ನಾರಾಯಣ ಯಾಜಿ
ಯೋಗರತೋ ವಾ ಭೋಗರತೋ ವಾ ಸಂಗರತೋ ವಾ ಸಂಗವಿಹೀನಃ|
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ ನಂದತಿ ನಂದತಿ ನಂದತ್ಯೇವ ||ಭ. ಗೋ 19||
ಯೋಗಿಯಾಗಿರಲಿ, ಭೋಗಿಯಾಗಿರಲಿ, ಸತ್ಸಂಗದಲ್ಲಿ ಇರಲಿ ಅಥವಾ ಸಂಗರಹಿತರಾಗಿರಲಿ. ಯಾರ ಚಿತ್ತವು ಬ್ರಹ್ಮದಲ್ಲಿ ನೆಲೆಯಾಗಿರುತ್ತದೆಯೋ ಅವನ ಮನಸ್ಸು ಆನಂದಿಸುತ್ತದೆ, ಅಮಿತವಾದ ಆನಂದಲ್ಲೇ ಇರುತ್ತದೆ. ಇದು ನಿಶ್ಚಿತ.
ಶಂಕರಾಚಾರ್ಯರನ್ನು ಅನುಭಾವಿ ಸಂತ ಎಂದು ಗುರುತಿಸುವಾಗ ಅವರೊಳಗಿನ ತತ್ತ್ವಾಜ್ಞಾನಿ ಕಾಣಿಸುತ್ತಾನೆ. ತತ್ತ್ವಜ್ಞಾನಿ ಎಂದುಕೊಳ್ಳುವಾಗ ಪಂಚಾಯತನ ಪೂಜೆಯನ್ನು ಕಲ್ಪಿಸಿಕೊಟ್ಟು ಮೂರ್ತಿಪೂಜೆಯ ಮೂಲಕ ಭಕ್ತಿಪಂಥಕ್ಕೆ ವೇದಿಕೆಯನ್ನು ಹಾಕಿಕೊಟ್ಟವರಾಗಿದ್ದಾರೆ. ಅವರು ಅಪ್ಪಟ ಕರ್ಮಠರಾಗಿದ್ದರು ಎನ್ನುವಾಗ “ಮನೀಷಾ ಪಂಚಕ” ಅವರನ್ನು ಓರ್ವ ಸಮಾಜಸುಧಾರಕರಾಗಿ ಪರಿಚಯಿಸುತ್ತದೆ. ಭಜಗೋವಿಂದಂ, ನಿರ್ವಾಣ ಸೂಕ್ತ, ಸೌಂದರ್ಯ ಲಹರಿ ಮುಂತಾದ ಸಾಹಿತ್ಯವನ್ನು ಓದುವಾಗ ಅವರೊಳಗಿನ ಅಪ್ರತಿಮ ಕವಿತ್ವಕ್ಕೆ ಬೆರಗಾಗುತ್ತೇವೆ.
ಅದರೆ ಈ ಎಲ್ಲ ಮುಖಗಳ ಹಿಂದಿರುವ ಶಂಕರರು ಮಾತ್ರ ಕಮಲಪತ್ರದ ಎಲೆಯ ಮೇಲೆ ನಿಂತಿರುವ ನೀರ ಹನಿಯಂತೆ ವೇದಾಂತಿಯಾಗಿ ತಮ್ಮ ಗಂಭೀರ ಮುದ್ರೆಯಲ್ಲಿ ಕುಳಿತು “ಇವೆಲ್ಲವೂ ಸಗುಣ ಬ್ರಹ್ಮನ ನಾನಾ ರೂಪಗಳು; ಇದರ ಹಿಂದಿರುವುದು “ನೇತಿ ನೇತಿ.. ಎನ್ನುವ ಮೂಲದಿಂದ ಹೊರಟ ಬೆಳಕಿನ ಕಿರಣಗಳಾಗಿವೆ ಎನ್ನುತ್ತಿರುವಂತೆ ಗೋಚರಿಸುತ್ತಾರೆ. ಶಂಕರರನ್ನು ಅರಿಯಬೇಕಾದರೆ ಹೀಗೆ ಸಾಗಬೇಕು. ಕಾಣುವ ಎಲ್ಲವನ್ನು ಅರಿಯುತ್ತಲೇ ಕಾಣದಿರುವ ವಸ್ತುವನ್ನು ಹುಡುಕಬೇಕು. ಶಂಕರರ ಅಧ್ಯಾತ್ಮವೆಂದರೆ ಅದು ಕವಿಯ ಹೃದಯದಿಂದ ಹೊರಬಂದ ಕವಿತೆಗಳು. “ರವಿ ಕಾಣದ್ದನ್ನು ಕವಿ ಕಂಡಿರುವುದು”. ಹಾಗಾಗಿ ಶಂಕರರು ಇತ್ತ ನಿರೀಶ್ವರವಾದಿಗಳಿಗೂ ಅತ್ತ ಅದ್ವೈತಿಗಳಲ್ಲದ ಇನ್ನಿತರ ಕರ್ಮಠರಿಗೂ ಪರಮ ವಿರೋಧಿಗಳಾಗಿದ್ದಾರೆ. ಈ ವಿರೋಧವೆನ್ನುವದನ್ನು ವಿವರವಾಗಿ ಬರೆದರೆ ಒಂದು ದೊಡ್ಡ ಗ್ರಂಥವೇ ಆಗಬಹುದಾಗಿದೆ. ಇದಕ್ಕೆ ಕಾರಣ ಶಂಕರರು ಅಲ್ಲ; ನಮ್ಮ ವೇದ ಮತ್ತು ವೇದಾಂತಗಳನ್ನು ಅರ್ಥಮಾಡಿಕೊಳ್ಳದೇ ಕೇವಲ ಕಪ್ಪು ಬಿಳುಪಿನ ನೋಟದಲ್ಲಿ ಅವುಗಳನ್ನು ವಿಮರ್ಶಿಸಿರುವುದಾಗಿದೆ.
ಸತ್ಯವೆನ್ನುವುದು ಕೇವಲ ಇದೆ ಅಥವಾ ಇಲ್ಲವೆನ್ನುವ ಎರಡರ ಕೊನೆಯಲ್ಲಿಯಲ್ಲ. ವೇದದಲ್ಲಿ ಬರುವ ಸತ್ ಮತ್ತು ಅಸತ್ ಪದಗಳನ್ನು ಇಲ್ಲಿ ಉದಾಹರಣೆಯಾಗಿ ನೋಡಬಹುದಾಗಿದೆ. ಸತ್ ಎಂದರೆ ಇರುವುದು ಎಂದಾದರೆ ಅಸತ್ ಎನ್ನುವಲ್ಲಿ ಬರುವ “ಅ” ಅಕ್ಷರ ನೇತ್ಯಾತ್ಮಕವಾದ ಅರ್ಥದಲ್ಲಿ ಇಲ್ಲ. ಅದು “ಸತ್” ಅಲ್ಲದಿರುವುದು ಎಂದರ್ಥ. ಗೋಚರವಾಗಿಲ್ಲದೇ ಇರುವುದು ಎನ್ನುವ ಅರ್ಥದಲ್ಲಿ “ಅಸತ್” ಪ್ರಯೋಗ ಹೆಚ್ಚು ಸೂಕ್ತವಾಗುತ್ತದೆ. ಬರಡು ಭೂಮಿಯ ಆಳದಲ್ಲಿ ಜೀವ ಜಲವಿರುತ್ತದೆ. ಅದು ಸುಲಭದಲ್ಲಿ ಸಿಗುವುದಿಲ್ಲ; ಅದನ್ನು ಪಡೆಯಲು ಭೂಮಿಯನ್ನು ಅಗೆಯ ಬೇಕಾಗುತ್ತದೆ. ಅಡ್ಡವಾಗಿರುವ ಕಲ್ಲು ಬಂಡೆಗಳನ್ನು ಒಡೆದು ಭೂಮಿಯ ಆಳಕ್ಕೆ ಇಳಿಯುತ್ತೇವೆ. ಕಸ ಕಡ್ಡಿಗಳನ್ನು ತೆಗೆದು ನಿರಾಸೆಗೊಳ್ಳದೇ ಪ್ರಯತ್ನವನ್ನು ಮುಂದುವರೆಸಿದಾಗ ಒಂದು ದಿನ ತಳದಲ್ಲಿ ನೀರು ಒಸರುವುದು ಕಂಡು ಬರುತ್ತದೆ. ಇದೇ “ನೇತಿ ನೇತಿ “ ಎನ್ನುವುದರ ಹಿಂದಿನ ತತ್ತ್ವದ ತಿರುಳು.
ಭೂಮಿಯ ಮೇಲಿನ ಬರಡು ನೆಲ ನೀರಲ್ಲ; ಒಳಗೆ ನೀರಿಗಾಗಿ ಅಡ್ದ ಬಂದಿರುವುದೆಲ್ಲವೂ ಅಡೆತಡೆಗಳು, ಅವುಗಳ ನಿರಾಕರಣೆಯನ್ನು ಮಾಡಿ, ಅಗೆಯುತ್ತಾ ಹೋಗುವವನಿಗೆ ಒಂದಲ್ಲ ಒಂದು ದಿನ ವರತೆಯ ಬುಗ್ಗೆ ಸಿಗುತ್ತದೆ. ಶಾಂಕರ ತತ್ತ್ವವೆಂದರೆ ಅದು ಹೀಗೆ ಸಾಕಾರದಿಂದ ನಿರಾಕಾರಕ್ಕೆ ಹೋಗುವುದು.
ಶಂಕರರನ್ನು ಟೀಕಿಸುವವರು ನಿರ್ಗುಣ ಬ್ರಹ್ಮನ ಕುರಿತು ಅವರ ನಿಲುವನ್ನು ಪ್ರಶ್ನಿಸುತ್ತಾರೆ. ಬ್ರಹ್ಮವೆನ್ನುವುದು ಇದೆ ಅಂದಾದರೆ ಅದು ಇಲ್ಲದಿರುವುದು ಯಾವಾಗ ಎನ್ನುವುದು ಮುಖ್ಯವಾದ ಆಕ್ಷೇಪ. ಯಾವುದಾದರೂ ಒಂದು ಶಬ್ಧಕ್ಕೆ ಅರ್ಥವನ್ನು ಹೇಳುವಾಗ ಅದರ ಆಭಾವವನ್ನು ಹೇಳಿದರೆ ಸುಲಭವಾಗಿ ಅರ್ಥವಾಗುತ್ತದೆ. ಉದಾಹರಣೆಗೆ ಸತ್ಯದ ಅರ್ಥವಾಗ ಬೇಕಾದರೆ ಸುಳ್ಳುಲ್ಲದೇ ಇರುವುದು. ಕತ್ತಲಿನಲ್ಲಿ ಬೆಳಕಿನ ಆಭಾವವಿದೆ. ಹುಟ್ಟಿನಲ್ಲಿ ಜನಿಸದೇ ಇರುವ ಕಾಲದ ಆಭಾವವಿದೆ. ಇದನ್ನು ಬ್ರಹ್ಮ ಶಬ್ಧಕ್ಕೆ ಅನ್ವಯಿಸಿದರೆ ಬ್ರಹ್ಮ ಇದೆ ಅಂತಾದರೆ ಅದರ ಆಭಾವ ಬ್ರಹ್ಮ ಇಲ್ಲದೇ ಇರುವ ಕಾಲ. ಹಾಗಾದರೆ ಸರ್ವ ನಿಯಾಮಕನೂ ಸರ್ವವ್ಯಾಪಕನೂ ಆದ ಬ್ರಹ್ಮ ಇಲ್ಲದೇ ಇರುವ ಕಾಲ ಇತ್ತು ಅಂತ ಆಗಲಿಲ್ಲವೋ; ಬ್ರಹ್ಮನಿಲ್ಲದ ಕಾಲದಲ್ಲಿ ಯಾರಿದ್ದರು. ಹೀಗಾದರೆ ಬ್ರಹ್ಮ ಸತ್ಯವಾಗುವುದು ಹೇಗೆ? ಇಂತಹ ನಿರಾಕಾರನಾದ ಬ್ರಹ್ಮನನ್ನು ಒಪ್ಪುವುದಾದರೂ ಹೇಗೆ; ಹೀಗೆ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಶಬ್ಧಕ್ಕೆ ಅರ್ಥವನ್ನು ಹುಡುಕುವುದು ಕೇವಲ ಅದರ ಅಭಾವದಿಂದ ಮಾತ್ರವಲ್ಲ, ವಿಶೇಷಣಗಳ ಮೂಲಕವೂ ಅದರ ಅರ್ಥವನ್ನು ವಿವರಿಸಬಹುದು.
ಉದಾಹರಣೆಗೆ ಸಾಗರ ಹೇಗಿದೆ ಎಂದರೆ ಸಾಗರದಂತೆ ಎನ್ನುವುದು ವಿಶೇಷಣ. ಆದರೆ ಇದು ಎದುರಿದ್ದವನಿಗೆ ಅರ್ಥವಾಗಬೇಕಾದರೆ ಆತ ಸಾಗರದಂತಹ ಯಾವುದೋ ಒಂದು ದೊಡ್ಡ ನದಿಯನ್ನಾಗಲೀ, ಸರೋವರವನ್ನಾಗಲೀ ನೋಡಿರಲೇಬೇಕು. ಅನುಭವದ ಆಚೆಗೆ ಶಬ್ಧಗಳ ಅಥವಾ ವಸ್ತುವಿನ ಪರಿಚಯ ಮಾಡಿಸಲಾಗುವುದಿಲ್ಲ. ಇಲ್ಲಿ ಮತ್ತೊಂದು ವಿಧದಿಂದ ವಸ್ತುವನ್ನು ಪರಿಚಯಮಾಡಿಕೊಡಲಾಗುವುದು. ಅದನ್ನು ವಿಶೇಷಣವೆನ್ನುತ್ತಾರೆ. ಉದಾಹರಣೆಗೆ ಆತ್ಮ/ಬ್ರಹ್ಮವನ್ನೋ ವರ್ಣಿಸುವಾಗ ಆತ್ಮ ಸತ್ಯಕಾಮನು, ಸತ್ಯಸಂಕಲ್ಪನು, ಸರ್ವಗಂಧನು, ಸರ್ವರಸನು ಎಂದೂ, ಅದರ ಗುಣಗಳನ್ನೂ; ಸರ್ವಜ್ಞನು, ಸರ್ವವಿದನು ಎಂದೂ, ಅದರ ಸ್ವರೂಪವನ್ನೂ, ಜ್ಯೋತಿಗಳಿಗೆಲ್ಲ ಜ್ಯೋತಿಯು, ಸರ್ವತೋಕ್ಷಿಶಿರೋಮುಖನು ಎಂದೂ ರೂಪಾದಿಗಳನ್ನೂ ಹೇಳಿದೆ. ಇದನ್ನು ವಿಶೇಷಣವೆನ್ನುತ್ತಾರೆ. ಇದಕ್ಕಿಂತಲೂ ಮಿಗಿಲಾಗಿ ಬ್ರಹ್ಮವನ್ನು ಅರ್ಥಮಾಡಿಕೊಳ್ಳುವ ವಿಧಾನವೇ ಶಂಕರರು ತೋರಿಸಿಕೊಟ್ಟ ಅಧ್ಯಾರೋಪವೆನ್ನುವುದು.
ವಿಸ್ತಾರವಾದ ಬ್ರಹ್ಮಾಂಡವನ್ನು ನಾವು ಅಟ್ಲಾಸ್ ಬಿಡಿಸಿಕೊಂಡು ಹುಡುಕುವಂತೆ. ಅಟ್ಲಾಸ್ ಆಗಲಿ, ನಕಾಶೆಯಾಗಲಿ, ನಿಜವಾದ ವಸ್ತುವಲ್ಲ. ಆದರೆ ಬಾಹ್ಯಾಕಾಶವನ್ನು ಅಳೆಯಲು ಕಲ್ಪಿಸಿಕೊಳ್ಳುವ ಸಾಧನವಷ್ಟೆ. ಕಲಿಯುವಾಗ ಅದೇ ನಿಜವಾದ ಖಗೋಲ ಎಂದೇ ತಿಳಿದುಕೊಳ್ಳುತ್ತೇವೆ. ತಿಳಿದಮೇಲೆ ಅದಲ್ಲವೆನ್ನುವುದು ಸಹಜವಾಗಿ ಅರ್ಥವಾಗುತ್ತದೆ. ಬ್ರಹ್ಮನನ್ನು ಅರ್ಥಮಾಡಿಕೊಳ್ಳಬೇಕಾದಾಗಲೂ ಹಾಗೆ, ಯಾವುದಾದರೂ ವಿಶೇಷಣವನ್ನು ಬ್ರಹ್ಮನಲ್ಲಿ ಸೇರಿಸುತ್ತಾ ಹೋಗುವುದು. ರಾತ್ರಿಕಾಲದಲ್ಲಿ ಸಪ್ತರ್ಷಿಮಂಡಲವನ್ನು ತೋರಿಸಬೇಕಾದರೆ ನೇರವಾಗಿ ತೋರಿಸಿದರೆ ಸುಲಭದಲ್ಲಿ ಅರ್ಥವಾಗುವುದಿಲ್ಲ. “ಅಗೋ ಮೊದಲು ನನ್ನ ತೋರು ಬೆರಳಿನ ತುದಿಯನ್ನು ನೋಡು ಎಂದು ತೋರಿಸುವದು, ಅದಕ್ಕಿಂತ ಮುಂದೆ ಒಂದು ದೊಡ್ಡ ತಾಳೆಮರವಿದೆಯಲ್ಲ, ಅದರೆ ತುದಿಯನ್ನು ಒಮ್ಮೆ ನೋಡು, ಸಿಕ್ಕಿತಾ, ಹಾಂ! ಅಲ್ಲಿಂದ ಮೇಲೆ ಆಕಾಶದೆಡೆ ಗಮನಿಸು; ನಕ್ಷತ್ರಗಳ ಗುಂಪು ಕಾಣಿಸುತ್ತಿದೆಯೋ, ಅಲ್ಲಿರುವದೇ ಸಪ್ತರ್ಷಿಮಂಡಲ” ಎಂದಾಗ ನಕ್ಷತ್ರಗಳ ಪರಿಚಯವಾಗುತ್ತದೆ. ಇಲ್ಲಿ ಬೆರಳನ್ನು ತೋರಿಸಿ ಅದಲ್ಲ, ಮರವನ್ನು ತೋರಿಸಿ ಅದಲ್ಲ, ಮುಗಿಲನ್ನು ತೋರಿಸಿ ಅದಲ್ಲವೆನ್ನುವುದು ಎಡ ಬಲಗಳಕಡೆ ತಿರುಗಿಸಿ ಅದಲ್ಲವೆಂದು ಕೊನೆಗೆ ಗುರಿಯನ್ನು ಕಂಡುಹಿಡಿಯುವದನ್ನೇ ಅಧ್ಯಾರೋಪವೆನ್ನುತ್ತಾರೆ.
ರಾಜನೋರ್ವನಲ್ಲಿಗೆ ಜಗಜಟ್ಟಿಯೋರ್ವ ಬಂದು ತನ್ನ ಪರಾಕ್ರಮವನ್ನು ವಿವರಿಸುತ್ತಾ ಎಂತಹ ಪರ್ವತವನ್ನಾದರೂ ಹೊರಬಲ್ಲೆ ಎಂದನಂತೆ; ಅವನನ್ನು ಅವಮಾನಿಸಬೇಕೆನ್ನುವ ಕಾರಣದಿಂದ ರಾಜ ಆತನನ್ನು ಪರ್ವತದ ಬಳಿಕರೆದುಕೊಂಡು ಬಂದು ಈ ಪರ್ವತವನ್ನು ಹೊರು ಎಂದನಂತೆ. ಜಟ್ಟಿಯೂ ಸಾಮಾನ್ಯದ ಆಸಾಮಿಯಲ್ಲ; ನೀವು ಪರ್ವತವನ್ನು ನನ್ನ ತಲೆಯಮೇಲೆ ಎತ್ತಿಡಿಸಿ ಮಹಾಪ್ರಭು. ಹೊರುವೆನು” ಎಂದನಂತೆ. ಬ್ರಹ್ಮನನ್ನು ವಿವರಿಸುವುದು ಈ ಯುಕ್ತಿಯಿಂದ ಅಲ್ಲವೆನ್ನುವುದನ್ನು ಗಮನಿಸಬೇಕು. ಇದನ್ನೇ ನೇತಿ, ನೇತಿಯೆನ್ನುವುದು. ಇದನ್ನು “ವೀಪ್ಸೆ” ಎಂತಲೂ ಕರೆಯುತ್ತಾರೆ. ವೀಪ್ಸೆಯೆಂದರೆ ಎಲ್ಲ ವಿಷಯಗಳನ್ನೂ ವ್ಯಾಪಿಸುವುದು. ಬ್ರಹ್ಮನಲ್ಲಿ ಸಗುಣವನ್ನು ಆರೋಪಿಸಿ ಅದನ್ನು ಅಲ್ಲಗೆಳೆಯುತ್ತಾ ಬ್ರಹ್ಮತ್ವದ ದರ್ಶನವನ್ನು ಮಾಡಿಸುವುದು.
ಇಲ್ಲಿ ಎಲ್ಲವನ್ನೂ ತೋರಿಸಿ ಅದಲ್ಲ ಎನ್ನುತ್ತಾ ಕೊನೆಗೆ “ವಿಜ್ಞಾನವೂ ಆನಂದವೂ ಆದದ್ದು ಬ್ರಹ್ಮ” ಎನ್ನುವಲ್ಲಿಗೆ ತಲುಪಿಸುವುದು ಈ ಅಧ್ಯಾರೋಪ ಮತ್ತು ನೇತಿ ನೇತಿ ಎನ್ನುವುದರ ಲಕ್ಷಣ. ನೇತಿ ನೇತಿ ಎಂದರೆ ಮೂರ್ತ ಮತ್ತು ಅಮೂರ್ತ ಇವೆಲ್ಲವನ್ನೂ ಬ್ರಹ್ಮವಲ್ಲವೆಂದು ತಿಳಿಸುವುದು. ಬ್ರಹ್ಮವೆನ್ನುವುದು ಅನುಭವಜನ್ಯ, ಅನುಭೂತಿ. “ಯಥೋ ವಾಚೋ ನಿವರ್ತಂತಿ; ಅಪ್ರಾಪ್ಯ ಮನಸಾ ಸಹಃ” ವಾಕ್ಕಿನಿಂದ ವಿವರಿಸಲಾಗದ. ಮನಸ್ಸಿನಿಂದಲೂ ತಲುಪಲಾರದ ಮಹತ್ತು ಅದು. ಬಾಳೆಲೆಯಲ್ಲಿ ಬಡಿಸಿಟ್ಟ ಹೋಳಿಗೆಯ ವರ್ಣನೆಯನ್ನು ಎಷ್ಟು ಮಾಡಿದರೂ, ಅದರ ಸವಿಯನ್ನು ಅನುಭವಿಸಬೇಕಾದರೆ ತಿನ್ನಬಯಸಿದವರು ಸ್ವತಃ ಅದನ್ನು ತಿನ್ನಬೇಕು. ಅದಲ್ಲದಿದ್ದರೆ ಬ್ರಹ್ಮವನ್ನು ಅರಿಯಲಾರದು ಎನ್ನುವ ಅದ್ವೈತವನ್ನು ಲೋಕಕ್ಕೆ ಕೊಟ್ಟವರು ಶಂಕರಾಚಾರ್ಯರು.
ಬ್ರಹ್ಮವೆನ್ನುವುದು ಯಾವಾಗಲೂ ಇದ್ದಿರುವುದರಿಂದ ಅದನ್ನು ಸತ್ ಎಂದರೆ ಸದಾ ಇರುವುದು, ಚಿತ್ ಎಂದರೆ ಜ್ಞಾನ, ನಿತ್ಯಜ್ಞಾನವೇ ಬ್ರಹ್ಮ ಮತ್ತು ಬ್ರಹ್ಮವೇ ಆನಂದ. ಸಚ್ಚಿದಾನಂದವೇ ಬ್ರಹ್ಮನ ಸ್ವರೂಪಲಕ್ಷಣ. ಇದು ಶುದ್ಧಬ್ರಹ್ಮವೆನ್ನುತ್ತಾರೆ. ಈ ಬ್ರಹ್ಮವೇ ವ್ಯಾಹಾರಿಕವಾಗಿ ತನ್ನದೇ ಸೃಷ್ಟಿಯಾದ ಸತ್ವ, ರಜ ತಮಸ್ಸಿನೊಂದಿಗೆ ಸೇರಿದಾಗ ಜಗತ್ತಿನ ಸೃಷ್ಟಿಯಾಗುತ್ತದೆ. ಅದನ್ನು ಮಾಯೆ ಎನ್ನುತ್ತಾರೆ. ಈ ಮಾಯೆಯಿಂದ ಕೂಡಿದ ಬ್ರಹ್ಮನನ್ನು ಮಾಯಾಶಬಲಿತ, ಸಗುಣ ಬ್ರಹ್ಮ, ಈಶ್ವರನೆಂದು ಕರೆಯುತ್ತಾರೆ. ಈಶ್ವರ, ಸೃಷ್ಟಿಕರ್ತ. ಆದರೆ ಬ್ರಹ್ಮ ನಿಗೆ ಮಾಯೆಯ ಸೋಂಕು ಇಲ್ಲ. ಆ ಮಾಯೆ]ಬ್ರಹ್ಮನನ್ನು ಆಶ್ರಯಿಸಿ ಪ್ರಪಂಚವನ್ನು ತೋರಿಸುತ್ತದೆ. ಅದು ಪಾರಮಾರ್ಥಿಕ ಸತ್ಯವಲ್ಲ. ವ್ಯವಹಾರಿಕ ಸತ್ಯ. ಬ್ರಹ್ಮವೆನ್ನುವುದು ಅನಿರ್ವಚನೀಯ. ಅದು ಅನಾದಿ.
ಶಂಕರಾಚಾರ್ಯರು ಬರುವತನಕ ಅದೈತ ಇರಲಿಲ್ಲ ಎಂದು ಅರ್ಥವಲ್ಲ. ವೇದವೆನ್ನುವ ಪರಮ ಸತ್ಯವನ್ನು ದಾರ್ಶನಿಕರು ಮತ್ತು ಋಷಿಗಳು ಅರ್ಥೈಯಿಸಿ ಜನರಿಗೆ ನೀಡುತ್ತಿದ್ದರು. ಇಲ್ಲಿನ ತತ್ತ್ವಶಾಸ್ತ್ರ ಮತ್ತು ಅದರ ಆಚರಣೆಗಳೆಲ್ಲವೂ ನಿಂತಿರುವುದು ವೇದಗಳು ತೋರಿದ ಮಾರ್ಗದರ್ಶನದ ಮೇಲೆ. ಇಂದು ವೇದವನ್ನು ಸಾಯಣ , ಯಾಸ್ಕರು, ರಾವಣ, ಆನಂದತೀರ್ಥ, ಹೀಗೆ ಹಲವಾರು ಚಿಂತಕರು ಆ ಕುರಿತು ವಿಚಾರ ಮಾಡಿ ಲೋಕಕ್ಕೆ ಅನುಕೂಲವಾಗುವ ರೀತಿಯಲ್ಲಿ ಅನುಷ್ಠಾನಗೊಳಿಸಿದ್ದಾರೆ. ವ್ಯಾಸರು ಮತ್ತು ಅವರ ಶಿಷ್ಯರಾದ ಪೈಲ, ಜೈಮಿನಿ, ವೈಶಂಪಾಯನ ಮತ್ತು ಸುಮಂತು ಅವರ ನಂತರ ಈ ಸುಧಾರಣೆಗಳು ನಡೆಯಲೇ ಇಲ್ಲ. ನಂತರ ಬಂದ ಬೌದ್ಧ ಮತ್ತು ಜೈನ ಧರ್ಮಗಳು ವೇದ ಪ್ರಮಾಣವನ್ನು ನಿರಾಕರಿಸಿದವು.
ಈ ಸಂದರ್ಭದಲ್ಲಿ ಜನರು ತಮಗೆ ತೋಚಿದ ರೀತಿಯಲ್ಲಿ ವೇದಗಳ ಆಚರಣೆಯನ್ನು ರೂಢಿಗೆ ತಂದ ಪರಿಣಾಮವಾಗಿ ಏಕ ಸೂತ್ರಗಳಿರಲಿಲ್ಲ. ಕಾಪಾಲಿಕರು, ತಾಂತ್ರಿಕರು, ಗಾಣಪತ್ಯರು ಹೀಗೇ ಅನೇಕ ರೀತಿಯಲ್ಲಿ ಆರಾಧನಾ ಪದ್ಧತಿಗಳಿದ್ದವು. ಬೌದ್ಧನ ಉಪದೇಶವೂ ಧರ್ಮದ ರೂಪವನ್ನು ಪಡೆದುಕೊಂಡಿರುವುದು ಶಾಕ್ಯಮುನಿಯ ನಿರ್ವಾಣವಾಗಿ ಸುಮಾರು ಇನ್ನೂರು ವರ್ಷಗಳ ನಂತರ. ಅವರಲ್ಲಿಯೂ ಏಕತೆ ಇರಲಿಲ್ಲ. ಸುಮಾರು ಇಪ್ಪತ್ತೆರಡು ಪಂಥಗಳಿದ್ದವು. ವೇದದ ಮೂಲ ಆಶಯಗಳಾದ ಆತ್ಮ ಸಾಕ್ಷಾತ್ಕಾರವನ್ನು ಮಾಡಿಕೊಳ್ಳುವುದಕ್ಕಿಂತ ಬಾಹ್ಯಾಡಂಬ ರಗಳೇ ಹೆಚ್ಚಾಗಿದ್ದವು. ಇದನ್ನು ಬಗೆ ಹರಿಸಿದವರು ಶಂಕರರಾಚಾರ್ಯರು ಎನ್ನುವುದು ಮುಖ್ಯವಾಗುತ್ತದೆ. ಹಾಗಾಗಿ ಶಾಂಕರರ ತತ್ತ್ವದಲ್ಲಿ ಸಾಕಾರವಾದ ರಸ ಮತ್ತು ನಿರಾಕಾರವಾದ ಬ್ರಹ್ಮ ಎಲ್ಲವೂ ಇದೆ.
ಸನಾತನ ಧರ್ಮವನ್ನು ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಯ ತಳಹದಿಯ ಮೇಲೆ ಪುನಃ ಸ್ಥಾಪಿಸಿದರು. ಇದನ್ನು “ಪ್ರಸ್ಥಾನತ್ರಯ” ಎನ್ನುತ್ತಾರೆ. ಅವರು ಅದುತನಕ ಇದ್ದ ರಾಜಾಶ್ರಯ ತಪ್ಪಿದ ಧರ್ಮರಕ್ಷಣೆಯ ಹೊಣೆಯನ್ನು ನಾಲ್ಕು ಆಮ್ನಾಯಗಳ ಮೂಲಕ ಮಠಗಳಿಗೆ ನೀಡಿದರು. ಬೌದ್ಧರ ಬಿಕ್ಕುಗಳು ನೆಲೆಸುವ ಸಂಘಕ್ಕೂ ಆಮ್ನಾಯ ಪೀಠಕ್ಕೂ ಅನೇಕ ಹೋಲಿಕೆಗಳಿವೆ. ಹಾಗಂತ ಅವುಗಳ ನೇರಾನೇರ ಅನುಕರಣೆ ಮತ್ತು ಆಚಾರಗಳಿಲ್ಲಿಲ್ಲ. ಶಂಕರ ಪೀಠಗಳ ಮುಖ್ಯವಾದ ಕಾರ್ಯ ಅದ್ವೈತದ ಪ್ರಚಾರ ಮತ್ತು ಅದನ್ನು ಗಟ್ಟಿಗೊಳಿಸುವತ್ತ ನಡೆಸಬೇಕಾದ ವಾಗರ್ಥ ಗೋಷ್ಠಿಗಳು. ಜಿಜ್ಞಾಸುತನ, ಮಂಥನ ಮತ್ತು ಚಿಂತನೆಗಳನ್ನು ನಡೆಸುವುದಾಗಿದೆ. ಧರ್ಮಕ್ಕೆ ಒಂದು ಸಾಂಘಿಕ ರೂಪವನ್ನು ಈ ಮೂಲಕ ಕೊಟ್ಟಿರುವುದು ಶಂಕರರ ಹಿರಿಮೆ.
ಶಂಕರ ಜೀವನದ ಬಾಲ್ಯವನ್ನು ಗಮನಿಸುವಾಗ ಅನೇಕ ಕಥೆಗಳು ಬರುತ್ತವೆ. ಬಾಲಕ ಶಂಕರನಿಗೆಪೂರ್ಣಾ ನದಿಯಲ್ಲಿ ಮೊಸಳೆ ಹಿಡಿದಾಗ ಅಮ್ಮ ಆರ್ಯಾಂಬೆಯನ್ನು ಕೂಗಿ ಕರೆಯುತ್ತಾನೆ. ತನ್ನ ಬಾಲಕನಿಗೆ ಸಂನ್ಯಾಸಕ್ಕೆ ಅನುಮತಿಯನ್ನು ಕೊಟ್ಟರೆ ಮೊಸಳೆ ತನ್ನನ್ನು ಬಿಡುವುದಾಗಿ ಹೇಳುತ್ತಾನೆ. ಏನಾದರೂ ಆಗಲಿ, ಮಗ ಬದುಕಲಿ ಎಂದು ತಾಯಿ ಸಂನ್ಯಾಸಕ್ಕೆ ಅನುಮತಿಸುತ್ತಾಳೆ. ಇಲ್ಲಿ ಚಿದ್ವಿಲಾಸೀಯದ ಕವಿ ಬರೆದ ಕಥೆ ತುಂಬಾ ಕುತೂಹಲಕಾರಿಯಾಗಿದೆ. ಯಾವಾಗ ಶಂಕರರಿಗೆ ಸಂನ್ಯಾಸಕ್ಕೆ ಒಪ್ಪಿಗೆ ದೊರೆಯಿತೋ ಆಗ ಆ ಮೊಸಳೆ ಒಂದು ಗಂಧರ್ವ ರೂಪವನ್ನು ತಾಳಿ “ನಾನು ಪುಷ್ಪರಥನೆನ್ನುವ ಗಂಧರ್ವನು. ಬ್ರಹ್ಮನ ಆಜ್ಞೆಯನ್ನು ಉಲ್ಲಂಘಿಸಿದ ಕಾರಣದಿಂದ ಆತ ಮೊಸಳೆಯಾಗೆಂದು ಶಾಪವನ್ನು ನೀಡಿದ. ಉಶ್ಶಾಪಕ್ಕಾಗಿ ಪರಿಪರಿಯಿಂದ ಬೇಡಿಕೊಂಡಮೇಲೆ ಶಿವನು ಶಂಕರಾಚಾರ್ಯನಾಗಿ ಅವತರಿಸುತ್ತಾನ. ಆವನ ಪಾದ ಸೋಂಕಿದಾಗ ನಿನಗೆ ಶಾಪದ ವಿಮೋಚನೆಯಾಗುತ್ತದೆ” ಎನ್ನುತ್ತಾನೆ.
ಈ ದೃಶ್ವವನ್ನು ನೋಡಿದ ಆರ್ಯಾಂಬೆಗೆ ತನ್ನ ಮಗ ಶಿವನ ಅಂಶವೆಂದು ತಿಳಿದು ಆಶ್ಚರ್ಯವೂ ಮತ್ತು ಸಂತೋಷವೂ ಆಯಿತು. ಈ ಮೂಲಕ ಶಂಕರರು ಸಂನ್ಯಾಸಕ್ಕಾಗಿ ಅಮ್ಮನಿಗೆ ಸುಳ್ಳು ಹೇಳಿದ್ದಾರೆ ಎನ್ನುವ ಅಪವಾದವನ್ನೂ ತಪ್ಪಿಸಿದಂತಾಯಿತು. ಆ ತಕ್ಷಣವೇ ಅವರು ಮಾನಸ ಸಂನ್ಯಾಸವನ್ನು ಸ್ವೀಕರಿಸುತ್ತಾರೆ. ಕ್ರಮ ಸಂನ್ಯಾಸವನ್ನು ಸ್ವೀಕರಿಸಲು ಅಲ್ಲಿಂದ ಅವರು ಹುಡುಕಿಕೊಂಡು ಹೊರಡುವುದು ಗೋವಿಂದ ಭಗವತ್ಪಾದರಿದ್ದ ಗುಹೆಯ ಕಡೆಗೆ. ಗೋವಿಂದ ಭಗವತ್ಪಾದರೂ ಸಹ ಶಂಕರರಿಗಾಗಿ ಕಾದುಕುಳಿತುಕೊಂಡಿದ್ದಂತೆ ತೋರುತ್ತದೆ. ತನ್ನ ಪರಿಚಯವನ್ನು ಅವರು ಹೇಳಿದಕೂಡಲೇ ಭಗವತ್ಪಾದರು “ಸ ಪ್ರಾಹ, ಶಙ್ಕರ ಸ ಶಂಙ್ಕರ ಏವ ಸಾಕ್ಷಾಜ್ಜಾತಸ್ತ್ವ ಮಿತ್ಯಹಮವೈಮಿ” ನೀನು ಸಾಕ್ಷಾಚ್ಛಂಕರನೇ ಎಂದು ಸಮಾಧಿದೃಷ್ಟಿಯಿಂದ ನಾನು ತಿಳಿದುಕೊಂಡಿದ್ದೇನೆ (ಮಾ. ಶಂ ವಿ. 5-100) ಎಂದರು. ಅಷ್ಟೇ ಅಲ್ಲ ತನ್ನ ಪಾದವನ್ನು ಗುಹಾದ್ವಾರದಿಂದ ಹೊರಕ್ಕೆ ನೀಡಿದರು.
ಆಗಲೇ ಅದೈತದ ನಾಲ್ಕು ಮಹಾ ವಾಕ್ಯಗಳಾದ ʻಪ್ರಜ್ಞಾನಂ ಬ್ರಹ್ಮ, ತತ್ತ್ವಮಸಿʼ, ʻಅಯಮಾತ್ಮಾ ಬ್ರಹ್ಮʼ ಮತ್ತು ʻಅಹಂ ಬ್ರಹ್ಮಾಸ್ಮಿʼಯನ್ನು ಬೋಧಿಸಿದರು. ಕ್ರಮ ಸಂನ್ಯಾಸವನ್ನು ಗೋವಿಂದ ಭಗವತ್ಪಾದರೇ ಕೊಟ್ಟರು. ಗುರುಪರಂಪರೆಯ ಮಹತ್ವವನ್ನೂ ಸಹ ತಿಳಿಸಿ ವ್ಯಾಸರ ಯೋಗ ಭಾಷ್ಯಗಳಾದ ಬ್ರಹ್ಮಸೂತ್ರಕ್ಕೆ ಅನೇಕರು ತಮಗೆ ತಿಳಿದಂತೆ ಅರ್ಥವಿವರಣೆಯನ್ನು ಕೊಡುತ್ತಿದ್ದಾರೆ. ಎಲ್ಲರೂ ಒಪ್ಪುವಂತೆ ಬ್ರಹ್ಮ ಸೂತ್ರಕ್ಕೆ ಭಾಷ್ಯವನ್ನು ಬರೆಯಿರಿ ಎಂದು ಅಪ್ಪಣೆ ಕೊಟ್ಟು ಆ ಕಾರ್ಯಕ್ಕಾಗಿ ಕಾಶಿಗೆ ಹೋಗುವಂತೆ ಸೂಚಿಸಿದರು.
ಶಂಕರಾಚಾರ್ಯರು ಅಲ್ಲಿಂದ ಮುಂದೆ ತಿರುಗಿ ನೋಡುವುದೇ ಇಲ್ಲ. ಮಹತ್ವದ ಕೊಡುಗೆಯಾದ ಅದೈತದ ಚರಮ ಸೀಮೆಯನ್ನು ತಲುಪಿದ್ದಷ್ಟೇ ಅಲ್ಲದೇ ಅದನ್ನು ಸ್ಪಷ್ಟವಾಗಿ “ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ (ಬ್ರಹ್ಮವು ಸತ್ಯ,ಜಗತ್ತು ಮಿಥ್ಯಾ ಜೀವವು ಬ್ರಹ್ಮಕ್ಕಿಂತ ಬೇರೆಯಲ್ಲ)” ಎನ್ನುವದನ್ನು ತೋರಿಸಿಕೊಟ್ಟರು. ಶಂಕರರು ಇದೇ ಕಾರಣಕ್ಕಾಗಿ ಟೀಕೆಗೂ ಒಳಗಾಗಿರುವುದು. ಪ್ರಪಂಚದ ಬೇರೆ ಯಾವ ಗುರುವೂ ಇಷ್ಟು ಸ್ಪಷ್ಟವಾಗಿ ಜಗತ್ತನ್ನು ಮಿಥ್ಯವೆಂದು ಘೋಷಿಸಲಿಲ್ಲ. ತತ್ತ್ವಶಾಸ್ತ್ರಗಳೇ ಹಾಗೆ. ಪ್ರಸಿದ್ಧ ತತ್ತ್ವಶಾಸ್ತ್ರಿ ಅರಿಸ್ಟಾಟಲ್ “All philosophy begins in wonder” ಎಂದಿದ್ದಾನೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಮಾನವ ಪಾಪದ ಕೂಸು ಎನ್ನುವ ಕಲ್ಪನೆಯು ಗಾಢವಾಗಿದ್ದ ಪಾಶ್ಚಾತ್ಯ ಸಿದ್ಧಂತಿಗಳಿಗೆ ಅದೈತದ ತುರೀಯವಾದ ಜೀವವೇ ಬ್ರಹ್ಮವೆನ್ನುವುದು ಅರ್ಥವಾಗದ ಸಂಗತಿ. ವಿವೇಕಾನಂದರು ತಮ್ಮ ಕೃತಿಶ್ರೇಣಿಯಲ್ಲಿ “ಅದ್ವೈತ ಸಿದ್ಧಾಂತಕ್ಕೆ ಒಂದು ಹಿರಿಮೆಯಿದೆ; ಇದು ಎಲ್ಲಾ ಧಾರ್ಮಿಕ ತತ್ತ್ವಗಳಲ್ಲೆಲ್ಲ ಬಹಳ ವೈಚಾರಿಕವಾದುದು” ಎಂದಿದ್ದಾರೆ. ಪ್ರಪಂಚದ ಎಲ್ಲಾ ಜೀವಿಗಳಲ್ಲಿರುವ ಆತ್ಮವೂ ಬ್ರಹ್ಮವೇ ಆಗಿರುವುದರಿಂದ ಮತ್ತೊಬ್ಬರನ್ನು ಹಿಂಸಿಸಬೇಡಿ; ಹಾಗೆ ಹಿಂಸಿಸಿದರೆ ನಿಮ್ಮನ್ನು ನೀವು ಹಿಂಸಿಸಿಕೊಂಡಂತೆ… ನಾನು ಇತರರಿಗಿಂತ ಬೇರೆ ಎಂದು ಭಾವಿಸುವುದೇ ದ್ವೇಷ, ಅಸೂಯೆ, ದುಃಖ, ಹೋರಾಟಕ್ಕೆ ಕಾರಣ (ಕೃ. ಶ್ರೇ.- 6,323) ಎನ್ನುವ ಮೂಲಕ ವೇದಾಂತ ಆಧಾರಿತ ಸಮಾಜವಾದದಲ್ಲಿ ಅದ್ವೈತ ನಿಂತಿದೆ ಎನ್ನುತ್ತಾರೆ.
ಹಾಗಾಗಿಯೇ ಶಂಕರಾಚಾರ್ಯರು ಲೋಕಶಂಕರರಾಗಿದ್ದಾರೆ.
– ಲೇಖಕರು ಧಾರ್ಮಿಕ ಚಿಂತಕರು
ಇದನ್ನೂ ಓದಿ : ಧವಳ ಧಾರಿಣಿ ಅಂಕಣ: ಧರ್ಮಪ್ರಜ್ಞೆ ಸದಾ ಜಾಗೃತವಾಗಿರುವ ಶೃಂಗಾರದ ಪ್ರತಿಮೆ