Site icon Vistara News

Ratha Saptami 2023 : ನಮಸ್ಕಾರ ಪ್ರಿಯ ಸೂರ್ಯನನ್ನು ನಮಸ್ಕರಿಸುವ ಹಬ್ಬ ರಥಸಪ್ತಮಿ

Ratha Saptami 2023

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಸಪ್ತಾಶ್ವ ರಥಮಾರುಡಾಂ ಪ್ರಚಂಡಮ್ ಕಶ್ಯಪಾತ್ಯಜಂl
ಶ್ವೇತ ಪದ್ಮದರದೇವಂ ತಮಂ ಸೂರ್ಯಮ್ ಪ್ರಣಮಾಮ್ಯಹಮ್ ll

(ಬಿಳಿ ಕಮಲವನ್ನು ಕೈಯಲ್ಲಿ ಹಿಡಿದವನೂ, ಪ್ರಚಂಡ ತೇಜಸ್ವಿಯೂ ಆದ ಎಲೈ ಕಶ್ಯಪ ಋಷಿ ಕುಮಾರನೇ, ಬಿಳಿಯ ಬಣ್ಣದ ಏಳು ಕುದುರೆಗಳಿಂದ ಎಳೆಯಲ್ಪಡುವ ರಥದ ಮೇಲೆ, ಆಸೀನನಾದ ಸೂರ್ಯ ಭಗವಾನನೇ ನಿನಗೆ ಪ್ರಣಾಮಗಳು).

ಹಿಂದೂ ಧರ್ಮದಲ್ಲಿ ಕೋಟಿ ಕೋಟಿ ದೇವತೆಗಳು ಇದ್ದರೂ ನಮ್ಮ ಕಣ್ಣಿಗೆ ಕಾಣುವ ದೇವರೆಂದರೇ ಅದು ಸೂರ್ಯದೇವನೇ ಆಗಿದ್ದಾನೆ. ಈತನನ್ನು ಪ್ರತಿದಿನವು ನಾವು ನೋಡಲೇಬೇಕು ಮತ್ತು ಪೂಜಿಸಲೇ ಬೇಕು. ಪ್ರತಿದಿನವು ಈತನಿಂದಲೇ ಆರಂಭ, ಈತನಿಂದಲೇ ಅಂತ್ಯ.

ಸೂರ್ಯನನ್ನು ವೈವಸ್ವತ, ರವಿ, ಆದಿತ್ಯ, ಪುಷ, ದಿವಾಕರ, ಸವಿತಾ, ಅರ್ಕ, ಮಿತ್ರ, ಭಾನು, ಭಾಸ್ಕರ ಮತ್ತು ಗ್ರಹಪತಿ ಅಥವಾ ಗ್ರಹರಾಜ ಎಂದೂ ಕೂಡ ಕರೆಯಲಾಗುತ್ತದೆ. ಈ ರೀತಿಯಿಂದ ಕರೆಸಿಕೊಳ್ಳುವ ಸೂರ್ಯ ದೇವನಿಗೆ ಅವನದ್ದೇ ಮಂತ್ರಗಳ ಪಠಣ ಮಾಡಿ ಅವನನ್ನು ಪೂಜಿಸಿದರೆ ನಮಗೆ ಒಳ್ಳೆಯ ಆಯಸ್ಸು ಮತ್ತು ಜೀವನ ಪ್ರಾಪ್ತಿಯಾಗುತ್ತದೆ ಎಂಬುದನ್ನು ನಮ್ಮ ಋಷಿಮುನಿಗಳು ಸಾರಿ ಹೋಗಿದ್ದಾರೆ.

ಸನಾತನ ಸಂಪ್ರದಾಯದಲ್ಲಿ ಪೂಜಿಸಲ್ಪಡುವ ಪ್ರಮುಖ ದೇವರಾದ ಸೂರ್ಯನು ಕತ್ತಲನ್ನು ನಿವಾರಿಸಿ ಬೆಳಕನ್ನು ಹೊರಸೂಸುವ ದೇವ. ಇದರರ್ಥ ಜಗತ್ತಿನಲ್ಲಿ ಅಜ್ಞಾನವನ್ನು ತೊಡೆದು ಹಾಕಿ ಸುಜ್ಞಾನವು ಬೆಳಗುವಂತೆ ಮಾಡುವ ಈತನ ಕಿರಣಗಳಿಗೆ ಜೀವರಾಶಿಯನ್ನು ಸಂರಕ್ಷಿಸುವ, ಸಂಹಾರ ಮಾಡುವ ಎರಡೂ ಗುಣವೂ ಇದೆ. ಪ್ರತಿದಿನವು ಬೆಳಗಿನಿಂದ ಸಂಜೆಯವರೆಗೆ ಒಳಿತನ್ನು ಮಾಡುವ ಸೂರ್ಯದೇವನನ್ನು ಪೂಜಿಸಿದರೆ ಪ್ರತಿನಿತ್ಯದ ಕಷ್ಟವು ದೂರಾಗುತ್ತದೆ.

ಜಗತ್ತಿಗೆ ಬೆಳಕನ್ನು ನೀಡುವ ಪ್ರತ್ಯಕ್ಷ ದೈವ ಸೂರ್ಯನನ್ನು ಪೂಜಿಸುವುದರಿಂದ ನಮ್ಮ ಜೀವನದಲ್ಲೂ ಸಕಾರಾತ್ಮಕ, ಸಂತೋಷದ, ಯಶಸ್ಸು ಮತ್ತು ಸಮೃದ್ಧಿಯ ಬೆಳಕು ಮೂಡುವುದು. ‌ಸೂರ್ಯ ನಮ್ಮ ಆತ್ಮವನ್ನು ಪ್ರತಿನಿಧಿಸುತ್ತಾನೆ. ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯ ದೇವನಿಗೆ ವಿಶೇಷ ಪೂಜೆ ಪುನಸ್ಕಾರ ಮಾಡುವುದರಿಂದ ಬದುಕಲ್ಲಿ ಸಾಕಷ್ಟು ಬದಲಾವಣೆ ಹಾಗೂ ಧನಾತ್ಮಕ ರೀತಿಯಲ್ಲಿ ಯಶಸ್ಸು ದೊರೆಯುವುದು.

ಹೊಸ ರಥವನ್ನೇರುವ ಸೂರ್ಯ

ಯುಗಾದಿ ಹೊಸತನವನ್ನು ಹೊತ್ತು ತಂದರೆ, ಅದಕ್ಕೂ ಮುನ್ನ ಬರುವ ರಥಸಪ್ತಮಿ ಹಳತರ ಜಾಗದಲ್ಲಿ ಹೊಸತನ್ನು ತಂದಿಟ್ಟು ಬದುಕನ್ನು ಆನಂದಮಯವಾಗಿಸಿಕೊಳ್ಳಲು ಪ್ರೇರೇಪಿಸುತ್ತದೆ. ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿ.
ಈ ದಿನ ಸೂರ್ಯ ಹಳೆಯ ರಥವನ್ನು ಬಿಟ್ಟು ಹೊಸ ರಥ ಹತ್ತುತ್ತಾನೆ. ಅಲ್ಲದೆ ಈ ದಿನವನ್ನು ಸೂರ್ಯನ ಜನ್ಮದಿನವೆಂದೂ ಪ್ರಾಜ್ಞರು ಹೇಳುತ್ತಾರೆ.

ಯಾವುದೇ ವಸ್ತು ಹಳೆಯದಾದ ಮಾತ್ರಕ್ಕೆ ಬದುಕು ಹಳತಾಗದು. ಅದು ನಿತ್ಯ ನವೀನ. ಹೀಗಾಗಿಯೇ ದೇಹ ಹಳತಾದಂತೆ ಹಳೆಯ ಬಟ್ಟೆ ಕಳಚಿ ಹೊಸದನ್ನು ಧರಿಸಿದಂತೆ ಅದನ್ನು ವಿಸರ್ಜಿಸಿ ಆತ್ಮ ಹೊಸತನ್ನು ಪಡೆಯುತ್ತದೆ ಎಂಬ ನಂಬಿಕೆಯಿದೆ. ಸೂರ್ಯನೂ ಹಾಗೆಯೇ, ಪ್ರತಿವರ್ಷ ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸುತ್ತಾನೆ. ತನ್ಮೂಲಕ ಭುವಿಯ ನಿವಾಸಿಗಳಿಗೆ ಚೈತನ್ಯ ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಗೌರವಿಸುವ ಸಲುವಾಗಿ ರಥಸಪ್ತಮಿ ಆಚರಿಸಲಾಗುತ್ತಿದೆ.

ಸಪ್ತಮಿ ಪೌರಾಣಿಕ ಹಿನ್ನೆಲೆ ಏನು?

ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿಯ ಬಗ್ಗೆ ಹೇಳಿದ ಕಥೆಯಿದೆ. ಈ ಕಥೆಯ ಪ್ರಕಾರ, ಸಾವಿರಾರು ವರ್ಷಗಳ ಹಿಂದೆ ಒಂದು ರಾಜ್ಯವನ್ನು ಯಶೋವರ್ಮನೆಂಬ ರಾಜನು ಆಳುತ್ತಿದ್ದನು. ಆ ರಾಜ್ಯದ ಹೊಣೆಗಾರಿಕೆಯನ್ನು ನಿರಂತರವಾಗಿ ನಿರ್ವಹಿಸಲು, ತನಗೆ ಒಬ್ಬ ಮಗನಿಲ್ಲವೆಂಬ ಕೊರಗು ಸದಾ ರಾಜನನ್ನು ಕೊರೆಯುತ್ತಿತ್ತು. ಋಷಿಮುನಿಯ ಸಲಹೆಯ ಮೇರೆಗೆ, ದೇವರನ್ನು ಕುರಿತು ಅನೇಕ ವರ್ಷಗಳು ರಾಜನು ಘೋರವಾದ ತಪಸ್ಸಿನಲ್ಲಿ ತೊಡಗಿದನು. ರಾಜನ ತಪಸ್ಸಿಗೆ ಮೆಚ್ಚಿ ಭಗವಂತನು ಪ್ರತ್ಯಕ್ಷನಾಗಿ, ರಾಜನ ಆಸೆಯಂತೆ ಒಬ್ಬ ಪುತ್ರನನ್ನು ದೇವರು ಕರುಣಿಸಿದನು.

ದಿನಗಳೆದಂತೆ ಆ ಪುತ್ರನು ನಿತ್ಯ ರೋಗಿಯಾಗಿ ಅಲ್ಪಾಯುಷ್ಯವುಳ್ಳವನಾಗುತ್ತಾನೆ. ಮಗ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ತನ್ನ ಮಗನು ಬೇಗ ಮರಣ ಹೊಂದುವನೆಂದು ರಾಜನು ಪುನಃ ಚಿಂತಾಕ್ರಾಂತನಾದನು. ತನ್ನ ಸಮಸ್ಯೆಯನ್ನು ಯಾರೂ ಬಗೆಹರಿಸದಾದಾರು. ಒಂದು ದಿನ ಋಷಿಯೊಬ್ಬನು ರಥಸಪ್ತಮಿಯ ಆಚರಣೆಯ ಮಹಿಮೆಯನ್ನು ರಾಜನಿಗೆ ಹೇಳಿ ತನ್ನ ಮಗನು ರಥ ಸಪ್ತಮಿ ವ್ರತವನ್ನು ಭಕ್ತಿಯಿಂದ ಮಾಡಿ ಸೂರ್ಯನನ್ನು ಒಲಿಸಿಕೊಂಡುದುದೇ ಆದರೆ, ಆರೋಗ್ಯವಂತನಾಗುವನೆಂದು ಮತ್ತು ಧೀರ್ಘಾಯುಷ್ಯ ಹೊಂದುವನೆಂದು ಹೇಳುವನು.

ಋಷಿಯ ಅಮೃತವಾಣಿಯನ್ನು ಕೇಳಿದ ಮೇರೆಗೆ, ರಥ ಸಪ್ತಮಿ ವ್ರತವನ್ನು ಮಾಡುವಂತೆ ಮಗನಿಗೆ ಪ್ರೇರೇಪಿಸುವನು. ಭಕ್ತಿಯಿಂದ ಬಾಲಕನು ವಿಧಿವತ್ತಾಗಿ, ರಥ ಸಪ್ತಮಿಯನ್ನು ಆಚರಣೆ ಮಾಡಿ ಸೂರ್ಯ ದೇವನಿಗೆ ಅರ್ಘ್ಯ ನೀಡಿ ಸಂತೃಪ್ತಿ ಮಾಡುವನು. ಈ ಪೂಜೆಯ ಫಲವಾಗಿ, ಬಾಲಕನು ಅರೋಗ್ಯ ಮತ್ತು ದೀರ್ಘಾಯುಷ್ಯವನ್ನು ಪಡೆದು ಅನೇಕ ವರ್ಷಗಳು ಪುತ್ರ ಪೌತ್ರರನ್ನು ಪಡೆದು ರಾಜ್ಯವನ್ನು ಸುಖವಾಗಿ ಅನೇಕ ವರ್ಷಗಳ ಕಾಲ ಆಳುವವನಾಗುತ್ತಾನೆ.

ಅಂದಿನಿಂದ ಮಾಘ ಮಾಸದ ಶುಕ್ಲ ಪಕ್ಷ ಸಪ್ತಮಿಯಂದು ಜನರು ಈ ವ್ರತವನ್ನು ಆಚರಣೆ ಮಾಡಲು
ಪ್ರಾರಂಭಿಸಿ,ಇಂದಿನವರೆಗೂ ಮುಂದುವರಿಸಿಕೊಂಡು ಬಂದು ಸೂರ್ಯ ಭಾಗವಾನನ ಕೃಪೆಗೆ ಪಾತ್ರರಾಗಿರುತ್ತಾರೆ.

ಅಲ್ಲದೆ ಪಾಂಡವರು ವನವಾಸದ ಅವಧಿಯಲ್ಲಿ ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಆತನಿಂದ ಅಕ್ಷಯ ಪಾತ್ರೆ ಪಡೆದಿದ್ದರು. ರಾವಣನ್ನು ಗೆಲ್ಲಬೇಕಾದರೆ ಶ್ರೀರಾಮನೂ ಕೂಡ ಅಗಸ್ತ್ಯರ ಉಪದೇಶದಂತೆ ಆದಿತ್ಯ ಹೃದಯದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ ಸ್ಯಮಂತಕಮಣಿ ಪಡೆದ ಸತ್ರಾಜಿತನ ಕಥೆ ಹರಿವಂಶದಲ್ಲಿ ಬಂದಿದೆ.

ಮಯೂರನೆಂಬ ಕವಿ ಸೂರ್ಯಶತಕವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ.
ಶ್ರೀರಾಮ ಸೂರ್ಯವಂಶದವನಾದರೆ ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಯಮ ಸೂರ್ಯನ ಪುತ್ರರಾಗಿದ್ದಾರೆ.

ವೈದಿಕ ಧರ್ಮದಲ್ಲಿ ಸೂರ್ಯೋಪಾಸನೆ

ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ. ಇನ್ನು, ‘ಭೂರ್ಭುವಸ್ವಃ’. . . ॥ ಎಂಬ ವ್ಯಾಹೃತಿಯ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮರ್ಥ್ಯಗಳನ್ನು ಕೊಂಡಾಡುತ್ತದೆ.

ನಮ್ಮ ಋಗ್ವೇದ, ಯಜುರ್ವೇದ ಸಾಮವೇದಗಳು ಸೂರ್ಯನಿಂದ ಆಗುವ ಅನೇಕ ವಿವಿಧ ಉಪಯೋಗಗಳನ್ನು ಮಂತ್ರಗಳಲ್ಲಿ ನಮಗೆ ಕೊಟ್ಟರೂ ಸಹ ಅಥರ್ವವೇದ ಸೂರ್ಯನ ಕಿರಣಗಳ ಉಪಯೋಗದ ಕುರಿತಾಗಿಯೇ ತಿಳಿಸಿಕೊಡುತ್ತದೆ. ಅಥರ್ವವೇದದ ಪ್ರಥಮ ಕಾಂಡದ ೨೨ ನೇ ಸೂಕ್ತ ದ್ರಷ್ಟಾರನಾದ ಋಷಿ ಬ್ರಹ್ಮಾ ಎನ್ನುವವರು ಸೂರ್ಯ ಹರಿಮಾ ಮತ್ತು ಹೃದ್ರೋಗದ ಕುರಿತಾಗಿ ಸ್ತುತಿಸುತ್ತಾರೆ.
“ಅನು ಸೂರ್ಯಮುದಯತಾಂ ಹೃದ್ದ್ಯೋತೋ ಹರಿಮಾ ಚ ತೇ..।ʼʼ ಎಂದು.

ಯಜುರ್ವೇದದಲ್ಲಿ ಹೀಗೆ ಸೂರ್ಯನ ಕುರಿತಾಗಿ ಹೀಗೆ ಹೇಳಲಾಗಿದೆ.
ಹಂಸಃ ಶುಚಿಷದ್ವಸುರನ್ತರಿಕ್ಷಸದ್ಧೋತಾ ವೇದಿಷದತಿಥಿರ್ದುರೋಣಸತ್ ।
ನೃಷದ್ವರಸದೃತಸದ್ವ್ಯೋಮಸದಬ್ಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತ್ ॥ ೬ ॥

ಇದರ ಒಂದು ಅರ್ಥವೇನೆಂದರೆ; ಸದಾಕಾಲ ಸಂಚಾರ ಮಾಡುತ್ತಿರುವವನು ,ಜ್ಯೋತಿರ್ಮಯವಾದ ಸೂರ್ಯ ಮಂಡಲದಲ್ಲಿರುವವನು, ವಾಯುವೆಂಬ ಸೂತ್ರಾತ್ಮನಾಗಿರುವವನು, ಅಂತರಿಕ್ಷದಲ್ಲಿ ಸಂಚರಿಸುವ ಸಕಲ ಪ್ರಾಣಿಗಲ್ಲಿರುವವನು, ಹೋತೃವಾಗಿ ಸಕಲ ಯಾಗಾದಿಗಳಲ್ಲಿರುವವನು, ಪ್ರಧಾನ ಯಜ್ಞ ಯಾಗಾದಿಗಳ ವೇದಿಕೆಗಳಲ್ಲಿರುವವನು, ಎಲ್ಲರಿಗೂ ಬೆಳಕನಿತ್ತು ಅತಿಥಿಯಂತೆ ಒಂದು ಕ್ಷಣವೂ ನಿಲ್ಲದೆ ಮುಂದೆ ಹೊರಟು ಹೋಗುವವನು, ಕಲಶ(ದುರೋಣ) ದಲ್ಲಿರುವವನು, ಸಕಲ ಮನುಷ್ಯರಲ್ಲೂ(ನೃಷತ್) ಇರುವವನು, ಪುಣ್ಯಕ್ಷೇತ್ರದಲ್ಲಿ ಪೂಜಿಸಲ್ಪಡುವ ವರಸದನು, ಕರ್ಮ ಗಳ ಫಲ(ಋತ)ಕೊಡುವವನೂ, ನಕ್ಷತ್ರ, ಗ್ರಹ ರೂಪದಲ್ಲಿರುವ ವ್ಯೋಮಸದನು, ನೀರಿನಲ್ಲಿ ಹುಟ್ಟಿರುವ ಸಕಲ ಚರಾಚರಗಳಲ್ಲಿರುವ ಅಬ್ಜನು (ಅಪ್+ಜ),ಗೋವಿನ ಉತ್ಪತ್ತಿಗಳಲ್ಲಿರುವವ ಗೋಜ ನು, ಬೆಟ್ಟ ಗುಡ್ಡಗಳ ಮೇಳೆ ಹುಟ್ಟುವ ಜೀವರಾಶಿಗಳ ಒಡೆಯ ಅದ್ರಿಜನೂ, ಕಾಲ ಸ್ವರೂಪದ ಋತಜನು, ಸತ್ಯಾತ್ಮದ ಬೃಹತ್ಸ್ವರೂಪನೂ ಆಗಿರುವ ಹೇ ಆದಿತ್ಯನೇ ನಿನಗೆ ನಮನವು ಎಂದು.

ಸೂರ್ಯನಿಂದ ರೋಗ ನಿವಾರಣೆ

ಉತ್ತಮ ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿ ಹೇಳಲಾಗಿದೆ. ಸೂರ್ಯನಿಂದ ಭೂಮಿಗೆ ಬರುವ ಕಿರಣಗಳು ನಮಗೆ ಒಂದೇ ಬಣ್ಣದಿಂದ ಕಾಣಿಸಿದರೂ ಅದು ಏಳು ಪ್ರತ್ಯೇಕ ಬಣ್ಣದ ಕಿರಣಗಳು ಒಂದಾಗಿ ರೂಪುಗೊಂಡಿದ್ದಾಗಿವೆ. ಇದನ್ನು ಔಷಧೀಯವಾಗಿ ಉಪಯೋಗಿಸುವ ಕಲೆ ಪ್ರಾಚೀನ ಕಾಲದ ಜನರಿಗೆ ಗೊತ್ತಿತ್ತು.

ಕುಷ್ಟ ರೋಗಕ್ಕೆ ಸೂರ್ಯನ ಕಿರಣಗಳನ್ನು ಹಾಯಿಸಿ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತಿತ್ತು. ಗಂಟಲುವಾಳ, ಗಳಗಂಡರೋಗ ಅಥವಾ ಗಾಯಿಟರ್ ರೋಗವನ್ನು ಚಂದ್ರನ ಕಿರಣಗಳಿಂದ ಗುಣಪಡಿಸುತ್ತಿದ್ದರು. ಸೂರ್ಯನ ಕಿರಣಗಳಿಲ್ಲದೇ ಮನುಷ್ಯ ಜೀವಿಸುವುದು ಸಾದ್ಯವಿರದ ಮಾತು.

ಅಥರ್ವವೇದದ ಪ್ರಥಮ ಕಾಂಡದ ೨೨ನೇ ಸೂಕ್ತ ದ್ರಷ್ಟಾರ ಋಷಿ ಬ್ರಹ್ಮಾ ಎನ್ನುವವರು ಸೂರ್ಯ ಹರಿಮಾ ಮತ್ತು ಹೃದ್ರೋಗವನ್ನು ಸ್ತುತಿಸುತ್ತಾರೆ. “ಅನು ಸೂರ್ಯಮುದಯತಾಂ ಹೃದ್ದ್ಯೋತೋ ಹರಿಮಾ ಚ ತೇʼʼ ಎನ್ನುವಲ್ಲಿ ರೋಗಗ್ರಸ್ತ ಮನುಷ್ಯನ ಕುರಿತಾಗಿ ಹೇಳುತ್ತಾ, ಹೃದ್ರೋಗ ದೇಹವನ್ನೇ ಸುಡುವಂತೆ ಮಾಡುತ್ತದೆ, ಕಾಮಾಲೆ ಮತ್ತು ರಕ್ತಹೀನತೆ ಸಹ ಅದೇ ರೀತಿ ತೊಂದರೆ ಕೊಡುತ್ತವೆ. ಆದರೆ, ನಿಮ್ಮ ದೇಹವನ್ನು ಕೆಂಬಣ್ಣದ ಹಸುವಿನ ಕಿರಣಗಳಿಂದ ಮತ್ತು ಸೂರ್ಯೋದಯದ ಕಿರಣಗಳನ್ನು ದೆಹಕ್ಕೆ ಹಾಯಿಸುವುದರಿಂದ ರೋಗವನ್ನು ತಡೆಗಟ್ಟ ಬಹುದು ಎನ್ನುವುದನ್ನು ಹೇಳಲಾಗಿದೆ.

ಸೂರ್ಯನ ಕಿರಣಗಳಲ್ಲಿನ ಲೋಹಿತವರ್ಣದ ಕಿರಣಗಳನ್ನು ದೇಹಕ್ಕೆ ಹಾಯಿಸಿ ಪಾಂಡುರೋಗವನ್ನು ಗುಣಪಡಿಸಬಹುದು, ಇದೇ ಸೂಕ್ತದಲ್ಲಿ ಮುಂದೆ ಕೆಂಪುಬಣ್ಣದ ಕಿರಣಗಳನ್ನು ಮತ್ತು ಅವುಗಳ ಪ್ರಬೇಧಗಳನ್ನು ಬೇರ್ಪಡಿಸಿ ದೇಹಕ್ಕೆ ಹಾಯಿಸುವುದರಿಂದ ಆಯುಷ್ಯ ವೃದ್ಧಿಗೊಳಿಸಬಹುದು ಎನ್ನುವುದು ಸಿಗುತ್ತದೆ. ಸೂರ್ಯನ ಕಿರಣಗಳಿಂದ ಮನುಷ್ಯನ ದೇಹದಲ್ಲಿರುವ ವಿಷಕಾರಕ ಕೀಟಾಣುಗಳನ್ನು ನಾಶಪಡಿಸಬಹುದು ಎನ್ನುವುದು ಸೂಕ್ತದ್ರಷ್ಟಾರ ಋಷಿಯ ಸ್ತುತಿಯಿಂದ ತಿಳಿದುಬರುತ್ತದೆ.

ಸೂರ್ಯನ ರಥಕ್ಕೆ ಏಳು ಕುದುರೆ!
ರಥ ಸಪ್ತಮಿಯ ದಿನ ಸೂರ್ಯನ ರಥದ ಪಥ ಬದಲಾಗುತ್ತದೆ. ಸೂರ್ಯ ಹೊಸ ರಥವನ್ನೇರಿ ಹೊರಡುತ್ತಾನೆ ಎನ್ನುತ್ತೇವೆ. ನಿಮಗೆ ಗೊತ್ತೇ ಸೂರ್ಯನ ರಥಕ್ಕೆ ಏಳು ಕುದುರೆಗಳಿರುತ್ತವೆ. ಅವುಗಳ ಹೆಸರು ಇಂತಿದೆ; ಗಾಯತ್ರಿ, ಬೃಹತೀ, ಉಷ್ಣಿಕ್‌, ಜಗತೀ, ತ್ರಿಷ್ಟುಪ್‌, ಅನುಷ್ಟುಪ್‌ ಮತ್ತು ಪಂಕ್ತಿ ಎಂದು.

ಅಥರ್ವವೇದದ ಭೈಷಜ್ಯ ಸೂಕ್ತದ ದ್ರಷ್ಟಾರ ಋಷಿ ಅಂಗಿರಾ ಎನ್ನುವವರು ಸೂರ್ಯ ಚಂದ್ರ ರೋಹಿಣೀ ರಾಮಾಯಣೀಯನ್ನು ದೇವತೆಗಳನ್ನಾಗಿ ಸ್ತುತಿಸುವಲ್ಲಿ;
ಸೂರ್ಯ ಕೃಣೋತು ಬೇಷಜಂ ಚಂದ್ರಮಾ ವೋಪೋಚ್ಛತು..॥
ಎನ್ನುವಲ್ಲಿ ಸೂರ್ಯನು ಗಾಯಿಟರ್ (ಗಳಗಂಡ) ರೋಗವನ್ನು ಕಡಿಮೆ ಮಾಡಿದರೆ, ಚಂದ್ರನು ಆ ರೋಗವನ್ನೇ ಓಡಿಸುತ್ತಾನೆ ಎನ್ನುವಲ್ಲಿ ಸೂರ್ಯ ಮತ್ತು ಚಂದ್ರನ ಕಿರಣಗಳು ಗಳಗಂಡ ರೋಗಕ್ಕೂ ಔಷಧೀಯ ರೂಪವಾಗಿ ಪರಿಹಾರವನ್ನು ಕೊಡಬಲ್ಲವು ಎನ್ನುವುದು ತಿಳಿಯುತ್ತದೆ. ಗಳಗಂಡದ ಮೂಲ ಬೇರನ್ನೇ ಈ ಕಿರಣಗಳು ನಾಶಮಾಡಬಲ್ಲವು ಎನ್ನುವುದು ಮುಂದಿನ ಮಂತ್ರ ಹೇಳುತ್ತದೆ. ಹೀಗೇ ಪ್ರಕೃತಿಯಿಂದ ಸ್ವಾಭಾವಿಕವಾಗಿ ಸಿಗುವ ಸೂರ್ಯನ ಕಿರಣಗಳಿಂದ ಅನೇಕ ವಿಧದ ರೋಗಗಳನ್ನು ಸಮೂಲವಾಗಿ ನಿವಾರಿಸಬಹುದು ಎನ್ನುವುದು ಅಥರ್ವವೇದದ ಅನೇಕ ಸೂಕ್ತಗಳಿಂದ ತಿಳಿದು ಬರುತ್ತವೆ.

ಅದರಲ್ಲೂ ಏಳು ಕಿರಣಗಳನ್ನು ಬೇರ್ಪಡಿಸಿಕೊಂಡಾಗ ಪ್ರತ್ಯೇಕವಾಗಿ ಬೇರೆ ಬೇರೆ ರೋಗವನ್ನು ಗುಣಪಡಿಸಬಹುದು ಎನ್ನುವಲ್ಲಿನ ಸೂಕ್ಷ್ಮವನ್ನು ಗಮನಿಸಿದರೆ ಅದ್ಯಾವುದೋ ಕಾಲದಲ್ಲಿ ಸೂರ್ಯನಿಂದ ಸಿಗುವ ಕಿರಣಗಳಲ್ಲಿನ ಬಣ್ಣಗಳನ್ನು ಗುರುತಿಸಿ ಬೇರ್ಪಡಿಸುವ ವಿಧಾನ ತಿಳಿದಿರಬಹುದು ಎನ್ನಿಸುತ್ತದೆ.

ಸೂರ್ಯ ಆರೋಗ್ಯದಾಯಿ ವೈಜ್ಞಾನಿಕವಾಗಿಯಯೂ ಇದು ಸಾಬೀತಾಗಿದೆ. ಹಸುಗೂಸಿನ ಕಣ್ಣುಗಳು ಸಾಮಾನ್ಯವಾಗಿ ಹಳದಿ ಬಣ್ಣಕ್ಕೆ ತಿರುಗಿದ ಸಂದರ್ಭದಲ್ಲಿ ಪ್ರತಿದಿನ ಎಳೆಬಿಸಿಲಿಗೆ ಮಗುವನ್ನು ಮಲಗಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಚಂದ್ರನ ಬೆಳಕಿನಲ್ಲಿ ವಿಟಮಿನ್ ‘ಬಿ 12’ ಇದ್ದರೆ, ಸೂರ್ಯನ ಕಿರಣಗಳಲ್ಲಿ ವಿಟಮಿನ್ ‘ಡಿ’ ಹೇರಳವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿಯೇ ಪ್ರತ್ಯಕ್ಷವಾಗಿ ಕಾಣುವ ದೈವಸ್ವರೂಪಿ ಸೂರ್ಯನ ಆರಾಧನೆಗೆ ವಿಗ್ರಹಾರಾಧನೆ ಬಳಕೆಗೆ ಬರುವ ಮುಂಚಿನಿಂದಲೂ ಚಾಲ್ತಿಯಲ್ಲಿತ್ತು.

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ

ನವಗ್ರಹಗಳಿಗೆ ಸೂರ್ಯನೆ ಅಧಿಪತಿ. ಸೌರಕೇಂದ್ರ ವ್ಯವಸ್ಥೆಯನ್ನು ವಿಜ್ಞಾನಿಗಳು ಪತ್ತೆ ಮಾಡುವ ಮೊದಲೇ, ಹಿಂದೂ ಪುರಾಣಗಳಲ್ಲಿ ಅದು ಉಲ್ಲೇಖವಾಗಿತ್ತು. ಅದಕ್ಕೆಂದೇ ನಾವು ನವಗ್ರಹಗಳಿಗೆ ಸೂರ್ಯನೇ ಅಧಿಪತಿ ಎಂದು ಸೂರ್ಯನ ಪೂಜೆಯನ್ನು ಎಂದಿನಿಂದಲೋ ಮಾಡಿಕೊಂಡು ಬಂದಿದ್ದೆವು. ಸಮಸ್ತ ವಿಶ್ವಕ್ಕೂ ಸೂರ್ಯನೇ ಒಡೆಯ ಎಂಬುದನ್ನು ಕಂಡುಕೊಂಡ ನಮ್ಮ ಋಷಿಮುನಿಗಳು ವಿಶೇಷವಾಗಿ ರಥಸಪ್ತಮಿಯಂದು ಸೂರ್ಯನನ್ನು ಪೂಜಿಸುತ್ತ ಬಂದಿದ್ದಾರೆ.

ರವಿಯು ಜಾತಕದಲ್ಲಿ ಸಿಂಹ ರಾಶಿಯ ಒಡೆಯನಾಗಿದ್ದು, ಅವನು ನೇತ್ರಕಾರಕ,ಅರೋಗ್ಯಕಾರಕ, ಮತ್ತು ಪಿತೃಕಾರಕನಾಗಿ ತಂದೆಯ ಆಯುಷ್ಯ ವೃದ್ಧಿಗಾಗಿ, ಕಣ್ಣಿನ ಉತ್ತಮ ದೃಷ್ಟಿಗಾಗಿ ಮತ್ತು ಉತ್ತಮ ಅರೋಗ್ಯ ಪ್ರಾಪ್ತಿಗಾಗಿ ಕಾರಣ ಕರ್ತನಾಗಿರುತ್ತಾನೆ.

ಭಾರತೀಯ ಸಂಸ್ಕೃತಿಯು ಎಲ್ಲರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಕಲಿಸುತ್ತದೆ. ಇದಕ್ಕನುಸಾರ, ಸೂರ್ಯದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ರಥಸಪ್ತಮಿಯ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸೋಣ.
ಸರ್ವೇ ಸಂತು ನಿರಾಮಯಃ ಲೋಕಾಃ ಸಮಸ್ತಾ ಸುಖಿನೋ ಭವಂತು

ಲೇಖಕರು ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಇದನ್ನೂ ಓದಿ : Ratha Saptami 2023 : ಸರ್ವರಿಗೂ ಪ್ರಿಯ ಸೂರ್ಯದೇವನನ್ನು ಪೂಜಿಸುವ ಹಬ್ಬ ರಥ ಸಪ್ತಮಿ

Exit mobile version