Site icon Vistara News

Shravana Masa 2023: ಪವಿತ್ರ ಶ್ರಾವಣ ಮಾಸದಲ್ಲಿ ಬರುವ ಸಾಲು ಸಾಲು ಹಬ್ಬಗಳಿವು!

shravana masa puja

ಹಿಂದೂಗಳಿಗೆ ಶ್ರಾವಣ ಮಾಸವೆಂದರೆ (Shravana Masa 2023) ಮಾಸಗಳಲ್ಲೇ ಅತ್ಯಂತ ಶ್ರೇಷ್ಠವೆಂಬ ನಂಬಿಕೆ. ಯಾಕೆಂದರೆ, ಶ್ರಾವಣ ಮಾಸವೆಂದರೆ ಹಬ್ಬಗಳ (festivals of shravana) ಮಾಸ. ಹಿಂದೂಗಳ ಹಲವು ಹಬ್ಬಗಳ (hindu festivals) ಸಾಲು ಸಾಲು ಶ್ರಾವಣ ಮಾಸದಲ್ಲಿಯೇ ಆರಂಭವಾಗುತ್ತದೆ. ಅಷ್ಟೇ ಅಲ್ಲ, ಶ್ರಾವಣ ಮಾಸ ಶಿವನಿಗೆ ಪ್ರಿಯ. ಶಿವನನ್ನು ಮೆಚ್ಚಿಸಲು ಹಲವು ಉಪವಾಸ, ವ್ರತ ಸೇರಿದಂತೆ, ಪೂಜೆ ಪುನಸ್ಕಾರಗಳು ಈ ಮಾಸದಲ್ಲಿ ಸಾಮಾನ್ಯ. ಶಿವನೂ ಕೂಡಾ ತನ್ನ ಭಕ್ತರ ಕೋರಿಕೆಯನ್ನೂ ಈ ಮಾಸದಲ್ಲಿ ಬಹುಬೇಗನೆ ಈಡೇರಿಸುತ್ತಾನೆ ಎಂಬ ನಂಬಿಕೆ ಭಕ್ತರದ್ದು.

ಈ ಬಾರಿಯ ಶ್ರಾವಣ ಮಾಸ ಅತ್ಯಂತ ಪ್ರಾಧಾನ್ಯತೆಯನ್ನು ಪಡೆದಿದೆ. ಕಾರಣ ಇದು ಈ ಬಾರಿ ಅಧಿಕ ಮಾಸದಲ್ಲಿ ಬಂದಿರುವುದು. ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳಷ್ಟೇ ಅಲ್ಲದೆ, ಹಲವು ಬಗೆಯ ವ್ರತಗಳನ್ನೂ ಮಾಡುವುದು ಈ ಮಾಸದ ವಿಶೇಷ. ಶ್ರಾವಣದ ನಾಲ್ಕು ಶನಿವಾರಗಳಲ್ಲಿ ಮಾಡುವ ಸಂಪತ್‌ ಶನಿವಾರ ವ್ರತ, ಶ್ರಾವಣದಲ್ಲಿ ಬರುವ ನಾಲ್ಕು ಅಥವಾ ಐದು ಮಂಗಳವಾರಗಳಲ್ಲಿ ಆಚರಿಸುವ ಮಂಗಳ ಗೌರಿ ವ್ರತ, ಶ್ರಾವಣದ ನಾಲ್ಕು ಸೋಮವಾರಗಳಲ್ಲಿ ಶಿವನನ್ನು ಆರಾಧಿಸುವ ಶ್ರಾವಣ ಸೋಮವಾರ ವ್ರತ, ಶ್ರಾವಣದಲ್ಲಿ ಬರುವ ಬುಧವಾರ ಹಾಗೂ ಗುರುವಾರಗಳಲ್ಲಿ ಮಾಡುವ ಬುಧ ಹಾಗೂ ಬೃಹಸ್ಪತಿಯ ಪೂಜೆ ಹೀಗೆ ಹತ್ತು ಹಲವು ಪೂಜೆ, ವ್ರತ, ಅನುಷ್ಠಾನಗಳನ್ನು ಹಿಂದೂಗಳು ಭಕ್ತಿಯಿಂದ ನಂಬಿಕೆಯಿಂದ ಭಗವಂತನ ನಾಮಸ್ಮರಣೆ ಮಾಡುತ್ತಾ ಮಾಡುತ್ತಾರೆ. ಬನ್ನಿ, ಈ ವ್ರತಗಳಲ್ಲದೆ, ಎಲ್ಲರೂ ಸಂಭ್ರಮದಿಂದ ಆಚರಿಸುವ  ಶ್ರಾವಣ ಮಾಸದಲ್ಲಿ ಬರುವ ಸಾಲು ಸಾಲು ಹಬ್ಬಗಳು ಹಾಗೂ ಅವುಗಳ ಮಹತ್ವವನ್ನು ತಿಳಿಯೋಣ.

ನಾಗರ ಪಂಚಮಿ: ನಾಗರ ಪಂಚಮಿ (Nagara panchami) ಹಿಂದೂಗಳ ಪಾಲಿನ ದೊಡ್ಡ ಹಬ್ಬಗಳಲ್ಲಿ ಒಂದು. ನಿಜ ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ ಈ ನಾಗರ ಪಂಚಮಿ. ದೇಶದಾದ್ಯಂತ ಹಿಂದೂಗಳು ಸಂಭ್ರಮದಿಂದ ಈ ದಿನದಲ್ಲಿ ನಾಗನ ಕಲ್ಲಿಗೆ ಹಾಲೆರೆದು ನಾಗನನ್ನು ಪೂಜಿಸುವ ಸಂಪ್ರದಾಯವಿದೆ. ಇನ್ನೂ ಹಲವೆಡೆ ಮನೆಯಲ್ಲೇ ಮಣ್ಣಿನಿಂದನಾಗನ ಪ್ರತಿಕೃತಿಯನ್ನು ಮಾಡಿ ಹಾಲೆರೆದು ಪೂಜೆ ಮಾಡುವ ಸಂಪ್ರದಾಯವೂ ಇದೆ. ಸ್ತ್ರೀಯರು ತಮ್ಮ ಮಕ್ಕಳ ಹಾಗೂ ಅಣ್ಣತಮ್ಮಂದಿರ ಶ್ರೇಯಾಭಿವೃದ್ಧಿಯನ್ನು ನಾಗನಲ್ಲಿ ಬೇಡುತ್ತಾರೆ. ಈ ಬಾರಿ ಆಗಸ್ಟ್‌ 21ರಂದು ನಾಗರ ಪಂಚಮಿಯೂ, ಆಗಸ್ಟ್‌ 20ರಂದು ನಾಗಚೌತಿಯೂ ಇದೆ.

raksha-bandhan

ವರಮಹಾಲಕ್ಷ್ಮಿ ಹಬ್ಬ: ಮಹಾಲಕ್ಷ್ಮಿಯನ್ನು ಪೂಜಿಸುವ ಈ ವರ ಮಹಾಲಕ್ಷ್ಮಿ ಹಬ್ಬವನ್ನು (Varamahalakshmi festival) ಎಲ್ಲೆಡೆಗೆ ಹೆಂಗಳೆಯರು ಭಕ್ತಿಯಿಂದ ಆಚರಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಇದರ ಆಚರಣೆ ಹೆಚ್ಚು. ಈ ಹಬ್ಬದಲ್ಲಿ ಕಲಶದಲ್ಲಿ ಅಥವಾ ಚಿತ್ರದಲ್ಲಿ ಲಕ್ಷ್ಮಿಯ ಆವಾಹನೆಯನ್ನು ಮಾಡಿಕೊಂಡು ಷೋಡಶೋಪಚಾರ ಪೂಜೆಯನ್ನು ಮಾಡಲಾಗುತ್ತದೆ. ಶ್ರಾವಣದ ಹುಣ್ಣಿಮೆಯ ಸಮೀಪದಲ್ಲಿಯೇ ಬರುವಂಥ ಈ ಮಹಾಲಕ್ಷ್ಮಿಹಬ್ಬ ಹೆಂಗಳೆಯರಿಗೆ ಅತಿ ಸಂಭ್ರಮದ ಹಬ್ಬ. ಮುತ್ತೈದೆಯರಿಗೆ ಬಾಗಿನ ಕೊಡುವ ಮೂಲಕ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ನಾರಾಯಣನ ಸಮೇತವಾಗಿ ಲಕ್ಷ್ಮಿಗೆ ಪೂಜೆ ಮಾಡುವುದು ಈ ಹಬ್ಬದ ಇನ್ನೊಂದು ವಿಶೇಷ. ಈ ಬಾರಿ ವರಮಹಾಲಕ್ಷ್ಮಿ ಹಬ್ಬವು ಆಗಸ್ಟ್‌ 25ರಂದು ಬರುತ್ತದೆ.

ಓಣಂ (Onam): ಕೇರಳಿಗರ ಮುಖ್ಯ ಹಬ್ಬ. ಹೂವಿನ ರಂಗೋಲಿ ಹಾಕಿ ಬಗೆಬಗೆಯ ಭಕ್ಷ್ಯಗಳನ್ನು ಮಾಡಿ, ಆಪ್ತರಲ್ಲಿ ಹಂಚಿಕೊಂಡು ವಿಶೇಷವಾಗಿ ಓಣಂ ಆಚರಿಸಲಾಗುತ್ತದೆ. ಕೇರಳಿಗರ ಹಬ್ಬವಾದರೂ ಇದೂ ಕೂಡಾ ಶ್ರಾವಣ ಮಾಸದಲ್ಲಿಯೇ ಬರುವ ಹಬ್ಬವಾಗಿರುವುದು ವಿಶೇಷ. ಆಗಸ್ಟ್‌ 29ರಂದು ಓಣಂ ಈ ಬಾರಿ ಬರಲಿದೆ.

raksha-bandhan

ಯುಜುರುಪಾಕರ್ಮ: ನೂಲ ಹುಣ್ಣಿಮೆ ಎಂದು ಸಾಮಾನ್ಯ ಭಾಷೆಯಲ್ಲಿ ಕರೆಯಲ್ಪಡುವ ಈ ಹಬ್ಬ ಹೊಸ ಜನಿವಾರವನ್ನು ಹಾಕಿಕೊಳ್ಳುವ ಅಂದರೆ ಹಳೆಯದದನ್ನು ತೆಗೆದು ಹೊಸದನ್ನು ಹಾಕಿಕೊಳ್ಳುವ ಪದ್ಧತಿ ಬಹಳ ಸಮುದಾಯಗಳಲ್ಲಿದೆ. ಈ ಬಾರಿ ಆಗಸ್ಟ್‌ 30ರಂದು ಈ ನೂಲಹುಣ್ಣಿಮೆ ಹಬ್ಬವಿದೆ.

ರಕ್ಷಾಬಂಧನ (Rakshabandhan): ಇದು ಅಣ್ಣ ತಂಗಿಯರ ಬಾಂಧವ್ಯವವನ್ನು ಬೆಸೆಯುವ ಹಬ್ಬ. ದೇಶದಾದ್ಯಂತ ಸಂಭ್ರಮ ಸಡಗರಗಳಿಂದ ಆಚರಿಸಲಾಗುತ್ತದೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಈ ಹಬ್ಬವನ್ನು ಇನ್ನಿಲ್ಲದ ಸಂಭ್ರಮದಿಂದ ಆಚರಿಸುತ್ತಾರೆ. ದೂರದೂರುಗಳಲ್ಲಿರುವ ಅಣ್ಣ ತಂಗಿಯರು ಈ ಹಬ್ಬಕ್ಕಾಗಿ ಮನೆಯಲ್ಲಿ ಭೇಟಿಯಾಗಿ ರಾಖಿಯನ್ನು ಕಟ್ಟುವ ಸಿಹಿ ತಿನ್ನಿಸಿ ರಕ್ಷಣೆಯ ಅಭಯ ನೀಡುವ ಭಾಂಧವ್ಯದ ಹಬ್ಬವಿದು. ಕುಟುಂಬ ಪ್ರೀತಿಯನ್ನೂ ಬೆಸೆಯುವ ಹಬ್ಬ. ಆಗಸ್ಟ್‌ 31ಕ್ಕೆ ಈ ಬಾರಿ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ.

raksha-bandhan

ಶ್ರೀಕೃಷ್ಣ ಜನ್ಮಾಷ್ಠಮಿ: ಹಿಂದೂಗಳ ಅತ್ಯಂತ ದೊಡ್ಡ ಹಬ್ಬಗಳ ಪೈಕಿ ಕೃಷ್ಣ ಜನ್ಮಾಷ್ಠಮಿಯೂ (krishna janmashtami) ಒಂದು. ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಜನ್ಮಾಷ್ಠಮಿಯನ್ನು ವಿಜ್ರಂಭಣೆಯಿಂದ ಆಚರಿಸುತ್ತಾರೆ. ರೋಹಿಣಿ ನಕ್ಷತ್ರದಲ್ಲಿ ಶ್ರಾವಣ ಮಾಸದ ಕೃಷ್ಣ ಅಷ್ಠಮಿ ಬುಧವಾರ ಬಂದರೆ ಅದು ಅಪರೂಪದ ಯೋಗವಂತೆ. ಈ ಬಾರಿ ಸೆಪ್ಟೆಂಬರ್‌ 6ರ ಬುಧವಾರ ಕೃಷ್ಣಾಷ್ಠಮಿ ಬಂದಿರುವುದು ವಿಶೇಷ. 

ಇದನ್ನೂ ಓದಿ: Shravana Masa 2023: ಶ್ರಾವಣ ಬಂತು ನಾಡಿಗೆ; ಮನಸು ಹಬ್ಬಗಳ ಕಡೆಗೆ

Exit mobile version