Site icon Vistara News

Siddheshwar Swamiji | ವೈಕುಂಠ ಏಕಾದಶಿಯ ಪುಣ್ಯದಿನದಂದೇ ದೇಹ ತ್ಯಜಿಸಿದ ಪುಣ್ಯ ಜೀವಿ

Siddheshwar Swamiji

ಬೆಂಗಳೂರು: ಸಿದಾ-ಸಾದಾ, ಸರಳ, ಸುಂದರ ಅಧ್ಯಾತ್ಮಿಕ ಜೀವನದ ಮೂಲಕ ಜನಮನದ ಮೇಲೆ ಗಾಢ ಪ್ರಭಾವ ಬೀರಿದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ (Siddheshwar Swamiji) ಉಪನ್ಯಾಸ, ಅಂಕಣ ಮತ್ತು ಕೃತಿಗಳ ಮೂಲಕ ಅಸಂಖ್ಯಾತ ಜನರ ಮನಸ್ಸಿಗೆ ಸಾಂತ್ವನ ನೀಡಿದ ಮಹಾ ಗುರು.

ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಅಪ್ಪಟ ಶಿಷ್ಯರಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶುಕ್ರವಾರ ಸಂಜೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಗದ್ದುಗೆಗೆ ತೆರಳಿ ಸುಮಾರು 15ನಿಮಿಷ ಧ್ಯಾನ ಮಾಡಿದ್ದರು. ಆಶ್ರಮದ ಸಿಬ್ಬಂದಿ ನೀಡಿದ ಮಾಹಿತಿ ಪ್ರಕಾರ, ನನ್ನ ಗುರುಗಳೂ ನನ್ನಷ್ಟೇ ವರ್ಷ ಬದುಕಿದ್ದರು. “ನನಗಿನ್ನ ಈ ಬದುಕು ಸಾಕುʼʼ ಎಂದು ಬಿಟ್ಟಿದ್ದರು. ಅಲ್ಲಿಂದ ಅವರು ಆಹಾರ ಸೇವನೆಯನ್ನು ಸ್ಥಗಿತಗೊಳಿಸಿದ್ದರು.

ಆದರೆ ಭಕ್ತರ ಪ್ರೀತಿ ಅವರನ್ನು ಜಗ್ಗುತ್ತಿತ್ತು. ಪೂಜ್ಯರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಶ್ರಮಕ್ಕೆ ಆಗಮಿಸುತ್ತಿದ್ದರು. ಆಗೆಲ್ಲಾ ಅವರಿಗೆ ದರ್ಶನ ನೀಡಲು ತವಕಿಸುತ್ತಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ತಮ್ಮ ಅನಾರೋಗ್ಯವನ್ನೂ ಲೆಕ್ಕಕ್ಕಿಟ್ಟುಕೊಳ್ಳುತ್ತಿರಲಿಲ್ಲ. ಅವರ ಹಟಕ್ಕೆ ಮಣಿದು ಭಕ್ತರಿಗೆ ದರ್ಶನ ನೀಡಲಾಗುತ್ತಿತ್ತು. ಆದರೆ ಬರಬರುತ್ತಾ ಅವರ ದೇಹ ಅವರಿಗೇ ಸಹಕರಿಸುತ್ತಿರಲಿಲ್ಲ.

ಒಂದಿಷ್ಟು ಸಮಯ ಪ್ರಜ್ಞೆ ತಪ್ಪುತ್ತಿದ್ದರು. ಮತ್ತೆ ಚೇತರಿಸಿಕೊಳ್ಳುತ್ತಿದ್ದರು. ಕೃತಕ ಆಮ್ಲಜನಕದ ಪೂರೈಸಲಾಗುತ್ತಿದ್ದರೂ, ಅದನ್ನು ನಿರಾಕರಿಸುತ್ತಿದ್ದರು. ತಾವು ಅಂದುಕೊಂಡಂತೆ ಅವರು ವೈಕುಂಠ ಏಕಾದಶಿಯ ಪುಣ್ಯ ದಿನದಂದು ದೇಹ ತ್ಯಾಗ ಮಾಡಿದ್ದಾರೆ.

ಸುರರನ್ನು ಚಿರಂಜೀವಿಯಾಗಿಸಿದ ಅಮೃತ ಹೊರಬಂದದ್ದು ವೈಕುಂಠ ಏಕಾದಶಿಯಂದೇ ಎಂದು ಪುರಾಣಗಳು ಹೇಳುತ್ತವೆ. ‘ದಾರಿ ಯಾವುದಯ್ಯಾ ವೈಕುಂಠಕೆ?’ ಎಂದರೆ ಆಸ್ತಿಕರು ವೈಕುಂಠ ಏಕಾದಶಿಯತ್ತ ಕೈ ತೋರಿಸುತ್ತಾರೆ. ಶುಕ್ಲ ಏಕಾದಶಿ, ಮುಕ್ಕೋಟಿ ಏಕಾದಶಿ ಎನ್ನುವ ಹೆಸರುಗಳೂ ವೈಕುಂಠ ಏಕಾದಶಿಗೆ ಇವೆ. ಇಂದು ನಿಧನರಾದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇಂತಹ ಪುಣ್ಯದಿನದಂದು ಶ್ರೀಗಳು ದೇಹ ತ್ಯಜಿಸಿದ್ದಾರೆ. ಹೀಗೆ ಅಂದುಕೊಂಡಿದ್ದನ್ನು ಸಾಧಿಸುವುದು ಸಾಧಕರಿಂದ ಮಾತ್ರ ಸಾಧ್ಯ.

ಕಳೆದ ಜನವರಿಯಲ್ಲಿ ಬೆಳಗಾವಿ ಜಿಲ್ಲೆಯ ಭಕ್ತರ ತೋಟದ ಮನೆಯ ಬಾತ್‌ರೂಮ್‌ನಲ್ಲಿ ಜಾರಿ ಬಿದ್ದು, ಕಾಲಿಗೆ ಪೆಟ್ಟುಮಾಡಿಕೊಂಡಿದ್ದ ಶ್ರೀ ಪೂಜ್ಯರ ಆರೋಗ್ಯ ಸುಧಾರಿಸಿತ್ತು. ಆದರೆ ಮತ್ತೆ ಜಾರಿ ಬಿದ್ದ ಘಟನೆಯಿಂದ ಅವರ ದೈಹಿಕ ಸಾಮರ್ಥ್ಯ ಕಡಿಮೆಯಾಗುತ್ತಾ ಬಂದಿತ್ತು. “ತಮ್ಮ ದೇಹಕ್ಕೆ ತಾವೇ ಚಿಕಿತ್ಸೆ ಕೊಡುತ್ತೇವೆʼʼ ಎಂದು ಅವರು ಸ್ವಯಂ ನಿಯಂತ್ರಣಗಳ ಮೂಲಕ ಆರೋಗ್ಯವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದರು. ಆಸ್ಪತ್ರೆ, ಔಷಧಿ-ಮಾತ್ರೆಗಳನ್ನು ಒಂಚೂರು ಇಷ್ಟಪಡುತ್ತಿರಲಿಲ್ಲ. ಹೀಗಾಗಿಯೇ ಎಲ್ಲರೀತಿಯ ಚಿಕಿತ್ಸೆಗಳಿಂದಲೂ ದೂರವಾಗಿದ್ದರು.

ಮೊನ್ನೆ ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಅತ್ಯುತ್ತಮ ಚಿಕಿತ್ಸೆ ಕೊಡಿಸೋಣ ಎಂದಾಗ, ಕೈಮುಗಿದು ಬೇಡ ಎಂದ ಈ ಸಂತ ಮನಸ್ಸಿನಲ್ಲಿ ಬೇರೆಯೇ ನಿರ್ಧಾರ ಮಾಡಿದಂತಿತ್ತು. ಅನ್ನಾ-ನೀರು ಬಿಟ್ಟು ತಾವಂದುಕೊಂಡಿದ್ದನ್ನು ಸಾಧಿಸಿದರು. ಮರಣದಲ್ಲಿಯೂ ಮಹಾತ್ಮರೆನಿಸಿದರು.

ಇದನ್ನೂ ಓದಿ | Siddheshwar swamiji | ನಾಲ್ಕನೇ ತರಗತಿಯಲ್ಲಿರುವಾಗಲೇ ಶ್ರೀ ಮಲ್ಲಿಕಾರ್ಜುನ ಶ್ರೀಗಳ ಶಿಷ್ಯತ್ವ, ಬಹುಭಾಷಾ ಪಾರಂಗತ

Exit mobile version