Site icon Vistara News

Solar Eclipse 2022 | ಗ್ರಹಣದ ದಿನ ಏನೆಲ್ಲಾ ಮಾಡಬಾರದು? ಆಹಾರ ಸೇವನೆ ಎಷ್ಟು ಹೊತ್ತಿಗೆ? ಮಾಹಿತಿ ಇಲ್ಲಿದೆ

Solar Eclipse 2022

ಆಶ್ವಯುಜ ಮಾಸ ಕೃಷ್ಣ ಪಕ್ಷದ ಅಮಾವಾಸ್ಯೆ ಅಂದರೆ ಅಕ್ಟೋಬರ್‌ 25 ರಂದು ಕೇತುಗ್ರಸ್ತ ಸೂರ್ಯಗ್ರಹಹಣ (Solar Eclipse 2022) ಸಂಭವಿಸಲಿದೆ. ಈ ಗ್ರಹಣದ ಸಂದರ್ಭದಲ್ಲಿ ಏನೆಲ್ಲಾ ಮಾಡಬಾರದು, ಏನೇನು ಮಾಡಬೇಕು? ಆಹಾರ ಸೇವನೆ ಎಷ್ಟು ಹೊತ್ತಿಗೆ ಎಂಬ ಮಾಹಿತಿ ಇಲ್ಲಿದೆ.

1. ಗ್ರಹಣದ ಆರಂಭ ಅಂತ್ಯಗಳಲ್ಲಿ ಸ್ನಾನವನ್ನು ಮಾಡಬೇಕು. ಗ್ರಹಣದ ಎರಡೂ ಸ್ನಾನಗಳಲ್ಲಿ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.

2. ಗ್ರಹಣ ಸ್ಪರ್ಶಕಾಲದಿಂದ ಹಿಡಿದು ಮೋಕ್ಷಕಾಲದವರೆಗೆ ಯಾವ ವಸ್ತುವಿನ ಸಂಪರ್ಕವನ್ನು ಮಾಡದೇ, ಉಟ್ಟ ಬಟ್ಟೆಯೊಂದಿಗೆ ಸ್ನಾನವನ್ನು ಮಾಡಿ, ಗಾಯತ್ರೀಜಪ, ದೇವರ ಪೂಜೆ, ವಿಷ್ಣು ಸಹಸ್ರನಾಮ ಸ್ತ್ರೋತ್ರ ಮುಂತಾದ ಸ್ತ್ರೋತ್ರಗಳನ್ನು ಪಾರಾಯಣ ಮಾಡಬೇಕು. ಗ್ರಹಣ ಕಾಲದಲ್ಲಿ ಇಷ್ಟಮಂತ್ರ, ಸ್ತ್ರೋತ್ರ, ನಾಮಜಪ, ಧನ್ಯಾ, ಕುಲದೇವರುಗಳ ಪೂಜೆ ಇವೆಲ್ಲವೂ ಅತ್ಯಧಿಕ ಫಲ ನೀಡುತ್ತವೆ.

3. ಸೂರ್ಯ ಗ್ರಹಣದ ಸೂತಕವು ಗ್ರಹಣ ಸ್ಪರ್ಶಕ್ಕಿಂತ ನಾಲ್ಕು ಯಾಮ ಅಂದರೆ ಹನ್ನೆರಡು ಗಂಟೆಗಳ ಮೊದಲು ಆರಂಭವಾಗುತ್ತದೆ. ಗ್ರಹಣ ಮೋಕ್ಷ ಕಾಲದ ನಂತರ ಮಾಡುವ ಸ್ನಾನದ ನಂತರ ಸೂತಕ ಮುಕ್ತಾಯವಾಗುತ್ತದೆ. ಆದರೆ ಈ ಬಾರಿ “ಗ್ರಸ್ತಾಸ್ತʼ ಸೂರ್ಯಗ್ರಹಣ ಸಂಭವಿಸುತ್ತಿರುವುದರಿಂದ ಮಾರನೇ ದಿನ ಅಂದರೆ ಬುಧವಾರ ಸೂರ್ಯೋದಯದ ನಂತರ ಸಂಪೂರ್ಣ ಸೂತಕ ಕಳೆಯುತ್ತದೆ.

4. ಮಂಗಳವಾರ ಸಂಜೆ ಸೂರ್ಯಾಸ್ತವಾದ ನಂತರ ಸ್ನಾನ ಮಾಡಬೇಕು. ಆದರೆ ಆಹಾರ ಸೇವಿಸಬಾರದು. ಹಾಸಿಗೆ ಬಟ್ಟೆಗಳನ್ನು ಮುಟ್ಟಲು ದೋಷವಿರುವುದಿಲ್ಲ.

5. ಬಾಲಕರು, ವೃದ್ಧರು, ಗರ್ಭಿಣಿಯರು, ಅಶಕ್ತರು, ಅನಾರೋಗ್ಯ ಪೀಡಿತರು ಮೊದಲಾದವರು ಮಧ್ಯಾಹ್ನ 2 ಗಂಟೆವರೆಗೆ ಲಘು ಉಪಹಾರವನ್ನು ಮಾಡಬಹುದು ಮತ್ತು ಗ್ರಹಣ ಬಿಟ್ಟ ಮೇಲೆ ಅಂದರೆ ಸೂರ್ಯಾಸ್ತವಾದ ಮೇಲೆ ಸ್ನಾನವನ್ನು ಮಾಡಿ ಲಘು ಉಪವಾರ ಮಾಡಬಹುದು.

6. ಈ ಗ್ರಹಣವು ಹಿಡಿದಿರುವಾಲೇ ಸೂರ್ಯನು ಅಸ್ತನಾಗುತ್ತಿರುವುದರಿಂದ ಮರುದಿನ ಅಂದರೆ ಬುಧವಾರ ಬೆಳಗ್ಗೆ ಸೂರ್ಯನ ಶುದ್ಧಬಿಂಬವನ್ನು ನೋಡಿ, ಸ್ನಾನ ಮಾಡಿ ಜಪ, ಪೂಜೆ, ಅಡುಗೆ ನೈವೇದ್ಯಾದಿಗಳನ್ನು ಮಾಡಿ, ಭೋಜನ ಮಾಡಬೇಕು.

7. ಗ್ರಹಣ ಕಾಲದಲ್ಲಿ ಯಾರೂ ಯಾವುದೇ ದ್ರವ ಅಹಾರವಾಗಲಿ ಅಥವಾ ಘನ ಆಹಾರವಾಗಲಿ ಸ್ವೀಕರಿಸಬಾರದು. ‌ ‌

8. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟ ಆಹಾರವನ್ನು ಸೇವಿಸಬಾರದು. ‌

9. ಗ್ರಹಣ ಕಾಲದಲ್ಲಿ ದೇವಾಲಯ ಅಥವಾ ಪುಣ್ಯ ಸ್ಥಳಗಳಿಗೆ ಭೇಟಿ ನೀಡಬಾರದು ಹಾಗೂ ದೇವರ ಮೂರ್ತಿಗಳ ಸ್ಪರ್ಶವನ್ನು ಮಾಡಬಾರದು.

10. ಗ್ರಹಣ ಕಾಲದಲ್ಲಿ ಶೌಚಾಲಯದ ಬಳಕೆಯನ್ನು ಮಾಡಬಾರದು. ತೀರಾ ಅನಿವಾರ್ಯವಾದರೆ ಮಾತ್ರ ಮಾಡಬೇಕು.

11. ಗ್ರಹಣ ಹಿಡಿದ ಕಾಲದಲ್ಲಿ ಮೈಥುನ ನಿಷಿದ್ಧ ಹಾಗೂ ಅಲಂಕಾರ ಮಾಡಿಕೊಳ್ಳಬಾರದು. ‌

12. ‌ “ಸರ್ವೇಷಾಮೇವ ವರ್ಣಾನಾಂ ಸೂತಕಂ ರಾಹುಸೂತಕೇ” ಎಲ್ಲಾ ವರ್ಣದವರೂ ಗ್ರಹಣ ಕಾಲದಲ್ಲಿ ಮೈಲಿಗೆಯನ್ನು ಆಚರಿಸಬೇಕು.

13. ಗ್ರಹಣ ಸ್ನಾನವಾದ ನಂತರ ಪವಿತ್ರ ಗಂಗಾಜಲ ಅಥವಾ ಗೋಮೂತ್ರವನ್ನು ಮನೆಯ ಎಲ್ಲಾ ಭಾಗಗಳಲ್ಲಿಯೂ ಪ್ರೋಕ್ಷಿಸಬೇಕು. ‌ ‌ ‌

14. ಜನನ ಶೌಚವಿರುವವರು, ಮೃತ ಶೌಚವಿರುವವರು ಮತ್ತು ರಜಸ್ವಲೆಯಾದವರೂ ಸಹ ಗ್ರಹಣದ ಸ್ಪರ್ಶಸ್ನಾನ, ಮುಕ್ತಿಸ್ನಾನಗಳನ್ನು ಮಾಡಲೇಬೇಕು. ಆದರೆ, ಅವರು ಜಪ ಪಾರಾಯಣಗಳನ್ನು ಮಾಡಬಾರದು.

15. ಗ್ರಹಣ ಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ಸಮುದ್ರ ಸ್ನಾನ ಅತ್ಯುತ್ತಮ.
ಯಾರ ಮನೆಯಲ್ಲಿ ಬಾವಿ ಮುಂತಾದವುಗಳಿಂದ ಗ್ರಹಣದ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅಂತಹವರು ಹಾಗೆಯೇ ಮಾಡಬೇಕು. ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಇದೆ ಅಂತಹವರು ನೀರಿನ ಪಾತ್ರೆಗಳ ಮೇಲೆ ದರ್ಭೆಯನ್ನು ಹಾಕಿಟ್ಟುಕೊಂಡು ಆ ನೀರು ಬಳಸಬಹುದು.

16. ಗ್ರಹಣ ಸಮಯದಲ್ಲಿ ಹಾಲು, ಮೊಸರು, ತರಕಾರಿ ಮುಂತಾದವುಗಳು ಹಾಳಾಗದಂತೆ ಅವುಗಳ ಮೇಲೆ ದರ್ಭೆ ಇಡಬೇಕು. ನಂತರ ಅವುಗಳನ್ನು ಬಳಸಬಹುದು. ದರ್ಭೆ ದೊರೆಯದಿದ್ದರೆ ತುಳಸಿಯ ಕುಡಿಯನ್ನೂ ಬಳಸಬಹುದು.

17. ಗ್ರಹಣ ಕಾಲದಲ್ಲಿ ದಾನ ಮಾಡುವುದಿದ್ದರೆ ಗ್ರಹಣ ಮಧ್ಯಕಾಲದಲ್ಲಿ ಮಾಡಬೇಕು. ಅಕಸ್ಮಾತ್ ಆ ಸಮಯದಲ್ಲಿ ಕೊಡಲಾಗದಿದ್ದರೆ ಸಂಕಲ್ಪ ಮಾಡಿ ತೆಗೆದಿಟ್ಟು ನಂತರ ಕೊಡಬಹುದು.

18. ಗ್ರಹಣ ಸಮಯದಲ್ಲಿ ಕೆಲವರು ಆಫೀಸಿನಲ್ಲಿ ಇರಲೇಬೇಕಾಗಿರುತ್ತದೆ ಅಥವಾ ಪ್ರಯಾಣದಲ್ಲಿರುತ್ತಾರೆ. ಆ ಸಮಯದಲ್ಲಿ ಸ್ನಾನಕ್ಕೆ ಅವಕಾಶವಿರುವುದಿಲ್ಲ. ಇಂತವರು ಮಾನಸಿಕವಾಗಿ ಸ್ನಾನ ಮಾಡಿ, ಮನಸ್ಸಿನಲ್ಲೇ ಎಷ್ಟು ಸಾಧ್ಯವೋ ಅಷ್ಟು ದೇವರ ಜಪ ಮಾಡಬೇಕು. ಆದರೆ ಆಹಾರ ಸೇವಿಸಬಾರದು.

ಗ್ರಹಣವೆಂದು ಹೆದರಿಕೆ ಬೇಡ, ಕೆಲವು ಆಚರಣೆಗಳು ವೈಜ್ಞಾನಿಕವಾಗಿಯೂ ಮಹತ್ವ ಪಡೆದಿವೆ
ಎಂಬುದನ್ನು ಮರೆಯಬೇಡಿ.

ಇದನ್ನೂ ಓದಿ | Solar Eclipse 2022 | ಗ್ರಹಣದಲ್ಲಿ ಈ ದೇವರುಗಳಿಗೆ ಇಲ್ಲ ಪೂಜೆ-ಪುನಸ್ಕಾರ; ಹೋಗುವ ಮುಂಚೆ ಒಮ್ಮೆ ಗಮನಿಸಿ

Exit mobile version