-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವರಮಹಾಲಕ್ಷ್ಮಿ ಹಬ್ಬದ ಸಡಗರ ಮನೆ ಮನೆಯಲ್ಲೂ ಸಂಭ್ರಮ ಮೂಡಿಸಿದೆ. ಕೆಲವು ಮನೆಗಳಲ್ಲಿ ದೇವಿಯ ವಿಗ್ರಹಕ್ಕೆ ರೆಡಿಮೇಡ್ ಸೀರೆ ಉಡಿಸಿ ಸಿಂಗರಿಸುತ್ತಾರೆ. ಇನ್ನು ಕೆಲವು ಮನೆಗಳಲ್ಲಿ ಸಂಪ್ರದಾಯಕ್ಕೆ ತಕ್ಕಂತೆ ಪೂಜಿಸಲ್ಪಡುವ ಬಿಂದಿಗೆಗೆ ಹೊಸದಾಗಿ ತಂದ ರೇಷ್ಮೆ ಸೀರೆಯನ್ನು ಉಡಿಸಿ, ವರಮಹಾಲಕ್ಷ್ಮಿಯನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಳ್ಳುತ್ತಾರೆ. ಈ ಹಬ್ಬದಂದು ನಿಮ್ಮ ಮನೆಯ ವರಮಹಾಲಕ್ಷ್ಮಿಗೆ ಹೇಗೆಲ್ಲಾ ಕಲಾತ್ಮಕವಾಗಿ ಸೀರೆ ಉಡಿಸಿ ಸಿಂಗರಿಸಬಹುದು ಎಂಬುದನ್ನು ಸ್ಯಾರಿ ಡ್ರೆಪಿಂಗ್ ಎಕ್ಸ್‌ಪರ್ಟ್ ವನ್ ಮಿನಟ್ ಉಮಾ ಅವರು ತಿಳಿಸಿಕೊಟ್ಟಿದ್ದಾರೆ.
ದೇವಿಗೆ ಸೀರೆ ಉಡಿಸುವ ವಿಧಾನ
ಮೊದಲಿಗೆ ಒಂದು ದೊಡ್ಡ ಬಿಂದಿಗೆ, ಅದರ ಮೇಲೊಂದು ಚಿಕ್ಕ ಕಳಶಕ್ಕೆ ಅಕ್ಕಿ ತುಂಬಿಟ್ಟುಕೊಳ್ಳಿ. ಮೇಲಿನ ಕಳಶಕ್ಕೆ ನಿಮ್ಮ ಪದ್ಧತಿಯಂತೆ ಸಿರಿಧಾನ್ಯ ಹಾಕಿ. ನೀರು ಸಹ ಬಳಸಬಹುದು. ಸೀರೆ ಹಾಳಾಗುವ ಕಾರಣ ಅಕ್ಕಿ ಬಳಸುವುದು ಸೂಕ್ತ. ಒಂದರ ಮೇಲೊಂದರಂತೆ ಬಿಂದಿಗೆಯನ್ನಿಟ್ಟು ಮೇಲಿನ ಕಳಶಕ್ಕೆ ವೀಳ್ಯೆದೆಲೆ ಇಡಿ. ಇದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿ ಇರಿಸಿ. ತೆಂಗಿನ ಕಾಯಿಯ ಮುಂಭಾಗಕ್ಕೆ ದೇವಿಯ ಮುಖವಾಡ ಹಾಕಿ. ಬಿಂದಿಗೆಯ ಕೆಳಗೆ ಬಾಳೆ ದಿಂಡು ಅಥವಾ ಒಂದು ತಟ್ಟೆಯಲ್ಲಿ ಅಕ್ಕಿ ತುಂಬಿ ಸಮತಟ್ಟಾಗಿ ಮಾಡಿ. ಅರಿಶಿನ ಕುಂಕುಮದಿಂದ ನಕ್ಷತ್ರ ರೂಪದ ಮಂಡಲವನ್ನು ರಚಿಸಿ. ಆ ಮಂಡಲದ ಮಧ್ಯಭಾಗಕ್ಕೆ ಸರಿಯಾಗಿ ಕಳಶವನ್ನು ಅಲುಗಾಡದಂತೆ ಕೂರಿಸಿ. ಮೇಲಿನ ಕಳಶಕ್ಕೆ ಅಡ್ಡದಾಗಿ ಒಂದು ಬಿದಿರು ಅಥವಾ ಯಾವುದೇ ಅಲ್ಲಾಡದಂತಹ ಕಡ್ಡಿಯನ್ನು ಬಿಗಿಯಾಗಿ ಕಟ್ಟಿ. ಇತ್ತ ಪ್ರತ್ಯೇಕ ಬ್ಲೌಸ್ ಪೀಸನ್ನು ಬಿಂದಿಗೆಗೆ ಕಟ್ಟಿ ಪಿನ್ ಮಾಡಿ. ದೇವಿಯ ಕೈ ಕಾಲುಗಳ ಪ್ರತಿರೂಪವಿದ್ದಲ್ಲಿ ಅದನ್ನು ಬಿಂದಿಗೆ ಕಟ್ಟಿ, ಕೂರಿಸಿ. ಬಲಭಾಗದ ಕೈ ಮೇಲ್ಮುಖವಾಗಿರಲಿ. ಎಡಗೈ ಕೆಳಮುಖವಾಗಿರಲಿ. ಇನ್ನು ಸೀರೆಯ ಒಂದು ಫಾಲ್ ಸೈಡಿನಿಂದ ನೆರಿಗೆ ಮಾಡಿಕೊಳ್ಳಿ. ಸೆರಗಿಗೆ ಬೇಕಾದಷ್ಟು ಬಿಟ್ಟು ನೆರಿಗೆ ಕಟ್ಟಿಡಿ. ಕೆಳಗೆ ಮೇಲೆ ಎರಡಕ್ಕೂ ಕಟ್ಟಿ. ಕಟ್ಟಲು ಆದಷ್ಟೂ ಉಲ್ಲನ್ ದಾರ ಬಳಸುವುದರಿಂದ ಸೀರೆ ಹಾಳಾಗುವುದಿಲ್ಲ.
ಇದನ್ನೂ ಓದಿ: Varamahalakshmi Festival 2024: ಹಬ್ಬಕ್ಕೆ ಸೀರೆಯನ್ನು ದಾವಣಿಯಂತೆ ಉಡುವುದು ಹೇಗೆ? ಇಲ್ಲಿದೆ ಸಿಂಪಲ್ ಐಡಿಯಾ
ನಿಮಗೆ ಎಷ್ಟು ಎತ್ತರಕ್ಕೆ ಬೇಕೋ ಅಷ್ಟು ಎತ್ತರಕ್ಕೆ ಫೋಲ್ಡ್ ಮಾಡಿ ನೆರಿಗೆ ಎರಡು ಸ್ಟೆಪ್ ಕೂರುವಂತೆ ನೋಡಿಕೊಂಡು ಬಿಂದಿಗೆಗೆ ಕಟ್ಟಿ. ನಂತರ ಕಟ್ಟಿರುವ ನೆರಿಗೆಯನ್ನು ನೀಟಾಗಿ ಹರಡಿ. ಬಿದಿರು ಅಥವಾ ಕಡ್ಡಿಯ ಅಳತೆಗೆ ಸೆರಗು ಹಾಕಿ ಎರಡ್ಮೂರು ಕಡೆ ಬಿಚ್ಚಿ ಹೋಗದಂತೆ ಪಿನ್ ಮಾಡಿ. ಇತ್ತ ಬಿಂದಿಗೆಯ ಎಡಭಾಗದಿಂದ ಒಂದು ಸುತ್ತು ಸೆರಗನ್ನು ತೆಗೆದುಕೊಳ್ಳಿ. ಇದರಿಂದ ಸೀರೆ ಉಡಿಸುವುದು ಸುಲಭವಾಗುತ್ತದೆ. ಸೆರಗನ್ನು ಮುಂದೆಯಾದರೂ ಹರಡಬಹುದು ಅಥವಾ ಹಿಂದೆಯಾದರೂ ಪಿನ್ ಮಾಡಬಹುದು. ನಿಮಗೆ ಬೇಕಾದ ಶೈಲಿಯಲ್ಲಿ ಸೆರಗು ಹಾಕಿ ಡಿಸೈನ್ ಮಾಡಿ. ನಂತರ ಸೊಂಟದ ಪಟ್ಟಿ ಹಾಕಿ. ಹಂತಹಂತವಾಗಿ ಒಡವೆ ಹೂಗಳನ್ನು ಹಾಕಿ, ಅಲಂಕರಿಸಿ. ನೋಡಲು ಆಕರ್ಷಕವಾಗಿ ಕಾಣುವುದು. ಅಲಂಕಾರಕ್ಕೆ ಫಾಲ್ಸ್ ಅಥವಾ ಜಿಗ್‌ಜಾಗ್ಸ್ ಮಾಡಿರದ ಸೀರೆ ಆಯ್ಕೆ ಮಾಡಿಕೊಳ್ಳುವುದು ಉತ್ತಮ.