Site icon Vistara News

Rama Mandir : ರಾಮ ಶಿಲೆ ಸಿಕ್ಕ ಕ್ಷೇತ್ರವೀಗ ಯಾತ್ರಾಸ್ಥಳ, ದೇಗುಲ ನಿರ್ಮಾಣಕ್ಕೆ ಚಿಂತನೆ

Rama shila place temple plan

ಮೈಸೂರು: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ (Ayodhye Rama Janmabhoomi) ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿರುವುದು (Rama Mandir) ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಅವರು ಕೆತ್ತಿದ ಮೂರ್ತಿ. ಈ ಮೂರ್ತಿಯನ್ನು ಕೆತ್ತಲು ಆಯ್ಕೆಯಾಗಿದ್ದು ಮೈಸೂರು ತಾಲೂಕಿನ ಹಾರೋಹಳ್ಳಿ- ಗುಜ್ಜೇಗೌಡನಪುರದಲ್ಲಿ (Gujje Gowdanapura) ಸಿಕ್ಕ ಕೃಷ್ಣ ಶಿಲೆ. ಈಗ ಈ ಶಿಲೆ ಸಿಕ್ಕಿದ ಜಾಗ ಪವಿತ್ರ ಯಾತ್ರಾಸ್ಥಳವಾಗಿ ಮಾರ್ಪಟ್ಟಿದ್ದು, ಅಲ್ಲೀಗ ದೇವಸ್ಥಾನ ಕಟ್ಟುವ ಚಿಂತನೆಯೂ (Plan to build temple) ಹುಟ್ಟಿಕೊಂಡಿದೆ.

ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ರಾಮ್‌ದಾಸ್ ಎಂಬವರಿಗೆ ಸೇರಿದ ಜಾಗದಲ್ಲಿ ಕೃಷ್ಣ ಶಿಲೆ ಇದೆ ಎಂಬ ಮಾಹಿತಿ ಸಿಕ್ಕಿತ್ತು. ಅದು ಕೂಡಾ ಭಾರಿ ಮಹತ್ವದ ಮತ್ತು ಯಾವ ಮಳೆ, ಗಾಳಿ ಬಿಸಿಲಿಗೂ, ಆಸಿಡ್‌ ದಾಳಿಗೂ ಏನೂ ಆಗದ ಶಿಲೆ ಎಂದು ಪರಿಗಣಿತವಾಗಿ ಕೃಷ್ಣ ಶಿಲೆ ಎಂದು ತಿಳಿದುಬಂದಿತ್ತು.

Rama Shila place temple3

ಈ ಜಮೀನಿನಲ್ಲಿ ಕಲ್ಲು ಗಣಿಗಾಗಿಕೆ ಮಾಡಲು ಗುಜ್ಜೇಗೌಡನಪುರದ ಶ್ರೀನಿವಾಸ್ ಜಮೀನು ಗುತ್ತಿಗೆ ಪಡೆದಿದ್ದರು. ರಾಮ ಮಂದಿರಕ್ಕೆ, ರಾಮನ ಮೂರ್ತಿ ನಿರ್ಮಾಣಕ್ಕೆ ಕಲ್ಲು ಹುಡುಕುತ್ತಿದ್ದ ಸುರೇಂದ್ರ ವಿಶ್ವಕರ್ಮ ಎಂಬವರು ಶ್ರೀನಿವಾಸ್‌ ಅವರನ್ನು ಸಂಪರ್ಕ ಮಾಡಿದ್ದರು. ಮಾನಯ್ಯ ಬಡಿಗೇರ್ ಎಂಬುವರು ಕಲ್ಲು ಪರೀಕ್ಷೆ ಮಾಡಿದ್ದರು. ನಂತರ ರಾಮಮಂದಿರ ಟ್ರಸ್ಟ್‌ ಸದಸ್ಯರ ಸಮ್ಮುಖದಲ್ಲಿ ಕಲ್ಲನ್ನು ಮೂರ್ತಿಗಾಗಿ ಅಂತಿಮಗೊಳಿಸಲಾಗಿತ್ತು.

ರಾಮ್‌ದಾಸ್ ಅವರ ಜಮೀನಲ್ಲಿ‌ ಸುಮಾರು 10 ಅಡಿ ಆಳದಲ್ಲಿದ್ದ ಶಿಲೆಯನ್ನು ಹೊರತೆಗೆಯಲಾಗಿತ್ತು.. ರಾಮನ ಮೂರ್ತಿಗಾಗಿ 19 ಟನ್ ತೂಕದ ಸುಮಾರು 9 ಅಡಿ 8 ಇಂಚು ಉದ್ದದ ಶಿಲೆ ರವಾನೆ ಮಾಡಲಾಗಿತ್ತು. ಅದಾದ ಬಳಿಕ ರಾಮನ ಜತೆಗೆ ಸೀತೆ, ಲಕ್ಷ್ಮಣ, ಭರತ, ಶತೃಜ್ಞ ಮೂರ್ತಿಗೂ ಶಿಲೆ ರವಾನೆ ಮಾಡಲಾಗಿತ್ತು. ಸೀತೆ ವಿಗ್ರಹಕ್ಕೆ 7 ಅಡಿ ಉದ್ದ, 4 ಅಡಿ ಅಗಲದ ಬಂಡೆ ರವಾನೆ ಆಗಿತ್ತು.

ಆಗ ಕಲ್ಲು ಒಯ್ಯುವಾಗ ಇದು ಅಯೋಧ್ಯೆಗೆ ರವಾನೆಯಾಗಿರುವ ಕಲ್ಲು ಎಂದು ಎಲ್ಲೂ ಬಾಯಿ ಬಿಡಬಾರದು ಎಂದು ಷರತ್ತು ವಿಧಿಸಲಾಗಿತ್ತು. ಕಲ್ಲು ತೆಗೆದ ನಂತರ ಸಿಬ್ಬಂದಿಯೇ ಮಣ್ಣು ಮುಚ್ಚಿ ಭೂಮಿ ಸಮತಟ್ಟು ಮಾಡಿದ್ದರು. ಅದಷ್ಟೇ ಅಲ್ಲ ಕಲ್ಲಿನ ಜತೆಗೆ ಇಲ್ಲಿನ ಮಣ್ಣನ್ನೂ ತೆಗದುಕೊಂಡು ಹೋಗಲಾಗಿತ್ತು.

Rama Shila place temple3

ರಾಮನ ಮೂರ್ತಿ ಆಯ್ಕೆ ಬಳಿಕ ಸಂಭ್ರಮಾಚರಣೆ

ಷರತ್ತಿನಂತೆ ಇಲ್ಲಿನ ಭೂಮಿಯ ಮಾಲಿಕರು ಕಲ್ಲು ಕೊಂಡೊಯ್ದವರು ಯಾರು ಎಂದು ಬಾಯಿ ಬಿಟ್ಟಿರಲಿಲ್ಲ. ಆದರೆ, ಯಾವಾಗ ಮೈಸೂರಿನ ಅರುಣ್‌ ಯೋಗಿರಾಜ್‌ ಅವರು ಕೆತ್ತಿದ ಮೂರ್ತಿ ಆಯ್ಕೆಯಾಗಿದೆ ಎಂದು ಬಹಿರಂಗವಾಯಿತೋ ಆಗ ಕಲ್ಲಿನ ಮೂಲವೂ ತಿಳಿಯಿತು.

ಇದಾದ ಕೂಡಲೇ ಊರಿನ ಜನರು ಕಲ್ಲು ತೆಗೆದ ಜಾಗದಲ್ಲಿ ಚಪ್ಪರ ಹಾಕಿ ಪೂಜೆ ಮಾಡಿ ಸಂಭ್ರಮಾಚರಿಸಿದ್ದಾರೆ. ಇದೀಗ ಶ್ರೀರಾಮನ ಶಿಲೆ ಸಿಕ್ಕ ಜಾಗದಲ್ಲಿ ದೇವಾಲಯ ನಿರ್ಮಾಣಕ್ಕೆ ಜಮೀನು ಮಾಲೀಕ ರಾಮದಾಸ್ ಇಂಗಿತ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Ram Mandir: ಇಂದು ರಾಮಮಂದಿರ ಪ್ರವೇಶಿಸಲಿರುವ ರಾಮಲಲ್ಲಾ; ವಿಧಿವಿಧಾನ ಹೀಗಿದೆ

ಇಷ್ಟು ವರ್ಷ ರಾಮ ಇಲ್ಲೇ ನೆಲೆಸಿದ್ದ. ಈಗ ಮೂರ್ತಿಯಾಗಿ ಅಯೋಧ್ಯೆ ಸೇರಿದ್ದಾನೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸುವ ರಾಮದಾಸ್‌ ಅವರು ತಮ್ಮ ಜಮೀನು ಪುಣ್ಯಸ್ಥಳವಾಗಿ ಮಾರ್ಪಾಡಾದ ಬಗ್ಗೆ ‌ ಖುಷಿಯಾಗಿದ್ದಾರೆ.

Rama Shila place temple3

ಗುಜ್ಜೇಗೌಡಪುರದ ರಾಮದಾಸ್ ಅವರ ಜಮೀನಿನಲ್ಲಿ ಮಂಗಳವಾರ ಅರ್ಚಕ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ಪೂಜೆ ನಡೆಯಿತು. ಪ್ರಹ್ಲಾದ್‌ ರಾಔ ಅವರು ನಾಡಹಬ್ಬ ದಸರೆ ಗಜಪಡೆಯ ಅರ್ಚಕರಾಗಿ ಪ್ರಖ್ಯಾತರಾಗಿದ್ದಾರೆ.

ಅವರು ಶಿಲೆ ಸಿಕ್ಕ ಸ್ಥಳದಲ್ಲಿ ವಿಶೇಷ ಪೂಜೆ ಮಾಡಿ ಹಾಲು ಹರಿಸಿ ಶಾಂತಿ ಪೂಜೆ ನೆರವೇರಿಸಿದರು, ಗ್ರಾಮದ ಮಹಿಳೆಯರು ಆರತಿ ಬೆಳಗಿ ಪೂಜೆ ನಡೆಸಿದರು. ನೂರಾರು ಮಂದಿ ಅಲ್ಲಿ ಸೇರಿದ್ದರು.

Exit mobile version