Site icon Vistara News

Shrut Panchami 2023 : ಇಂದು ಶ್ರುತ ಪಂಚಮಿ; ಏನಿದು ಪರ್ವ? ಆಚರಣೆಯ ವಿಶೇಷತೆ ಏನು?

shrut panchami 2023

ಜೈನ ಧರ್ಮ ಆಚರಿಸುವ ಪ್ರಮುಖ ಪರ್ವಗಳಲ್ಲಿ ‘ಶ್ರುತ ಪಂಚಮಿ’ (Shrut Panchami 2023) ಕೂಡ ಒಂದು. ಶ್ರುತ (ಶಾಸ್ತ್ರ) ಎಂದರೆ ತೀರ್ಥಂಕರರು ನೀಡಿದ ವಚನಗಳ ಅನುಸಾರ ರಚನೆಗೊಂಡ ಗ್ರಂಥಗಳು. ಇವು ಲಿಪಿಬದ್ಧವಾಗಿ ಪೂರ್ಣಗೊಂಡ ದಿನವೇ ಜ್ಯೇಷ್ಠ ಶುಕ್ಲ ಪಂಚಮಿ.

 ಜೈನ ಧರ್ಮದ ಪ್ರಕಾರ ನಮ್ಮೆಲ್ಲರ ಜೀವನವು ಸದ್ಗತಿಯನ್ನು ಹೊಂದಬೇಕೆಂದರೆ ‘ಸಮ್ಯಕ್’ ಜ್ಞಾನವನ್ನು ‘ಜೀನೇಂದ್ರವಾಣಿ’ (ಜಿನವಾಣಿ) ಯಿಂದ ಪಡೆಯುವುದರ ಮೂಲಕ ಮಾತ್ರ ಸಾಧ್ಯ. ಸಾಕ್ಷಾತ್ ಜಿನೇಂದ್ರ (ತೀರ್ಥಂಕರ)ಭಗವಂತರಿಂದ ಹೊರಟ ಓಂಕಾರ ಸ್ವರೂಪಿ ದಿವ್ಯಧ್ವನಿಯೇ ‘ಜಿನವಾಣಿ’ಯಾಗಿದೆ. ತತ್ವದ ಸ್ವರೂಪವನ್ನು ಹೇಳುವಂತಹ ಈ ‘ಜಿನವಾಣಿ’ಯು ದ್ವಾದಶಂಗ ಸ್ವರೂಪವಾಗಿರುತ್ತದೆ.

ಜಿನವಾಣಿಗೆ ‘ಆಗಮ’ ಮತ್ತು ‘ಶಾಸ್ತ್ರ’ ಎಂಬ ಪರ್ಯಾಯವಾಚಿ ಶಬ್ದಗಳು ಇವೆ. ಆಚಾರ್ಯ ಪರಂಪರೆಯಿಂದ ಬಂದಂತಹ ಮೂಲ ಸಿದ್ಧಾಂತಗಳಿಗೆ ಆಗಮವೆಂದು ಕರೆಯುತ್ತಾರೆ. ಆಗಮ ಶಬ್ದದಲ್ಲಿ ಕೂಡಿರುವ ಮೂರು ಅಕ್ಷರಗಳ ಅರ್ಥವೇನೆಂದರೆ;
ಆ – ಆಪ್ತರ (ನಿಜವಾದ ದೇವರು) ಮೂಲಕ ಹೇಳಿರುವ
ಗ – ಗಣಧರರಿಂದ ಸಂಗ್ರಹಿಸಿರುವ
ಮ – ಮುನಿಗಳಿಂದ ಬರೆದು ವಿಚಾರಿಸಲ್ಪಟ್ಟು ಚಾರಿತ್ರ (ಆಚರಣೆಗೆ) ದಲ್ಲಿ ತಂದಿರುವುದು

ಶ್ರುತ ಎಂದರೇನು?

ತೀರ್ಥಂಕರರ ಮೂಲಕ ಉಪದೇಶಿಸಿದ, ಗಣಧರರಿಂದ ತಿಳಿಸಲ್ಪಟ್ಟ ಮತ್ತು ಆಚಾರ್ಯರ ಮೂಲಕ ಬರೆಯಲ್ಪಟ್ಟ ಸದ್ ಗ್ರಂಥಗಳನ್ನು ‘ಶಾಸ್ತ್ರ’ ಎಂದು ಕರೆಯುತ್ತಾರೆ. ‘ಶ್ರುತ’ ವೆಂದರೆ ತೀರ್ಥಂಕರರ ಮೂಲಕ ಹೇಳುವ ವಚನಗಳ ಅನುಸಾರ ಗಣಧರ ಮುಂತಾದವರ ಮೂಲಕ ಗ್ರಂಥಗಳ ರಚನೆಯಾಗಿದೆಯೋ ಅದನ್ನು ಶ್ರುತ (ಶಾಸ್ತ್ರ) ವೆನ್ನುತ್ತಾರೆ.

ಶ್ರುತ ದಲ್ಲಿ ಎರಡು ವಿಧಗಳಿವೆ;
1. ದ್ರವ್ಯ ಶ್ರುತ: ಅಕ್ಷರಾತ್ಮಕವಾಗಿರುವ ದ್ವಾದಶಾಂಗವು ‘ದ್ರವ್ಯ ಶ್ರುತ’ ವಾಗಿರುತ್ತದೆ.
2. ಭಾವಶ್ರುತ: ಜಿನೇಂದ್ರವಾಣಿಯನ್ನು ಕೇಳುವ ಮೂಲಕ ಯಾವ ಸ್ವಾನುಭವ ಅಥವಾ ಸ್ವಸಂವೇದನೆ ಜ್ಞಾನವುಂಟಾಗುತ್ತದೆಯೋ ಅದನ್ನು ‘ಭಾವಶ್ರುತ’ವೆನ್ನುತ್ತಾರೆ.

ಶ್ರುತವು ಮತ್ತೆ 2 ಪ್ರಕಾರವಾಗಿದೆ
1. ಅಂಗಪ್ರವಿಷ್ಟ: ಜಿನೇಂದ್ರವಾಣಿಯನ್ನು ಗಣಧರರು ರಚಿಸಿ, ಸೂತ್ರ, ಗ್ರಂಥದ ರೂಪದಲ್ಲಿರುವುದನ್ನು ದ್ವಾದಶಾಂಗ (14 ಪೂರ್ವ ಸಹಿತ) ಶ್ರುತವನ್ನು ಅಂಗಪ್ರವಿಷ್ಟವೆನ್ನುತ್ತಾರೆ.
2. ಅಂಗಬಾಹ್ಯ: ಮಂದಬುದ್ದಿಯಿರುವ ಶಿಷ್ಯರಿಗೆ ಅನುಕೂಲವಾಗಲೆಂದು ವಿಶಿಷ್ಟ ಜ್ಞಾನಿ ಆಚಾರ್ಯರ ಮೂಲಕ ರಚನೆಯಾದ ಶಾಸ್ತ್ರಗಳೇ ಅಂಗಬಾಹ್ಯಗಳು.

ಇದರಲ್ಲಿ ಸಾಮಾಯಿಕಾದಿ 14 ಭೇದಗಳು ಬರುತ್ತವೆ. ಹೀಗೆ ಜಿನೇಂದ್ರವಾಣಿಯು ಜ್ಞಾನದ ಹಸಿವಿರುವವರಿಗೆ ಅಮೃತ ಸಮಾನದಂತೆ ಜ್ಞಾನವನ್ನು ನೀಡುವಂತಹದ್ದಾಗಿದೆ. ಭಗವಾನ್ ಶ್ರೀಮಹಾವೀರರವರ ಉಪದೇಶಿಸಿದ ಆಗಮ ಸೂತ್ರಗಳು ಎಲ್ಲವೂ ಒಂದೆ. ಮೌಕಿಕವಾಗಿಯೇ ತೀಕ್ಷ್ಣಬುದ್ಧಿಯುಳ್ಳ ಸಾಧಕರ ಮೂಲಕ ಜ್ಞಾನಪರಂಪರೆ ಹರಿದು ಬಂದಿತು.

ಭಗವಾನ್ ಶ್ರೀ ಮಹಾವೀರರ ನಂತರ ಸುಮಾರು ಆರುನೂರು ವರ್ಷಗಳವರೆಗೆ ಅಖಂಡವಾಗಿ ಶ್ರುತ ಜ್ಞಾನವು ಸಂರಕ್ಷಿತವಾಗಿ ಬಂದಿತು. ಆಚಾರ್ಯ ಧರಸೇನರ (ಕ್ರಿ. ಶ. 1ರ ಆಸುಪಾಸು) ಕಾಲಕ್ಕೆ ಅದು ಪರಿವರ್ತನೆಯ ಹಾದಿಗೆ ಬಂತು ಎನ್ನುತ್ತದೆ ಇತಿಹಾಸ.

ಲಿಪಿ ಬದ್ಧವಾದ ಆಗಮ ಆಚಾರ್ಯ ಧರಸೇನರ ಸಮಯಕ್ಕೆ ಮನುಷ್ಯರ ಬುದ್ಧಿ ಮತ್ತೆಯಲ್ಲಿ ಕುಂಠಿತವಾಯಿತು. ತೀಕ್ಷ್ಣ ಬುದ್ಧಿಯ ಶಿಷ್ಯರ ಕೊರತೆ ಬಂದಾಗ, ಆಗಮವನ್ನು ಲಿಪಿಬದ್ಧಗೊಳಿಸಲು ಚಿಂತಿಸಿದರು. ಅಂತೆಯೇ ನಾನಾ ಪರೀಕ್ಷೆಗಳನ್ನು ಮಾಡಿ ಭೂತಬಲಿ ಮತ್ತು ಪುಷ್ಪದಂತ ಮುನಿಗಳಿಗೆ ಆಗಮ ಸೂತ್ರಗಳನ್ನು ಹೇಳುವ ಮೂಲಕ ಅದನ್ನು ಲಿಪಿಬದ್ಧ ಮಾಡಿಸಿದರು.

ದ್ವಾದಶಾಂಗವು ಲಿಪಿಬದ್ಧವಾಗಿ ‘ಶಾಸ್ತ್ರ ’ ರೂಪಧರಿಸಿತ್ತು. ನಂತರದ ವರ್ಷಗಳಲ್ಲಿ ಆ ಷಟ್‌ ಖಂಡಾಗಮ ಸೂತ್ರಗಳಿಗೆ ಟೀಕಾ ಗ್ರಂಥಗಳ ರಚನೆಯಾದವು. ಹೀಗೆ ಆಗಮ ಸೂತ್ರಗಳು ಲಿಪಿಬದ್ಧವಾಗಿ ಪೂರ್ಣಗೊಂಡ ದಿನವೇ ಜ್ಯೇಷ್ಠ ಶುಕ್ಲ ಪಂಚಮಿ. ಅದನ್ನೇ ‘ಶ್ರುತಪಂಚಮಿ’ ಪರ್ವ ವೆಂದು ಕರೆಯುತ್ತಾರೆ. ಈ ಪರಮಾಗಮ ಗ್ರಂಥವು ಪ್ರಾಕೃತ ಭಾಷೆಯಲ್ಲಿದೆ.

ಇದು ಉಪಕಾರ ದಿವಸ

ಪೂರ್ವಾಚಾರ್ಯರ ಪರೋಪಕಾರ ಇಂದು ನಾವೇನಾದರೂ ಜಿನಧರ್ಮದಲ್ಲಿ ಆಸಕ್ತಿಯಿಟ್ಟು ಶಾಸ್ತ್ರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆಯೆಂದರೆ ಅದು ಪೂರ್ವಾಚಾರ್ಯರ ಪರೋಪಕಾರವಾಗಿದೆ. ಈ ಸಂಸಾರದಲ್ಲಿ ಪ್ರಸ್ತುತ ಭರತ ಭೂಮಿಯಿಂದ ಮುಕ್ತಿ ಲಭ್ಯವಿಲ್ಲವೆಂದು ಶಾಸ್ತ್ರದಲ್ಲಿ ಹೇಳಿದ್ದರೂ ಮುಂದಿನ ಸದ್ಗತಿಗೆ ಬೇಕಾಗುವ ಉಪಾಯವನ್ನು ಈ ಆಗಮ ಗ್ರಂಥಗಳು ತಿಳಿಸುತ್ತವೆ. ಆಚಾರ್ಯರ ಉಪಕಾರ ಮರೆಯಲು ಅಸಾಧ್ಯ, ಈ ದಿನವನ್ನು ‘ಉಪಕಾರ ದಿವಸ’ ವೆಂದು ಕರೆದರೂ ತಪ್ಪಾಗಲಾರದು.

ನಮ್ಮ ಅಜ್ಞಾನವನ್ನು ತೊರೆಯಲು, ಈ ಆಗಮ ಜ್ಞಾನದಿಂದ ಸಾಧ್ಯವಿದೆ. ಒಳ್ಳೆಯ ಸಂಸ್ಕಾರವಂತರಾಗಿ ಜೀವನವನ್ನು ಸದಾಚಾರ, ಸದ್ವಿಚಾರಗಳೊಂದಿಗೆ ಬದುಕುವ ಅಭ್ಯಾಸ ನಮ್ಮದಾಗಲಿ ಎಂಬ ಆಶಯ ಈ ʼಶ್ರುತ ಪಂಚಮಿʼ ಯದ್ದು.

ಇದನ್ನೂ ಓದಿ: Prerane : ಸ್ಮೃತಿ, ವಿಸ್ಮೃತಿ, ಸಂಸ್ಕೃತಿ; ಇವುಗಳ ನಡುವಿನ ಸಂಬಂಧವೇನು?

Exit mobile version