ಬೆಂಗಳೂರು: ಮಂಗಳವಾರ ಕೇತುಗ್ರಸ್ತ ಖಂಡಗ್ರಾಸ ಸೂರ್ಯಗ್ರಹಣ (Solar Eclipse 2022) ಹಿನ್ನೆಲೆ ಬೆಂಗಳೂರಿನ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತಿದೆ. ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ದಿನವಿಡಿ ದರ್ಶನ ಇದ್ದರೆ, ಕಾಡುಮಲ್ಲೇಶ್ವರನಿಗೆ ದರ್ಬಾಬಂಧನ ಹಾಕಲಾಗುತ್ತಿದೆ. ಹಾಗಾದರೆ ಯಾವ್ಯಾವ ದೇಗುಲದಲ್ಲಿ, ಯಾವ ಸಮಯದಲ್ಲಿ ಪೂಜೆ-ಪುನಸ್ಕಾರ ಇರಲಿದೆ, ನಿರ್ಬಂಧ ಹೇರಲಾಗುತ್ತಿದೆ ಎಂಬುದರ ಮಾಹಿತಿ ಇಲ್ಲಿದೆ.
ಕಾಡುಮಲ್ಲೇಶ್ವರಿಗೆ ಶಿವನಿಗೆ ದರ್ಬಾಬಂಧನ
ಮಲ್ಲೇಶ್ವರದಲ್ಲಿರುವ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಸೂರ್ಯಗ್ರಹಣ ನಿಮಿತ್ತ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ದೇವಸ್ಥಾನ ತೆರಯಲಿದೆ. ಬಳಿಕ ದೇವಸ್ಥಾನದ ಬಾಗಿಲನ್ನು ಮುಚ್ಚಲಿದ್ದಾರೆ. ಈ ವೇಳೆ ಅರ್ಚಕರು ಶಿವನಿಗೆ ದರ್ಬಾಬಂಧನ ಮಾಡಲಿದ್ದಾರೆ. ಗ್ರಹಣ ಬಿಟ್ಟ ಬಳಿಕ ಸಂಜೆ 6 ಗಂಟೆಯಿಂದ ದೇವಸ್ಥಾನದ ಶುದ್ಧಿ ಕಾರ್ಯ ನಡೆಯಲಿದೆ. ಸಂಜೆ 7 ಗಂಟೆಗೆ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.
ಮಹಾಮಂಗಳಾರತಿ ಮೂಲಕ ಲಕ್ಷ್ಮೀ ನರಸಿಂಹನಿಗೆ ಪೂಜೆ
ಮಲ್ಲೇಶ್ವರದಲ್ಲಿರುವ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಗ್ರಹಣದ ಪ್ರಯುಕ್ತ ಬೆಳಗ್ಗೆ 6 ಗಂಟೆಗೆ ಪಂಚಾಮೃತ ಅಭಿಷೇಕ ಮಾಡಿ, ಬಳಿಕ ಬೆಳಗ್ಗೆ 8 ಗಂಟೆಗೆ ಸ್ವಾಮಿಗೆ ಮಹಾಮಂಗಳಾರತಿ ಮಾಡಿ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಸಂಜೆ ಗ್ರಹಣ ನಂತರ ಸ್ವಚ್ಛತಾ ಕಾರ್ಯ ಆರಂಭಿಸಿ, ಸಂಜೆ 7.30ಕ್ಕೆ ಭಕ್ತಾಧಿಗಳಿಗೆ ಪೂಜೆ ಪುನಸ್ಕಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಜತೆಗೆ ಅ. 26ರಂದು ಗ್ರಹಣ ನಿಮಿತ್ತ ಬೆಳಗ್ಗೆ 10 ಗಂಟೆಗೆ ಗ್ರಹಣ ಶಾಂತಿ ಹೋಮವನ್ನು ಹಮ್ಮಿಕೊಳ್ಳಲಾಗಿದ್ದು, ಗ್ರಹಣ ದೋಷವಿರುವವರು ಆಗಮಿಸಿ ಶಾಂತಿ ಮಾಡಿಸಬಹುದು.
ಗವಿ ಗಂಗಾಧರೇಶ್ವರ ದೇಗುಲದಲ್ಲಿ ದೋಷ ಪರಿಹಾರ ಹೋಮ
ಗವಿಪುರಂನಲ್ಲಿರುವ ಗವಿ ಗಂಗಾಧರೇಶ್ವರ ದೇವಸ್ಥಾನವು ಎಂದಿನಂತೆ ಬೆಳಗ್ಗೆ 6 ಗಂಟೆ ತೆರಯಲಿದ್ದು, 8 ಗಂಟೆಯವರೆಗೆ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 8.30ರ ಹೊತ್ತಿಗೆ ದರ್ಬಾಬಂಧನ ಮಾಡಿ ದೇವಸ್ಥಾನದ ಬಾಗಿಲು ಬಂದ್ ಮಾಡಲಾಗುತ್ತದೆ. ಬಳಿಕ ಬೆಳಗ್ಗೆ 10ರಿಂದ 12 ಗಂಟೆಯವರೆಗೆ ದೋಷವಿರುವ ನಕ್ಷತ್ರದವರಿಗೆ ದೋಷಪರಿಹಾರ ಹೋಮ ನಡೆಸಲಾಗುತ್ತದೆ. ಗ್ರಹಣ ಮೋಕ್ಷಕಾಲದ 6.45 ನಂತರ ದೇವಸ್ಥಾನ ಸ್ವಚ್ಛತಾ ಕಾರ್ಯ ನಡೆಸಿ, ರಾತ್ರಿ 8 ಗಂಟೆಯಿಂದ 10 ಗಂಟೆಯವರಗೆ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಭಕ್ತರ ದರ್ಶನಕ್ಕೆ ಇದ್ದಾಳೆ ಬಂಡಿ ಮಹಾಕಾಳಿ
ಚಾಮರಾಜಪೇಟೆಯ ಬಂಡಿ ಮಹಾಕಾಳಿ ದೇವಸ್ಥಾನವು ಮಂಗಳವಾರ ಅಮಾವಾಸ್ಯೆ ದಿನ ತೆರದಿರಲಿದೆ. ಎಂದಿನಂತೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 10ರವರೆಗೆ ತೆರದಿರುವ ಏಕೈಕ ದೇವಸ್ಥಾನ ಇದಾಗಿದೆ. ಮಧ್ಯಾಹ್ನ 2 ಗಂಟೆಯ ಬಳಿಕ ಗಣಹೋಮ, ನವಗ್ರಹ ಹೋಮ, ಚಂಡಿ ಹೋಮ ನೆರವೇರಿಸಲಿದ್ದಾರೆ. ಗ್ರಹಣದ ಕಳೆದ ಬಳಿಕ ದೇವಸ್ಥಾನ ಹಾಗೂ ದೇವರಿಗೆ ದರ್ಬೆಯಿಂದ ನೀರನ್ನು ಪ್ರೋಕ್ಷಣೆ ಮಾಡಿ ಹೋಮದ ನಂತರ ದೇವರಿಗೆ ಕಳಾಷಾಭಿಷೇಕ ಮಾಡಿ, ಪಂಚಾಮೃತಾಭಿಷೇಕ, ನಂತರ ಸಾರ್ವಜನಿಕರಿಗೆ ದೇವಿಯ ದರ್ಶನ ಸಿಗಲಿದೆ. ದರ್ಶನಕ್ಕೆ ಬಂದ ಭಕ್ತಾದಿಗಳಿಗೆ ಅಭಿಷೇಕದ ನೀರಿದ ಪ್ರೋಕ್ಷಣೆ ಮಾಡಲಾಗುವುದು.
ಗಾಳಿ ಆಂಜನೇಯ ದರ್ಶನವೂ ಸಂಜೆ 7ಕ್ಕೆ
ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ 6 ಗಂಟೆಗೆ ದೇವಸ್ಥಾನ ತೆರಯಲಿದ್ದು, ಮಧ್ಯಾಹ್ನ 12 ಗಂಟೆಗೆ ದೇವಸ್ಥಾನ ಬಂದ್ ಆಗಲಿದೆ. ಸಂಜೆ 6 ಗಂಟೆಯ ಬಳಿಕ ದೇವಸ್ಥಾನ ಶುದ್ಧಿ ಕಾರ್ಯ ನಡೆಸಿ, 7 ಗಂಟೆ ನಂತರ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಇರಲಿದೆ.
ಬನಶಂಕರಿಯಲ್ಲಿ ಇಲ್ಲ ಅನ್ನದಾಸೋಹ
ಬನಶಂಕರಿಯಲ್ಲಿರುವ ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಪೂಜಾ ಕಾರ್ಯ ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಬಾಗಿಲು ಮುಚ್ಚಲಿದ್ದಾರೆ. ಗ್ರಹಣ ನಿಮಿತ್ತ ದೇವಸ್ಥಾನದಲ್ಲಿ ಅನ್ನದಾಸೋಹ ಇರುವುದಿಲ್ಲ. ಗ್ರಹಣ ಮುಗಿದ ನಂತರ ದೇವಸ್ಥಾನದಲ್ಲಿ ಶುದ್ಧಿ ಕಾರ್ಯ ನಡೆಸಿ ಸಂಜೆ 7.30ಕ್ಕೆ ದೇವಿ ದರ್ಶನ ಮಾಡಬಹುದು. ಚಿನ್ನಯ್ಯ ರಸ್ತೆಯಲ್ಲಿರುವ ಮಾರಮ್ಮ ದೇವಾಲಯ, ಮಲ್ಲೇಶರದ ಗಂಗಮ್ಮ ದೇಗುಲ ಸೇರಿದಂತೆ ಭಾಗಶಃ ದೇವಸ್ಥಾನಗಳು ಗ್ರಹಣದ ಸಮಯದಲ್ಲಿ ಬಂದ್ ಆಗಿರಲಿವೆ.
ಇದನ್ನೂ ಓದಿ | Solar Eclipse 2022 | ಕೇತುಗ್ರಸ್ತ ಸೂರ್ಯಗ್ರಹಣ ಹಿನ್ನೆಲೆ ಸಾರ್ವಜನಿಕರಿಗಿಲ್ಲ ನಾಳೆ ಹಾಸನಾಂಬೆ ದರ್ಶನ