Site icon Vistara News

Sree Narayana Guru Jayanthi | ಕಗ್ಗತ್ತಲ ಹಾದಿಯಲಿ ಕೈದೀವಿಗೆ ಹಿಡಿದು ನಡೆದವರು ಶ್ರೀ ನಾರಾಯಣ ಗುರು

Sree Narayana Guru Jayanthi

ಸತೀಶ್. ಜಿ. ಕೆ. ತೀರ್ಥಹಳ್ಳಿ
ಕಾಲದ ಹಿತ, ಹಿಡಿತಕ್ಕೆ ಒಳಪಟ್ಟು ಸಮಾಜ ತನ್ನ ಆಶಯ, ಸ್ವರೂಪಗಳನ್ನು ಮುರಿದುಕಟ್ಟಿಕೊಳ್ಳುವುದು ಅನಿವಾರ್ಯ. ಯಾಕೆಂದರೆ ಬದುಕು ನಿಂತ ನೀರಲ್ಲ, ಹರಿವ ನದಿ, ನಿಂತರದು ಬಗ್ಗಡ. ಸಮಾಜಗಳೂ ಹಾಗೆಯೇ. ಚಲನಾಶೀಲತೆಯೇ ಅದರ ಜೀವಾಳ.

ಇತಿಹಾಸದುದ್ದಕ್ಕೂ ಅಜ್ಞಾನದಿಂದಲೋ, ಸ್ವಾರ್ಥಸಾಧನೆಗೋ ಸೃಜಿಸಿದ ಕೊಳೆ ತೊಳೆಯುವ ಕಾಯಕವನ್ನು ಅಲ್ಲಲ್ಲಿ ಸಾಧುಸಂತರು ಮಾಡುತ್ತಲೇ ಬಂದಿದ್ದಾರೆ. ಆಯಾಯ ಕಾಲಘಟ್ಟದಲ್ಲಿ ಬೇರೂರಿದ್ದ ಮೌಢ್ಯ, ತಾರತಮ್ಯ, ಶೋಷಣೆಗಳಿಂದ ಸಮಾಜವನ್ನು ಮುಕ್ತಗೊಳಿಸಲು ಶ್ರಮಿಸಿದ್ದಾರೆ, ಸಮಸಮಾಜವನ್ನು ಕನಸಿದ್ದಾರೆ, ಅರಿವಿನ ಬೆಳಕನ್ನು ಹರಿಸಿದ್ದಾರೆ. ಬಾವಿಯೊಳಗಿನ ಚಿಲುಮೆಗಳಲ್ಲಿ ಆಗಾಗ ಹೂಳು ತುಂಬಿಕೊಳ್ಳುವುದಿದೆ. ಹೂಳು ತೆಗೆಯುತ್ತಿದ್ದಂತೆ ಜಲದ ಕಣ್ಣುಗಳು ತೆರೆದು, ಜೀವಜಲ ಒಸರುತ್ತದಲ್ಲ ಹಾಗೆ, ವಿಕಾಸದ ಹಾದಿಯಲ್ಲಿ ಸಹಬಾಳ್ವೆ-ಔನತ್ಯದ ಮಾರ್ಗವಾಗಿ ಕಂಡಿದ್ದು ದೇವರು-ಧರ್ಮಗಳು. ಅದೇ ಹೆಸರಲ್ಲಿ ನಡೆದುಹೋದ ಅನಾಚಾರ-ಕ್ರೌರ್ಯಗಳು ಗ್ರಹಿಕೆಯನ್ನೂ ಮೀರಿದಂತವು. ಸಾಮಾಜಿಕ ಸುಧಾರಣೆಯ ಹಾದಿಯಲ್ಲಿ ಮಲಗಿದ್ದ ಜಗತ್ತನ್ನು ಚಿವುಟಿಹೋದ ಬುದ್ಧ, ಬಸವ, ದಾಸ ಪರಂಪರೆಯೊಟ್ಟಿಗೆ ವಿಭಿನ್ನವಾಗಿ ನಿಲ್ಲುವ, ಶತಮಾನದ ಮಹಾಸಂತರೇ ಬ್ರಹ್ಮಶ್ರೀ ನಾರಾಯಣ ಗುರುಗಳು.

ಶ್ರೀ ನಾರಾಯಣ ಗುರುಗಳು ಹುಟ್ಟಿದ ಮನೆ

ಕೇರಳದ ತಿರುವನಂತಪುರಂನಿಂದ ೧೨ಕಿಮೀ ದೂರದ ಚೆಂಬಳಂತಿಯಲ್ಲಿ ೧೮೫೬ರಲ್ಲಿ, ತಿರುಓಣಂ ಹಬ್ಬವಾದ ಮೂರನೇದಿನದ ಶತಭಿಷ ನಕ್ಷತ್ರದಂದು, ಮದ್ಯಮವರ್ಗದ ಈಳವ ಕುಟುಂಬದಲ್ಲಿನ ಶಿಕ್ಷಕರು, ನಾಟಿವೈದ್ಯರಾಗಿದ್ದ ಮಾಡಾನ್ ಆಸಾನ್ ಮತ್ತು ಕುಟ್ಟಿಯಮ್ಮಾಳ್ ದಂಪತಿಯ ಮಗನಾಗಿ ಜನಿಸಿದವರು ನಾರಾಯಣ ಗುರುಗಳು.

ದೇಶಕಾಲವನ್ನು ಮೀರಿದ ವ್ಯಕ್ತಿತ್ವ
ತಮ್ಮ ವೇದಾಧ್ಯಯನ, ವಿಶಿಷ್ಟ ಚಿಂತನೆಗಳಲ್ಲಿ ಅರಳಿದ ಅವರದು ದೇಶಕಾಲವನ್ನು ಮೀರಿದ ವ್ಯಕ್ತಿತ್ವ. ಮಹಿಳೆಯರು, ಶೂದ್ರವರ್ಗ ಮತ್ತು ಶೂದ್ರಾತಿಗಳಲ್ಲಿ ಸಾಂಸ್ಕೃತಿಕ ಪುನುರುತ್ಥಾನ, ಆತ್ಮಾಭಿಮಾನ ಮತ್ತು ವಿದ್ಯಾದಾನದ ರುವಾರಿಯಾಗಿ ಅವತರಿಸಿದವರು. ತಮ್ಮ ಅಪಾರ ಬುದ್ಧಿವಂತಿಕೆ ಮತ್ತು ದೂರದೃಷ್ಟಿತ್ವದ ಕಾರ್ಯಯೋಜನೆಗಳ ಮೂಲಕ ಗಾಢಾಂಧಕಾರದಲ್ಲಿ ಮುಳುಗಿದ್ದವರ ಬದುಕಿಗೊಂದು ಜೀವಕಸುವನ್ನು ತುಂಬಿದರು.

ಉತ್ತರದ ಸಮಾಜ ಸುಧಾರಕರೊಟ್ಟಿಗೆ, ಒಡಿಶಾದ ಮಹಿಮಾಧರ್ಮ, ಫುಲೆಯವರ ಸತ್ಯಶೋಧಕ ಸಮಾಜ, ಛತ್ತಿಸ್ ಘಡದ ಸತ್ನಮ್ ಪಂಥ, ತಮಿಳುನಾಡಿನ ಪೆರಿಯಾರ್, ಕೊಲ್ಲಾಪುರದ ಸಾಹುಮಹಾರಾಜರು ಉಂಟುಮಾಡಿದ ಸಮಕಾಲೀನ ಕ್ರಾಂತಿಯಂತೆ ೧೮೮೮ರಲ್ಲಿ ನಾರಾಯಣ ಗುರುಗಳು ಅರವಿಪುರಂನ ಶಿವದೇಗುಲವನ್ನು ಸ್ಥಾಪಿಸಿದಾಗಲೂ ದೊಡ್ಡ ಸಂಚಲನ ಉಂಟಾಗಿತ್ತು. ನಾರಾಯಣ ಗುರುಗಳು ಮತ್ತವರ ನಿಕಟವರ್ತಿಗಳು ಹುಟ್ಟುಹಾಕಿದ ಕ್ರಾಂತಿಕಾರಕ ಚಳುವಳಿಗಳಲ್ಲಿ ಗುರುಗಳ ಸಾಮಾಜಿಕ ಸುಧಾರಣೆ ಮತ್ತು ಧಾರ್ಮಿಕ ಪುನುರುತ್ಥಾನ, ಡಾ.ಪಲ್ಪು ನೇತೃತ್ವದ ಸಾಮಾಜಿಕ ಜಾಗೃತಿ ಆಂದೋಲನಗಳು, ಶಿಕ್ಷಣದ ಹಕ್ಕಿನ ಹೋರಾಟದಲ್ಲಿ ಕುಮಾರನ್ ಆಶಾನ್ ಬಳಗದ ಪ್ರಯತ್ನ, ಸಿ.ಕೇಶವನ್ ನೇತೃತ್ವದ ರಾಜಕೀಯ ಹಕ್ಕು ಹೋರಾಟ, ಟಿ.ಕೆ ಮಾಧವನ್ ನೇತೃತ್ವದಲ್ಲಿ ನಡೆದ ಅಸ್ಪೃಷ್ಯತೆ ವಿರೋಧಿ ಹೋರಾಟಗಳನ್ನೂ ತಿಳಿಯಬೇಕಾದ ಅವಶ್ಯಕತೆ ಇದೆ.

ದೇವರ ನಾಡಾಗಿಸಿದ ಸಂತ
ಕೇರಳದಲ್ಲಾಗ ಕ್ರೌರ್ಯವು ವಿಜ್ರಂಭಿಸುವ ಕಾಲವಾಗಿತ್ತು. ಅವರ್ಣೀಯರಿಗೆ ಕೆರೆಬಾವಿಗಳಲ್ಲಿ ನೀರೆತ್ತುವುದು, ಬ್ಯಾಂಕ್, ಅಂಚೆಕಚೇರಿ ಪ್ರವೇಶಿಸುವುದು, ಮಹಡಿಮೇಲೆ ವಾಸಿಸುವುದು, ಸರ್ಕಾರಿ ನೌಕರಿಗೆ ಸೇರುವುದು, ಕಥಕ್ಕಳಿಯಂಥಾ ನೃತ್ಯಗಳಲ್ಲಿ ದೇವರ ಪಾತ್ರ ಮಾಡುವುದೆಲ್ಲಾ ನಿಷಿದ್ಧವಾಗಿತ್ತು. ಆಭರಣ, ಚಪ್ಪಲಿ, ವಿಶೇಷವಾಗಿ ಮಹಿಳೆಯರು ಮೈತುಂಬ ವಸ್ತ್ರಧರಿಸಲೂ ನಿರ್ಬಂಧವಿತ್ತು. ತೆರೆದೆದೆಯಲ್ಲಿ ಎದುರಾಗಿ, ಗಾತ್ರದ ಆಧಾರದಲ್ಲಿ ‘ಸ್ತನಗಂದಾಯ’ ಕಟ್ಟಬೇಕಿತ್ತು. ಮಡಿಮೈಲಿಗೆಯ ಹೆಸರಲ್ಲಿ ಶೂದ್ರರು ಮೇಲ್ವರ್ಗದವರಿಂದ ಇಂತಿಷ್ಟೇ ಅಡಿ ದೂರವಿರಲೇಬೇಕೆಂಬ ಸಾಮಾಜಿಕ ಕಟ್ಟಳೆಯಿತ್ತು.

ಮಧ್ಯಾಹ್ನ ಮಾತ್ರವೇ ರಸ್ತೆಗಳಲ್ಲಿ ಸಂಚರಿಸಬೇಕು, ಅವರ ನೆರಳು ಮೇಲ್ವರ್ಗಕ್ಕೆ ತಾಕಕೂಡದು. ಶೂದ್ರರು ಸದಾಕಾಲ ಕೈಲೊಂದು ಮಡಕೆ ಹಿಡಿದುಸಾಗುತ್ತಾ ಅದಕ್ಕೇ ಉಗುಳಬೇಕೆಂಬ ಕಟ್ಟುಪಾಡಿತ್ತು. ಇನ್ನು ಧಾರ್ಮಿಕ ವ್ಯವಸ್ಥೆಯದಂತೂ ಹೀನಾಯಸ್ಥಿತಿ. ದೇವಸ್ಥಾನಗಳನ್ನು ಪ್ರವೇಶಿಸಲು, ಸರ್ಕಾರವೇ ನಡೆಸುವ ಶಾಲೆಗಳಲ್ಲಿ ಕಲಿಯಲು, ವೇದಪಠಣಗಳನ್ನು ಆಲಿಸಲೂ ಅವಕಾಶವಿರಲಿಲ್ಲ. ನಿಯಮವನ್ನು ಉಲ್ಲಂಘಿಸಿ ಧಾರ್ಮಿಕ ಕಾರ್ಯವನ್ನು ಆಲಿಸಿದವರ, ಪೂಜೆ ಮಾಡಲು ಬಯಸಿದವರ ಕಿವಿಗೆ ಕಾದ ಸೀಸ ಎರೆಯಬೇಕು, ನಾಲಿಗೆ ಕತ್ತರಿಸಬೇಕು ಎಂಬಂತಹ ಕಠೋರ ನಿಯಮಗಳಿದ್ದವು.

ಮನುಷ್ಯರನ್ನು ಮನುಷ್ಯರನ್ನಾಗಿ ಕಾಣದ ಮನಸ್ಥಿತಿಯದು. ಶೇ.೮೫ರಷ್ಟಿದ್ದ ಶೋಷಿತ ಸಮುದಾಯಗಳು ಎರಡನೇ ದರ್ಜೆ ಪ್ರಜೆಗಳಾಗಿ, ಕನಿಷ್ಠ ಮಾನವಹಕ್ಕುಗಳಿರದ ನಿತ್ಯನರಕವನ್ನು ಬದುಕಬೇಕಾಗಿತ್ತು. ಇಂತಹ ಶೋಚನೀಯ ಪರಿಸ್ಥತಿಯಲ್ಲಿರುವಾಗಯೇ ಅಲ್ಲಿಗೆ ಸಂದರ್ಶಿಸಿದ್ದ ಸ್ವಾಮಿ ವಿವೇಕಾನಂದರು ಕೇರಳವನ್ನು ‘ಅದು ಹುಚ್ಚಾಸ್ಪತ್ರೆ!’ ಎಂದಿದ್ದರು. ಅದೇ ನೆಲದಲ್ಲಿ ಜನ್ಮವೆತ್ತಿ ಸಮರ್ಥ ಸಮಾಜ ಚಿಕಿತ್ಸೆಯಲ್ಲಿ ಒದಗುತ್ತಾ, ಅಲ್ಲಿಯ ಮಾನಸಿಕತೆಯನ್ನು ಸುಧಾರಿಸಿ ‘ದೇವರನಾಡು’ ಎಂದು ಪರಿವರ್ತಿಸಿದ್ದು ಗುರುಗಳ ಸಾಧನೆ. ಅದೇ ಬೆಳಕಲ್ಲಿ ಮುಂದದು ಸಾಕ್ಷರ ನಾಡಾಗಿ, ಕೋಮುಸೌಹಾರ್ಧದ ಬೀಡಾಗಿ ಬದಲಾಗಿರುವುದೂ ಗಮನಾರ್ಹ.

ಎಲ್ಲಾ ನದಿಗಳೂ ಸಮುದ್ರವನ್ನೇ ಸೇರುವಂತೆ ‘ಮಾನವ ಕುಲಕ್ಕೇ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು’ ಆಶಯದೊಂದಿಗೆ ಸರ್ವಸಮಾನತೆಗೆ ಕರೆಯಿತ್ತರಲ್ಲದೆ ಇದನ್ನು ಸಾಧಿಸಲು ಶಿಕ್ಷಣವೇ ಮಾರ್ಗವೆಂದರು, ‘ಸಂಘಟನೆಯಿಂದ ಬಲಯುತರಾಗಿರಿ ಮತ್ತು ಶಿಕ್ಷಣದಿಂದ ನಿರ್ಭೀತರಾಗಿರಿ’ ಎಂಬ ಪ್ರೇರಣೆಯೊಂದಿಗೆ ‘ಉದ್ಧಾರೇತಾತ್ಮನಾತ್ಮಾನಂ’ ಗೀತೋಕ್ತಿಯಂತೆ ತನ್ನ ಉದ್ಧಾರ ತನ್ನಿಂದಲೇ ಎಂಬ ದಿವ್ಯಸಂದೇಶ ನೀಡಿದರು.

ಯುದ್ಧ ಮಾಡದೇ ಎದುರಾಳಿಯ ಗೆದ್ದರು!
ಇತಿಹಾಸದಲ್ಲಿಯೇ ಪ್ರಥಮವೆಂಬಂತೆ, ಗುರುಗಳು ಹಲವಾರು ಸರ್ವಧರ್ಮ ಸಮ್ಮೇಳನಗಳನ್ನು ಸಂಘಟಿಸಿ, ಸಹೋದರತ್ವವನ್ನು ಸಾರಿದರು. ಜೀವಿತಾವಧಿಯಲ್ಲಿ ಹಲವಾರು ಶಾಲೆಗಳು, ಆಸ್ಪತ್ರೆಗಳನ್ನೂ ತೆರೆದರು. ಕೈಗಾರಿಕಾ ಸಮ್ಮೇಳನಗಳನ್ನೂ ನಡೆಸಿದರು. ಧರ್ಮಪ್ರಸಾರ, ಧರ್ಮಜಾಗೃತಿಗಾಗಿ ಶ್ರೀಲಂಕಾಗೂ ತೆರಳಿದ್ದರು. ದೇವಸ್ಥಾನ ಪ್ರವೇಶಕ್ಕೆ ಚಳುವಳಿ ನಡೆಸದೆ, ಪರ್ಯಾಯವಾದ ಅವರ್ಣೀಯರ ದೇವಾಲಯ ಸ್ಥಾಪಿಸಿದ್ದು ಮಾತ್ರವಲ್ಲ ತಳವರ್ಗಕ್ಕೆ ಸಂಘಟನಾಶಕ್ತಿ ತುಂಬಿದರು. ಆ ಹಾದಿಯಲ್ಲಿ ನೋವುಗಳಿದ್ದವು. ಆದರೂ ಅವರು ವಿನಯದ ಮಾರ್ಗಬಿಡಲಿಲ್ಲ. ಯಾರೊಂದಿಗೂ ಸಮರ ಸಾರಲಿಲ್ಲ. ಸಂಘರ್ಷಕ್ಕಿಳಿಯಲಿಲ್ಲ. ಸಂಧಾನದ, ಸಮನ್ವಯದ ದಾರಿಯಲ್ಲಿ ಯುದ್ಧಹೂಡದೆಯೇ ಎದುರಾಳಿಗಳನ್ನು ಗೆದ್ದಿದ್ದರು.

ನೆರೆಯ ತಮಿಳುನಾಡಿನಲ್ಲಿ ಪೆರಿಯಾರ್ ನೇತ್ರುತ್ವದಲ್ಲಿ ಬಲತ್ಕಾರಯುತ ದೇಗುಲ ಪ್ರವೇಶ, ವಿಗ್ರಹ ಧ್ವಂಸ ಕಾರ್ಯಾಚರಣೆ, ಧರ್ಮಗ್ರಂಥಗಳನ್ನು ಸುಡುವಂತಹ ಸಂಘರ್ಷದ ಹಾದಿಗಳಿದ್ದಾಗಲೂ ನಾರಾಯಣ ಗುರುಗಳು ಸೌಹಾರ್ಧದ ಹಾದಿಯನ್ನು ತುಳಿದರು. ಹಿಂದೂ ಧರ್ಮದ ಕೌರ್ಯವನ್ನು ಸದ್ದಿಲ್ಲದೆ, ರಕ್ತರಹಿತ ಕ್ರಾಂತಿಯ ಮೂಲಕ ಮೀರಲೆತ್ನಿಸಿದರು. ಧರ್ಮದಲ್ಲಿ ತಮ್ಮ ಪಾಲೂ ಇದೆಯೆಂದು ಅರ್ಥೈಸಿ ಸಾವಿರಾರು ವರ್ಷಗಳಿಂದ ಧರ್ಮಕ್ಕಂಟಿದ್ದ ಕಳಂಕವನ್ನು ತಮ್ಮ ಮೂವತೈದು ವರ್ಷಗಳಲ್ಲಿ ತೊಳೆಯೆತ್ನಿಸಿ ಧರ್ಮ ಪುನರುತ್ಥಾನದ ರುವಾರಿಯಾದರು. ಆ ಮೂಲಕ ದೊಡ್ಡಮಟ್ಟದ ಮತಾಂತರ ಸಾಧ್ಯತೆಯನ್ನು ನಿವಾರಿಸಿದರು.

ನೀವಿದ್ದಲ್ಲಿಗೇ ದೇವರನ್ನು ಕರೆತರುತ್ತೇನೆ ಎಂದರು!
ಕಾಲಾಂತರದಿಂದ ದೇವಸ್ಥಾನ ಪ್ರವೇಶವಂಚಿತರಾಗಿ ಸೋತು ಬಂದವರನ್ನು ಸಂತೈಸಿ “ದೇವರಿದ್ದಲ್ಲಿಗೆ ನಿಮ್ಮನ್ನು ಬಿಡದಿದ್ದರೇನಂತೆ, ನೀವಿದ್ದಲ್ಲಿಗೇ ದೇವರನ್ನು ಕರೆತರುತ್ತೇನೆ..” ಎಂದು ೧೮೮೮ರಲ್ಲಿ ಅರವೀಪುರಂನಲ್ಲಿ ಅವರ್ಣೀಯರಿಗಾಗಿಯೇ ಶಿವಮಂದಿರವನ್ನು ಸ್ಥಾಪಿಸಿದರು. ವಿಗ್ರಹದ ಹುಡುಕಾಟದಲ್ಲಿದ್ದಾಗ ಪಕ್ಕದ ನದಿಯಲ್ಲಿ ಮುಳುಗಿ ಎದ್ದುಬರುವಾಗ ಕಲ್ಲೊಂದನ್ನು ಹೊತ್ತುತಂದು ‘ಲಿಂಗ’ ಎಂದು ಪ್ರತಿಷ್ಠಾಪಿಸಿದ್ದರು. ತಳಸಮುದಾಯಗಳಿಗೆ ಪರ್ಯಾಯ ದೇವಾಲಯಗಳನ್ನು ಕಟ್ಟಿದ್ದು ಜಾಗತಿಕ ಚರಿತ್ರೆಯಲ್ಲಿ ದೊಡ್ಡ ಮೈಲಿಗಲ್ಲು.

ಅವರ ನಿಕಟವರ್ತಿ ಕುಮಾರನ್ ಆಸಾನ್ ಬಣ್ಣಿಸುವಂತೆೆ “ಅದು ಜಾತೀಯತೆಯೆಂಬ ದೈತ್ಯವೃಕ್ಷಕ್ಕೆ ಬಿದ್ದ ಮೊದಲ ಕೊಡಲಿ ಏಟು..” ಪೂಜೆ ವೈಯಕ್ತಿಕ, ಜಾತಿಭೇದ, ಮತದ್ವೇಷಗಳಿಲ್ಲದೆ ಸರ್ವರೂ ಸಹೋದರತ್ವದಿ ಆರಾಧಿಸುವ ಕ್ಷೇತ್ರವೆಂದರು. ನಂತರ ಸುಮಾರು ೭೫ ದೇಗುಲಗಳು ಕೇರಳ, ತಮಿಳುನಾಡು ಮತ್ತು ಮಂಗಳೂರಿನಲ್ಲಿ ಸ್ಥಾಪನೆಗೊಳ್ಳಲು ಕಾರಣರಾದರು. ದೇಗುಲಗಳು ಅದ್ದೂರಿ ಪೂಜೆ-ಪುನಸ್ಕಾರಗಳಿಗಿಂತ ಸಾರ್ವಜನಿಕ ಆರಾಧನಾ ತಾಣಗಳಾಗಬೇಕು, ಅಧ್ಯಯನ ಕೇಂದ್ರಗಳಾಗಬೇಕೆಂದು ಬಯಸಿದರು. ಸ್ಥಾಪಿಸಿದ್ದ ದೇವಾಲಯಗಳಾಗಿ ಅರ್ಚಕರನ್ನಾಗಿ ಶೂದ್ರ ಸಮುದಾಯದವರನ್ನು ನೇಮಿಸಿ, ಶಿವಗಿರಿಯಲ್ಲಿ ವೇದಾದ್ಯಯನ, ಬ್ರಹ್ಮವಿದ್ಯೆಗಳ ತರಬೇತಿ ಕೇಂದ್ರವನ್ನು ತೆರೆದರು.

ಸರಳ ಬದುಕು, ಸ್ವಚ್ಛತೆ, ಗುಡಿಕೈಗಾರಿಕೆ ಸ್ಥಾಪನೆ, ಶಾಲೆಗಳಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿದರು. “ದರ್ಶನಮಾಲಾ”, “ಆತ್ಮೋಪದೇಶ ಶತಕಂ”, “ದೈವದಶಕಂ” ಮುಂತಾದ ಕೃತಿಗಳ ಮೂಲಕವೂ ಲೋಕಜ್ಞಾನದ ದಾರಿತೋರಿದ್ದರು. ೧೯೦೩ರಲ್ಲಿ ನಾರಾಯಣ ಗುರುಗಳು, ಒಡನಾಡಿಗರಾದ ಡಾ.ಪಲ್ಪು ಮತ್ತು ಕವಿ ಕುಮಾರನ್ ಆಸನ್‌ರೊಂದಿಗೆ ಸೇರಿ ಮುನ್ನಡೆಸಿದ ‘ಶ್ರೀ ನಾರಾಯಣ ಧರ್ಮಪರಿಪಾಲನಾ ಯೋಗಂ’ ಪ್ರತಿರೋಧ ಚಳುವಳಿಯ ಉದ್ದೇಶವೇ ಮನುಷ್ಯ ಘನತೆಯ ಸಮಾಜ ನಿರ್ಮಾಣ ಮಾಡುವುದಾಗಿತ್ತು. ಶೋಷಿತವರ್ಗದ ಸಬಲೀಕರಣಕ್ಕದು ಬದ್ಧವಾಯಿತು. ಹಿಂದೂಧರ್ಮದಲ್ಲಿ ಬೇರೂರಿದ್ದ ಜಾತಿವ್ಯವಸ್ಥೆ ಮತ್ತು ಕಂದಾಚಾರಗಳು ಶೋಷಿತ ಸಮೂದಾಯಗಳನ್ನು ಅನ್ಯಧರ್ಮದೆಡೆಗೆ ನೂಕಿದ್ದವು. ಇಂತಹ ಸಂದಿಗ್ಧತೆಯಲ್ಲಿ ಧರ್ಮವನ್ನು ಮರುವ್ಯಾಖ್ಯಾನಿಸಿ, ಲಿಂಗ ಮತ್ತು ಜಾತಿ ಸಮಾನತೆಯನ್ನು ಪ್ರತಿಪಾದಿಸಿತು.

ಶತಮಾನಗಳ ಹಿಂದೆಯೇ, ಸಾಮಾಜಿಕ ಸುಧಾರಣೆಯ ಭಾಗವಾಗಿ, ಸಂಪತ್ತಿನ ಅಸಹ್ಯಕರ ಪ್ರದರ್ಶನಕ್ಕೊಡ್ಡುವ ಅದ್ಧೂರಿ ಮದುವೆಗಳನ್ನು ನಿರಾಕರಿಸಿ ತಮ್ಮ ವಿಶಿಷ್ಟ ಸರಳವಿವಾಹ ಪದ್ಧತಿಯೊಂದನ್ನು ಪರಿಚಯಿಸಿದರು. ಮದ್ಯವರ್ಜನೆಗೆ ಮನವೊಲಿಸಿ, ಹೆಂಡಮಾರುವ ಈಳವರಿಗೆ ಪರ್ಯಾಯ ಉದ್ಯೋಗವಾಗಿ ನಾರಿನೋದ್ಯಮದಂತಹ ಗುಡಿಕೈಗಾರಿಕೆಗಳನ್ನು ಪ್ರೋತ್ಸಾಹಿಸಿದರು. ಕುಟುಂಬದ ಸ್ವಾಸ್ಥ್ಯ ಮತ್ತು ಸಾಮಾಜಿಕ ಚೇತರಿಕೆಗಾಗಿ ಕೆಳವರ್ಗದ ಮನಪರಿವರ್ತನೆಗೆ ಹಂಬಲಿಸಿದರು. ಆಧ್ಯಾತ್ಮಕ ಸಂತನೊಬ್ಬ ಹೀಗೆ ಲೌಕಿಕವಾಗಿ ಚಿಂತಿಸಿದ್ದು ದೇಶದ ಚರಿತ್ರೆಯಲ್ಲಿ ಅಪರೂಪವಾದುದು.

ಆರ್ಥಿಕ ಅಸಮಾನತೆಯೂ ಕ್ರೂರವಾಗಿತ್ತು, ಕೆಲವೇ ಬಲಾಢ್ಯರ ಪಾಲಾದ ಭೂ-ಒಡೆತನವು ಭೂರಹಿತರನ್ನು ಶೋಷಿಸುವುದು, ಅವರನ್ನು ಮತದಾನ ಇನ್ನಿತರ ಹಕ್ಕುಗಳಿಂದ ಹೊರಗಿಡುವುದು, ಬೆಳೆದಿದ್ದರ ಬಹುಪಾಲು ಕಂದಾಯವನ್ನಾಗಿ ವಸೂಲಿ ಮಾಡಿ ಬಡಜನರನ್ನು ಖಾಯಂ ಜೀತಕ್ಕೆ ನೂಕುವುದು. ಮುಂತಾದ ದೌರ್ಜನ್ಯಗಳ ವಿರುದ್ಧ ತಳೆದ ಸ್ಪಷ್ಟ ನಿಲುವುಗಳಲ್ಲಿ ಅವರೊಬ್ಬ ವೈಜ್ಞಾನಿಕ ಸಮಾಜವಾದದ ಪ್ರತಿಪಾದಕರಾಗಿಯೂ ಅನೇಕರಿಗೆ ಕಂಡರು.

ಗಾಂಧೀಜಿಯವರೊಂದಿಗೆ ಶ್ರೀ ನಾರಾಯಣ ಗುರು

ಗಾಂಧಿ, ರವೀಂದ್ರರು ಮೆಚ್ಚಿದ್ದರು
ಘನ ಉದ್ದೇಶದೊಂದಿಗೇ ಜನ್ಮವೆತ್ತಿದವರಂತಿದ್ದ ಗುರುಗಳು ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಚಳುವಳಿಗಳನ್ನು ಬಲವಾಗಿ ಸಂಘಟಿಸುವಾಗ ಅವರದ್ದು ಮೂವತ್ತೆರಡರ ಹರೆಯ!. ವಿಶ್ವಗುರು ರವೀಂದ್ರರು “ನಾನು ಹಲವಾರು ದೇಶಗಳನ್ನು ಸುತ್ತಿ ಬಂದಿದ್ದೇನೆ, ಅಸಂಖ್ಯ ದಾರ್ಶನಿಕರನ್ನು ಭೇಟಿಯಾಗಿದ್ದೇನೆ, ಆದರೆ ನಾರಾಯಣಗುರುಗಳಂತಹ ಜ್ಞಾನಸಂಪನ್ನನನ್ನು, ಆಧ್ಯಾತ್ಮಿಕ ಔನ್ನತ್ಯ ಪಡೆದ ವಿಭೂತಿ ಪುರುಷರನ್ನೂ ನಾನು ಈವರೆಗೂ ಕಂಡಿಲ್ಲ..” ಎಂದರೆ, ೧೯೨೫ರಲ್ಲಿ ಗುರುಗಳನ್ನು ಭೇಟಿ ಮಾಡಿದ ಗಾಂಧೀಜಿಯವರು “ಗುರುಗಳನ್ನು ಸಂದರ್ಶಿಸಿದ್ದು ತಮ್ಮ ಸುದೈವ.. ಅವರಿಂದ ಬಹಳಷ್ಟು ಕಲಿತಿದ್ದೇನೆ” ಎಂದಿದ್ದರು.

ಲೋಕದ ಅಗತ್ಯಗಳೇನೆಂಬುದರ ಬಗ್ಗೆ ಅವರಿಗಿದ್ದ ದೂರದೃಷ್ಟಿತ್ವಗಳು ಎಂದಿಗೂ ಅನುಕರಣನೀಯ. ವಿಪರ್ಯಾಸವೆಂದರೆ, ನಾವೆಲ್ಲರೂ ಗುರುಗಳ ಆದರ್ಶಗಳನ್ನು ವಿಚಾರವಾಗಿ ಎದೆಯಲ್ಲಿಟ್ಟುಕೊಳ್ಳುವ ಬದಲು ಅವರನ್ನು ಗುಡಿಕಟ್ಟಿ ಕೂಡಿಹಾಕಿರುವುದು!. ಜೀವಪರವಾಗಿ ಬದುಕು ಸವೆಸಿದ ದಾರ್ಶನಿಕರನ್ನೆಲ್ಲಾ ಜಾತಿ-ಧರ್ಮಗಳ ಸಂಕೋಲೆಯಿಂದ ಬಿಡಿಸಿ ಅವರು ಚೆಲ್ಲಿದ ಬೆಳಕಲ್ಲಿ ನಾವೀಗ ಸಾಗಬೇಕಿದೆ. ನಮ್ಮನ್ನೆಲ್ಲಾ ಕಾಯಬೇಕಿರುವುದು ದ್ವೇ಼ಷ-ರೋಷಗಳಲ್ಲ, ಸ್ವಾರ್ಥ-ಸಂಕುಚಿತತೆಯಲ್ಲ. ಮನುಷ್ಯಪ್ರೀತಿ, ಸಹಕಾರ ಮತ್ತು ಸೌಹಾರ್ಧತೆಗಳು.

ರಾಷ್ಟ್ರದ ಸಮಗ್ರತೆಗೆ ಮತ್ತು ಉನ್ನತಿಗೆ ಗುರುಗಳು ನೀಡಿದ ರಚನಾತ್ಮಕ ಮತ್ತು ಸಮನ್ವಯದ ಮಾರ್ಗವು ಈಗಲೂ ಎಲ್ಲೆಡೆ ತೋರುಗಂಬವಾಗಿ ಉಳಿದಿದೆ. ಅವರ ಸಂದೇಶಗಳು ಲಡಾಕ್‌ನ ಎತ್ತರದ ಪ್ರದೇಶದಲ್ಲಿಯೂ ಕೆತ್ತಲ್ಪಟ್ಟಿದೆ. ಅವರ ಸಭ್ಯತೆಯ ಬದುಕು, ಸಾಮಾಜಿಕ ಕಳಕಳಿ, ಸಹಬಾಳ್ವೆಯ ಅರಿವು, ವಾಸ್ತವ ಪ್ರಜ್ಞೆ, ಅಭಿವೃದ್ಧಿಯ ಆಶಯಗಳು ಆದರ್ಶ ಸಮಾಜದ ದಿಕ್ಸೂಚಿಗಳಂತಿವೆ. ಮತ್ತೆಮತ್ತೆ ಕಾಡುವ, ಪ್ರಚೋದಿಸುವ, ವಿಕಸಿಸುವ ಅಂತಹ ಜ್ಞಾನಮಾರ್ಗದಲ್ಲಿ ಇವತ್ತಿನ ಸಮಾಜ ಹೆಜ್ಜೆಹಾಕಬೇಕಾದ ತುರ್ತಿದೆ.

ಲೇಖರು ಶಿವಮೊಗ್ಗದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರು

ಇದನ್ನೂ ಓದಿ | ರಾಜ ಮಾರ್ಗ | ಅವರು ಹೋರಾಡಿದ್ದು ಅಸಮಾನತೆ ವಿರುದ್ಧ, ಪ್ರತಿಪಾದಿಸಿದ್ದು ಆತ್ಮೋದ್ಧಾರ, ಆತ್ಮವಿಶ್ವಾಸದ ಮಂತ್ರ

Exit mobile version