Site icon Vistara News

Ramakrishna Jayanti 2023 : ಜ್ಞಾನ ಮತ್ತು ಭಕ್ತಿಯ ಸಂಗಮವಾಗಿದ್ದ ಶ್ರೀ ರಾಮಕೃಷ್ಣ ಪರಮಹಂಸ

Significance and inspiring thoughts of Ramakrishna Paramhansa

ರಾಮಕೃಷ್ಣ ಪರಮಹಂಸ

ಶ್ರೀ ಸ್ವಾಮಿ ಶಾರದೇಶಾನಂದಜೀ
ಲೋಕದಲ್ಲಿ ಸಾಮಾನ್ಯವಾಗಿ ಸಾಮಾನ್ಯ ಜನರೂ ಸೇರಿದಂತೆ ನಿಜಕ್ಕೂ ದೇವರನ್ನು ಕಾಣಬೇಕೆಂಬ ಹಂಬಲವುಳ್ಳರೂ ಕೇಳುವ ಒಂದು ಪ್ರಶ್ನೆ ಏನೆಂದರೆ, ದೇವರು ಇದ್ದಾನೆಯೇ? ಎಂದು. ಇದ್ದರೆ ನಾವೂ ಅವನನ್ನು ನೋಡಬಹುದೆ? ಇದು ಮುಂದಿನ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಹೇಳುವವರು ಅಸಾಮಾನ್ಯರಾಗಿದ್ದು (ದೇವರನ್ನು ಕಂಡ ವ್ಯಕ್ತಿ) ಅವರು ದೇವರನ್ನು ಪ್ರತಿಯೊಬ್ಬರೂ ನೋಡಬಹುದು ಎಂದು ಹೇಳಿದರೂ ಕೂಡಾ ಸಾಮಾನ್ಯ ಜನರಿಗೆ ಆ ಸತ್ಯವಾದ ಉತ್ತರವೂ ಸಾಮಾನ್ಯವೇ ಎಂದೆನಿಸುತ್ತದೆ.

ಆದರೆ ಅದೇ ಉತ್ತರ ನಿಜಕ್ಕೂ ದೇವರನ್ನು ಕಾಣಬೇಕೆಂಬ ಹಂಬಲವುಳ್ಳನಿಗೆ ಅದೆಂತಹ ಆನಂದ ನೀಡಬಲ್ಲುದು ಎಂಬುದನ್ನು ನಾವು ಭಾವಿಸಿಯೇ ಆನಂದಿಸಬೇಕು.

ಈ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಶ್ರೀಮಂತ ಕುಟುಂಬದಲ್ಲಿ ಜನಿಸಿದ, ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಗಂಟೆಗಳ ಕಾಲ ಧ್ಯಾನ ಮಾಡುತ್ತಿದ್ದ, ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ, 19 ನೇ ಶತಮಾನದ ಅಂದಿನ ಹಾಗೂ ಹಿಂದಿನ ತತ್ತ್ವಶಾಸ್ತ್ರ, ಇತಿಹಾಸ ಇನ್ನಿತರ ವಿಷಯಗಳ ಕುರಿತು ಆಳವಾದ ಅಧ್ಯಯನ ಮಾಡಿದ,ಅಖಂಡ ಬ್ರಹ್ಮಚರ್ಯದ ಪಾಲನೆ ಮಾಡುತ್ತಿದ್ದ ನವಯುವಕನೊಬ್ಬ ದೇವರನ್ನು ತಾನು ಕಾಣಬೇಕು ಎಂಬ ಒಂದೇ ಒಂದು ಹಂಬಲದಿಂದ ಅಂದಿನ ಮಹಾಜ್ಞಾನಿಗಳ ಬಳಿಗೆ ಹೋಗಿ ಕೇಳುತ್ತಿರುತ್ತಾನೆ, ನೀವು ದೇವರನ್ನು ನೋಡಿದ್ದೀರಾ? ನೀವು ದೇವರನ್ನು ಕಂಡಿದ್ದೀರಾ? ಎಂದು. ಯಾರ ಬಳಿಯೂ ಅವನ ಪ್ರಶ್ನೆಗೆ ಉತ್ತರವಿಲ್ಲ. ಈ ಸತ್ಯ ಶೋಧಕ ಯುವಕನೇ ನರೇಂದ್ರನಾಥದತ್ತ ಮುಂದೆ ಸ್ವಾಮಿ ವಿವೇಕಾನಂದ.

ದಿನೇದಿನೇ ನರೇಂದ್ರನಿಗೆ ತಾನು ದೇವರನ್ನು ಕಾಣಬೇಕು ಎಂಬ ಹಂಬಲ ಹೆಚ್ಚುತ್ತಾ ಹೋದಂತೆ, ಅವನಿಗೆ ದೇವರನ್ನು ಕಂಡ ಮಹಾಗುರುವಿನ ಕುರಿತು ಆತನ ಕಾಲೇಜು ಅಧ್ಯಾಪಕರಿಂದ ಮಾಹಿತಿ ದೊರೆಯುತ್ತದೆ. ನೇರವಾಗಿ ನರೇಂದ್ರ ಆ ಮಹಾಗುರು ದಕ್ಷಿಣೇಶ್ವರದ ದೇವಮಾನವ ಶ್ರೀ ರಾಮಕೃಷ್ಣ ಪರಮಹಂಸರ (Ramakrishna Jayanti 2023) ಬಳಿ ಹೋಗಿ ಕೇಳುತ್ತಾನೆ,
ನೀವು ದೇವರನ್ನು ನೋಡಿದ್ದೀರಾ? ಎಂದು. ನೇರವಾದ ಪ್ರಶ್ನೆಗೆ ನೇರವಾದ ಉತ್ತರವನ್ನು ಹೇಳುತ್ತಾರೆ ಶ್ರೀ ರಾಮಕೃಷ್ಣರು, ಹೌದಪ್ಪ ದೇವರನ್ನು ನಾನು ನೋಡಿದ್ದೇನೆ ಎಂದು.

ಈ ಉತ್ತರ ನರೇಂದ್ರನ ಮನಸ್ಸಿನಲ್ಲಿ ಗಾಢ ಪ್ರಭಾವ ಬೀರುತ್ತದೆ. ನಾನು ದೇವರನ್ನು ನೋಡಿದ್ದೇನೆ ಎಂದು ಎದೆತಟ್ಟಿ ಹೇಳಬಲ್ಲ ವ್ಯಕ್ತಿಯನ್ನು ಅವನು ಜೀವನದಲ್ಲಿ ಇದೇ ಮೊದಲ ಬಾರಿ ಕಂಡದ್ದು. ಮುಂದುವರಿದು ಶ್ರೀ ರಾಮಕೃಷ್ಣರು ಹೇಳುತ್ತಾರೆ ಆದರೆ ದೇವರು ಯಾರಿಗೆ ಬೇಕಾಗಿದ್ದಾರೆ? ಹೆಂಡತಿ ಮಕ್ಕಳಿಗಾಗಿ ಕೊಡಗಟ್ಟಲೆ ಕಣ್ಣೀರು ಸುರಿಸುವ ಜನರು ಭಗವಂತನಿಗಾಗಿ ಒಂದು ತೊಟ್ಟು ಕಣ್ಣೀರು ಸುರಿಸುವುದಿಲ್ಲ.

ಪ್ರಯತ್ನ ತಕ್ಕಂತೆ ಫಲ

ಒಬ್ಬ ನುರಿತ ವೈದ್ಯ ತನ್ನ ವೈದ್ಯಕೀಯ ಜೀವನದ ಆರಂಭದಲ್ಲಿ ಅನುಭವಿ ವೈದ್ಯನೊಂದಿಗೆ ಇದ್ದುಕೊಂಡು ವಿಧವಿಧವಾದ ಚಿಕಿತ್ಸಾ ವಿಧಾನಗಳನ್ನು ಕಲಿತು ತಾನು ಕೂಡಾ ಹೇಗೆ ಒಬ್ಬ ಅನುಭವಿ ವೈದ್ಯನಾಗುತ್ತಾನೋ ಹಾಗೆಯೇ ಶಿಷ್ಯನು ಕೂಡಾ ಸಮರ್ಥ ಗುರುವಿನ ಬಳಿ ಹೋಗಿ ಅಲ್ಲಿಯೇ ಹಲವು ವರ್ಷಗಳ ಕಾಲ ಇದ್ದು ಗುರುವಿನ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಸಾಧನೆಯನ್ನು ಮಾಡಿದಾಗ ಅವನಿಗೂ ಕೂಡಾ ಭಗವಂತನ ದರ್ಶನವಾಗುತ್ತದೆ ಎಂದು ಉಪದೇಶಿಸುತ್ತಾರೆ ಶ್ರೀ ರಾಮಕೃಷ್ಣರು.

ದೇವರು ಇದ್ದಾನೆ, ಕರೆದರೆ ಬರುತ್ತಾನೆ, ಕರೆಯಬೇಕು
ಇದು ಒಂದೊಂದು ಅದ್ಭುತವಾದ ಉಪದೇಶ.

ಸುಮ್ಮನೆ ಹಾಲಿನಲ್ಲಿ ಬೆಣ್ಣೆ ಇದೆ ಎಂದು ಹೇಳುತ್ತಲೇ ಇದ್ದರೆ ಬೆಣ್ಣೆ ಲಭಿಸುವುದಿಲ್ಲ. ಹಾಲನ್ನು ಹೆಪ್ಪು ಹಾಕಿ, ಮೊಸರು ಮಾಡಿ ಅದನ್ನು ಕಡೆದು ಮಜ್ಜಿಗೆ ಮಾಡಿದರೆ ಆಗ ಬೆಣ್ಣೆ ಲಭಿಸುತ್ತದೆ.

ಹಂಬಲ ಇರಬೇಕು

ಭಗವಂತನ ದರ್ಶನ ಎಲ್ಲರಿಗೂ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ ಶ್ರೀರಾಮಕೃಷ್ಣರು, ಅದಕ್ಕೆ ಶಿಷ್ಯನಾದವನಿಗೆ ದೇವರನ್ನು ಕಾಣಲೇಬೇಕು ಎಂಬ ಹಂಬಲ ಇರಲೇಬೇಕು. ಶಿಷ್ಯನಾದವನಿಗೆ ಯಾವ ಮಟ್ಟದ ಹಂಬಲ ಇರಬೇಕು ಎನ್ನುವುದಕ್ಕೆ ಅವರು ಒಂದು ದೃಷ್ಟಾಂತವನ್ನು ಉಪದೇಶಿಸುತ್ತಾರೆ.

ಒಬ್ಬ ಶಿಷ್ಯ ಒಬ್ಬ ಗುರುವಿನ ಬಳಿ ಹೋಗಿ ಕೇಳುತ್ತಾನೆ, ದೇವರನ್ನು ಕಾಣುವುದು ಹೇಗೆ? ಎಂದು. ಆಗ ಗುರುಗಳು ಹತ್ತಿರವೇ ಇದ್ದ ಒಂದು ಕೊಳದ ಬಳಿ ಅವನನ್ನು ಕರೆದುಕೊಂಡು ಹೋಗಿ ಅವನನ್ನು ನೀರಿನಲ್ಲಿ ಮುಳುಗಿಸಿ ಸ್ವಲ್ಪ ಕಾಲ ಶಿಷ್ಯನ ತಲೆಯನ್ನು ಒತ್ತಿ ಹಿಡಿಯುತ್ತಾರೆ, ಸ್ವಲ್ಪ ಸಮಯದ ನಂತರ ಅವನನ್ನು ಬಿಡುತ್ತಾರೆ.

ಉಸಿರಿಗಾಗಿ ಒದ್ದಾಡುತ್ತಿದ್ದ ಶಿಷ್ಯ ನೀರಿನಿಂದ ಹೊರಬಂದು ದೀರ್ಘ ಉಸಿರು ತೆಗೆದುಕೊಂಡು ಗುರುಗಳನ್ನು ಕೇಳುತ್ತಾನೆ , ಗುರುಗಳೇ ದೇವರನ್ನು ಕಾಣುವುದು ಹೇಗೆ ಎಂದು ಕೇಳಿದರೆ, ಹೀಗೆ ನೀರಿನಲ್ಲಿ ಮುಳುಗಿಸಿಬಿಟ್ಟಿರಲ್ಲ ಎಂದು. ಆಗ ಗುರುಗಳು ಅವನಿಗೆ ಹೇಳುತ್ತಾರೆ, ನೀರಿನಲ್ಲಿ ನಿನ್ನನ್ನು ಮುಳುಗಿಸಿದಾಗ ನಿನಗೆ ಏನೆನ್ನಿಸುತ್ತಿತ್ತು ಎಂದು. ಶಿಷ್ಯ ಹೇಳುತ್ತಾನೆ, ʻʻಒಂದು ಕ್ಷಣ ನೀವು ನನ್ನ ತಲೆ ಬಿಟ್ಟರೆ ಸಾಕು, ನಾನು ಯಾವಾಗ ಉಸಿರು ಬಿಟ್ಟೆನೋ ಎಂದೆನಿಸುತ್ತಿತ್ತು. ಆಗ ಗುರುಗಳು ಹೇಳುತ್ತಾರೆ,ಹಾಗೆಯೇ ನಿನ್ನ ಪ್ರಾಣವೂ ಭಗವಂತನ ದರ್ಶನಕ್ಕಾಗಿ ವ್ಯಾಕುಲತೆಯಿಂದ ಹಂಬಲಿಸಿದರೆ ನೀನು ದೇವರನ್ನು ಖಂಡಿತವಾಗಿಯೂ ಕಾಣುವೆʼʼ ಎನ್ನುತ್ತಾರೆ.

ಸಮರ್ಥ ಗುರುವಿನ ಅವಶ್ಯಕತೆ

ಶ್ರೀ ರಾಮಕೃಷ್ಣರು ಈ ಸಾಮಾನ್ಯ ಅಸಾಮಾನ್ಯ ಗುರುಗಳ ಕುರಿತು ಒಂದು ದೃಷ್ಟಾಂತ ನೀಡುತ್ತಾರೆ. ಕೆರೆ ಹಾವು ಒಂದು ದೊಡ್ಡ ಕಪ್ಪೆಯನ್ನು ನುಂಗುತ್ತದೆ, ಆದರೆ ಆ ಕೆರೆಹಾವು ಬಹಳ ಚಿಕ್ಕದು, ಕಪ್ಪೆ ದೊಡ್ಡದಾದುದರಿಂದ ಈ ಹಾವು ಕಪ್ಪೆಯನ್ನು ನುಂಗಲು ಆಗದೆ, ಅತ್ತ ಹೊರಗೆ ಹಾಕಲು ಆಗದೆ ಒದ್ದಾಡುತ್ತದೆ, ಅದೇ ಒಂದು ಹೆಬ್ಬಾವು ಆದರೆ ಅದು ಅನೇಕ ಕಪ್ಪೆಗಳನ್ನು ನುಂಗಿ ಬಿಡಬಲ್ಲದು. ಹಾಗೆಯೇ ಸಮರ್ಥ ಗುರುವು ಅನೇಕ ಶಿಷ್ಯರನ್ನು ಏಕಕಾಲಕ್ಕೆ ಅವರವರ ಮನೋಭಾವಕ್ಕೆ ತಕ್ಕಂತೆ ಉದ್ಧರಿಸಬಲ್ಲ ಹಾಗೂ ಅವರಿಗೆ ಸೂಕ್ತವಾದ ಮಾರ್ಗದರ್ಶನವನ್ನು ನೀಡಬಲ್ಲ.
ಶ್ರೀ ರಾಮಕೃಷ್ಣರ ಬಳಿಗೆ ಬಂದ ಭಿನ್ನ ಭಿನ್ನ ಸ್ವಭಾವದ ಶಿಷ್ಯರು ಅವರ ಸ್ವಭಾವದಂತೆ ಮಾರ್ಗದರ್ಶನ ಪಡೆದದ್ದು ನಿಜಕ್ಕೂ ಗಮನೀಯವಾದ ಅಧ್ಯಯನಯೋಗ್ಯ ವಿಷಯ.

ಶ್ರೀ ರಾಮಕೃಷ್ಣರು ಈ ಸಮರ್ಥ ಗುರುಗಳ ಕುರಿತು ಇನ್ನೊಂದು ದೃಷ್ಟಾಂತವನ್ನು ನೀಡುತ್ತಾರೆ. ಒಬ್ಬ ತಾಯಿ ಅತಿಯಾಗಿ ಬೆಲ್ಲ ತಿನ್ನುತ್ತಿದ್ದ ತನ್ನ ಮಗನನ್ನು ಕರೆದುಕೊಂಡು ಬಂದು ಗುರುಗಳನ್ನು ಕೇಳಿಕೊಳ್ಳುತ್ತಾಳೆ, ದಯವಿಟ್ಟು ಇವನಿಗೆ ಬೆಲ್ಲ ತಿನ್ನುವುದನ್ನು ಬಿಡಲು ಹೇಳಿ ಎಂದು. ಆ ಗುರುಗಳು ಒಂದು ವಾರ ಬಿಟ್ಟು ಆ ತಾಯಿಗೆ ಬರಲು ತಿಳಿಸುತ್ತಾರೆ. ಒಂದು ವಾರದ ನಂತರ ಗುರುಗಳು ಆ ತಾಯಿಯ ಮಗುವಿಗೆ ಹೇಳುತ್ತಾರೆ, ನೋಡಪ್ಪಾ ನೀನು ಅತಿಯಾಗಿ ಬೆಲ್ಲ ತಿನ್ನುವುದನ್ನು ಬಿಡು ಎಂದು. ಆ ಮಗು ಆಗಲಿ ಗುರುಗಳೇ ಎನ್ನುತ್ತದೆ. ಆ ತಾಯಿ ಆಶ್ಚರ್ಯದಿಂದ ಕೇಳುತ್ತಾಳೆ, ಒಂದು ವಾರದ ಹಿಂದೆಯೇ ನೀವು ಇದನ್ನು ನನ್ನ ಮಗುವಿಗೆ ತಿಳಿಸಬಹುದಿತ್ತಲ್ಲಾ ಎನ್ನುತ್ತಾಳೆ ತಾಯಿ. ಆಗ ಗುರುಗಳು ಹೇಳುತ್ತಾರೆ, ನೋಡಮ್ಮಾ ಒಂದು ವಾರದ ಹಿಂದೆ ನಾನು ಕೂಡಾ ಬೆಲ್ಲ ತಿನ್ನುತ್ತಿದ್ದೆ. ಹಾಗಾಗಿ ನಿನ್ನ ಮಗುವಿಗೆ ಉಪದೇಶ ನೀಡಲಿಲ್ಲ. ಗುರುಗಳು ತಾವು ಬೋಧಿಸುವುದನ್ನು ತಾವೇ ಆಚರಿಸಿ ಉಪದೇಶಿಸಿದಾಗ ಶಿಷ್ಯರು ಅದನ್ನು ಪಾಲಿಸುತ್ತಾರೆ. ಎಂತಹ ಅದ್ಭುತವಾದ ಉಪದೇಶ.

ಉಪದೇಶ ನೀಡುವವರು ನಮ್ಮ ಮಾತುಗಳನ್ನು ನೀವು ಕೇಳಿ ಎನ್ನುವುದಕ್ಕಿಂತ ಕೇಳುವವರು ದಯವಿಟ್ಟು ನೀವು ಹೇಳಿ ನಿಮ್ಮ ಮಾತುಗಳನ್ನು ನಾವು ಕೇಳುತ್ತೇವೆ ಎಂದರೆ ಹೇಗೆ ಇರುತ್ತದೆ?.

ಗೃಹಸ್ಥ ಸಾಧಕರಿಗೆ ಮಾರ್ಗದರ್ಶನ

ಶ್ರೀ ರಾಮಕೃಷ್ಣರು ಸನ್ಯಾಸಿಗಳಿಗೆ ಬೋಧಿಸುವುದರ ಜೊತೆಗೆ ಗೃಹಸ್ಥರಿಗೂ ಸರಳವಾದ ಉಪದೇಶವನ್ನು ನೀಡಿ ಮಾರ್ಗದರ್ಶನ ಮಾಡಿದ್ದಾರೆ.

ಗೃಹಸ್ಥರು ಮುಖ್ಯವಾಗಿ ಆಗಾಗ ಸಾಧು ಸಜ್ಜನರ ಸಂಗ( ಸತ್ಸಂಗ) ಮಾಡುತ್ತಿರಬೇಕು. ಅವರು ಈ ಕುರಿತು ಒಂದು ಕಥೆಯನ್ನು ಹೇಳುತ್ತಾರೆ, ಪರ್ವತ ರಾಜನ ಮಗಳು ಪಾರ್ವತಿ. ಮಗಳ ಬಳಿ ಬಂದು ಪರ್ವತ ರಾಜ ಕೇಳುತ್ತಾನೆ, ಮಗಳೇ ನನಗೆ ಮೋಕ್ಷವನ್ನು ಕರುಣಿಸು ಎಂದು. ತಾಯಿ ಪಾರ್ವತಿ ತಂದೆಗೆ ಹೇಳುತ್ತಾಳೆ, ಅಪ್ಪಾ ನನ್ನನ್ನು ಮಗಳನ್ನಾಗಿ ಪಡೆಯುವಷ್ಟು ನೀನು ಪುಣ್ಯ ಮಾಡಿರುವೆ, ಆದರೆ ಮೋಕ್ಷ ಬೇಕೆಂದರೆ ನೀನು ಸಾಧು ಸಂಗ ಮಾಡು ಎಂದು ಉಪದೇಶಿಸುತ್ತಾಳೆ ತಾಯಿ ಪಾರ್ವತಿ. ಸದಾ ಭಗವಂತನ ಸ್ಮರಣೆಯಲ್ಲಿ ಇರುವವರ ಸಂಗ ಮಾಡಿದರೆ ಭಕ್ತರಿಗೆ ಭಗವಂತನ ಸ್ಮರಣೆಯಿಂದ ಆಗುವ ಪ್ರಯೋಜನದ ಅರಿವು ಉಂಟಾಗುತ್ತದೆ.

ಇನ್ನು ಎರಡನೆಯದಾಗಿ ಏಕಾಂತದಲ್ಲಿ ಇದ್ದುಕೊಂಡು ಧ್ಯಾನಾಭ್ಯಾಸ ಮಾಡಬೇಕು, ನಿತ್ಯ ಅನಿತ್ಯದ ಕುರಿತು ವಿಚಾರ ಮಾಡಬೇಕು. ಒಂದು ಇರುವೆಯ ಮುಂದೆ ಮರಳು ಮತ್ತು ಸಕ್ಕರೆ ಇಟ್ಟರೆ ಆ ಇರುವೆ ಸಕ್ಕರೆಯ ತುಂಡನ್ನೇ ಆರಿಸಿಕೊಳ್ಳುತ್ತದೆ.

ಹಾಗೆಯೇ ಸಾಧಕ ಯಾವುದು ಸತ್ಯವಾದದ್ದು- ಅಸತ್ಯವಾದದ್ದು, ಯಾವುದು ನಿತ್ಯವಾದದ್ದು- ಅನಿತ್ಯವಾದದ್ದು ಈ ಕುರಿತು ಆಲೋಚಿಸಿಬೇಕು. ಭಗವಂತನೇ ಸತ್ಯ ವಸ್ತು ಎನ್ನುವುದರ ಅರಿವು ಸಾಧಕನಿಗೆ ಆಗಬೇಕು . ಈ ಅರಿವು ಸಾಧು ಸಂಗದಿಂದ ಉಂಟಾಗುತ್ತದೆ.

ಇನ್ನು ಮೂರನೆಯದಾಗಿ ವ್ಯಾಕುಲತೆಯಿಂದ ಪ್ರಾರ್ಥನೆ ಮಾಡಬೇಕು ಎಂದು ಉಪದೇಶಿಸುತ್ತಾರೆ ಶ್ರೀ ರಾಮಕೃಷ್ಣರು. ಸ್ವಯಂ ಶ್ರೀ ರಾಮಕೃಷ್ಣರು ಅದೆಂತಹ ವ್ಯಾಕುಲತೆಯಿಂದ ಕಾಳಿಯನ್ನು ಕರೆದರು.

ಹಗಲು ರಾತ್ರಿಯೆನ್ನದೆ ನಿರಂತರವಾಗಿ ಕಣ್ಣೀರು ಹಾಕುತ್ತಾ ಅಮ್ಮಾ ದರ್ಶನ ದರ್ಶನ ಕೊಡು, ಅಮ್ಮಾ ನನಗೆ ನಿನ್ನ ದರ್ಶನ ಕೊಡು ಎಂದು ಪ್ರಾರ್ಥನೆ ಮಾಡುತ್ತಲೇ ಇದ್ದರು. ಅವರ ವ್ಯಾಕುಲತೆ ಅದೆಷ್ಟು ತೀವ್ರವಾಗಿತ್ತೆಂದರೆ ಅವರು ಅಳುತ್ತಾ ಅಳುತ್ತಾ ತಮ್ಮ ಗಲ್ಲವನ್ನು ನೆಲಕ್ಕೆ ಉಜ್ಜಿಕೊಳ್ಳುತ್ತಾ ಇರುತ್ತಿದ್ದರು, ಅವರ ಗಲ್ಲದಿಂದ ರಕ್ತ ಹರಿಯುತ್ತಿರುವುದು ಕೂಡಾ ಅವರ ಪರಿವೆಗೇ ಇರುತ್ತಿರಲಿಲ್ಲ. ಅನೇಕ ವರ್ಷಗಳ ತೀವ್ರ ಸಾಧನೆಯ ಫಲ ಒಂದು ದಿನ ಅವರಿಗೆ ಲಭಿಸಿತು. ಭಗವತಿಯ ದರ್ಶನ ಲಾಭವಾಯಿತು.

ಒಂದು ದಿನ ಶ್ರೀ ರಾಮಕೃಷ್ಣರು ಕಾಳಿಮಾತೆ ದರ್ಶನ ಕೊಡದಿರುವುದನ್ನು ಕಂಡು ಇಂದು ಅವಳು ಒಂದೋ ದರ್ಶನ ಕೊಡಬೇಕು ಇಲ್ಲದಿದ್ದರೆ ನಾನು ಇದ್ದು ಪ್ರಯೋಜನವಿಲ್ಲ ಎಂದು ಭಾವಿಸಿ ಕಾಳಿಮಾತೆಯ ಮುಂದೆ ಅಳುತ್ತಾ ಪ್ರಾರ್ಥನೆ ಮಾಡುತ್ತಿದ್ದರು, ತಾಯಿ ದರ್ಶನ ಕೊಡದಿದ್ದಾಗ ಶ್ರೀ ರಾಮಕೃಷ್ಣರ ಕಣ್ಣಿಗೆ ಗೋಡೆಯ ಮೇಲೆ ತೂಗು ಹಾಕಿದ್ದ ಕತ್ತಿಯತ್ತ ಹೋಯಿತು. ತಕ್ಷಣವೇ ಅವರು ಅದನ್ನು ತೆಗೆದುಕೊಂಡು ತಮ್ಮ ಕತ್ತಿನ ಮೇಲೆ ಆ ಕತ್ತಿಯನ್ನು ಹಾಕಿಕೊಳ್ಳಬೇಕು ಆಗ ಪ್ರತ್ಯಕ್ಷಳಾದಳು ಕಾಳಿಮಾತೆ. ಅದೆಂತಹ ರೋಮಾಂಚಕಾರಿ ಅನುಭವ ಅದು, ನಾವು ಭಾವಿಸಿಯೇ ಆನಂದ ಮಗ್ನರಾಗಬೇಕು.

ಸ್ತ್ರೀಯರನ್ನು ತಾಯಿಯಂತೆ ಕಾಣು

ಸ್ವಯಂ ಶ್ರೀ ರಾಮಕೃಷ್ಣರು ತಮ್ಮ ಧರ್ಮ ಪತ್ನಿಯಾದ ಶಾರದಾದೇವಿಯವರನ್ನು, ಜಗನ್ಮಾತೆಯನ್ನು ಕೂಡಿಸುವ ಪೀಠದ ಮೇಲೆ ಕೂಡಿಸಿ ಷೋಡಷಿ ಪೂಜೆಯನ್ನು ಮಾಡಿ ಗೌರವಿಸುತ್ತಾರೆ. ತನ್ಮೂಲಕ ಮನುಕುಲ ಉದ್ಧಾರವಾಗ ಬೇಕಾದರೆ ಸ್ತ್ರೀಯರನ್ನು ತಾಯಿಯಂದು ತಿಳಿದು ಗೌರವಿಸಬೇಕು ಎಂದು ತಿಳಿಸುತ್ತಾರೆ.

ಸ್ವಯಂ ಶಾರದಾದೇವಿಯವರೊಂದಿಗೆ ಆರು ತಿಂಗಳ ಕಾಲ ಒಂದೇ ಹಾಸಿಗೆಯಲ್ಲಿ ಮಲಗಿದ ಶ್ರೀ ರಾಮಕೃಷ್ಣರು ಪತ್ನಿಯನ್ನು ತನ್ನ ತಾಯಿ, ಅವಳೇ ಸಾಕ್ಷಾತ್ ಕಾಳಿಮಾತೆ ಎಂದು ಭಾವಿಸಿ ಪತ್ನಿಯ ಜೊತೆಗೆ ಇದ್ದರು. ಈ ಕುರಿತು ರಾಷ್ಟ್ರಕವಿ ಕುವೆಂಪು ಹೇಳುತ್ತಾರೆ, ಎರಡು ಹಸುಗೂಸುಗಳು ಒಂದೇ ಹಾಸಿಗೆಯಲ್ಲಿ ಮಲಗಿದಂತೆ ಇತ್ತು ಇದು ಎಂದು.

ತಾವು ಭಗವಂತನ ದರ್ಶನ ಪಡೆದಂತೆ ಪ್ರತಿಯೊಬ್ಬರೂ ಭಗವಂತನ ಸಾಕ್ಷಾತ್ಕಾರ (ದರ್ಶನ) ಮಾಡಿಕೊಳ್ಳಬಹುದು ಎಂದು ಶ್ರೀ ರಾಮಕೃಷ್ಣರು ಸ್ವಯಂ ಸಾಧನೆ ಮಾಡಿ ತೋರಿಸಿ ಮನುಕುಲಕ್ಕೆ ಉಪದೇಶ ನೀಡಿದ್ದಾರೆ.

ಇಂದಿನ ಆಧುನಿಕ ಯುಗದ ಜನರು ಮಾನಸಿಕ ತೊಳಲಾಟದಿಂದ ಹಾಗೂ ದೈಹಿಕ ರೋಗಗಳಿಂದ ವಿಪರೀತವಾಗಿ ಬಳಲುತ್ತಿರುವುದನ್ನು ಕಂಡರೆ ಶ್ರೀ ರಾಮಕೃಷ್ಣರಂತಹ ಮಹಾಗುರುಗಳ ಸಂದೇಶಗಳ ಅಧ್ಯಯನ ಹಾಗೂ ಅವುಗಳ ಆಚರಣೆಯ ಅವಶ್ಯಕತೆ ಹಿಂದಿಗಿಂತ ಈಗ ಹೆಚ್ಚು ಇದೆ ಎಂದೆನಿಸುವುದಿಲ್ಲವೆ?

ಲೇಖಕರು ಅಧ್ಯಕ್ಷರು, ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ, ಹರಿಹರ

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಇದನ್ನೂ ಓದಿ : Prerane : ಯಶಸ್ಸಿಗಾಗಿ ನಿರಂತರ ಪ್ರಯತ್ನ; ಆಧುನಿಕ ಕ್ಷೇತ್ರಗಳಲ್ಲಿ ಯೋಗಸೂತ್ರದ ಪಾಲನೆ

Exit mobile version