದರಪ್ರೇಮ ಹೀಗೇ ಅನೇಕ ವಿಚಾರದ ಶ್ರೀ ರಾಮ ನಮ್ಮೆಲ್ಲರಿಗೂ ಆದರ್ಶ. ಹೀಗಾಗಿಯೇ ಆತನ ಹುಟ್ಟುಹಬ್ಬವನ್ನು ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತದೆ.

ಆಪನ್ನಃ ಸಂಸೃತಿಂ ಘೋರಾಂ ಯನ್ನಾಮ ವಿವಶೋ ಗೃಣನ್ |
ತತಃ ಸದ್ಯೋ ವಿಮುಚ್ಯೇತ ಯದ್ವಿಭೇತಿ ಸ್ವಯಂ ಭಯಮ್ ||

ಅಂದರೆ, ಘೋರ ಸಂಸಾರ ಬಂಧನದಲ್ಲಿ ನಿಲುಕಿರುವ ಮನುಷ್ಯ ಶ್ರೀರಾಮನಾಮವನ್ನು ಜಪಿಸಿದ ತಕ್ಷಣ ಎಲ್ಲಾ ಬಂಧನಗಳಿಂದ ವಿಮುಕ್ತನಾಗುತ್ತಾನೆ. ಶ್ರೀರಾಮನ ದಿವ್ಯಸ್ಥಾನವನ್ನು ಹೊಂದಲು ಅರ್ಹತೆಯನ್ನು ಗಳಿಸುತ್ತಾನೆ. ರಾಮನಾಮ ಸ್ವಯಂಜ್ಯೋತಿ, ಸ್ವಯಂ ಮಣಿ, ರಾಮ ನಾಮವನ್ನು ಜಪಿಸುವವನೆಂದೂ ಅಂಧಕಾರದಲ್ಲಿರಲಾರರು ಎಂದು ಶ್ರೀಮದ್ಭಾಗವತದಲ್ಲಿಯೇ ಹೇಳಲಾಗಿದೆ. ಶ್ರೀರಾಮ ತಾರಕ ಮಂತ್ರದ ಮಹಿಮೆ ಅರಿತಿದ್ದ ಆಂಜನೇಯ ಸದಾ ರಾಮ ನಾಮ ಸಂಕೀರ್ತನೆಯಲ್ಲೇ ತನ್ನನ್ನು ತೊಡಗಿಸಿಕೊಂಡಿದ್ದ. ಹೀಗಾಗಿಯೇ ಶ್ರೀ ರಾಮನವಮಿಯಂದು ಎಲ್ಲೆಡೆ ಶ್ರೀರಾಮನಾಮ ಜಪ ಮೊಳಗುತ್ತದೆ.

ಶುಭ ಮುಹೂರ್ತ

ಶ್ರೀ ರಾಮನು ಚೈತ್ರಮಾಸದ ಶುಕ್ಲ ಪಕ್ಷದ ನವಮಿಯ ದಿನ, ಅಷ್ಟಮಿಯ ಸಂಪರ್ಕವಿಲ್ಲದ ತಿಥಿಯಲ್ಲಿ, ಮಧ್ಯಾಹ್ನದ ಹೊತ್ತಿಗೆ ಪುನರ್ವಸು ನಕ್ಷತ್ರದಲ್ಲಿ ಅವತಾರವೆತ್ತಿದ್ದ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಸಂದರ್ಭದಲ್ಲಿ ಚಂದ್ರ ಹಾಗೂ ಬೃಹಸ್ಪತಿಗಳು ಯತಿಯಲ್ಲಿದ್ದರು. ಪಂಚಗ್ರಹಗಳು ಉಚ್ಚ ಸ್ಥಾನದಲ್ಲಿದ್ದವು. ಪೂರ್ವದಲ್ಲಿ ಉದಯವಾಗುತ್ತಿದ್ದ ಲಗ್ನವು ಕರ್ಕಾಟಕದಲ್ಲಿತ್ತು. ಸೂರ್ಯನು ಮೇಷ ರಾಶಿಯಲ್ಲಿ ಉಚ್ಚನಾಗಿದ್ದನ್ನು ಇಂತಹ ಶುಭ ಮುಹೂರ್ತದಲ್ಲಿ ಶ್ರೀರಾಮನು ಜನಿಸಿದ್ದನು. ಹೀಗಾಗಿ ಪುನರ್ವಸು ನಕ್ಷತ್ರವಿರುವ ನವಮಿಯ ತಿಥಿಯಲ್ಲಿ ರಾಮನವಮಿಯನ್ನು ಆಚರಿಸಲಾಗುತ್ತದೆ.

ಪಂಚಾಂಗದ ಪ್ರಕಾರ ಪುನರ್ವಸು ನಕ್ಷತ್ರವು ಮಾ.29 ರಿಂದಲೇ ಆರಂಭವಾಗಲಿದ್ದು, ಮಾರ್ಚ್‌ 30 ರಾತ್ರಿ 10:59 ರವರೆಗೆ ಇರುತ್ತದೆ. ರಾಮನವಮಿಯ ದಿನ ಗುರುವಾರ ಬೆಳಗ್ಗೆ 11:11ರಿಂದ 1:38 ರವರೆಗೆ (ಬೆಂಗಳೂರಿನಲ್ಲಿ) ಪೂಜೆ ಪುನಸ್ಕಾರಗಳಿಗೆ ಶುಭ ಮುಹೂರ್ತವಿರುತ್ತದೆ. ಶ್ರೀ ರಾಮ ಅವತಾರವೆತ್ತ ದಿನ ಶ್ರೇಷ್ಠದಿನ. ಅಂದು ನೀವು ನಿಮಗೆ ಅನುಕೂಲವಾದ ಹೊತ್ತಿನಲ್ಲಿ ಭಕ್ತಿಯಿಂದ ಪೂಜೆ ಪುನಸ್ಕಾರವನ್ನು ನೆರವೇರಿಸಬಹುದು ಎನ್ನುತ್ತಾರೆ ಶಾಸ್ತ್ರಜ್ಞರು.

ಆಚರಣೆ ಹೇಗೆ?

ರಾಮನವಮಿಯ ದಿನ ನಿತ್ಯ ದೇವರ ಪೂಜೆಯ ಜತೆಗೆ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಬೇಕು. ಇದಕ್ಕಾಗಿ ಶ್ರೀ ರಾಮನ ವಿಗ್ರಹ ಅಥವಾ ಫೋಟೊವನ್ನು ಬಳಸಬಹುದು. ವಿಗ್ರಹಕ್ಕಾದರೆ ಅಭಿಷೇಕ ನೆರವೇರಿಸಿ ಪೂಜೆ ಮಾಡಬಹುದು. ಫೋಟೊವಾದರೆ ಮಂಟಪದಲ್ಲಿಟ್ಟು, ಅಲಂಕಾರ ಮಾಡಿ ಪೂಜೆ ಮಾಡಬಹುದು.

ಶ್ರೀ ರಾಮನನ್ನು ಪೂಜಿಸುವಾಗ ಶ್ರೀ ರಾಮನಾಮ ಜಪ, ಸಂಕೀರ್ತನೆ ಕಡ್ಡಾಯ. ರಾಮನಿಗೆ ಮಜ್ಜಿಗೆ, ಪಾನಕ, ಕೋಸಂಬರಿ ಮತ್ತು ಸಿಹಿ ತಿನಿಸುಗಳನ್ನು ನೈವೇದ್ಯವಾಗಿ ಅರ್ಪಿಸಬೇಕು. ನೈವೇದ್ಯವಾದ ಮೇಲೆ ಮನೆಯವರಿಗೆ ಮಾತ್ರವಲ್ಲದೆ, ಮನೆಗೆ ಆಗಮಿಸುವ ಅತಿಥಿಗಳಿಗೆ, ಹೊರಗಿನವರಿಗೆ ಕೂಡ ಪಾನಕ ಕೋಸಂಬರಿಯನ್ನು ನೀಡಿ ಸತ್ಕರಿಸಬೇಕು.

ಶ್ರೀ ರಾಮ ದೇಗುಲ ಅಥವಾ ಶ್ರೀ ಆಂಜನೇಯ ದೇಗುಲಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಕೂಡ ಸಲ್ಲಿಸಬಹುದು. ಮನೆಯಲ್ಲಿ ನವಮಿಯ ದಿನ ಸಂಜೆ ಮನೆಯವರೆಲ್ಲರೂ ಸೇರಿ ಶ್ರೀ ರಾಮನಾಮ ಜಪ ಮಾಡುವುದರ ಜತೆಗೆ ಶ್ರೀರಾಮನನ್ನು ಸ್ತುತಿಸುವ ಭಕ್ತಿಗೀತೆಗಳ ಭಜನೆ ಮಾಡಬಹುದು. ಶ್ರೀ ರಾಮ ಸೇವಾ ಸಮಿತಿಗಳು ಏರ್ಪಡಿಸುವ ರಾಮೋತ್ಸವ ಕಾರ್ಯಕ್ರಮದಲ್ಲಿ, ಸಂಗೀತೋತ್ಸವದಲ್ಲಿ ಭಾಗವಹಿಸಿ ಶ್ರೀರಾಮನನ್ನು ಸ್ಮರಿಸುವ ಕೆಸಲ ಮಾಡಬಹುದು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಮರ್ಯಾದಾ ಪುರುಷೋತ್ತಮ ಶ್ರೀ ರಾಮನೇ ಸರ್ವಗುಣಗಳ ನಿಕ್ಷೇಪ. ಆದರ್ಶ ಪುರುಷ, ಸತ್ಯಧರ್ಮದ ಸಾಕಾರ ಮೂರ್ತಿ ಶ್ರೀ ರಾಮನವಮಿಯಂದು ಶ್ರೀರಾಮಾಯಣವನ್ನು ಮನನ ಮಾಡುತ್ತಾ, ಆತನ ಆದರ್ಶಗಳನ್ನು ಪಾಲಿಸುವ ಸಂಕಲ್ಪ ಮಾಡಬೇಕು. ಅದೇ ಶ್ರೇಷ್ಠ ಆಚರಣೆ.

ಇದನ್ನೂ ಓದಿ : Prerane : ದೇವನಿತ್ತುದನ್ನು ದಾನ ಮಾಡಿ ಭೋಗಿಸು

Exit mobile version