Site icon Vistara News

Sadguru Column : ಬದುಕಿನಲ್ಲಿ ಆಟವಾಡುವುದರ ಮಹತ್ವ ತುಂಬ ದೊಡ್ಡದು

Sadguru-Column-Cricket

ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್‌
(Sadguru Jaggi Vasudev, Isha Foundation)

ದೇಹಾರೋಗ್ಯಕ್ಕೆ ಮುಖ್ಯವಾದುದು ಆಟ (Sports is important for health). ನನ್ನ ಶಾಲಾದಿನಗಳಲ್ಲಿ ನಾನು ಆಡದ ಆಟಗಳೇ (Sadguru Column) ಇಲ್ಲವೆನ್ನಬಹುದು. ಹಗ್ಗ ಹಿಡಿದು ಮೇಲಕ್ಕೆ ಹತ್ತುವುದು, ದೇಹವನ್ನು ಬಗ್ಗಿಸುವಂತಹ ಜಿಮ್ನ್ಯಾಸ್ಟಿಕ್ಸ್, ಹೊಡೆದಾಟಗಳು, ಕಬಡ್ಡಿ, ಬ್ಯಾಡ್ಮಿಂಟನ್ – ಯಾವುದನ್ನೂ ಬಿಡಲಿಲ್ಲ. ಚಿಕ್ಕವನಾಗಿದ್ದಾಗ ಕ್ರಿಕೆಟ್ ಯಾರೇ ಆಡುತ್ತಿರಲಿ ಅಲ್ಲಿಗೆ ಹೋಗಿ ಸೇರಿಕೊಳ್ಳುತ್ತಿದ್ದೆ (Sadhguru used to play Every Game) . ಅವರು ನನಗೆ ಬ್ಯಾಟ್ ಮಾಡಲು ಬಿಡುತ್ತಿರಲಿಲ್ಲ. ಆದರೆ, ಫೀಲ್ಡ್ ಮಾಡುವಷ್ಟರಲ್ಲೇ ಸಂತೋಷಪಡುತ್ತಿದ್ದೆ. ಈಗಲೂ, ಮಕ್ಕಳು ಆಟವಾಡುತ್ತಿದ್ದರೆ ನಾನಾಗಿಯೇ ಅವರೊಂದಿಗೆ ಸೇರಿಕೊಳ್ಳುತ್ತೇನೆ.

Sadguru Column sports

ಕಾಲೇಜಿನ ಹಾಕಿ ಟೀಮಿನಲ್ಲಿ ಅವಕಾಶ ಪಡೆದುಕೊಂಡೆ. ಆ ವಯಸ್ಸಿನಲ್ಲಿ ಮೋಟಾರ್ ಸೈಕಲ್‌ಗಳನ್ನು ಓಡಿಸುವುದರಲ್ಲಿ ಮತ್ತು ಹಾರಾಟದಲ್ಲಿದ್ದಷ್ಟು ಆಸಕ್ತಿ ಬೇರೆ ಆಟಗಳಿಗಿಂತಲೂ ಹೆಚ್ಚಾಗಿತ್ತು. ಕೆಲವೇ ನಿಮಿಷಗಳು ಗಾಳಿಯಲ್ಲಿ ಹಾರಾಡಲು, ಗಂಟೆಗಳ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ನನಗೆ ಆಗ ಇಪ್ಪತ್ತೆರಡು ವಯಸ್ಸಿರಬಹುದು, ಒಮ್ಮೆ ನೀಲಗಿರಿ ಪರ್ವತದಿಂದ ಗ್ಲೈಡರಿನಲ್ಲಿ ಹಾರಾಡಿದೆ. ಎಲ್ಲಿಯೋ ಬಹಳ ದೂರದಲ್ಲಿ ನೆಲಕ್ಕೆ ಇಳಿದೆ. ಸೂರ್ಯನನ್ನು ಹಿಂಬಾಲಿಸಿ ದಿಕ್ಕನ್ನು ಗುರುತಿಸಿ ಅಲ್ಲಿಂದ ನಡೆದು ಬಂದೆ. ರಾತ್ರಿ ಹಗಲು ಕಾಡುಗಳಲ್ಲಿ ಕಿಲೋಮೀಟರ್‌ಗಳು ಲೆಕ್ಕವಿಲ್ಲದೆ ನಡೆದಾಡಿದೆ. ಕೈಯಲ್ಲಿದ್ದ ಒಂದೇ ಒಂದು ಸ್ಯಾಂಡ್‌ವಿಚ್ ತಿಂದೆ. ಹಸಿವು ನೀಗಲಿಲ್ಲ. ಅಲ್ಲಲ್ಲಿ ಒಂದೆರಡು ಹಳ್ಳಿಗಳನ್ನು ಸಮೀಪಿಸಿದೆ. ಅಲ್ಲಿದ್ದವರು ತಮಿಳು ಬಿಟ್ಟು ಬೇರೇನನ್ನೂ ಮಾತನಾಡಲಿಲ್ಲ. ನನಗಾದರೋ ಆಗ ತಮಿಳು ಗೊತ್ತಿರಲಿಲ್ಲ.

Sadguru Column sports

ಹೇಗೋ ಒಂದು ಟೀ ಅಂಗಡಿಯನ್ನು ಕಂಡುಹಿಡಿದೆ. ಅಲ್ಲಿ ಬಿಸಿಬಿಸಿಯಾಗಿ ಇಡ್ಲಿ ತಯಾರಾಗಿತ್ತು. ನನಗಿದ್ದ ಹಸಿವೆಯನ್ನು ನೀಗಲು ಸುಮಾರು ಇಪ್ಪತ್ತೈದು ಇಡ್ಲಿಗಳಾದರೂ ಬೇಕಾಗುತ್ತಿತ್ತು. ನನ್ನ ಕೈಲ್ಲಿರುವುದನ್ನು ನೋಡಿಕೊಂಡೆ. ನನ್ನನ್ನು ಕಂಡು ಹಿಡಿಯಲು ನಮ್ಮ ಗುಂಪಿನವರಿಗೆ ಅದೆಷ್ಟು ದಿನಗಳು ಬೇಕಾಗಬಹುದೆಂಬುದು ತಿಳಿಯದು. ಅಂತಹ ಪರಿಸ್ಥಿತಿಯಲ್ಲಿ ಇರುವ ಎಲ್ಲ ಹಣವನ್ನು ಖರ್ಚು ಮಾಡಿಬಿಟ್ಟರೆ ಹೇಗೆ ಎಂದು ಯೋಚಿಸಿ, ಒಂದೂವರೆ ರೂಪಾಯಿ ಕೊಟ್ಟು ಎರಡೇ ಎರಡು ಇಡ್ಲಿಗಳನ್ನು ಖರೀದಿಸಿ ಅದನ್ನು ತಿಂದೆ. ನನ್ನ ಗುಂಪಿನವರು ಎರಡೂವರೆ ದಿನಗಳ ನಂತರ ನನ್ನನ್ನು ಪತ್ತೆ ಹಚ್ಚಿದರು.

Sadguru Column sports

Sadguru Column :ಇಷ್ಟಾದರೂ ನನ್ನ ಹಾರಾಡುವ ಆಸೆ ತೀರಲಿಲ್ಲ!

ಸೊರಗಿ ಹೋದ ಹೃದಯವುಳ್ಳ ಮತ್ತು ಕಠಿಣ ಮನಸ್ಸಿನ ಸೆರೆಯಾಳುಗಳಲ್ಲಿಯೂ ಆಟದ ಬಗೆಗೆ ಇರುವ ಆಸಕ್ತಿಯನ್ನು ಕಣ್ಣಾರೆ ಕಂಡವನು ನಾನು. ಮೊದಲನೆಯ ಬಾರಿಗೆ ಕೈದಿಗಳಿಗೆ ಯೋಗ ಕಾರ್ಯಕ್ರಮ ನಡೆಸಲು ನನಗೆ ಅನುಮತಿ ದೊರೆತಿತ್ತು. ಸೆರೆಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಅಲ್ಲಿನ ಗಾಳಿಯಲ್ಲಿಯೇ ಒಂದು ಬಗೆಯ ತೀರಲಾರದ ವೇದನೆ ಹೆಪ್ಪುಗಟ್ಟಿರುವಂತೆ ನನಗೆ ಭಾಸವಾಯಿತು. ಸುಮಾರು ಇನ್ನೂರು ಮಂದಿ ಖೈದಿಗಳನ್ನು ಆಟದ ಮೈದಾನಕ್ಕೆ ಬರುವಂತೆ ಹೇಳಿದೆ.

Sadguru Column sports

ನಿಮಗೆ ಯೋಗ ಹೇಳಿಕೊಡಲು ಬರಲಿಲ್ಲ, ನಿಮ್ಮೊಂದಿಗೆ ಚೆಂಡಾಟವನ್ನು ಆಡಲು ಬಂದಿದ್ದೇನೆ ಎಂದು ಹೇಳಿದೆ. ಅವರ ಮುಖದಲ್ಲಿ ಆದ ಬದಲಾವಣೆಯನ್ನು ಕಂಡುಕೊಂಡೆ. ಆಟ ಪ್ರಾರಂಭವಾಯಿತು. ಆಟದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದವರು ಸಹ ಹತ್ತು ಹದಿನೈದು ನಿಮಿಷಗಳ ನಂತರ ಆಟದಲ್ಲಿ ನಿರತರಾಗಿ, ತಲ್ಲೀನರಾಗಿ, ತಮ್ಮನ್ನು ತಾವೇ ಮರೆತರು. ಆಟದಲ್ಲಿ ತನ್ಮಯರಾದ ಅವರು ಕಿರುಚಾಡುತ್ತಾ, ಕುಪ್ಪಳಿಸುತ್ತಾ ಮಕ್ಕಳಂತೆ ಆಡಿಕುಣಿದರು. ಆಟ ಮುಗಿದು ನಾನು ಹೊರಡಲು ಸಿದ್ಧವಾದಾಗ ಹೋಗಬೇಡಿ ಎಂದು ಕೆಲವರು ನನ್ನ ಕೈ ಹಿಡಿದುಕೊಂಡು ಕಣ್ಣೀರು ಸುರಿಸಿದರು. ಆಟದ ಮಹಿಮೆಯೇ ಅಂತಹುದು.

Sadguru Column sports

Sadguru Column : ಶಂಕರನ್‌ ಪಿಳ್ಳೆ ಮತ್ತು ಅವನ ನಾಯಿ ಚೆಸ್‌ ಆಡಿದ ಕಥೆ

ಶಂಕರನ್ ಪಿಳ್ಳೆ ಒಮ್ಮೆ ತನ್ನ ಸ್ನೇಹಿತನ ಮನೆಗೆ ಹೋದರು. ಅಲ್ಲಿ ಅವರ ಸ್ನೇಹಿತ ತನ್ನ ನಾಯಿಯೊಂದಿಗೆ ಕುಳಿತುಕೊಂಡು ಚೆಸ್ ಆಡುತ್ತಿದ್ದರು. ಶಂಕರನ್ ಪಿಳ್ಳೆ ಆಶ್ಚರ್ಯದಿಂದ, ‘ಅರೆ! ಇಂತಹ ಬುದ್ಧಿವಂತ ನಾಯಿಯನ್ನು ನಾನು ಇದುವರೆಗೆ ನೋಡಿಯೇ ಇಲ್ಲ’ ಎಂದರು. ಅದಕ್ಕೆ ಆ ಸ್ನೇಹಿತರು, ’ನೀನು ಎಣಿಸಿದಂತೆ ಇದೇನು ಅಂತಹ ಬುದ್ಧಿಶಾಲಿಯಲ್ಲ. ಹತ್ತು ಸಲ ನನ್ನೊಂದಿಗೆ ಆಡಿದ ಆಟದಲ್ಲಿ, ಅದು ಮೂರು ಬಾರಿ ಸೋತುಹೋಯಿತು’ ಎಂದರು.
ತಮಾಷೆಯಾಗಿದೆ ಈ ಕಥೆ. ಆದರೆ ಆಟದಲ್ಲಿ ಕೆಲವು ಸಂದರ್ಭಗಳಲ್ಲಿ ಸೋತರೂ ಮತ್ತೆ ಆಡಬೇಕೆಂಬ ಉತ್ಸಾಹ ಅಗತ್ಯವೆಂಬುದನ್ನು ಆ ನಾಯಿಯಿಂದ ಅಥವಾ ಆ ಸ್ನೇಹಿತರಿಂದ ಕಲಿಯಬಹುದು.

Sadguru Column sports

ಆಟದಲ್ಲಿ ಇದೇ ಮುಖ್ಯವಾದ ಅಂಶ. ಗೆಲ್ಲಬೇಕೆಂಬುದು ಗುರಿಯಾದರೂ, ಸೋಲನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಬೇಕೆಂಬ ಮಾನಸಿಕ ಪ್ರಬುದ್ಧತೆ, ಪಕ್ವತೆ ಇದ್ದರೆ ಮಾತ್ರ ಆಟ ಚೆನ್ನಾಗಿರುತ್ತದೆ. ಆಟವಾಡುವಾಗ ಸಂಪೂರ್ಣ ಗಮನ ಆಟದಲ್ಲಿರಬೇಕೇ ಹೊರತು ಅದರ ಫಲಿತಾಂಶದಲ್ಲಿರಬಾರದು.

ನೀವು ಯಾವುದೇ ಕಾರ್ಯದಲ್ಲಿದ್ದರೂ, ಸಂಪೂರ್ಣವಾಗಿ ಅದರಲ್ಲಿ ಮುಳುಗದೆ, ತೀವ್ರವಾಗಿ ಅದರಲ್ಲಿ ತಲ್ಲೀನರಾಗದೆ ಇದ್ದಲ್ಲಿ, ಅದು ನಿಮಗೆ ಪೂರ್ಣ ಸಂತೃಪ್ತಿಯನ್ನು ತಂದುಕೊಡುವುದಿಲ್ಲ. ಕೆಲಸದ ಸ್ಥಳದಲ್ಲಿ ಮಾತ್ರವಲ್ಲ, ನಿಮ್ಮ ತಂದೆ ತಾಯಂದಿರಲ್ಲಿ, ಹೆಂಡತಿಯೊಂದಿಗೆ, ಗಂಡನೊಂದಿಗೆ, ಮಕ್ಕಳೊಂದಿಗೆ ಸಂಪೂರ್ಣವಾಗಿ ಅರ್ಪಣೆ ಮಾಡಿಕೊಳ್ಳದಿದ್ದರೆ, ಜೀವನವೆಂಬುದು ನಿಮ್ಮ ಪಾಲಿಗೆ ಒಂದು ಅರ್ಥಹೀನವಾದ ಹೊರೆಯಾಗುತ್ತದೆ. ನೀವು ಅದರಲ್ಲಿ ಸಂಪೂರ್ಣವಾಗಿ ತಲ್ಲೀನರಾದರೆ ಆಗ ಅದು ಸ್ವರ್ಗ, ಹಾಗಿಲ್ಲದಿದ್ದರೆ ಅದು ನರಕ.

Sadguru Column sports

ಇದನ್ನೂ ಓದಿ : Prerane Column : ಕ್ಷಣಿಕ ಲಾಭದ ಆಸೆಯ ಮೇಲೆ ನಿಂತ ವ್ಯವಹಾರವೂ ಕ್ಷಣಿಕವೇ!

ಸಂಪೂರ್ಣ ತಲ್ಲೀನತೆಯಿಲ್ಲದೆ ನೀವು ಅನುಭವಿಸಿದ ಯಾವುದಾದರೂ ಒಂದು ಅಂಶವಿದೆಯೆ ಹೇಳಿ. ನಿಮ್ಮ ದೇಹ ಹಾಗೂ ಮನಸ್ಸನ್ನು ಪೂರ್ತಿಯಾಗಿ ತಲ್ಲೀನಗೊಳಿಸದೆ, ನೀವು ಪಡೆದ ಗೆಲುವು ಯಾವುದಾದರೂ ಇದೆಯೆ ಎಂಬುದನ್ನು ಯೋಚಿಸಿ.

Sadguru Column : ದೇಹ, ಮನಸ್ಸು ಮತ್ತು ಕ್ರೀಡೆಯ ನಡುವಿನ ಸಂಬಂಧ

ನೀವು ಜೀವನದ ಯಾವುದೇ ಹಂತದಲ್ಲಿದ್ದರೂ, ನಿಮ್ಮ ಗೆಲುವನ್ನು ಬಹುಮಟ್ಟಿಗೆ ತೀರ್ಮಾನಿಸುವ ಮುಖ್ಯವಾದ ವಿಷಯ ಯಾವುದು? ನಿಮ್ಮ ದೇಹ ಮತ್ತು ಮನಸ್ಸನ್ನು ಯಾವ ಪ್ರಮಾಣದಲ್ಲಿ ನಿಮ್ಮ ಅಧೀನದಲ್ಲಿರಿಸಿಕೊಳ್ಳಲು ಸಾಧ್ಯವೆಂಬುದು ಬಹಳ ಅಗತ್ಯವಿರುವ ಮುಖ್ಯಾಂಶ. ಆಟವೂ ಹಾಗೆಯೇ.

ಒಬ್ಬ ನಾಯಕನಿಗೆ ಮುಖ್ಯವಾಗಿರಬೇಕಾದ ಗುಣಗಳು ಯಾವುವು? ಕೆಲಸದಲ್ಲಿ ಸಂಪೂರ್ಣವಾಗಿ ತಲ್ಲೀನನಾಗಿರಬೇಕು. ತನ್ನ ಭಾಗದ ಕೆಲಸವನ್ನಾದರೂ ಪರಿಪೂರ್ಣವಾಗಿ ಮಾಡುವಂತಹ ಮನಸ್ಸುಳ್ಳವನಾಗಿರಬೇಕು. ಸಾಧನೆ ಮಾಡಬೇಕೆಂಬ ಛಲವಿರುವುದಾದರೂ, ಸೋಲನ್ನು ಕಂಡಾಗ ಹಿಂದೆಗೆಯದೆ, ಮತ್ತೊಂದು ಅವಕಾಶ ದೊರೆಯಿತೆಂದು ಭಾವಿಸಿ, ಅದನ್ನು ಸಂತೋಷದಿಂದ ಸ್ವೀಕರಿಸುವಂತಹ ಮನಸ್ಸಿರಬೇಕು.

Sadguru Column sports

ಜೀವನದ ಬಹಳ ಮುಖ್ಯವಾದ ಅಂಶ ಅದು. ನಿಮ್ಮ ಅಂತರಂಗ ಸಂಪೂರ್ಣವಾಗಿ ನೆಮ್ಮದಿಯನ್ನು ಪಡೆದಿದ್ದರೆ, ಗೆಲುವಾಗಲಿ, ಸೋಲಾಗಲಿ ಪ್ರತಿಯೊಂದು ಅಂಶವೂ ನಿಮಗೆ ಸುಲಭವಾಗಿ ತೋರುತ್ತದೆ.ಇಡೀ ಜೀವನ ಹೋರಾಟವಿಲ್ಲದೆ ಸುಲಭವಾಗಿ ನಡೆಯುತ್ತದೆ. ಅಂತರಂಗ ನೆಮ್ಮದಿಯಿಲ್ಲದಿದ್ದಾಗ ಪ್ರತಿಯೊಂದೂ ಕಷ್ಟಕರವಾಗಿ ಭಾಸವಾಗುತ್ತದೆ. ಸಣ್ಣ ಪುಟ್ಟ ವಿಷಯಗಳು ಸಹ ಸಮಸ್ಯೆಯಾಗಿ ಕಂಡುಬರುತ್ತವೆ. ಇವೆಲ್ಲವೂ ಆಟದಲ್ಲಿ ಸಹ ಕೂಡ ಕಂಡುಬರುವ ಅಂಶಗಳು.

ಈಶ ನಡೆಸಿದ ಗ್ರಾಮೋತ್ಸವದಲ್ಲಿ, ಇಂತಹ ಅಂಶಗಳನ್ನು ಆಟಗಳಲ್ಲಿ ಕಣ್ಣಾರೆ ನೋಡಲು ಸಾಧ್ಯವಾಯಿತು. ಗ್ರಾಮೋತ್ಸವದಲ್ಲಿ ಸುಮಾರು ಮುನ್ನೂರು ಗುಂಪುಗಳು ಆಟಗಳಲ್ಲಿ ಭಾಗವಹಿಸಿದು ವು. ಮೂರು ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯ ಜನರು ಇದನ್ನು ವೀಕ್ಷಿಸಿದರು. ಹಳ್ಳಿಗಳಲ್ಲಿ ಜನರ ಮುಂದೆ ಬಂದು ನಿಲ್ಲಲು ಹಿಂದೇಟು ಹಾಕುತ್ತಿದ್ದ ಹಲವರು, ಆಟಗಳಲ್ಲಿ ಪಾಲ್ಗೊಂಡು ತಮ್ಮ ಗುಂಪನ್ನು ಮುನ್ನಡೆಸಲು ತಾವಾಗಿಯೇ ಮುಂದೆ ಬಂದರು. ಅವರಲ್ಲಿ ಹುದುಗಿಕೊಂಡಿದ್ದ ಸಾಮರ್ಥ್ಯ ಹೀಗೆ ಹೊರಬಂದಿತು.

ಆಟದಲ್ಲಿ ನಿಮ್ಮೊಂದಿಗೆ ಬೇರೆಯವರನ್ನು ಸೇರಿಸಿಕೊಂಡು ಆತ್ಮೀಯತೆಯನ್ನು ಬೆಳೆಸಿಕೊಳ್ಳುವಂತಹ ಸಹಜ ಸ್ವಭಾವವಿರುತ್ತದೆ. ನಿಮ್ಮ ಗುಂಪಿಗೆ ಸೇರಿದವರು ಎಂಬ ಭಾವನೆಯೊಂದಿಗೆ – ಅಕ್ಕಪಕ್ಕದವರನ್ನು – ನಿಮ್ಮ ಇಷ್ಟಾನಿಷ್ಟಗಳನ್ನು ತೊರೆದು ಸೇರಿಸಿಕೊಳ್ಳುತ್ತೀರಿ. ಎಲ್ಲರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಒಂದೇ ದೃಷ್ಟಿಯನ್ನಿರಿಸಿಕೊಂಡು ಒಮ್ಮನಸ್ಸಿನಲ್ಲಿ ಕ್ರಿಯಾಶೀಲರಾಗುತ್ತೀರಿ. ಬೇರೆಯವರನ್ನು ನಿಮ್ಮೊಂದಿಗೆ ಸೇರಿಸಿಕೊಳ್ಳುವ ಗುಣ ಒಂದು ಒಳ್ಳೆಯ ಸಮುದಾಯದ ನಿರ್ಮಾಣಕ್ಕೆ ಅಡಿಪಾಯವಲ್ಲವೆ?

Sadguru Column sports

Sadguru Column: ಆಟದ ಅತಿ ಪ್ರಮುಖ ಮಹತ್ವವೇನು?

ಆಟದ ಪ್ರಮುಖ ಮಹತ್ವವೇನು? ಅದರಲ್ಲಿ ಅರೆಬರೆ ಮನಸ್ಸಿನಲ್ಲಿ ಪಾಲ್ಗೊಳ್ಳಲಾಗದು. ದೇಹ ಹಾಗೂ ಮನಸ್ಸು ಎರಡನ್ನೂ ಒಂದೇ ಸಮಯದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಆ ಮೂಲಕ ಪ್ರಯೋಜನ ಪಡೆಯುವುದಾಗಿದೆ.
ಮೈದಾನದಲ್ಲಿ ಆಟವಾಡುವಂತಹ ಯಾವುದೇ ಆಟವಾದರೂ ನಿಮ್ಮ ದೇಹ, ಮನಸ್ಸು ಪೂರ್ತಿಯಾಗಿ ಅದರಲ್ಲಿ ಬೇರೂರಿದರೆ ಮಾತ್ರ ಸರಿಯಾದ ಆಟವಾಗುತ್ತದೆ. ಹಾಗಲ್ಲದಿದ್ದರೆ ಅದು ನರಕವಾಗುತ್ತದೆ.

ಒಂದು ಚೆಂಡನ್ನು ಎತ್ತಿ ಎಸೆಯಬೇಕಾದರೂ ಸಹ ಅದರಲ್ಲಿ ಸಂಪೂರ್ಣವಾದ ಆಸಕ್ತಿಯಿಲ್ಲದಿದ್ದರೆ ಅದು ಸುಲಭವಾಗುವುದಿಲ್ಲ. ನಿಮ್ಮ ಗುರಿಯನ್ನು ಮುಟ್ಟಲು ಅದಕ್ಕೆ ಸರಿಯಾದ ವೇಗ ಅಗತ್ಯ. ಹಾಗೆ ಅದು ನಿಮ್ಮ ಇಷ್ಟದಂತೆ ಮುಟ್ಟಬೇಕಾದರೆ ಅದನ್ನು ನೀವು ಎಸೆಯುವುದರ ಹಿಂದೆ ಒಂದು ವಿಜ್ಞಾನ ಅಡಗಿದೆ. ಜೀವನವೂ ಒಂದು ವಿಜ್ಞಾನದಂತೆಯೇ. ವೇಗ ಹಾಗೂ ತಲ್ಲೀನತೆಯು ಒಂದು ಜೀವನವನ್ನು ಪರಿಪೂರ್ಣಗೊಳಿಸಲು ಅಗತ್ಯ. ಅರೆಬರೆಯಾಗಿ ಜೀವಿಸಿದರೆ ಅದೊಂದು ಚಿತ್ರಹಿಂಸೆ. ದೇಹ ಹಾಗೂ ಮನಸ್ಸನ್ನು ಹರಿತವಾಗಿರಿಸಿಕೊಳ್ಳಲು ಹಾಗೂ ಕ್ರಿಯೆಯಲ್ಲಿ ಪೂರ್ಣವಾಗಿ ಮನಸ್ಸನ್ನು ನೆಲೆಗೊಳಿಸಲು ಅದು  ಕಲಿಸುವುದರಿಂದ ಆಟ ನನ್ನನ್ನು ಬಹುವಾಗಿ ಆಕರ್ಷಿಸುತ್ತದೆ.

ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn
ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – kannadapublications@ishafoundation.org

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ ಮೂಲಕ ತಿಳಿಸಿ

Exit mobile version