ರಂಜಾನ್ ಅಥವಾ ಈದ್ ಉಲ್ ಫಿತ್ರ್ ಇಸ್ಲಾಂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ರಂಜಾನ್ ಎಂಬುದು ತಿಂಗಳು. ಇದು ಇಸ್ಲಾಮ್ ಕ್ಯಾಲೆಂಡರ್ ಪ್ರಕಾರ ವರ್ಷದ ಒಂಬತ್ತನೇ ತಿಂಗಳು. ʼಉಪವಾಸʼ ಇಸ್ಲಾಮ್‌ನ ಐದು ಕಂಬಗಳಲ್ಲಿ ನಾಲ್ಕನೆಯದು. ರಂಜಾನ್ ಸಮಯದಲ್ಲಿ ಉಪವಾಸಕ್ಕೆ ಬಹಳ ಮಹತ್ವ. ಧಾರ್ಮಿಕ ಸ್ವಭಾವದವರು ಈ ತಿಂಗಳಿಡೀ ಹಗಲಿಡೀ ಉಪವಾಸ ಆಚರಿಸುತ್ತಾರೆ. ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ತವ್ಯವೇ ರಂಜಾನ್ ತಿಂಗಳ ಸಂಪೂರ್ಣ ವ್ರತಾಚರಣೆ.
ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್(ಸ) ಅವರ ಮೇಲೆ ಪವಿತ್ರ ಕುರಾನ್ ಅವತೀರ್ಣಗೊಂಡ ಮಾಸವೇ ರಂಜಾನ್. ಮಾನವಕಲ್ಯಾಣಕ್ಕಾಗಿ ಇದೇ ತಿಂಗಳಲ್ಲಿ ಪವಿತ್ರ ಕುರಾನ್ ಪ್ರವಾದಿಗಳ ಮೇಲೆ ಅವತೀರ್ಣಗೊಂಡಿತು. ಇದನ್ನು ಗೌರವಿಸಲು ಪ್ರತಿವರ್ಷವೂ ಈ ಒಂದು ತಿಂಗಳ ವ್ರತಾಚರಣೆ ಕಡ್ಡಾಯಗೊಳಿಸಲಾಯಿತು. ಮುಂಜಾನೆಯಿಂದ ಸೂರ್ಯಾಸ್ತದ ವರೆಗೆ ಅನ್ನ ಪಾನೀಯಗಳನ್ನು ತ್ಯಜಿಸುವುದನ್ನೇ ವ್ರತಾಚರಣೆ ಎನ್ನಲಾಗುತ್ತದೆ. ಹಸಿವಿನಂಥ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶ.
ಇಸ್ಲಾಂ ಕ್ಯಾಲೆಂಡರ್‌ನಲ್ಲಿ ರಂಜಾನ್ ಮಾಸಕ್ಕೇಕೆ ಇಷ್ಟು ಮಹತ್ವ ನೀಡಲಾಗಿದೆ ಎಂದರೆ ಪವಿತ್ರವಾದ ಕುರಾನ್ ಅಲ್ಲಾಹನಿಂದ ಪ್ರವಾದಿ ಮೊಹಮ್ಮದರ ಮೂಲಕ ಭೂಮಿಗೆ ಅವತೀರ್ಣಗೊಳ್ಳಲು ಪೂರ್ಣವಾಗಿ ಇಪ್ಪತ್ತಮೂರು ವರ್ಷಗಳು ಬೇಕಾಯಿತು. ಅದರ ಪ್ರಥಮ ವಾಕ್ಯಗಳು ಈ ತಿಂಗಳಲ್ಲಿಯೇ ಅವತೀರ್ಣಗೊಂಡುದುದರಿಂದ ರಂಜಾನ್ ಮಾಸಕ್ಕೆ ಅತಿಹೆಚ್ಚಿನ ಮಹತ್ವ. ಪ್ರಥಮ ವಾಕ್ಯಗಳು ಕ್ರಿಶ 610ರಲ್ಲಿ ಅವತೀರ್ಣಗೊಂಡ ಬಳಿಕ ಪ್ರಾರಂಭವಾದ ಶಕೆಗೆ ಹಿಜರಿ ಶಕೆ ಎಂದು ಕರೆಯುತ್ತಾರೆ. ಚಂದ್ರನ ಚಲನೆಯನ್ನು ಆಧರಿಸಿದ ಈ ಕ್ಯಾಲೆಂಡರ್ ಇಂಗ್ಲೀಷ್ ಕ್ಯಾಲೆಂಡರಿಗಿಂತಲೂ ಹತ್ತರಿಂದ ಹನ್ನೆರಡು ದಿನ ಕಡಿಮೆಯದ್ದು.
ಒಂದು ತಿಂಗಳ ಕಠಿಣ ವ್ರತದ ಬಳಿಕ ಈದ್-ಉಲ್-ಫಿತರ್ ಆಗಮಿಸುತ್ತದೆ. ರಂಜಾನ್ ತಿಂಗಳ ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ, ಕಠಿಣ ವ್ರತದ ಮೂಲಕ ಹಸಿವಿನ ಕಠಿಣತೆಯನ್ನು ಅರಿಯುತ್ತಾರೆ. ಬಡವ- ಶ್ರೀಮಂತರೆನ್ನುವ ಭೇದವಿಲ್ಲದೆ ಎಲ್ಲರೂ ವ್ರತಾಚರಣೆ ಮಾಡಿ ಸಮಾನತೆ ಅನುಭವಿಸುತ್ತಾರೆ. ಅಲ್ಲಾಹನನ್ನು ಪ್ರಾರ್ಥಿಸುತ್ತಾ ಎಲ್ಲ ರೀತಿಯ ತಪ್ಪುಗಳಿಂದ ದೂರವಿದ್ದು ಒಂದು ತಿಂಗಳು ಕಳೆದು ಈದ್-ಉಲ್-ಫಿತ್ರ್ ಕಾಣುತ್ತಾರೆ. ರಂಜಾನ್‌ನ ಉಪವಾಸ ಎಲ್ಲಾ ವಯಸ್ಕರಿಗೆ ಮತ್ತು ಆರೋಗ್ಯವಂತರಿಗೆ ಕಡ್ಡಾಯವಾಗಿದೆ. ಆದರೆ ದೈಹಿಕವಾಗಿ ಸಬಲರಲ್ಲದವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಇದು ದಾನದ ಹಬ್ಬವೆಂದೇ ಪ್ರಸಿದ್ಧ. ಒಂದು ತಿಂಗಳ ಹಸಿವೆಯ ಪಾಠದಿಂದ ಬಡತನ ಹಸಿವು ಏನೆಂಬುದು ಅರಿತ ಧಾರ್ಮಿಕ ವ್ಯಕ್ತಿಯು ಬಡವನಿಗೆ- ಹಸಿದವನಿಗೆ ದಾನದ ಮೂಲಕ ಸಹಾಯ ಮಾಡುತ್ತಾನೆ. ಈಸ್ಲಾಂ ಶ್ರೀಮಂತನನ್ನು ದಾನ ನೀಡುವುದಕ್ಕೆ ಪ್ರೇರೇಪಿಸುತ್ತದೆ. ಇಸ್ಲಾಮಿನ ಐದು ಪ್ರಧಾನ ಕರ್ಮಗಳಲ್ಲಿ ಒಂದು ʼಝಕಾತ್’. ಹಾಗೆಂದರೆ ದಾನ ನೀಡುವುದು. ಪುಣ್ಯ ಕಾರ್ಯಗಳ ಸಂದರ್ಭಗಳಲ್ಲೂ ದಾನ ನೀಡುವುದು ಕಡ್ಡಾಯ. ಈದ್ ದಿನದಂದು ಯಾರೂ ಹಸಿದಿರಬಾರದು ಎಂಬುದು ಈ ದಾನದ ಉದ್ದೇಶ.
ಇದರ ಬಳಿಕ ಚಂದ್ರನ ದರ್ಶನವನ್ನು ಮಾಡಿಕೊಂಡು ನಂತರ ಆಹಾರವನ್ನು ಸೇವಿಸಬಹುದು. ದೇಹದ ಶುದ್ಧೀಕರಣ, ಮನದ ಶುದ್ಧೀಕರಣ, ದೇವಸ್ಮರಣೆ ಹಾಗೂ ಬಡವರಿಗೆ ಸಹಾಯ ಮಾಡುವ ಉನ್ನತ ಗುಣವನ್ನು ರೂಢಿಯಾಗಿಸುವುದು ಈ ಹಬ್ಬದ ಪ್ರಧಾನ ಉದ್ದೇಶವೆನ್ನಬಹುದು.
ಇದನ್ನೂ ಓದಿ: ಹನುಮ ಜಯಂತಿ: ಆಂಜನೇಯನ ನಾಲ್ಕು ಅಪರೂಪದ ಕತೆಗಳು