Site icon Vistara News

Solar Eclipse 2022 | ದೀಪಾವಳಿ ಹಬ್ಬದಲ್ಲಿಯೇ ಸೂರ್ಯ ಗ್ರಹಣ; ಯಾವ ರಾಶಿಯ ಮೇಲೆ ಏನು ಪರಿಣಾಮ?

ದೀಪಾವಳಿಯ ಅಮಾವಾಸ್ಯೆಯಂದು (ಆಶ್ವಯುಜ ಮಾಸ ಕೃಷ್ಣ ಪಕ್ಷದ ಅಮಾವಾಸ್ಯೆ) ಅಂದರೆ ಅಕ್ಟೋಬರ್‌ 25 ರಂದು ಕೇತುಗ್ರಸ್ತ ಸೂರ್ಯಗ್ರಹಣ (Solar Eclipse 2022) ಸಂಭವಿಸಲಿದೆ. ಈ ಗ್ರಹಣವು ಬಹುತೇಕವಾಗಿ ಭಾರತದ ಎಲ್ಲ ಪ್ರದೇಶಗಳಲ್ಲೂ ಗೋಚರಿಸಲಿದೆ. ಆದರೆ ಈಶಾನ್ಯ ರಾಜ್ಯಗಳಾದ ಮೇಘಾಲಯ, ಮಣಿಪುರ, ಮಿಜೋರಂ, ನಾಗಾಲ್ಯಾಂಡ್ ಗೋಚರಿಸುವುದಿಲ್ಲ. ನಮ್ಮ ದೇಶದಲ್ಲಿ ಈ ಗ್ರಹಣದ ಸ್ಪರ್ಶ ಮಾತ್ರ ಕಾಣಿಸಲಿದೆ.

ಈ ಖಗೋಳ ವಿಸ್ಮಯವು ಜ್ಯೋತಿಷದ ಪ್ರಕಾರ ಹಾಗೂ ಧಾರ್ಮಿಕವಾಗಿ ಬಹಳ ಮಹತ್ವ ಪಡೆದಿದ್ದು, ಈ ಗ್ರಹಣವು “ಗ್ರಸ್ತಾಸ್ತವಾಗಿʼʼ ಖಂಡಗ್ರಾಸವಾಗಿ ಗೋಚರಿಸಲಿದೆ ಎಂದು ಪಂಚಾಂಗದಲ್ಲಿ ಹೇಳಲಾಗಿದೆ.

ಗ್ರಹಣದ ಸ್ಪರ್ಶ-ಮೋಕ್ಷ ಎಷ್ಟು ಹೊತ್ತಿಗೆ?
ಗ್ರಹಣ ಸ್ಪರ್ಶ ಸಂಜೆ 05-02
ಗ್ರಹಣ ಮಧ್ಯ ಸಂಜೆ 05-47
ಗ್ರಸ್ತಾಸ್ತ(ರವಿಅಸ್ತ್ರ) ಸಂಜೆ 05-58
ಗ್ರಹಣಮೋಕ್ಷ ಸಂಜೆ 06-20
ಗ್ರಹಣ ಆದ್ಯಂತ ಪುಣ್ಯ ಕಾಲ: 57 ನಿಮಿಷ.
ಪುಣ್ಯಕಾಲ: 25-10-2022 ರಂದು ಮಂಗಳವಾರ ಸಂಜೆ 05-02 ನಿಮಿಷದಿಂದ ಸಂಜೆ 5-58 ನಿಮಿಷಗಳ ವರೆಗೆ ಪರ್ವಪುಣ್ಯಕಾಲ ಎಂದು ಪಂಚಾಂಗದಲ್ಲಿ ತಿಳಿಸಲಾಗಿದೆ.

ಏನಿದು ಗ್ರಸ್ತಾಸ್ತವಾಗಿ ಗೋಚರ?
ಯಾವುದೇ ಗ್ರಹಣವು ಸಂಭವಿಸಿ, ಆ ದಿನವೇ ಮೋಕ್ಷ ಕಾಣದಿದ್ದರೆ ಅದನ್ನು “ಗ್ರಸ್ತಾಸ್ತವಾಗಿʼʼ ಗೋಚರ ಎಂದು ಕರೆಯಲಾಗುತ್ತದೆ. ಈ ಸೂರ್ಯ ಗ್ರಹಣದ ಸ್ಪರ್ಶ ಮಾತ್ರ ಭಾರತದಲ್ಲಿ ಗೋಚರಿಸಲಿದ್ದು, ಮೋಕ್ಷ ಕಾಣಿಸುವುದಿಲ್ಲ. ಹೀಗಾಗಿ ಕೇತುಗ್ರಸ್ತ ಸೂರ್ಯ ಗ್ರಹಹಣವನ್ನು “ಗ್ರಸ್ತಾಸ್ತʼʼ ಗ್ರಹಣ ಎಂದು ಕರೆಯಲಾಗಿದೆ.

ಇದನ್ನು ವರ್ಣಿಸುವ ಶ್ಲೋಕ ಇಲ್ಲಿದೆ;
ಗ್ರಸ್ತಾವೇವಾಸ್ತಮಾನಂ ತು ರವೀಂದೂ ಪ್ರಾಪ್ಪುತೋ ಯದಿ ।
ಪರೇದ್ಯುರುದಯೇ ಸ್ನಾತ್ವಾ ಶುದ್ಧೋಽಭ್ಯವಹರೇತ್ ನರಃ ||
ಸಂಧ್ಯಾಕಾಲೇ ಯದಾ ರಾಹುಗ್ರ್ರಸತೇ ಶಶಿಭಾಸ್ಕರೌ |
ತದಹರ್ನೈವ ಭೋಕ್ತವ್ಯಂ ರಾತ್ರಾವಪಿ ಕದಾಚನ |

ಯಾವಾಗ ಆಹಾರ ಸೇವಿಸಬಹುದು?
ಈ ಸೂರ್ಯಗ್ರಹಣವು ಹಗಲು ನಾಲ್ಕನೇಯ ಯಾಮದಲ್ಲಿ ಸಂಭವಿಸುತ್ತಿರುವುದರಿಂದ ಸೂರ್ಯೋದಯದಿಂದಲೇ ಗ್ರಹಣ ನಿಷಿದ್ಧಗಳು ಜಾರಿಯಾಗಲಿವೆ. ಈ ದಿನ ಪೂರ್ತಿ ಭೋಜನಕ್ಕೆ , ಫಲಾಹಾರ ಸೇವನೆಗೆ ಅವಕಾಶವಿರುವುದಿಲ್ಲ. ಮಾರನೇ ದಿನ ಅಂದರೆ ಬುಧವಾರ ಬೆಳಗ್ಗೆ ಸೂರ್ಯೋದಯವಾದ ನಂತರವಷ್ಟೇ ಆಹಾರ ಸೇವಿಸಬಹುದು.

ಮಕ್ಕಳು, ವೃದ್ಧರು, ಗರ್ಭಿಣಿಯರು, ಅಶಕ್ತರು, ಅನಾರೋಗ್ಯ ಪೀಡಿತರು ಮಾತ್ರ ಮಧ್ಯಾಹ್ನ ಗ್ರಹಣ ಸಂಭವಿಸುವುದಕ್ಕೂ ಮೊದಲು, 2-00 ಗಂಟೆಯವರೆಗೆ ಆಹಾರವನ್ನು ಸೇವಿಸಬಹುದು. ನಂತರ ಗ್ರಹಣ ಬಿಟ್ಟ ಮೇಲೆ ಸ್ನಾನವನ್ನು ಮಾಡಿ, ಆಹಾರ ಸೇವನೆ ಮಾಡಬಹುದು ಎಂದು ಪಂಚಾಂಗದಲ್ಲಿ ಹೇಳಲಾಗಿದೆ.

ಸೂರ್ಯಾಸ್ತವಾದ ಮೇಲೆ ಶುದ್ಧಿಸ್ನಾನವನ್ನು ಮಾತ್ರ ಮಾಡಬೇಕು. ಮೈಲಿಗೆ ನಿವೃತ್ತಿಯಾಗುತ್ತದೆ. ಹೀಗಾಗಿ ಬಟ್ಟೆ, ಹಾಸಿಗೆ ಇತ್ಯಾದಿಗಳನ್ನು ಮುಟ್ಟಬಹುದು. ಆದರೆ ಆಹಾರ ಸ್ವೀಕರಿಸಲು ಶಾಸ್ತ್ರದ ಪ್ರಕಾರ ಅವಕಾಶವಿಲ್ಲ.

ಈ ಗ್ರಹಣದ ಫಲಗಳೇನು?
ಈ ಗ್ರಹಣವು ಚಿತ್ತಾ ನಕ್ಷತ್ರ ತುಲಾ ರಾಶಿಯಲ್ಲಿ ಸಂಭವಿಸುತ್ತಿದೆ. ಈ ನಕ್ಷತ್ರ ಮತ್ತು ರಾಶಿಯವರಿಗೆ ವಿಶೇಷ ದೋಷವಿರಲಿದೆ. ಧನು, ಮಕರ, ವೃಷಭ, ಸಿಂಹ ರಾಶಿಯವರಿಗೆ ಶುಭ ಫಲಗಳಿದ್ದರೆ, ಕನ್ಯಾ, ಕುಂಭ, ಮೇಷ, ಮಿಥುನ ರಾಶಿಯವರಿಗೆ ಮಿಶ್ರ ಫಲಗಳಿರಲಿವೆ. ತುಲಾ, ವೃಶ್ಚಿಕ, ಮೀನ, ಕಟಕ ರಾಶಿಯವರಿಗೆ ಅನಿಷ್ಟ ಫಲಗಳಿರಲಿವೆ ಎಂದು ಪಂಚಾಂಗದಲ್ಲಿ ಹೇಳಲಾಗಿದೆ.

Exit mobile version