ʻʻಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ, ಬಂತು ಬೀಡಿಗೆ…ʼʼ ಎಂದು ವರಕವಿ ದ.ರಾ.ಬೇಂದ್ರೆ ಅವರು ಹಾಡಿದ್ದರು. ಶ್ರಾವಣ ಬಂದರೆ ಪರಿಸರದಲ್ಲೂ ಮನುಷ್ಯನ ಮುಖದಲ್ಲೂ ಒಂದು ಉಲ್ಲಾಸ ಎದ್ದು ತೋರುತ್ತದೆ. ಅದಕ್ಕೆ ಕಾರಣ ಈ ಮಾಸದಲ್ಲಿ ಆಗುವ ಪ್ರಾಕೃತಿಕ ಬದಲಾವಣೆ ಮತ್ತು ಆಗಮಿಸುವ ಹಬ್ಬಗಳ ಸಾಲು.
ಚೈತ್ರ ವೈಶಾಖ ವಸಂತ ಋತು, ಜ್ಯೇಷ್ಠ ಆಷಾಢ ಗ್ರೀಷ್ಮ ಋತು ಎಂದು ನಮ್ಮ ಋತುಗಳನ್ನು ಲೆಕ್ಕ ಹಾಕುವುದು ವಾಡಿಕೆ. ಇವುಗಳ ನಂತರ ಬರುವ ಮಾಸವೇ ಶ್ರಾವಣ ಮಾಸ. ಶ್ರಾವಣದೊಂದಿಗೆ ವರ್ಷ ಋತು ಪ್ರವೇಶಿಸುತ್ತದೆ. ಹೀಗಾಗಿ ಇದು ವರ್ಷದ ಮೂರನೇ ಋತುವಿನ ಆರಂಭ ಹಾಗೂ ಐದನೇ ಮಾಸದ ಶುರು.
ಇದನ್ನು ವರ್ಷ ಋತುವೆಂದು ಕರೆದರೂ ನಮ್ಮಲ್ಲಿ ಗ್ರೀಷ್ಮದಿಂದಲೇ (ಜೂನ್, ಜುಲೈ) ಮುಂಗಾರು ಆರಂಭವಾಗಿರುತ್ತದೆ. ಶ್ರಾವಣದ ಹೊತ್ತಿಗೆ ಜೂನ್ ಜುಲೈ ತಿಂಗಳುಗಳ ಅಬ್ಬರ ಮಳೆಯ ಅಬ್ಬರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ, ಒಂದು ಬಗೆಯ ನೆಮ್ಮದಿ ನೆಲೆಸಿರುತ್ತದೆ. ಈ ವರ್ಷದ ಮಳೆ ಹೇಗಿದೆ ಎಂದು ಗೊತ್ತಾಗಿರುತ್ತದೆ. ಹೀಗಾಗಿ ಕೃಷಿ ಚಟುವಟಿಕೆಗಳು ಮೈದುಂಬಿಕೊಂಡು, ಒಂದು ಹಂತದ ಬಿತ್ತನೆ ನಾಟಿಗಳು ಮುಗಿದಿರುತ್ತವೆ. ಇದರಿಂದ ರೈತಾಪಿ ಜನಗಳಿಗೆ ಕೂಡ ತುಸು ವಿಶ್ರಾಂತಿ ದೊರೆತು, ಸಮಾಜದ ಜನಗಳ ಜೊತೆ ಒಡನಾಡುವ ಹುಮ್ಮಸ್ಸು ಬಂದಿರುತ್ತದೆ.
ಇದೇ ಹಬ್ಬಗಳು ಹೆಚ್ಚಲು ಕೂಡ ಕಾರಣ. ಈ ತಿಂಗಳಲ್ಲೇ ಸಾಲು ಸಾಲು ಧಾರ್ಮಿಕ ಪೂಜೆ, ಹಬ್ಬ-ಹರಿದಿನಗಳು ಬರುತ್ತವೆ. ಒಳ್ಳೆಯ ಕಾರ್ಯಗಳನ್ನು ಆರಂಭಿಸಲು ಈ ತಿಂಗಳು ಹೆಚ್ಚು ಪ್ರಶಸ್ತ ಎಂಬ ನಂಬಿಕೆ. ಆಷಾಢ ಮಾಸದ ಬಳಿಕ ಬರುವ ಹುಣ್ಣಿಮೆಯ ನಂತರ ಶ್ರಾವಣ ನಕ್ಷತ್ರಕ್ಕೆ ಚಂದ್ರನು ಪ್ರವೇಶಿಸುತ್ತಾನೆ. ಹೀಗಾಗಿ ಇದು ಶ್ರಾವಣ. ನಮ್ಮಲ್ಲಿ ಶ್ರವಣ, ಶ್ರಾವಣ ಎಂದರೆ ಆಲಿಸುವುದು ಎಂದೂ ಅರ್ಥವಿದೆ. ಹೀಗಾಗಿ ಈ ಮಾಸದಲ್ಲಿ ಹೆಚ್ಚಾಗಿ ಪುರಾಣ ಪ್ರವಚನಗಳನ್ನು ಆಲಿಸುವ ರೂಢಿ ಕೂಡ ಬೆಳೆದುಬಂದಿದೆ.
ಶ್ರಾವಣ ತಿಂಗಳಲ್ಲಿ ಪ್ರಕೃತಿ ಕೂಡ ಸಾಕಷ್ಟು ಮಳೆ ಕಂಡುದರಿಂದ ಚಿಗುರಿ ನಳನಳಿಸುತ್ತದೆ. ಹೂಗಳೂ ಜಾಸ್ತಿ ಬೆಳೆಯುತ್ತವೆ. ಹೀಗಾಗಿ ಚೂಡಿಪೂಜೆ (ಹೂವಿನ ಪೂಜೆ) ಕೂಡ ನಡೆಯುತ್ತದೆ. ಚೂಡಿಪೂಜೆ, ತುಳಸಿಪೂಜೆಯಿಂದ ಲಕ್ಷ್ಮೀದೇವಿ ಒಲಿಯುತ್ತಾಳೆ ಎಂಬ ನಂಬಿಕೆ ಇದೆ.
ಶಿವನ ಮಾಸ
ಶ್ರಾವಣ ಎಂದರೆ ಶಿವನ ಮಾಸ ಎಂದೇ ನಂಬಿಕೆ. ಶಿವನ ಪೂಜೆ ಆಗ ಶ್ರೇಯಸ್ಕರ. ಅದೇಕೆ? ಇದೇ ಮಾಸದಲ್ಲಿ ಸಮುದ್ರ ಮಥನ ನಡೆಯಿತಂತೆ. ಆಗ ಉದಿಸಿದ ಹಾಲಾಹಲವನ್ನು ಶಿವನು ಕುಡಿದು ಗಂಟಲಲ್ಲಿ ಧರಿಸಿಕೊಂಡು ಲೋಕಕ್ಕೆ ಒಳಿತನ್ನು ಮಾಡಿದ. ಇದೇ ಅಂದು ಆತನ ನೆನೆಯಲು ಕಾರಣ. ಶಿವನಿಗೆ ಅಭಿಷೇಕ ಮಾಡುವುದು ಈ ವಿಷದಿಂದ ಕಾವೇರಿದ ಅವನ ದೇಹವನ್ನು ತಣಿಸಲು. ಶ್ರಾವಣದಲ್ಲಿ ರುದ್ರಾಕ್ಷಿಯ ಹಾರ ಧರಿಸುವುದು ಅತ್ಯಂತ ಶುಭ. ಶ್ರಾವಣ ಸೋಮವಾರದ ವ್ರತ ಮಾಡುವುದು ತುಂಬಾ ಶ್ರೇಷ್ಠ. ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ಮಾಲೆ ಹಿಡಿದು, ಶಿವಪಂಚಾಕ್ಷರಿ ಮಂತ್ರವನ್ನು 108 ಬಾರಿ ಪಠಿಸಿದರೆ ಶುಭ.
ಇದನ್ನೂ ಓದಿ: Guru Sandesha | ಸ್ವಸ್ಥ ಜೀವನ-ಸ್ವಾಸ್ಥ್ಯ ಸಮಾಜಕ್ಕೆ ಪಂಚ ‘ಆ’ಕರಗಳು!
ಮಹಾವಿಷ್ಣುವಿಗೂ ವಂದನೆ
ಶ್ರಾವಣ ಸೋಮವಾರಗಳಂದು ಪರಶಿವನನ್ನು ಆರಾಧಿಸಿದರೆ, ಗುರುವಾರ ಹಾಗೂ ಬುಧವಾರ ಮಹಾವಿಷ್ಣುವನ್ನು ಆರಾಧಿಸಲಾಗುತ್ತದೆ. ಮಂಗಳವಾರ, ಮನೆಯಲ್ಲಿನ ಮಹಿಳೆಯರು ಕುಟುಂಬದ ಸದಸ್ಯರ ಉತ್ತಮ ಆರೋಗ್ಯಕ್ಕಾಗಿ ಗೌರಿ ಪೂಜೆಯನ್ನು ಮಾಡುತ್ತಾರೆ. ಬುಧವಾರ, ಭಗವಾನ್ ವಿಷ್ಣು ಅಥವಾ ಕೃಷ್ಣನ ಇನ್ನೊಂದು ಅವತಾರವಾದ ವಿಠಲನನ್ನು ಆರಾಧಿಸುತ್ತಾರೆ. ಶ್ರಾವಣ ಮಾಸದ ಗುರುವಾರದಂದು ಬುಧ ಮತ್ತು ಗುರುವನ್ನು ಪೂಜಿಸುತ್ತಾರೆ. ಶುಕ್ರವಾರದಂದು ಲಕ್ಷ್ಮಿ ಮತ್ತು ತುಳಸಿಯನ್ನು ಪೂಜಿಸುತ್ತಾರೆ. ಶ್ರಾವಣ ಶನಿವಾರ ಅಥವಾ ಸಂಪತ್ ಶನಿವಾರದಂದು ಶನೀಶ್ವರನನ್ನು ಆರಾಧಿಸುತ್ತಾರೆ.
ಶ್ರಾವಣದ ಹಬ್ಬಗಳು
ಶ್ರಾವಣದಲ್ಲಿ ಸಾಲು ಸಾಲಾಗಿ ಬರುವ ಹಬ್ಬಗಳು ಹೀಗಿವೆ- ನಾಗಚೌತಿ, ನಾಗಪಂಚಮಿ, ಪುತ್ರದಾ ಏಕಾದಶಿ, ರಕ್ಷಾಬಂಧನ, ಗುರು ಆರಾಧನೆ, ಗೋಕುಲಾಷ್ಟಮಿ, ಅಜ ಏಕಾದಶಿ, ಕಲ್ಕಿ ಜಯಂತಿ, ವರಮಹಾಕ್ಷ್ಮೀ ಪೂಜೆ, ಮಂಗಳಗೌರಿ ವ್ರತ, ಶ್ರಾವಣ ಶನಿವಾರ, ಋಗ್ಉಪಾಕರ್ಮ, ಯಜುರುಪಾಕರ್ಮ, ಸಿರಿಯಾಳ ಷಷ್ಠೀ, ವಾಮನ ಜಯಂತಿ, ಶ್ರೀ ಕೃಷ್ಣ ಜನ್ಮಾಷ್ಟಮಿ. ಈ ಹಬ್ಬಗಳಲ್ಲಿ ಕನಿಷ್ಠ ಒಂದನ್ನಾದರೂ ಪ್ರತೀ ಹಿಂದೂ ಕುಟುಂಬ ಆಚರಿಸುತ್ತದೆ. ಸಮಾಜದ ಜನತೆ ಒಟ್ಟಾಗಿ ಬಂಧುಮಿತ್ರರನ್ನು ಭೇಟಿಯಾಗಿ, ಸಿಹಿತಿಂಡಿಗಳನ್ನು ಹಂಚಿಕೊಂಡು, ಮಕ್ಕಳು ಮರಿಗಳೊಂದಿಗೆ ಆಟವಾಡಿ ಖುಷಿಪಡುತ್ತದೆ. ಭಾದ್ರಪದ ಮಾಸದ ಪ್ರವೇಶವಾಗುತ್ತಿದ್ದಂತೆ ಚೌತಿ, ದೀಪಾವಳಿ ಮುಂತಾದ ದೊಡ್ಡ ಹಬ್ಬಗಳಿಗೆ ತೆರೆದುಕೊಳ್ಳಲು ಈ ಹಬ್ಬಗಳು ಮೂಲವಾಗುತ್ತವೆ. ಸಮಾಜದ ಆರ್ಥಿಕತೆ ಸ್ವಲ್ಪಸ್ವಲ್ಪವೇ ಬೆಳೆಯುತ್ತ, ದೀಪಾವಳಿ- ನವರಾತ್ರಿಯ ಹೊತ್ತಿಗೆ ಸಾಮಾಜಿಕ ಬಾಂಧವ್ಯದ ಗಟ್ಟಿ ಬೆಸುಗೆಯೊಂದು ರೂಪುಗೊಳ್ಳುತ್ತದೆ. ಹಬ್ಬದ ಮೂಲ ಆಶಯವೇ ಸಹಬಾಳ್ವೆ. ಇದು ಆರ್ಥಿಕತೆಯ ವಿಸ್ತರಣೆ, ಬೆಳವಣಿಗೆಗೂ ಕಾರಣವಾಗುತ್ತದೆ.
ಇದನ್ನೂ ಓದಿ: Guru Sandesha | ಧ್ಯಾನಕ್ಕೆ ಗಮನ ಕೇಂದ್ರೀಕರಿಸುವ ಅಥವಾ ಏಕಾಗ್ರತೆಯ ಅಗತ್ಯವಿಲ್ಲ!