Site icon Vistara News

Shivakumara Swami: ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣೆ: ಕರುಣೆಯೇ ಕಣ್ಣು ತೆರೆದಂತೆ…

shivakumar swami

ನಾಡು ಕಂಡ ಅಪರೂಪದ ತ್ರಿವಿಧ ದಾಸೋಹಿ (ಅನ್ನ, ಅಕ್ಷರ, ಆಧ್ಯಾತ್ಮ) ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮಿಗಳು. ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ ʼಕಾಯಕವೇ ಕೈಲಾಸʼ ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು ಶ್ರೀಗಳು. ಇಡೀ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದ ಅವರಿಂದ ಸ್ಫೂರ್ತಿ ಪಡೆದವರು ಲಕ್ಷಾಂತರ ಮಂದಿ.

ಮಾಗಡಿ ತಾಲೂಕಿನ ವೀರಾಪುರದ ಹೊನ್ನೇಗೌಡ ಮತ್ತು ಗಂಗಮ್ಮ ದಂಪತಿಗೆ ಎಪ್ರಿಲ್ 1, 1908ರಲ್ಲಿ 13ನೇ ಮಗನಾಗಿ ಶಿವಣ್ಣ ಜನಿಸಿದರು. ಎಲ್ಲರಿಗಿಂತಲೂ ಕಿರಿಯರಾದ ಶಿವಣ್ಣನವರೆಂದರೆ ತಂದೆ ತಾಯಿಗಳಿಗೆ ಅಪಾರ ಪ್ರೀತಿ. ವೀರಾಪುರದಲ್ಲಿಯೇ ಇದ್ದ ಕೂಲಿಮಠದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದಿ ಕಲಿತ ಶಿವಣ್ಣ ಮುಂದೆ ತುಮಕೂರಿನ ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣ, ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಮೆಟ್ರಿಕ್ಯುಲೇಷನ್ ಮಾಡಿದರು. ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಪದವಿ ಮಾಡುತ್ತಿದ್ದಾಗ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಉದ್ಧಾನ ಶಿವಯೋಗಿಗಳ ಹಾಗೂ ಆಗಿನ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರ ಒಡನಾಟ ಉಂಟಾಯಿತು.

1930ರಲ್ಲಿ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾದರು. ಅವರ ಕ್ರಿಯಾ ಸಮಾಧಿ ಕಾರ್ಯಕ್ಕೆ ಆಗಮಿಸಿದ್ದ ಶಿವಣ್ಣನವರನ್ನು ಉದ್ಧಾನ ಸ್ವಾಮಿಜಿಗಳು ಎಲ್ಲರ ಸಮ್ಮುಖದಲ್ಲಿ ಮಠದ ಉತ್ತರಾಧಿಕಾರಿ ಎಂದು ಘೋಷಿಸಿದರು. ನಂತರ ಕಾವಿ, ರುದ್ರಾಕ್ಷಿಗಳನ್ನು ಧರಿಸಿದ ಸನ್ಯಾಸಿಯಾಗಿ ನಂತರವೂ ವಿದ್ಯಾಭ್ಯಾಸ ಮುಂದುವರಿಸಿದ ಶಿವಣ್ಣನವರು ವಿದ್ಯಾಭ್ಯಾಸ ಮುಗಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಸಿದ್ದಗಂಗಾ ಮಠಕ್ಕೆ ಹಿಂದಿರುಗಿದರು. ನಂತರ ತಮ್ಮ ಪೂರ್ಣ ಸಮಯವನ್ನು ಮಠದ ಏಳಿಗೆಗಾಗಿ ಮೀಸಲಿಟ್ಟರು.

ಮಕ್ಕಳ ಶಿಕ್ಷಣಕ್ಕಾಗಿ ಶ್ರೀ ಸಿದ್ದಗಂಗಾ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು. ಶಿಕ್ಷಣ ಮತ್ತು ತರಬೇತಿಗಾಗಿ ಒಟ್ಟು 132 ಸಂಸ್ಥೆಗಳನ್ನು ಸ್ಥಾಪಿಸಿದರು. ನರ್ಸರಿಯಿಂದ ಎಂಜಿನಿಯರಿಂಗ್, ವಿಜ್ಞಾನ, ಕಲೆ ಮತ್ತು ನಿರ್ವಹಣೆ ಜೊತೆಗೆ ವೃತ್ತಿಪರ ತರಬೇತಿಯೂ ಸಹ ಇದೆ. 5ರ ವಯಸ್ಸಿನಿಂದ 16 ವರ್ಷ ವಯಸ್ಸಿನ ಯಾವುದೇ ಹಂತದಲ್ಲಿ ಉಚಿತ ಆಹಾರ, ಶಿಕ್ಷಣ ಮತ್ತು ಆಶ್ರಯ ಒದಗಿಸಿದರು. ಇವರ ಸಂಸ್ಥೆಗಳು ಧರ್ಮ, ಜಾತಿ ನೋಡದೆ ಎಲ್ಲಾ ಮಕ್ಕಳಿಗೆ ತೆರೆದಿದ್ದವು.

ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಸಂದರ್ಭದಲ್ಲಿ ಮಠದ ಆದಾಯ ತುಂಬಾ ಕಡಿಮೆ ಇತ್ತು. ಮಠಕ್ಕೆಂದು ಮೀಸಲಾಗಿದ್ದ ಜಮೀನಿನಲ್ಲಿ ಬೆಳೆದು ವಿದ್ಯಾರ್ಥಿಗಳ ಸನಿವಾಸ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟದಾಯಕವಾಗಿತ್ತು. ಮಠದ ಭೂಮಿಯೆಲ್ಲ ಮಳೆಯಾಧಾರಿತವಾದದ್ದು ಮತ್ತೂ ತೊಡಕಾಗಿ ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಮಯದಲ್ಲಿ ಬಹಳ ಕಷ್ಟವಾಗುತ್ತಿತ್ತು. ಇದನ್ನೆಲ್ಲಾ ಧೈರ್ಯವಾಗಿ ಮೆಟ್ಟಿ ನಿಂತ ಶ್ರೀಗಳು ಭಕ್ತರ ಮನೆಗೆ ನಡೆದುಕೊಂಡೇ ಹೋಗಿ ಅಲ್ಲಿಂದ ಧವಸ ಧಾನ್ಯಗಳನ್ನು ತಂದಿದ್ದೂ ಉಂಟು. ಬರಿಯ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಷ್ಟೇ ಅಲ್ಲದೆ ದಿನ ನಿತ್ಯ ಮಠದಲ್ಲಿ ನಡೆಯಬೇಕಾದ ಧಾರ್ಮಿಕ ಕಾರ್ಯಗಳು, ಮಠಕ್ಕೆ ಭಕ್ತರ ಹಾಗು ಗಣ್ಯರ ಭೇಟಿ, ಮಠದ ಅರ್ಥಿಕ ನಿರ್ವಹಣೆಗಳೂ ಸೇರಿ ಶ್ರೀಗಳಿಗೆ ಬಿಡುವಿರಲಿಲ್ಲ. ಇದ್ಯಾವುದಕ್ಕೂ ಅವರು ಧೃತಿಗೆಡಲಿಲ್ಲ.

ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿದ್ದ ಸ್ವಾಮೀಜಿ ಮುಂದಿನ ಪೀಳಿಗೆಯ ಬೆಳವಣಿಗೆಗೆ ಪಣ ತೊಟ್ಟಿದ್ದರು. ಸಮಾಜದ ಎಷ್ಟೋ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಕಾರಣರಾದರು. ಇಲ್ಲಿಗೆ ರಾಷ್ಟ್ರಪತಿಗಳು, ಪ್ರಧಾನಿಗಳು ಭೇಟಿ ನೀಡಿದ್ದಾರೆ. ಅವರ ಕೈಂಕರ್ಯ ವಿಶ್ವದ ಗಣ್ಯರಿಂದ ಸ್ಲಾಘಿಸಲ್ಪಟ್ಟಿದೆ. ಅವರಿಗೆ ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ 2015ರಲ್ಲಿ ದೊರೆತಿದೆ.

ಇದನ್ನೂ ಓದಿ: Modi In Karnataka: ಶಿವಕುಮಾರ ಸ್ವಾಮೀಜಿಗಳ ಪರಂಪರೆಯನ್ನು ಸಿದ್ದಲಿಂಗ ಶ್ರೀ ಮುಂದುವರಿಸಿದ್ದಾರೆ: ಪ್ರಧಾನಿ ಮೋದಿ ಶ್ಲಾಘನೆ

ವಯೋಸಂಬಂಧಿ ಅನಾರೋಗ್ಯದಿಂದ ಬಳಲಿದ ಸ್ವಾಮೀಜಿಯವರಿಗೆ 2018ರ ಡಿಸೆಂಬರ್‌ನಲ್ಲಿ ಹೃದಯದ ಸ್ಟಂಟ್ ಅಳವಡಿಸಲಾಗಿತ್ತು. 2019 ಜನವರಿ 21ರಂದು ಅವರು ತಮ್ಮ ದೇಹವನ್ನು ತ್ಯಜಿಸಿ ಲಿಂಗೈಕ್ಯರಾದರು. ತಮ್ಮ ಕರುಣೆಯ ಕಣ್ಣ ಬೆಳಕನ್ನು ಲೋಕದಲ್ಲಿ ಬಿಟ್ಟು ಶಿವಲೀನರಾದರು. ಅವರಿಂದ ಉಪಕೃತರಾದ ಲಕ್ಷಾಂತರ ಮಂದಿಯ ಹೃದಯಲ್ಲಿ ಜೀವಂತರಾಗಿ ಉಳಿದರು.

ಅವರ ಬಗ್ಗೆ ಕವಿ ಜಿ.ಎಸ್‌ ಶಿವರುದ್ರಪ್ಪನವರು ಬರೆದ ಸಾಲುಗಳು ಅವರ ಸಾಧನೆಯನ್ನು ಕಣ್ಣಿಗೆ ಕಟ್ಟುವಂತಿವೆ:

ಸದ್ದು ಗದ್ದಲವಿರದ ಸಾಧನೆಯಿಲ್ಲಿ ಗದ್ದುಗೆಯೇರಿದೆ
ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ
ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ
ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ.

Exit mobile version