ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೆಲವು ದೇವಾಲಯಗಳಲ್ಲಿ ಕಡ್ಡಾಯವಾಗಿ ಪುರುಷರ ಅಂಗಿ ತೆಗೆಸುವುದನ್ನು ಆಕ್ಷೇಪಿಸಿ ಸಂಘಟನೆಯೊಂದು ಧಾರ್ಮಿಕ ದತ್ತಿ ಇಲಾಖೆಗೆ ದೂರು ಸಲ್ಲಿಸಿದೆ.
ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಈ ಕುರಿತು ಧಾರ್ಮಿಕ ದತ್ತಿ ಇಲಾಖೆಗೆ ಲಿಖಿತ ದೂರು ಸಲ್ಲಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಡುಪಿಯ ಕೊಲ್ಲೂರು ದೇವಸ್ಥಾನಗಳಲ್ಲಿ ಪುರುಷರು ಗರ್ಭಗುಡಿಯ ಬಳಿಗೆ ಹೋಗಬೇಕಿದ್ದರೆ ಕಡ್ಡಾಯವಾಗಿ ಅಂಗಿ-ಬನಿಯನ್ ತೆಗೆಯಬೇಕು ಎಂಬ ಸಂಪ್ರದಾಯ ರೂಢಿಯಲ್ಲಿದೆ. ಈ ಪದ್ಧತಿ ಸರಿಯಲ್ಲ. ಚರ್ಮ ರೋಗವಿದ್ದವರು ಅಂಗಿ ಕಳಚಿ ಸಾಗುವುದರಿಂದ ಕಾಯಿಲೆ ಬೇರೆಯವರಿಗೆ ಹರಡುವ ಸಾಧ್ಯತೆ ಇದೆ ಎಂದು ಸಂಘಟನೆ ನೀಡಿರುವ ದೂರಿನಲ್ಲಿ ಆಕ್ಷೇಪಿಸಲಾಗಿದೆ.
ಹಾಗೆಯೇ ಗಂಭೀರ ಅಂಗವೈಕಲ್ಯ ಇದ್ದವರಿಗೆ ಬಟ್ಟೆ ಕಳಚಿ ದರ್ಶನ ಪಡೆಯುವುದು ಮನಸ್ಸಿಗೆ ತುಂಬಾ ನೋವು ತರಬಹುದು. ಇದು ಭಾರತದ ಸಾಂವಿಧಾನಿಕ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ವಿಚಾರಿಸಲಾಗಿ ಈ ಕುರಿತು ಸರ್ಕಾರದಿಂದ ಯಾವುದೇ ಆದೇಶವೂ ಇಲ್ಲ ಮತ್ತು ಪುರಾತನ ಹಿಂದೂ ಸಂಪ್ರದಾಯದಲ್ಲಿಯೂ ಈ ಪದ್ಧತಿ ಇಲ್ಲ ಎಂಬುದು ತಿಳಿದುಬಂದಿದೆ. ಹೀಗಾಗಿ ಈ ಆಚರಣೆ ಮೂಲಕ ಭಕ್ತರಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ತಕ್ಷಣ ದೇವಸ್ಥಾನಗಳಲ್ಲಿ ಅಳವಡಿಸಲಾಗಿರುವ ಈ ಕುರಿತ ಸೂಚನೆ ಬೋರ್ಡ್‌ಗಳನ್ನು ತೆರವು ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಈ ಹಿಂದೆಯೂ ದೇವಾಲಯದ ಒಳಗೆ ಪುರುಷರ ಅಂಗಿ- ಬನಿಯನ್ ತೆಗೆಸುವ ರೂಢಿಗೆ ಆಕ್ಷೇಪಗಳು ಕೇಳಿಬಂದಿದ್ದವು. ದೇವಾಲಯದ ಒಳಗೆ ಅಂಗಿ ತೆಗೆಯಬೇಕು ಎಂಬುದಕ್ಕೆ ಪಾರಂಪರಿಕ ಹಿನ್ನೆಲೆಯಿಲ್ಲ ಎಂದು ಹೇಳಲಾಗಿತ್ತು. ಈ ರೂಢಿಗೆ ವೈಜ್ಞಾನಿಕ ಸಮರ್ಥನೆಯೂ ಕೇಳಿಬಂದಿತ್ತು.
ಇದನ್ನೂ ಓದಿ | Mukesh Ambani | ತಿರುಪತಿ ದೇವಾಲಯಕ್ಕೆ 1.5 ಕೋಟಿ ರೂ. ಕಾಣಿಕೆ ನೀಡಿದ ಮುಕೇಶ್ ಅಂಬಾನಿ