ಉಡುಪಿ: ಇನ್ನು ಮುಂದೆ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಾಲಯಗಳಲ್ಲಿ ಮುದ್ರಾಧಾರಣೆ, ಜಯಂತಿ ಆಚರಣೆ ಸೇರಿದಂತೆ ಚಾಲ್ತಿಯಲ್ಲಿರುವ ಪದ್ಧತಿ, ಸಂಪ್ರದಾಯಗಳಿಗೆ ವಿರುದ್ಧ ಆಚರಣೆ ನಡೆಸುವಂತಿಲ್ಲ ಎಂಬ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸರ್ಕಾರದ ಆದೇಶವು ಅಸಂಗತವಾಗಿದೆ. ಇಲಾಖೆಯ ಒಳಗಿನ ಅಧಿಕಾರಿಗಳ ಕುಮ್ಮಕ್ಕಿನಿಂದ ಈ ರೀತಿ ಮಾಡಲಾಗಿದೆ. ಯಾವ ಮುಜರಾಯಿ ದೇವಸ್ಥಾನಗಳಲ್ಲೂ ಬಲವಂತದ ಮುದ್ರಾಧಾರಣೆ ಆಗಿಲ್ಲ. ಹೀಗಾಗಿ ತಕ್ಷಣವೇ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಮಾಧ್ವ ತತ್ವ ಅನುಯಾಯಿ ಜಿ.ವಾಸುದೇವ ಭಟ್ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ಅವರು, ಧಾರ್ಮಿಕ ದತ್ತಿ ಇಲಾಖೆಯ ಆದೇಶದ ಬಗ್ಗೆ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. ತ್ರಿಮತಸ್ಥ ಬ್ರಾಹ್ಮಣ ಪಂಗಡಗಳ ನಡುವೆ ಒಡಕು ಮೂಡಿಸುವ ಪಿತೂರಿ ನಡೆಯುತ್ತಿದೆ. ಸರ್ಕಾರವು ವಾಸ್ತವಾಂಶವನ್ನು ಗಮನಿಸಬೇಕು. ಮಂತ್ರಿಗಳ ಗಮನಕ್ಕೆ ಬಾರದೆ ಅಧಿಕಾರಿಗಳಿಂದ ಈ ಕೆಲಸ ಆಗಿರಬಹುದು. ಶತಮಾನಗಳಿಂದ ನಡೆದು ಬಂದಿರುವ ಆಗಮೋಕ್ತ ಸಂಪ್ರದಾಯದಂತೆ ಪೂಜೆ ನಡೆಯುತ್ತದೆ. ದೇವಾಲಯದ ಚಾವಡಿಗಳಲ್ಲಿ ಪ್ರಾಥಸ್ಮರಣೀಯ ಆಚಾರ್ಯರ ಜಯಂತಿ ಆಚರಿಸಿದರೇ ತಪ್ಪೇನು? ಎಂದು ಪ್ರಶ್ನೆ ಮಾಡಿದ್ದಾರೆ.
ಮಧ್ವಾಚಾರ್ಯರನ್ನು ಗುರುಗಳು ಎಂದು ಸ್ವೀಕರಿಸಿರುವ ದೊಡ್ಡ ಸಮುದಾಯವೇ ಇದೆ. ದೇವಸ್ಥಾನದ ಚಾವಡಿಗಳಲ್ಲಿ ಮುದ್ರಾಧಾರಣೆ ಅನೇಕ ಸಮಯದಿಂದ ನಡೆಸಲಾಗುತ್ತಿದೆ. ಇದು ಭಕ್ತರ ಅನುಕೂಲಕ್ಕೆ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಈ ಬಗ್ಗೆ ಯಾರು ದೂರು ನೀಡಿದ್ದಾರೋ ಗೊತ್ತಿಲ್ಲ. ಮುದ್ರಾಧಾರಣೆ ನಡೆಸುವುದರಿಂದ ದೇವಾಲಯದ ಪದ್ಧತಿಯ ಮೇಲೆ ಯಾವುದೇ ಸವಾರಿ ನಡೆಯುವುದಿಲ್ಲ. ಯಾರಿಗೂ ಬಲವಂತವಾಗಿ ಮುದ್ರಾಧಾರಣೆಯನ್ನು ಮಾಡುವುದಿಲ್ಲ. ಇದನ್ನು ಒಪ್ಪುವವರಿಗೆ ಮಾತ್ರ ಮಾಡಲಾಗುತ್ತದೆ. ಇಲ್ಲಿ ಯಾವುದೇ ಪೂರ್ವಗ್ರಹ ದೃಷ್ಟಿಕೋನಗಳಿಲ್ಲ. ಈ ಸುತ್ತೋಲೆಯನ್ನು ತಕ್ಷಣ ವಾಪಸ್ ಪಡೆಯಬೇಕು. ಒಬ್ಬ ಸನಾತನಿಯಾಗಿ ಇದು ನಮ್ಮ ಆಗ್ರಹವಾಗಿದೆ ಎಂದು ವಾಸುದೇವ ಭಟ್ ಅವರು ಒತ್ತಾಯಿಸಿದ್ದಾರೆ.
ಇವರಲ್ಲದೆ, ಅನೇಕ ಜ್ಯೋತಿಷಿಗಳು, ಹಿಂದು ಸಂಘಟನೆಗಳವರು ಸೇರಿದಂತೆ ಇನ್ನೂ ಅನೇಕರು ಆಕ್ರೋಶವನ್ನು ಹೊರಹಾಕಿದ್ದು, ಸಾಮಾಜಿಕ ಜಾಲತಾಣಗಳ ಸಹಿತ ಇನ್ನಿತರ ವೇದಿಕೆಯಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ | ಮುಜರಾಯಿ ದೇಗುಲದ ಅರ್ಚಕರಿಗೂ 65 ವರ್ಷಕ್ಕೆ ನಿವೃತ್ತಿ?
ಆದೇಶದಲ್ಲಿ ಏನಿದೆ?
ಕರ್ನಾಟಕ ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ಸಂಸ್ಥೆಗಳಲ್ಲಿ ಸೂಕ್ತ ಸಂಪ್ರದಾಯಗಳು, ಆಚರಣೆಗಳು ಮತ್ತು ಪದ್ಧತಿಗಳನ್ನು ಪಾಲಿಸಲು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, 1997ರ ಸೆಕ್ಷನ್ 58ರ ಅಡಿಯಲ್ಲಿ ಈ ಕೆಳಕಂಡಂತೆ ಉಪಬಂಧವನ್ನು ಕಲ್ಪಿಸಲಾಗಿದೆ.
“ಆಯುಕ್ತ ಮುಂತಾದವರು ಸೂಕ್ತ ಸಂಪ್ರದಾಯಗಳು, ಆಚರಣೆಗಳು ಮತ್ತು ಸಮ್ಮತಿಗಳನ್ನು ಪಾಲಿಸುವುದು:- ಈ ಅಧಿನಿಯಮದ ಅಡಿಯಲ್ಲಿ ಅಧಿಕಾರಗಳನ್ನು ಚಲಾಯಿಸುತ್ತಿರುವ ಅಥವಾ ಪ್ರಕಾರ್ಯಗಳನ್ನು ನಿರ್ವಹಿಸುತ್ತಿರುವ ಆಯುಕ್ತರ ಉಪ-ಆಯುಕ್ತ ಮತ್ತು ಸಹಾಯಕ ಆಯುಕ್ತರು ಮತ್ತು ಇತರ ಪ್ರತಿಯೊಬ್ಬ ವ್ಯಕ್ತಿಯು ಯುವ ಅಧಿಸೂಚಿತ ಸಂಖ್ಯೆ ಅಥವಾ ಪೋಷಿತ ಸಂಖ್ಯೆಯ ಸಂಬಂಧದಲ್ಲಿ ಅಂಥ ಅಧಿಕಾರಗಳನ್ನು ಚಲಾಯಿಸಲಾಗುತ್ತಿದೆಯೋ ಅಂಥ ಸಂಖ್ಯೆಗೆ ಸೂಕ್ತವಾದ ಸಂಪ್ರದಾಯ ಆಚರಣೆ ಸಮಾರಂಭ ಮತ್ತು ಪದ್ಧತಿಗಳಲ್ಲಿ ಹಸ್ತಕ್ಷೇಪ ಮಾಡತಕ್ಕದ್ದಲ್ಲ ಮತ್ತು ಅವುಗಳನ್ನು ಪಾಲಿಸತಕ್ಕದ್ದು”
ಮೇಲ್ಕಂಡ ಉಪಬಂಧದ ಅನ್ವಯ ಆಯಾಯ ಅಧಿಸೂಚಿತ ಸಂಸ್ಥೆಗಳಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ, ಆಚರಣೆ ಸಮಾರಂಭ ಮತ್ತು ಪದ್ಧತಿಗಳನ್ನು ಆಯಾಯ ದೇವಾಲಯಗಳ ಆಗಮ ಶಾಸ್ತ್ರಕ್ಕೆ ಅನುಗುಣವಾಗಿ ಪಾಲಿಸಬೇಕಾಗಿರುತ್ತದೆ.
ಇದನ್ನೂ ಓದಿ | Police Alert | ಅಂಡರ್ ಪಾಸ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ ಎಂಬ ಆದೇಶ ವಾಪಸ್‌ಗೆ ಒತ್ತಾಯ
ಆದರೆ, ಇತ್ತೀಚಿನ ದಿನಗಳಲ್ಲಿ, ದೇವಾಲಯದಲ್ಲಿ ನಡೆದು ಬಂದಿರುವ ಪದ್ಧತಿಗಳಿಗೆ ವಿರುದ್ಧವಾಗಿ ಧಾರ್ಮಿಕ ಆಚರಣೆಗಳನ್ನು ನಡೆಸುವುದು, ನಾಮಫಲಕ, ಫೋಟೋ ಇತ್ಯಾದಿಗಳನ್ನು ಅಳವಡಿಸುತ್ತಿರುವ ಬಗ್ಗೆ, ಆಕ್ಷೇಪಗಳು/ದೂರುಗಳು ಬಂದಿರುತ್ತವೆ.
ದಿನಾಂಕ: 02.11.2022 ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಈ ವಿಚಾರವು ಪ್ರಸ್ತಾಪವಾಗಿ ಆಯಾಯ ದೇವಾಲಯದಲ್ಲಿ ಆಚರಿಸಲಾಗುತ್ತಿರುವ ಹಾಗೂ ಚಾಲ್ತಿಯಲ್ಲಿರುವ ಪದ್ಧತಿ, ಸಂಪ್ರದಾಯಗಳಿಗೆ ವಿರುದ್ಧವಾಗಿ ಧಾರ್ಮಿಕ ಆಚರಣೆ ನಡೆಸುವುದು, ಮುದ್ರಾಧಾರಣೆ ಮಾಡುತ್ತಿರುವುದು, ಜಯಂತಿಗಳನ್ನು ಆಚರಿಸುವುದು, ಭಾವಚಿತ್ರಗಳನ್ನು ಅಳವಡಿಸುತ್ತಿರುವುದಕ್ಕೆ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಆಯಾಯ ದೇವಾಲಯಗಳಲ್ಲಿ ಚಾಲ್ತಿಯಲ್ಲಿರುವ ಧಾರ್ಮಿಕ ಪದ್ಧತಿ ಸಂಪ್ರದಾಯಗಳಿಗೆ ವಿರುದ್ಧವಾಗಿ ಧಾರ್ಮಿಕ ಸಮ್ಮತಿ, ಸಂಪ್ರದಾಯಗಳನ್ನು ಅನುಸರಿಸುವುದು, ಭಾವಚಿತ್ರ, ವಿಗ್ರಹಗಳನ್ನು ಅಳವಡಿಸುವುದು, ಮುದ್ರಾಧಾರಣೆ ಮಾಡುವುದು, ಜಯಂತಿಗಳನ್ನು ಆಚರಿಸುವುದನ್ನು ನಡೆಸದಂತೆ ಹಾಗೂ ಇದಕ್ಕೆ ವಿರುದ್ಧವಾಗಿ ಈಗಾಗಲೇ ನಡೆಸಲಾಗಿರುವ ಭಾವಚಿತ್ರ ಬೋರ್ಡ್‌ಗಳನ್ನು ತೆರವುಗೊಳಿಸಲು ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ | ಬೆಂಗಳೂರು | ದೊಡ್ಡ ಗಣಪತಿ ದೇವಸ್ಥಾನದ ವಿವಾದಾತ್ಮಕ ಟೆಂಡರ್ ರದ್ದು