Site icon Vistara News

ಶೃಂಗೇರಿ ಮಠ ಎಂದಿಗೂ ರಾಜಕೀಯ ಮಾಡುವುದಿಲ್ಲ: ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ

shringeri swamiji programme palace ground (2)

ಬೆಂಗಳೂರು: ಶೃಂಗೇರಿ ಮಠವನ್ನು ಧರ್ಮ ಪ್ರಚಾರಕ್ಕಾಗಿ ಶಂಕರ ಭಗವತ್ಪಾದರು ಸ್ಥಾಪನೆ ಮಾಡಿದ್ದಾರೆಯೇ ಹೊರತು ರಾಜಕೀಯ ಮಾಡುವ ಸಲುವಾಗಿ ಅಲ್ಲ. ಅದೇ ಸೂತ್ರವನ್ನು ಇಂದಿಗೂ ಮಠ ಅವಿಚ್ಛಿನ್ನವಾಗಿ ಪಾಲನೆ ಮಾಡಿಕೊಂಡು ಬಂದಿದೆ ಎಂದು ಶೃಂಗೇರಿ ಶಾರದಾ ಪೀಠದ ಕಿರಿಯ ಶ್ರೀಗಳಾದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಭಾನುವಾರ ತಿಳಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ನೆರೆದವರನ್ನುದ್ದೇಶಿಸಿ ಆಶೀರ್ವಚನ ನೀಡಿದರು. ಶಂಕರ ಭಗವತ್ಪಾದರು 1200 ವರ್ಷದ ಹಿಂದೆ ಅವತಾರ ಮಾಡಿ ಲೋಕೋದ್ಧಾರ ಮಾಡಿದರು. ಧರ್ಮದ ಉದ್ಧಾರಕ್ಕಾಗಿ, ಜನರಲ್ಲಿ ಧಾರ್ಮಿಕ ಚೈತನ್ಯವನ್ನು ಹೆಚ್ಚಿಸಲು, ಬೇರೆ ಯಾರೂ ಮಾಡಲು ಸಾಧ್ಯವಾಗದಷ್ಟು ಕಾರ್ಯಗಳನ್ನು ಮಾಡಿದ ಮಹಾಪುರುಷರು ಅವರು.

ವಿಶೇಷವಾಗಿ ಜನರಿಗೆ ಸನ್ಮಾರ್ಗವನ್ನು ಶಂಕರ ಭಗವದ್ಪಾದರು ಉಪದೇಶ ಮಾಡಿದರು. ಭಗವಂತ, ಬೇರೆ ಅವತಾರಗಳಲ್ಲಿ ರಾಕ್ಷಸ ಸಂಹಾರ ಮಾಡುವ ಅವಶ್ಯಕತೆ ಇತ್ತು ಹಾಗಾಗಿ ಅವರು ಆಯುಧಗಳೊಂದಿಗೆ ಬಂದಿದ್ದರು. ಆದರೆ ಭಗವತ್ಪಾದರು ಅವತಾರ ಮಾಡಿದ ಸಮಯದಲ್ಲಿ ಜನರ ಮನಸ್ಸಿನಲ್ಲಿದ್ದ ಅಜ್ಞಾನವೇ ಬಹುದೊಡ್ಡ ರಾಕ್ಷಸ. ಅಜ್ಞಾನ ಹಾಗೂ ಕಾಮ ಕ್ರೋಧಾದಿ ಅಂತಃತ್ರುಗಳಿದ್ದರು. ರಾವಣಾದಿ ಶತೃುಗಳು ಹೊರಗಿನಿಂದ ತೊಂದರೆ ಮಾಡುತ್ತಾರೆ. ಕಾಮ ಕ್ರೋಧಾದಿಗಳು ನಮ್ಮ ಒಳಗಿರುವ ಶತ್ರುಗಳು. ಒಳಗಿರುವ ಶತ್ರುಗಳಿಂದಲೇ ನಮಗೆ ಹೆಚ್ಚು ಕಷ್ಟ. ಇಂತಹ ರಾಕ್ಷಸರನ್ನು ಸಂಹಾರ ಮಾಡುವುದಕ್ಕಾಗಿ ಶಂಕರರು ಅವತಾರ ಮಾಡಿದರು.

ಇಂತಹ ರಾಕ್ಷಸರನ್ನು ಸಂಹಾರ ಮಾಡಲು ಏಕಮಾತ್ರ ಉಪಾಯವೆಂದರೆ ಉಪದೇಶ. ಒಂದು ಅಂಧಕಾರ ಹೋಗಲಾಡಿಸಲು ಪ್ರಕಾಶ ಬೇಕು. ಹಾಗೆಯೇ ಅಜ್ಞಾನ ನಿವಾರಣೆಗಾಗಿ ಏಕಮಾತ್ರ ಸಾಧನ ಎಂದರೆ ಜ್ಞಾನ. ಅಂತಹ ಜ್ಞಾನ ನಮಗೆ ಗುರುವಿನ ಉಪದೇಶದಿಂದ ಪ್ರಾಪ್ತವಾಗುತ್ತದೆ. ಗುರುವಿನ ಉಪದೇಶದಿಂದ ಪ್ರಾಪ್ತವಾದ ಜ್ಞಾನ ಮಾತ್ರವೇ ಸರಿಯಾದ ಜ್ಞಾನ. ನಮ್ಮ ಸ್ವಂತ ಬುದ್ಧಿಯಿಂದ ಏನೇನೋ ತಿಳಿದುಕೊಂಡರೆ ಸರಿಯಾದ ಜ್ಞಾನ ಆಗುವುದಿಲ್ಲ.

shringeri swamiji programme palace ground

ಶಂಕರ ಭಗವತ್ಪಾದರು ಅತ್ಯಂತ ಗಂಭೀರ ವಿಚಾರಗಳನ್ನು ಸಾಮಾನ್ಯ ಜನರಿಗೆ ತಿಳಿಯುವಂತೆ ಹೇಳಿದರು. ಅಂತಹದ್ದರಲ್ಲಿ, ಕೋಂಧಃ? ಎಂದು ಪ್ರಶ್ನೆ ಕೇಳುತ್ತಾರೆ. ಅಂದರೆ ಅಂಧ ಯಾರು? ಎಂದು ಪ್ರಶ್ನೆ. ಕಣ್ಣಿಲ್ಲದವರು ಕುರುಡರು ಎಂಬುದು ಸಾಮಾನ್ಯ ಉತ್ತರ. ಗೊತ್ತಿದ್ದೂ ತಪ್ಪು ಕೆಲಸ ಮಾಡುವವನೇ ಕುರುಡ ಎಂದು ಶಂಕರರು ಉತ್ತರ ನೀಡಿದ್ದಾರೆ. ಗೊತ್ತಿಲ್ಲದೆ ಅನೇಕ ಬಾರಿ ತಪ್ಪಾಗುತ್ತದೆ. ಅಂಥವರಿಗಲ್ಲ. ಇದು ತಪ್ಪು ಎಂದು ತಿಳಿದಿದ್ದೂ ಮಾಡುವವನು ಅಂಧ ಎಂದಿದ್ದಾರೆ. ಹಾಗೆಯೇ ಕಿವುಡ ಎಂದರೆ? ಇನ್ನೊಬ್ಬರು ಹೇಳಿದ ಒಳ್ಳೆಯ ಮಾತುಗಳನ್ನು ಕೇಳುವುದಿಲ್ಲವೋ ಅವನು ಕಿವುಡ. ಎಲ್ಲವೂ ಗೊತ್ತಿದ್ದರೂ ಅದನ್ನು ಹೇಳುವ ಸಂದರ್ಭ ಬಂದರೂ ಯಾರು ಹೇಳುವುದಿಲ್ಲವೋ ಅವನೇ ಮೂಕ. ಇಂತಹ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸಲು, ಧರ್ಮ ಪ್ರಚಾರ ಮಾಡಲು ಶಂಕರರು ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದ್ದಾರೆ.

ಈಗಿನ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿವರೂ ಸೇರಿ ಶೃಂಗೇರಿಯ ಶಾರದಾಪೀಠದಲ್ಲಿ ಇಲ್ಲಿವರೆಗಿನ 36 ಜಗದ್ಗುರುಗಳೂ ಶಂಕರರ ಈ ಆದೇಶವನ್ನು ಪಾಲನೆ ಮಾಡಿಕೊಂಡೇ ಬಂದಿದ್ದಾರೆ. ಇಂತಹ ಕಲಿಯುಗದಲ್ಲಿಯೂ ಹೊರಗಿನ ಯಾವುದೇ ವಿಚಾರಗಳಿಂದ ಬಾಧಿತರಾಗದೆ ಗುರುವಿನ ಸ್ಥಾನದ ಘನತೆಯನ್ನು ನಮ್ಮ ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮಿಗಳು ಉಳಿಸಿಕೊಂಡಿದ್ದಾರೆ. ಶಂಕರರು ಹೇಳಿದ ಮಾತನ್ನು ನಮ್ಮ ಪೀಠ ಆಚರಿಸುತ್ತಿದೆ.

ರಾಜಕೀಯ ಮಾಡಲು ನಮ್ಮ ಪೀಠ ಇಲ್ಲ ಎನ್ನುವುದನ್ನು ನಮ್ಮ ಗುರುಗಳಾದ ಭಾರತೀತೀರ್ಥ ಸ್ವಾಮಿಗಳು ಪಾಲಿಸಿಕೊಂಡು ಬಂದಿದ್ದಾರೆ.ರಾಜಕೀಯ ವಿಚಾರಗಳಿಗೆ ಹೋಗುವುದಿಲ್ಲವಾದ್ಧರಿಂದಲೇ ಎಲ್ಲ ವಿಚಾರಧಾರೆಯ ರಾಜಕಾರಣಿಗಳಿಗೂ ನಮ್ಮ ಗುರುಗಳ ಮೇಲೆ ವಿಶೇಷವಾದ ಗೌರವವಿದೆ. ನಮ್ಮ ಗುರುಗಳ ಬಳಿಗೆ ರಾಜಕಾರಣಿಗಳಾಗಿ ಯಾರೂ ಬರುವುದಿಲ್ಲ. ಈ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್‌, ಸುಧಾಕರ್‌, ಅಶ್ವತ್ಥನಾರಾಯಣ ಬಂದಿದ್ದಾರೆ, ಗುರುಗಳ ಬಳಿಗೆ ದೇವೇಗೌಡರು, ರೇವಣ್ಣ ಅವರೂ ಬರುತ್ತಾರೆ. ಅವರಾರೂ ರಾಜಕಾರಣಿಗಳಾಗಿ ಅಲ್ಲದೆ, ಭಕ್ತರಾಗಿ ಆಗಮಿಸುತ್ತಾರೆ. ಇಂತಹ ವಿಶೇಷ ಸಂಪ್ರದಾಯವನ್ನು ಅವಿಚ್ಛಿನ್ನವಾಗಿ ನಮ್ಮ ಶಾರದಾಪೀಠದಲ್ಲಿ ಪಾಲನೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಸ್ವಾಮೀಜಿ ತಿಳಿಸಿದರು.

ಐಟಿಬಿಟಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಮಾತನಾಡಿ, ಮುಂದಿನ 25 ವರ್ಷಗಳಲ್ಲಿ ಕರ್ನಾಟಕವು ಪರಿಪೂರ್ಣ ವಿಕಸನ ಕಾಣಲಿದ್ದು, ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತ ಸ್ಥಾನಮಾನ ಗಳಿಸಲಿದೆ. ಇದಕ್ಕೆ ಶೃಂಗೇರಿ ಶಾರದಾ ಪೀಠದ ಹಿರಿಯ ಮತ್ತು ಕಿರಿಯ ಶ್ರೀಗಳ ಸಂಪೂರ್ಣ ಆಶೀರ್ವಾದ ಮತ್ತು ಮಾರ್ಗದರ್ಶನ ಇದೆ. ಶಾರದಾ ಪೀಠವು ಆದಿಶಂಕರಾಚಾರ್ಯರ ಅದ್ವೈತ ಪರಂಪರೆಗೆ ನೇರವಾಗಿ ಸೇರಿದೆ. ಇಲ್ಲಿಯ ಗುರುಗಳು ತಮ್ಮ ಆಧ್ಯಾತ್ಮಿಕ ಅರಿವಿನ ಬಲದಿಂದ ದೇಶದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುತ್ತ ಬಂದಿದ್ದಾರೆ. ಶಂಕರಾಚಾರ್ಯರ ಪರಂಪರೆಯು nಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬರುವಲ್ಲಿ ನಿರ್ಣಾಯಕ ಪಾತ್ರ ವಹಿಸಿಕೊಂಡು ಬಂದಿದೆ ಎಂದು ಹೇಳಿದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಮಾತನಾಡಿ, ನಮ್ಮ ಪರಂಪರೆಯಲ್ಲಿ ತಂದೆ, ತಾಯಿ, ಗುರು ಹಾಗೂ ಅತಿಥಿಗಳನ್ನು ದೇವರು ಎಂದು ತಿಳಿದಿದ್ದೇವೆ. ಅಂತಹ ಉದಾತ್ತ ಸಂಸ್ಕೃತಿ ನಮ್ಮದು. ಇದು ಯುಗ ಯುಗಗಳಿಂದಲೂ ನಡೆದುಕೊಂಡು ಬರುತ್ತಿದೆ. ಸಾವಿರಾರು ವರ್ಷಗಳಿಂದ ನಮ್ಮ ಸನಾತನ ಧರ್ಮ ಆಚರಣೆಯಲ್ಲಿದೆ. ಇಂತಹ ಪರಂಪರೆಗೆ ಶೃಂಗೇರಿ ಮಠ ಸೇರಿದೆ. ಸಾಕ್ಷಾಂತ್‌ ಶಂಕರರ ಅವತಾರವೇ ಆದ ಶಂಕರರು ದೇಶಾದ್ಯಂತ ಸಂಚರಿಸಿ ಹಿಂದು ಧರ್ಮವನ್ನು ಬಲಿಷ್ಠಗೊಳಿಸಿದ್ದಾರೆ. ಇಂದು ದೇಶದಲ್ಲಿ ಹಿಂದು ಧರ್ಮ ಬಲಿಷ್ಠವಾಗಿರಲು ಆಚಾರ್ಯ ಶಂಕರರು ಕಾರಣ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಇಂತಹ ಕಾರ್ಯಕ್ರಮಗಳಲ್ಲಿ ನಮ್ಮಂತಹ ರಾಜಕಾರಣಿಗಳನ್ನು ದೂರ ಇಡುವುದು ಒಳ್ಳೆಯದು. ಧರ್ಮ ಉಳಿಯಬೇಕು. ಈ ದೇಶದ ಆಸ್ತಿಯೇ ನಮ್ಮ ಸಂಸ್ಕೃತಿ. ಬೆಂಗಳೂರು ನಗರದಲ್ಲಿ ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಧನ್ಯವಾದಗಳು. ಭಗವಂತ ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ಅವಕಾಶವನ್ನು ಮಾತ್ರ ಕೊಡುತ್ತಾರೆ. ಅಂತಹ ಅವಕಾಶ ಸಿಕ್ಕಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು. ನಮ್ಮನ್ನು ಮೇಲೆ ಕರೆಯಬೇಡಿ, ಕೆಳಗಿದ್ದರೇ ಒಳ್ಳೆಯದು. ರಾಜಕಾರಣಿಗಳನ್ನು ವೇದಿಕೆಗೆ ಕರೆಯುವುದು ಸಮಾಜಕ್ಕೆ ಒಳ್ಳೆಯದಲ್ಲ ಎಂದು ಮತ್ತೊಮ್ಮೆ ಹೇಳಿದರು.

ಹಿರಿಯ ಪತ್ರಕರ್ತ ಎಚ್‌.ಆರ್‌. ರಂಗನಾಥ್‌ ಮಾತನಾಡಿ, ಗುರು ಮತ್ತು ಸಂಸ್ಕೃತಿಯನ್ನು ಪ್ರಶ್ನೆ ಮಾಡುತ್ತಿರುವ ಸನ್ನಿವೇಷದಲ್ಲಿ ನಾವು ಬದುಕುತ್ತಿದ್ದೇವೆ. ನಾವು ನಂಬಿದ್ದೇ ತಪ್ಪು ಎಂಬ ಭ್ರಮೆಯನ್ನು ನಮ್ಮಲ್ಲೇ ಉಂಟುಮಾಡಲಾಗುತ್ತಿದೆ. ಅದಕ್ಕೆ ರಾಜಕಾರಣ ಕಾರಣವೋ ಗೊತ್ತಿಲ್ಲ. ರಾಜಕಾರಣಿಗಳನ್ನು ಇಟ್ಟುಕೊಳ್ಳಬಾರದು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು, ಸರಿ. ಆದರೆ ನಾವು ಯಾರ ಜತೆ ನಿಲ್ಲುತ್ತೇವೆ ಎನ್ನುವುದಕ್ಕಿಂತಲೂ ನಮ್ಮ ಜತೆ ಧರ್ಮ, ಸಂಸ್ಕೃತಿ ನಿಲ್ಲುತ್ತದೆ ಎನ್ನುವುದೇ ಮುಖ್ಯ. ಈ ನಂಬಿಕೆಗಳನ್ನು ಪ್ರಶ್ನೆ ಮಾಡಿ ಬದುಕುತ್ತೇವೆ ಎಂದು ಯಾರಾದರೂ ತಿಳಿದಿದ್ದರೆ ಅದಕ್ಕಿಂತಲೂ ಹೆಚ್ಚಿನ ಭ್ರಮೆ ಇನ್ನೊಂದಿಲ್ಲ.

Exit mobile version