Site icon Vistara News

Sadguru Prerane : ನೀವು ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದಾದರೆ ನೀವು ಜೀವಂತವಾಗಿ ಇಲ್ಲ ಎಂದೇ ಅರ್ಥ ತಾನೇ?

Responsibility sadguru article

ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್‌
(Sadguru Jaggi Vasudev, Isha Foundation)
ಜವಾಬ್ದಾರಿ (Responsibility) ಎಂದೊಡನೇ `ಯಾವುದಕ್ಕೆ’ ಎಂಬ ಜವಾಬ್ದಾರಿ (To which We are Responsibe) ಎಂಬ ಮತ್ತೊಂದು ಪ್ರಶ್ನೆ ಬಂದು ನಿಲ್ಲುತ್ತದೆ (Sadguru Prerane). ಜೀವನದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ವಿಷಯಗಳು, ಬೇರೆ ಬೇರೆ ಜನರನ್ನು ನೀವು ಸಂಧಿಸಬೇಕಾಗುತ್ತದೆ. ಹೀಗಿರುವಾಗ ಯಾವುದಕ್ಕೆಲ್ಲಾ ನೀವು ಜವಾಬ್ದಾರಿ ವಹಿಸುವುದು? ದೈನಂದಿನ ವಿಷಯಗಳಲ್ಲಿಯೂ, ಜವಾಬ್ದಾರಿ ವಹಿಸುವುದನ್ನು ಕುರಿತ ಚರ್ಚೆಗಳು, ನಂಬಲಾರದಂತಹ ಪ್ರಮಾಣದಲ್ಲಿ ನಡೆಯುತ್ತಿವೆ. ಮನೆಯೊಳಗಡೆ ಲೈಟಿನ ಸ್ವಿಚ್ಚನ್ನು ಹಾಕುವವರು ಯಾರು? ತಟ್ಟೆಯನ್ನು ತೊಳೆಯುವುದು ಯಾರು? ನೀರನ್ನು ಹಿಡಿದಿಡುವುದು ಯಾರು? ಹೀಗೆ…

ಶಂಕರನ್ ಪಿಳ್ಳೆಯವರಿಗೆ ಒಮ್ಮೆ ಇಂತಹ ಸಮಸ್ಯೆಯೊಂದು ಬಂದಿತು. ಅವರಿಗೂ ಅವರ ಹೆಂಡತಿಗೂ ಮಧ್ಯೆ ಬಂದ ಸಮಸ್ಯೆಯೆಂದರೆ, ರಾತ್ರಿ ಬಾಗಿಲು ಹಾಕಿ ಬೀಗ ಹಾಕುವುದು ಯಾರೆಂಬುದು! ಒಂದು ರಾತ್ರಿ ಇದು ವಿಪರೀತಕ್ಕೆ ಇಟ್ಟುಕೊಂಡಿತು. ಚರ್ಚೆಯ ನಂತರ ಅವರು ಒಂದು ತೀರ್ಮಾನಕ್ಕೆ ಬಂದರು.

ಯಾರು ಮೊದಲು ಬಾಯಿ ತೆಗೆದು ಮಾತನಾಡುತ್ತಾರೆಯೋ ಅವರು ಎದ್ದು ಹೋಗಿ ಬೀಗ ಹಾಕಬೇಕು!

ಬಹಳ ವರ್ಷಗಳ ಜೀವನದಲ್ಲಿ ಒಬ್ಬರು ಮತ್ತೊಬ್ಬರ ದೌರ್ಬಲ್ಯ ಮತ್ತು ಸಾಮರ್ಥ್ಯಗಳನ್ನು ಸಹಜವಾಗಿ ತಿಳಿದುಕೊಂಡಿರುತ್ತಾರೆ? ’ಊಟ ಹಾಕು’ ಎಂದು ಶಂಕರನ್ ಪಿಳ್ಳೆಯೋ, ’ಊಟಕ್ಕೆ ಬನ್ನಿ’ ಎಂದು ಅವರ ಹೆಂಡತಿಯೋ ಬಾಯಿ ತೆರೆದರೆ, ಬಾಗಿಲಿಗೆ ಬೀಗ ಹಾಕುವ ಜವಾಬ್ದಾರಿ ಹೊರಬೇಕೆಂದು ಬಗೆದು, ಹಠಹಿಡಿದು ಉಪವಾಸವಿದ್ದುಕೊಂಡೇ ಮೌನವನ್ನು ಸಾಧಿಸಲು ಶುರು ಮಾಡಿದರು. ಆದರೆ ಅದು ಅವರಿಗೆ ಕೆಲವು ಗಂಟೆಗಳು ಸಾಧ್ಯವಾಯಿತು.

ಮಧ್ಯರಾತ್ರಿ ಕೆಲವು ರೌಡಿಗಳ ಕಣ್ಣಿಗೆ, ಬಾಗಿಲು ತೆರೆದಿರುವ ಈ ಮನೆ ಕಾಣಿಸಿತು. ಒಳಗೆ ಪ್ರವೇಶಿಸಿದರು. ಹಾಲಲ್ಲಿ ಕುಳಿತಿದ್ದ ದಂಪತಿಯನ್ನು ನೋಡಿದರು. ಆದರೆ ಅವರಿಬ್ಬರು ಏನೂ ಮಾತನಾಡಲಿಲ್ಲವಾದ್ದರಿಂದ ಕಳ್ಳರಿಗೇನೂ ಭಯವಾಗಲಿಲ್ಲ. ಇವರಿಬ್ಬರು, ನಡೆಯುತ್ತಿರುವುದನ್ನು ನೋಡುತ್ತಿದ್ದರೇ ಹೊರತು ಏನೂ ಮಾತನಾಡಲಿಲ್ಲ. ಆದ್ದರಿಂದ ಕಳ್ಳರಿಗೆ ಮತ್ತಷ್ಟು ಧೈರ್ಯ ಬಂತು, ಆಶ್ಚರ್ಯವೂ ಆಯಿತು. ಕೈಗೆ ಸಿಕ್ಕಿದ ವಸ್ತುಗಳೆಲ್ಲವನ್ನೂ ಬಾಚಿಕೊಂಡರು. ಮೇಜಿನ ಮೇಲಿಟ್ಟಿದ್ದ ಊಟವನ್ನು ಸಹ ಮಾಡಿದರು. ಏನೇ ಮಾಡಿದರೂ ಅವರಿಬ್ಬರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಅವರಲ್ಲೊಬ್ಬನು ಶಂಕರನ್ ಪಿಳ್ಳೆಯ ಹೆಂಡತಿಯ ಓಲೆಯನ್ನು ಕಿವಿಯಿಂದ ಬಿಚ್ಚಿ ತೆಗೆದುಕೊಂಡಾಗಲೂ ಅವಳು ತುಟಿಪಿಟಕ್ಕೆನ್ನಲಿಲ್ಲ. ಮತ್ತೊಬ್ಬನು, ಅಲ್ಲಿದ್ದ ಚಾಕುವನ್ನು ತೆಗೆದುಕೊಂಡು ಪಿಳ್ಳೆಯವರ ಮೀಸೆಯನ್ನು ಬೋಳಿಸಲು ಹೊರಟ. ಅಲ್ಲಿಯವರೆಗೆ ಕಲ್ಲಿನ ಬೊಂಬೆಯಂತೆ ಕುಳಿತಿದ್ದ ಶಂಕರನ್ ಪಿಳ್ಳೆ ಬೇರೆ ಮಾರ್ಗವಿಲ್ಲದೆ ಬಾಯಿ ತೆರೆದ: ಸರಿ, ನಾನೇ ಹೋಗಿ ಬಾಗಿಲಿಗೆ ಬೀಗ ಹಾಕುತ್ತೇನೆ!

ಶಂಕರನ್ ಪಿಳ್ಳೆಯಂತೆ ನಾವು ಕೂಡಾ ಕುತ್ತಿಗೆಗೆ ಕತ್ತಿ ಬಂದ ನಂತರವೇ ಜವಾಬ್ದಾರಿ ವಹಿಸಬೇಕಾ? ಆ ಬುದ್ಧಿಯನ್ನು ಮೊದಲೇ ತಂದುಕೊಂಡಿದ್ದರೆ ಜೀವನ ಸುಖದಾಯಕವಾಗಿ ಇರುತ್ತಿತ್ತಲ್ಲವೆ?

ಭೂಕಂಪದ ಪರಿಣಾಮವಾಗಿ ಗುಜರಾತಿನಲ್ಲಿ ಹಲವಾರು ಮನೆಗಳು ನೆಲಸಮವಾದುವು. ಸುನಾಮಿಯಿಂದಾಗಿ ತಮಿಳುನಾಡಿನಲ್ಲಿ ಅನೇಕ ಮನೆಗಳು ಹಾಳಾಗಿಹೋದುವು. ಅಂತಹ ಸಂದರ್ಭದಲ್ಲಿ ಯಾರಿಗೋ ಏನೋ ನಡೆಯುತ್ತಿದೆ ಎಂದು ಅಲಕ್ಷ್ಯದಿಂದ ಇರುತ್ತೀರಾ? ನಿಮ್ಮ ಅಂತರಂಗದಲ್ಲಿರುವ ಮಾನವತೆ ಪ್ರತಿಯೊಂದು ಘಟನೆಗೂ ಅನುಕಂಪದಿಂದ ಸ್ಪಂದಿಸುತ್ತದೆಯಲ್ಲವೆ? ಇದನ್ನೇ ’ಹೊಣೆಗಾರಿಕೆ’ಯೆಂದು ಹೇಳುವುದು. ಪ್ರತಿಯೊಬ್ಬರ ಒಳಗೂ ಇಂತಹ ಜವಾಬ್ದಾರಿಯ ಅರಿವಿನ ಭಾವನೆ ಇದ್ದೇ ಇರುತ್ತದೆ. ಜವಾಬ್ದಾರ ನೀವೇ ಅಥವಾ ಇಲ್ಲವೆ ಎಂಬ ಪ್ರಶ್ನೆಯೇ ಏಳುವುದಿಲ್ಲ.

ನೀವೇನೋ ಜವಾಬ್ದಾರಿಯುಳ್ಳವರು ಸರಿ. ಆದರೆ ನಾನು ಜವಾಬ್ದಾರ ಎಂಬ ಭಾವನೆಯ ಅರಿವು ನಿಮ್ಮ ಗಮನದಲ್ಲಿರುತ್ತದೆಯೆ? ಇದು ಪ್ರಶ್ನೆ. ಕೆಲವರು ತಮ್ಮ ಜೀವನಕ್ಕೆ ಮಾತ್ರ ಜವಾಬ್ದಾರಿಯನ್ನು ವಹಿಸುತ್ತಾರೆ. ಮತ್ತೆ ಕೆಲವರು ತಮ್ಮ ಕುಟುಂಬ, ಬಂಧುಗಳು, ನೆಂಟರಿಷ್ಟರ ಬಗೆಗೆ ಮಾತ್ರ ತಾವು ಜವಾಬ್ದಾರರೆಂದು ಬಗೆಯುತ್ತಾರೆ. ಬೇರೆ ಕೆಲವು ಮಂದಿ ದೇಶಕ್ಕೆ ಜವಾಬ್ದಾರರೆಂದು ಗಡಿಯನ್ನು ಸ್ವಲ್ಪ ಹೆಚ್ಚಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ತನ್ನ ಜೀವನಕ್ಕೆ ಸಹ, ತಾನು ಜವಾಬ್ದಾರನಲ್ಲವೆಂದು ಹೇಳುತ್ತಾ ಎಲ್ಲ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳುತ್ತಾರೆ.

ನಿಮ್ಮ ಜವಾಬ್ದಾರಿಯ ಭಾವನೆಗೆ ಗಡಿಯನ್ನು ಎಲ್ಲಿಯವರೆಗೆ ಇರಿಸಿಕೊಂಡಿದ್ದೀರಿ?

ಸರಿ, ನಿಮ್ಮ ಕುಟುಂಬದ ಜವಾಬ್ದಾರಿ ವಹಿಸಿಕೊಂಡಿದ್ದೀರಿ! ಅವರು ಸಾವಿರ ಮೈಲುಗಳ ದೂರ ಹೋದರೂ ನೀವು ಅವರಿಗೆ ಜವಾಬ್ದಾರರು ತಾನೆ? ’ಇಲ್ಲ. ಇಲ್ಲ. ಅವರು ’ನಾಟ್ ರೀಚಬಲ್’ ಆಗಿದ್ದಾರೆ. ಸಿಗ್ನಲ್ ಸಂಪರ್ಕದ ಗಡಿಯನ್ನು ದಾಟಿಬಿಟ್ಟಿದ್ದಾರೆ, ನಾನು ಜವಾಬ್ದಾರನಲ್ಲ’ ವೆಂದು ಹೇಳುವ ಮನುಷ್ಯರೆ ನೀವು? ಹಾಗೇನೂ ಇಲ್ಲವಲ್ಲ. ಅವರು ಎಲ್ಲಿಯೇ ಇರಲಿ, ಅವರೂ ನಿಮ್ಮ ಕುಟುಂಬಕ್ಕೆ ಸೇರಿದವರೇ ತಾನೆ? ಹಾಗೆಂದು ತಾನೇ ನಿಮ್ಮ ಭಾವನೆ? ಹೇಳಬೇಕೆಂದರೆ ನಾನು ಜವಾಬ್ದಾರ ಎಂಬ ಭಾವನೆಯೊಂದಿಗೆ ಅವರನ್ನು ನಿಮ್ಮ ಕುಟುಂಬದವರನ್ನಾಗಿ ನೀವು ಅಂಗೀಕರಿಸಿದ್ದೀರಲ್ಲವೆ?

ಈಗ ನೀವು ವಾಸವಾಗಿರುವ ಬೀದಿಯಲ್ಲಿ ಯಾರೋ ಒಬ್ಬರು ಅಪಘಾತವಾಗಿ ಬಿದ್ದಿದ್ದಾರೆ ಎಂದಿಟ್ಟುಕೊಳ್ಳಿ. ಅವರ ಅಂತಹ ಪರಿಸ್ಥಿತಿಗೆ ನೀವು ಜವಾಬ್ದಾರರು ತಾನೆ? ಎಂದು ನಾನು ಕೇಳಿದರೆ, ಇದೇನಿದು, ಇದಕ್ಕೆ ನಾನು ಹೇಗೆ ಕಾರಣ? ಎಂದು ಕೂಗಾಡುತ್ತೀರಿ. ನಾನೇನಾದರೂ ನೀವು ಇವರಿಗೆ ಅಪಘಾತ ಉಂಟು ಮಾಡಿದಿರಾ? ಎಂದು ಕೇಳಿದೆನೇನು? ಅದಕ್ಕೆ ನೀವೇ ಕಾರಣವೆಂದು ನಿಮ್ಮನ್ನು ನಾನು ಬಲಿಪಶು ಮಾಡಲಿಲ್ಲ. ಯೋಚನೆ ಮಾಡಬೇಡಿ. ನಾನು ಕೇಳಿದ್ದು, ಸಾಯುವ ಸ್ಥಿತಿಯಲ್ಲಿರುವ ಅವರಿಗೆ ನೀವು ಜವಾಬ್ದಾರರೆ? ಎಂದು ಮಾತ್ರ. ಅಂತಹ ಸ್ಥಿತಿಯಲ್ಲಿರುವವರೊಬ್ಬರನ್ನು ನೋಡುತ್ತಿದ್ದೀರಿ. ನಿಮ್ಮ ಮನಸ್ಸಿಗೆ ಏನನಿಸುತ್ತದೆ?

ವೈದ್ಯ ವೃತ್ತಿಯವರಾದರೆ ಅವರಿಗೆ ನೀವು ಮೊದಲು ಚಿಕಿತ್ಸೆ ನೀಡುತ್ತೀರಿ. ಇಲ್ಲವಾದರೆ ಕೂಡಲೇ ವೈದ್ಯಕೀಯ ಸಹಾಯ ಪಡೆಯಲು ಅವರಿಗೆ ನೆರವು ನೀಡುತ್ತೀರಿ. ಹಾಗಲ್ಲದೆ ಇದಾವುದನ್ನು ನಿಮ್ಮಿಂದ ಮಾಡಲಾಗದಿದ್ದರೆ, ತೆರೆದ ಹೃದಯದಿಂದ, ಮನಸ್ಸಿನಲ್ಲಿ ಅವರನ್ನು ಸ್ವಲ್ಪ ದೈನ್ಯದಿಂದ ನೋಡುತ್ತೀರಿ. ಇಲ್ಲವೆ? ಇವೆಲ್ಲವೂ ನಿಮ್ಮ ಜವಾಬ್ದಾರಿಯ ಅಂಶಗಳು ತಾನೆ? ನೀವು ಪರಿಚಯವಿಲ್ಲದವರಿಗೂ ಸಹ ಅಂತಹ ಸಂದರ್ಭದಲ್ಲಿ ಜವಾಬ್ದಾರಿ ವಹಿಸಿ ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತೀರಿ.

ಜವಾಬ್ದಾರಿಯಿಲ್ಲದವನು ಹೀಗೆಲ್ಲಾ ಭಾವಿಸುತ್ತಾರೆಯೆ? ನಾನು ಜವಾಬ್ದಾರನಲ್ಲ ಎಂದು ಹೇಳುವುದು ನಿಮ್ಮ ಸ್ವಭಾವವಷ್ಟೆ. ಆದರೆ ಇದು ದುರದೃಷ್ಟಕರ. ನಿಮ್ಮ ಅಂತರಂಗದಲ್ಲಿರುವ ಮಾನವತೆ ಪ್ರತಿಯೊಂದು ಸನ್ನಿವೇಶದಲ್ಲಿಯೂ ಸ್ವಾಭಾವಿಕವಾಗಿಯೇ ಸ್ಪಂದಿಸುತ್ತದೆ. ಅದು ಯಾವುದಕ್ಕೂ ನಿಮ್ಮ ಅನುಮತಿಯನ್ನು ಪಡೆದು ಸ್ಪಂದಿಸುವುದಿಲ್ಲ, ಅಲ್ಲವೆ? ತಡಮಾಡದೆ ಹೊರಹೊಮ್ಮುವ ನಿಮ್ಮ ಜವಾಬ್ದಾರಿಯ ಭಾವನೆಗೆ ನಿಮ್ಮ ಮನದಾಳದಲ್ಲಿ ತಡೆಹಾಕಿ ನಿಲ್ಲಿಸಿಕೊಂಡಿರುವವರು ನೀವೇ ಆಗಿದ್ದೀರಿ. ಸಾಯುವ ಸ್ಥಿತಿಯಲ್ಲಿರುವ ಆ ಮನುಷ್ಯನನ್ನು ನೋಡಿ, ಯಾರೋ, ಇರಲಿ, ಅವರು ನನಗೆ ಗೊತ್ತಿಲ್ಲ. ಅದಕ್ಕೆ ನಾನು ಜವಾಬ್ದಾರನಲ್ಲ, ಎಂದು ಅವರನ್ನು ಗಮನಿಸಿಯೂ ಗಮನಿಸದೆ ದಾಟಿಕೊಂಡು ಹೋದರೆ ನೀವು ಇಲ್ಲಿರುವುದು ಒಬ್ಬ ಮನುಷ್ಯನಾಗಿ ಅಲ್ಲ. ಒಂದು ಕಲ್ಲುಬಂಡೆಯಂತೆ ಮಾತ್ರ, ಅಲ್ಲವೆ?

ಅನೇಕರು ಈ ರೀತಿಯಲ್ಲಿ ಕಲ್ಲುಗಳಂತೆಯೇ ಪ್ರಪಂಚದಲ್ಲಿ ಓಡಾಡುತ್ತಿದ್ದಾರೆ. ಯಾವುದಕ್ಕೂ ಸ್ಪಂದಿಸಲು ಇಷ್ಟವಿಲ್ಲದವರು. ಯಾರನ್ನೂ ಹೆಚ್ಚಾಗಿ ಹಚ್ಚಿಕೊಳ್ಳಲು ಬಯಸದವರು, ಬೀದಿಯಲ್ಲಿ ತಾವೇ ತಾವಾಗಿ ಓಡಾಡುತ್ತಾರೆ. ತಮ್ಮ ಮನೆಗೆ ದಿಢೀರನೆ ಯಾರಾದರೂ ಬಂದುಬಿಟ್ಟರೆ ಮಾತ್ರ ಅಂತಹ ಒಬ್ಬಿಬ್ಬರೊಂದಿಗೆ ಮಾನವೀಯತೆಯನ್ನು ಪ್ರದರ್ಶಿಸಿ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ. ಹೊರಗೆ ಬಂದಾಗ ಮತ್ತೆ ಮೊದಲಿನಂತೆಯೇ ಕಲ್ಲು. ಇಂತಹವರೆಲ್ಲರೂ ಪಾರ್ಟ್‌ಟೈಮ್ (ಅರೆಕಾಲಿಕ) ಮನುಷ್ಯರು. ನಿಮ್ಮನ್ನು ನಾನು ನೇರವಾಗಿ ಕೇಳುತ್ತೇನೆ. ನೀವು ಅರೆಕಾಲಿಕ ಮನುಷ್ಯರಾಗಿರಬೇಕೆ? ಅಥವ ಪೂರ್ಣಾವಧಿ ಮನುಷ್ಯರಾಗಬೇಕೆ? 

ನೀವು ಪೂರ್ಣಾವಧಿ ಮನುಷ್ಯರಾಬೇಕಾದರೆ ನೀವು ಸ್ಪಂದಿಸುವ ರೀತಿ ಸೀಮಾತೀತವಾಗಿರಬೇಕು. ನಿಮ್ಮ ಜವಾಬ್ದಾರಿಯ ಭಾವನೆಗೆ ವಿಧಿಸಿಕೊಂಡಿರುವ ಅಡ್ಡಿಗಳನ್ನು, ಎಲ್ಲೆಗಳನ್ನು ಕಿತ್ತೊಗೆಯುವುದಾದರೆ ಮಾತ್ರ ನೀವು ಪೂರ್ಣಾವಧಿ ಮನುಷ್ಯರಾಗಲು ಸಾಧ್ಯ.

ಈಗ ಇಲ್ಲಿ ಯಾರೋ ಒಬ್ಬರು ಮಲಗಿದ್ದಾರೆ ಎಂದು ಭಾವಿಸಿಕೊಳ್ಳಿ. ಅವರನ್ನು ಕರೆಯುತ್ತೀರಿ. ಅವರಿಂದ ಯಾವುದೇ ಪ್ರತ್ಯುತ್ತರ ಬರುವುದಿಲ್ಲ. ಅವರನ್ನು ಮೃದುವಾಗಿ ಅಲುಗಾಡಿಸುತ್ತೀರಿ. ಏನೂ ಪ್ರತಿಕ್ರಿಯೆ ಇಲ್ಲ. ಜೋರಾಗಿ ಅಲ್ಲಾಡುತ್ತೀರಿ. ಆಗಲೂ ಏನೂ ಉತ್ತರ ಹೊರಬರಲಿಲ್ಲ. ನೀವು ಆಗ ಏನು ಭಾವಿಸುತ್ತೀರಿ? ಇವರು ಸತ್ತು ಹೋಗಿದ್ದಾರೆ! ಅದು ಹೆಣವಲ್ಲದೆ ಬೇರೇನೂ ಅಲ್ಲವೆಂದು ಭಾವಿಸುತ್ತೀರಿ, ಅಲ್ಲವೆ? ಎಂದರೆ ಸ್ಪಂದಿಸಲು ಸಾಮರ್ಥ್ಯವಿಲ್ಲದಿದ್ದಾಗ, ಸತ್ತಿದ್ದಾರೆ, ಪ್ರಾಣವಿಲ್ಲದ್ದು ಎನ್ನುತ್ತೀರ. ಅಲ್ಲವೆ? ಹಾಗಾದರೆ ನೋಡಿ, ಜೀವದ ಸ್ವಭಾವವೇನು? ನಿಮ್ಮ ಸ್ಪಂದಿಸುವ ಸಾಮರ್ಥ್ಯವನ್ನು ತಾನೇ ನೀವು ಪ್ರಾಣದ ಸ್ವರೂಪವೆನ್ನುವುದು?

ನೀವು ಜೀವಂತವಾಗಿದ್ದೀರೆಂದು ಹೇಳುವುದು ವಾಸ್ತವಾಗಿ ನಿಮ್ಮ ಸ್ಪಂದಿಸುವ ಸಾಮರ್ಥ್ಯವೇ ಆಗಿದೆ. ಸ್ಪಂದಿಸುವುದು ಎಂಬುದು ಬಾಯಿ ಮೂಲಕ ಹೊರಬರುವ ಮಾತುಗಳು, ಅಥವ ಮಾನಸಿಕವಾಗಿ ಉತ್ತರ ಕೊಡುವುದು ಮಾತ್ರವಲ್ಲ. ಈ ಪ್ರಾಣವೇ ಈಗ ಸ್ಪಂದಿಸುತ್ತಾ ಇದೆ. ಆದ್ದರಿಂದಲೇ ತಾನೆ ನೀವು ಜೀವಂತವಾಗಿರುವುದು? ಈ ಪ್ರಾಣಶಕ್ತಿ ಪ್ರತಿಯೊಂದಕ್ಕೂ ಸ್ಪಂದಿಸುತ್ತಲೇ ಬಂದಿದೆ. ಆದ್ದರಿಂದಲೇ ನೀವು ಜೀವಿಸಿರುವುದು. ಇದು ಸ್ಪಂದಿಸುವುದನ್ನು ನಿಲ್ಲಿಸಿಬಿಟ್ಟರೆ ನೀವು ಮರಣ ಹೊಂದಿದ್ದೀರಿ ಎನ್ನುತ್ತೇವೆ.

(ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn) (ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – kannadapublications@ishafoundation.org)

Exit mobile version