Site icon Vistara News

Swami Vivekananda | ಜಗತ್ತಿನ ಕಣ್ಣು ತೆರೆಸಿದ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ

Swami Vivekananda

ಸ್ವಾಮಿ ವೀರೇಶಾನಂದ ಸರಸ್ವತಿ
ಅಧ್ಯಕ್ಷರು, ರಾಮಕೃಷ್ಣ- ವಿವೇಕಾನಂದ ಆಶ್ರಮ, ತುಮಕೂರು
ಸ್ವಾಮಿ ವಿವೇಕಾನಂದ ಎಂಬ ಹೆಸರು ಇಂದು ಪ್ರಪಂಚದಲ್ಲಿ ಕೇವಲ ಒಬ್ಬ ಸನ್ಯಾಸಿಯ ಹೆಸರಾಗಿ ಉಳಿದಿಲ್ಲ. ಅಥವಾ ಧರ್ಮ ಪ್ರತಿನಿಧಿಯಾಗಿ ಮಾತ್ರ ಗುರುತಿಸಲ್ಪಡುತ್ತಿಲ್ಲ. “ವಿವೇಕಾನಂದ ವೇʼʼ ಎಂಬುದು ಇಂದು ತತ್ವವಾಗಿದೆ. ಜಗತ್ತಿನ ಇತಿಹಾಸ ಗಮನಿಸಿದಾಗ ಬುದ್ಧ, ಶಂಕರಾಚಾರ್ಯ ಮತ್ತು ಸ್ವಾಮಿ ವಿವೇಕಾನಂದರು ಜಗತ್ತು ಕಂಡ ಮಹಾ ಸಂತರು.

ಭಾರತೀಯರಾದ ನಾವೆಲ್ಲರೂ ಮಾಡುವ ತಪ್ಪು ಏನೆಂದರೆ ಕಾರ್ಲ್‌ ಮಾರ್ಕ್ಸ್‌ ಐರೋಪ್ಯ ರಾಷ್ಟ್ರಗಳನ್ನು ಗಮನದಲ್ಲಿಟ್ಟುಕೊಂಡು ಹೇಳಿದಂತಹ ʼರಿಲಿಜನ್ ಈಸ್ ದ ಒಪಿಯಂ ಆಫ್‌ ದಿ ಪೀಪಲ್‌ʼ ಎಂದು ಹೇಳಿರುವುದನ್ನು ಏಷ್ಯಾದ ಖಂಡದ ಭಾರತ ಸೇರಿದಂತೆ ಎಲ್ಲ ಧರ್ಮಿಕ ರಾಷ್ಟ್ರಗಳಿಗೂ ಜನರಲೈಜ್‌ ಮಾಡುವುದು. ಈ ದೊಡ್ಡ ಅಪರಾಧ ನಮ್ಮ ಇತಿಹಾಸಕಾರರಿಂದ, ಬುದ್ಧಿ ಜೀವಿಗಳಿಂದ, ಪ್ರಗತಿಪರರಿಂದ ಆಗಿದೆ. ಆದರೆ ನಾವಿಲ್ಲಿ ನೆನಪಿಟ್ಟುಕೊಳ್ಳಬೇಕಾಗಿರುವುದೇನೆಂದರೆ ಕಾರ್ಲ್‌ ಮಾರ್ಕ್ಸ್‌ರ, ಲೆನಿನ್‌ನರ ಚಿಂತನೆಗಳನ್ನು ರಷ್ಯಾ ಎಷ್ಟು ದಿನ ಕಾಪಿಟ್ಟುಕೊಂಡಿತು ಎಂಬುದನ್ನು ನೋಡಬೇಕು. ಕಾರ್ಲ್‌ ಮಾರ್ಕ್ಸ್‌ ಮತ್ತು ಲೆನಿನ್‌ರ ವಿಗ್ರಹಗಳು ಅಲ್ಲಿ ನುಚ್ಚು ನೂರಾಯಿತು ಐರೋಪ್ಯ ಒಕ್ಕೂಟ 20 ಕ್ಕೂ ಹೆಚ್ಚು ಚೂರುಗಳಾಗಿ ಹೋಳಾಯಿತು ಎಂಬುದು ಈಗ ಇತಿಹಾಸ.

ಆದರೆ ಸ್ವಾಮಿ ವಿವೇಕಾನಂದರು ಹೇಳುತ್ತಾರೆ “ರಿಲಿಜನ್‌ ಈಸ್‌ ಟಾನಿಕಲ್‌, ರಿಲಿಜನ್‌ ಈಸ್‌ ವೈಟಮಿನ್‌, ರಿಲಿಜನ್‌ ಈಸ್‌ ಸೋರ್ಸ್‌ ಆಫ್‌ ಎನರ್ಜಿʼʼ ಈ ಹಿನ್ನೆಲೆಯಲ್ಲಿ ನಾವು ಚಿಕಾಗೋನಲ್ಲಿ ನಡೆದಂತಹ ಉಪನ್ಯಾಸಗಳಿಗೆ ವಿಶೇಷ ಮಹತ್ವ ನೀಡಬೇಕಾಗುತ್ತದೆ.

ವಿಶ್ವ ಧರ್ಮ ಸಮ್ಮೇಳನ ಎಂಬುದು ಅಮೆರಿಕದ ಚಿಕಾಗೋದಲ್ಲಿ ನಡೆದ ಐತಿಹಾಸಿಕ ಧಾರ್ಮಿಕ ಸಮ್ಮೇಳನ. 179 ದಿನಗಳ ಕಾಲ ಈ ಜಾಗತಿಕ ಸಮ್ಮೇಳನ ನಡೆಯಿತು. 27 ಮಿಲಿಯನ್‌ ಜನರು ಇದರಲ್ಲಿ ಭಾಗವಹಿಸಿದ್ದರು. 59 ಧರ್ಮದ ಪ್ರತಿನಿಧಿಗಳು ಈ ಸರ್ವಧರ್ಮ ಸಮ್ಮೇಳನದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಂದು ಸಾವಿರಕ್ಕೂ ಹೆಚ್ಚು ಪ್ರಬಂಧಗಳು ಈ ಸರ್ವಧರ್ಮ ಸಮ್ಮೇಳನದಲ್ಲಿ ಮಂಡಿಸಲ್ಪಟ್ಟವು. ಈ ಚಿಕಾಗೋ ಸಮ್ಮೇಳನ ಕೊಲಂಬಿಯನ್‌ ಜಾಗತಿಕ ಮೇಳದ ಅವಿಭಾಜ್ಯ ಅಂಗವಾಗಿತ್ತು.

ಚಾರ್ಲ್ಸ್‌ ಬಾರ್ನಿ ಎಂಬ ಸುಪ್ರಸಿದ್ಧ ವಕೀಲ, ಲೇಖಕ ವಿಶೇಷವಾಗಿ ಗಮನ ಕೊಟ್ಟು ಈ ಸಮ್ಮೇಳನದ ಉದ್ದೇಶಗಳನ್ನು ರೂಪಿಸಿದ್ದ. ಮಾನವಕೋಟಿಗೆ ಸಂಬಂಧಿಸಿದ ಅತಿಮುಖ್ಯ ವಿಷಯಗಳೆಲ್ಲವೂ ಇಲ್ಲಿ ಚರ್ಚೆಯಾಗಬೇಕು. ಜಗತ್ತಿನ ಎಲ್ಲೆಡೆಯಿಂದ ಅತಿಥಿಗಳು ಬಂದು ಇಲ್ಲಿ ತಮ್ಮ ಅಭಿಪ್ರಾಯ ಮಂಡಿಸಬೇಕು ಎಂಬುದು ಚಾರ್ಲ್ಸ್‌ ಬಾರ್ನಿ ಉದ್ದೇಶವಾಗಿತ್ತು.

ಇಂತಹ ಮಹಾ ಸಮ್ಮೇಳನದಲ್ಲಿ ಸ್ತ್ರೀಯರ ಮುನ್ನಡೆ, ವೈದ್ಯಕೀಯ, ಶಸ್ತ್ರಚಿಕಿತ್ಸೆ, ವಿಜ್ಞಾನ, ಸಂಗೀತ, ಸರ್ಕಾರ, ಕಾನೂನು ಸುಧಾರಣೆ ಸೇರಿದಂತೆ 20ಕ್ಕೂ ಹೆಚ್ಚು ವೈವಿಧ್ಯಮಯ ವಿಷಯಗಳ ಬಗ್ಗೆ ಈ ಸಮ್ಮೇಳನ 1893ರ ಮೇ ತಿಂಗಳಿನಿಂದ ಅಕ್ಟೋಬರ್‌ ವರೆಗೆ ನೆರವೇರಿತ್ತು. ವಿಶ್ವಧರ್ಮ ಸಮ್ಮೇಳನವನ್ನು ಘೋಷಿಸಿದ್ದಾಗ ಪ್ರಮುಖವಾಗಿ ಮೂರು ಉದ್ದೇಶಗಳಿಗೆ ಇದನ್ನು ಏರ್ಪಾಟು ಮಾಡಲಾಗಿದೆ ಅಂತ ಪ್ರಚಾರ ಮಾಡಲಾಗಿತ್ತು. ಅದೇನು ಎಂದರೆ ಮೊದಲನೆಯದಾಗಿ, ವಿಶ್ವ ಭ್ರಾತೃತ್ವದ ನಿರ್ಮಾಣ, ಎರಡನೇಯದಾಗಿ, ಜಗತ್ತಿನ ಎಲ್ಲ ಧರ್ಮಗಳ ನಡುವೆ ಅರಿವು ಮತ್ತು ಹೊಂದಾಣಿಕೆ ರೂಪಿಸುವುದು, ಮೂರನೇಯದಾಗಿ ವಿಶ್ವ ಶಾಂತಿಗಾಗಿ ಶ್ರಮಿಸುವುದು.

ಮೇಲ್ನೋಟಕ್ಕೆ ಈ ಘನ ಉದ್ದೇಶಗಳಿವೆ ಎಂದು ಪ್ರಚಾರ ಮಾಡಲಾಗಿತ್ತಾದರೂ ಹಿಡನ್ ಅಜೆಂಡಾ ಬೇರೆಯೇ ಆಗಿತ್ತು. ಅದೇನೆಂದರೆ ಜಗತ್ತಿನ ಎಲ್ಲ ಧರ್ಮಗಳಿಗಿಂತ ಕ್ರೈಸ್ತ ಧರ್ಮ ಅತ್ಯಂತ ಶ್ರೇಷ್ಠವಾದುದು ಎಂದು ಸಾಬೀತು ಪಡಿಸುವುದು ಮೊದಲ ವಿಚಾರವಾಗಿದ್ದರೆ, ಜಗತ್ತಿನಾದ್ಯಂತ ಇರುವ ಕ್ರೈಸ್ತೇತರ ನಾಗರಿಕರನ್ನು ಅನಾಗಕರಿಕರು ಎಂದು ಸಾಬೀತುಪಡಿಸುವುದಾಗಿತ್ತು.

ಚಿಕಾಗೋದಲ್ಲಿ ಮಿಚಿಗನ್‌ ಅವೆನ್ಯೂನಲ್ಲಿ ನೂತನವಾಗಿ ನಿರ್ಮಾಣವಾಗಿದ್ದ, ಆರ್ಟ್‌ ಇನ್‌ಸ್ಟಿಟ್ಯೂಟ್ ಇದರ ಹಾಲ್‌‌ ಆಫ್‌ ಕೊಲಂಬಸ್‌ನಲ್ಲಿ ಈ ಸರ್ವಧರ್ಮ ಸಮ್ಮೇಳನದ ವೇದಿಕೆ ಆಯೋಜನೆಗೊಂಡಿತ್ತು. ಸ್ವಾಮಿ ವಿವೇಕಾನಂದರು 1893 ಸೆಪ್ಟೆಂಬರ್‌ 11ರ ಸೋಮವಾರದಂದು ತಮ್ಮ ಭಾಷಣ ಮಾಡಿದಾಗ ಅಮೆರಿಕದ ರೋಮನ್‌ ಕ್ಯಾಥೋಲಿಕ್‌ನ ಅತ್ಯಂತ ದೊಡ್ಡ ಧರ್ಮಗುರು ಕಾರ್ಡಿನಲ್‌ ಗಿಬನ್ಸ್‌ ವೇದಿಕೆಯಲ್ಲಿ ಮಧ್ಯದಲ್ಲಿ ಕುಳಿತಿದ್ದರು. ಕಾರ್ಯಕ್ರಮದ ಭಾಷಣದ ಮೊದಲನೇ ಸರತಿಯಲ್ಲಿ ಹಿಂದೂ ಧರ್ಮದ ಪ್ರತಿನಿಧಿಯಾಗಿ ಸ್ವಾಮಿ ವಿವೇಕಾನಂದರನ್ನು ಆಹ್ವಾನಿಸಲಾಗಿತ್ತು. ಆದರೆ ಅದುವರೆಗೆ ಮಾತನಾಡಿದ ಬಹಳಷ್ಟು ವಾಗ್ಮಿಗಳು ತಮ್ಮ ಧರ್ಮವೇ ಶ್ರೇಷ್ಠ ಎಂದು ಮಾತನಾಡಿದ್ದರಿಂದ ಸ್ವಾಮಿ ವಿವೇಕಾನಂದರು ನೊಂದಿದ್ದರು, ಅವರಿಗೆ ತುಂಬಾ ನಿರಾಶೆಯಾಗಿತ್ತು. ಅದುವರೆಗೆ ಮಾತನಾಡಿದವರೆಲ್ಲರದ್ದೂ ಏಕ ದೃಷ್ಟಿಯ ಮಾತುಗಳಾಗಿತ್ತು. ಹೀಗಾಗಿ ಎರಡನೇ ಸರತಿಯ ಆಹ್ವಾನ ನೀಡಿದಾಗಲೂ ಸ್ವಾಮಿ ವಿವೇಕಾನಂದರು ಭಾಷಣ ಮಾಡಲು ಉತ್ಸಾಹ ತೋರಲಿಲ್ಲ.

ಕೊನೆಗೆ ಮೂರನೇ ಸರತಿ ಬಂದಾಗ ಅವರು ಮಾತನಾಡಲೇಬೇಕಿತ್ತು. ಇಲ್ಲದಿದ್ದರೆ ಮುಂದೆ ಅವರಿಗೆ ಅವಕಾಶವಿರಲಿಲ್ಲ. ಆದರೂ ಅವರಿಗೆ ಮಾತನಾಡುವ ಉತ್ಸಾಹವೇನೂ ಇರಲಿಲ್ಲ. ಆಗ ಅವರ ಪಕ್ಕದಲ್ಲಿ ಕುಳಿತಿದ್ದಂತಹ ಫ್ರೆಂಚ್‌ ಪಾದ್ರಿ ಬಾನೆಟ್‌ ಮಾರ್ರಿ ಎಂಬುವರು ಅವರನ್ನು ಮಾತನಾಡುವಂತೆ ಪ್ರೋತ್ಸಾಹಿಸಿದರು. ಆಗ ಸ್ವಾಮಿ ವಿವೇಕಾನಂದರು ಥಟ್ಟನೆ ಎದ್ದು, ಆ ಭವ್ಯವಾದ ಏಳು ಸಹಸ್ರ ಅಕ್ಷರಸ್ಥ ಅಮೆರಿಕನ್ನರು ಸೇರಿದ್ದ ಆ ಸಭೆಯಲ್ಲಿ ತಮ್ಮ ಉಪನ್ಯಾಸ ಆರಂಭಿಸಿಯೇ ಬಿಟ್ಟರು. “ಅಮೆರಿಕದ ನನ್ನ ಸಹೋದರ, ಸಹೋದರಿಯರೇʼʼ ಇದು ಸ್ವಾಮಿ ವಿವೇಕಾನಂದರು ತಮ್ಮ ಉಪನ್ಯಾಸವನ್ನು ಆರಂಭಿಸಿದ ರೀತಿ. ಯಾವಾಗ ವಿವೇಕಾನಂದರ ಆತ್ಮದ ಆಳದಿಂದ ಈ ಮಾತುಗಳು ಹೊರಟವೋ ಸಭೆಯಲ್ಲಿ ಒಂದು ರೀತಿಯಲ್ಲಿ ನವಸ್ಫೂರ್ತಿ ಸಂಚಾರವಾಯಿತು. ಈ ಮಾತುಗಳನ್ನು ಕೇಳಿ ಆವೇಶಭರಿತರಾಗಿ ಸಹಸ್ರಾರು ಜನ ಕರತಾಡನ ಮಾಡಲಾಂಭಿಸಿದರು, ಜಯಘೋಷ ಮೊಳಗಿತು, ಜನಸ್ತೋಮ ಇದ್ದಕ್ಕಿದ್ದಂತೆ ಹುಚ್ಚರಂತೆ ಎರಡು ನಿಮಿಷ ಕರತಾಡನ ಮಾಡುತ್ತಲೇ ಇತ್ತು. ಸಭಾಧ್ಯಕ್ಷರು ನಿಯಂತ್ರಣಕ್ಕಾಗಿ ಪ್ರೀತಿ ಪೂರ್ವಕವಾಗಿ ಮಾಡಿಕೊಂಡ ಮನವಿಗೂ ಸಭಿಕರು ಮನ್ನಣೆ ನೀಡಿರಲಿಲ್ಲ.

ನೀವು ನಮಗೆ ನೀಡಿದ ಉತ್ಸಾಹಯುತ ಆದರದ ಸ್ವಾಗತಕ್ಕೆ ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಬೌದ್ಧ ಧರ್ಮ, ಜೈನ ಧರ್ಮಗಳೆರಡೂ ಯಾವುದರ ಶಾಖೆಗಳು ಮಾತ್ರವೋ ಅಂತಹ ಸಕಲ ಧರ್ಮಗಳ ಮಾತೆಯಾದ ಹಿಂದೂ ಧರ್ಮದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮತ್ತು ವಿವಿಧ ಜಾತಿ ಮತಗಳಿಗೆ ಸೇರಿದ ಕೋಟ್ಯಂತರ ಹಿಂದುಗಳ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅಲ್ಲದೆ, ‘ಇಲ್ಲಿ ಕಂಡುಬರುತ್ತಿರುವ ಸಹಿಷ್ಣುತಾಭಾವವನ್ನು ದೂರದೂರದ ದೇಶಗಳಿಂದ ಬಂದಿರುವ ಈ ಪ್ರತಿನಿಧಿಗಳು ತಮ್ಮೊಂದಿಗೆ ಒಯ್ದು ಪ್ರಸಾರ ಮಾಡುತ್ತಾರೆ’ ಎಂದು ಸಾರಿದ ಈ ವೇದಿಕೆಯ ಮೇಲಿನ ಕೆಲವು ಭಾಷಣಕಾರರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಜಗತ್ತಿಗೆ ಸಹಿಷ್ಣುತೆಯನ್ನೂ ಸರ್ವಧರ್ಮ ಸ್ವೀಕಾರ ಮನೋಭಾವವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು. ನಾವು ಸರ್ವ ಮತ ಸಹಿಷ್ಣುತೆಯನ್ನು ಒಪ್ಪುತ್ತೇವಷ್ಟೇ ಅಲ್ಲದೆ, ಸಕಲ ಧರ್ಮಗಳೂ ಸತ್ಯವೆಂದು ನಂಬುತ್ತೇವೆ. ಯಾವ ಧರ್ಮದ ಪವಿತ್ರ ಭಾಷೆಗೆ ‘ಎಕ್ಸ್’ಕ್ಲೂಶನ್’ ಎಂಬ ಪದವನ್ನು ಅನುವಾದಿಸಿಕೊಳ್ಳುವುದು ಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದ ಹೆಮ್ಮೆ ನನ್ನದು. ಹೀಗ ಅಂದು ಉಪನ್ಯಾಸ ನೀಡಿದ ಸ್ವಾಮಿ ವಿವೇಕಾನಂದರ ಮಾತುಗಳು ಜಗತ್ತಿನ ಕಣ್ಣು ತೆರೆಸಿದವು.

ಸ್ವಾತಂತ್ರ್ಯ ನಂತರ ಭಾರತ ಸ್ವಾಮಿ ವಿವೇಕಾನಂದರನ್ನು ಜವಾಬ್ದಾರಿಯುತವಾಗಿ ಸ್ವೀಕರಿಸಲಿಲ್ಲ. ಒಂದು ಸಾವಿರ ವರ್ಷಗಳ ದಾಸ್ಯದ ಸಂಕೋಲೆಯಿಂದ ಮುಕ್ತರಾಗಲು ಎಲ್ಲರನ್ನೂ ಪ್ರೇರೇಪಿಸಿದವರು ಸ್ವಾಮಿ ವಿವೇಕಾನಂದರು. ಇಂದು ಅವರ ಜೀವನ ಚಿಂತನೆಯನ್ನು ಅಧ್ಯಯನ ಮಾಡಿ, ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಇದನ್ನೂ ಓದಿ| Sree Narayana Guru Jayanthi | ಕಗ್ಗತ್ತಲ ಹಾದಿಯಲಿ ಕೈದೀವಿಗೆ ಹಿಡಿದು ನಡೆದವರು ಶ್ರೀ ನಾರಾಯಣ ಗುರು

Exit mobile version