ತಿರುಪತಿ: ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ( Tirupati Temple) ದೇವರ ದರ್ಶನಕ್ಕೆ ತಗಲುವ ಸಮಯ 40 ಗಂಟೆಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಕಾಯುವಿಕೆಯ ಸಮಯವನ್ನು ತಗ್ಗಿಸಿ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡಲು ತಿರುಮಲ ತಿರುಪತಿ ದೇವಸ್ಥಾನಮ್ (Tirumala Tirupati Devasthanam-TTD) ಹೊಸ ನಿಯಮಗಳನ್ನು ಘೋಷಿಸಿದೆ. ಅದರ ವಿವರ ನೋಡೋಣ.
ಬೇಸಗೆಯ ಅವಧಿಯಾಗಿರುವ ಕಾರಣ ಹಾಗೂ ಕೋವಿಡ್ ನಿರ್ಬಂಧಗಳು ಸಡಿಲವಾಗಿ ಮೂರು ವರ್ಷ ಸಮೀಪಿಸಿರುವ ಹಿನ್ನೆಲೆಯಲ್ಲಿ ತಿರುಪತಿಗೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ 2023 ಜೂನ್ 30 ರ ತನಕ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಟಿಟಿಡಿ ಚೇರ್ಮನ್ ವೈ.ವಿ ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.
ಟಿಟಿಡಿ ಪ್ರಕಾರ ತಿರುಪತಿಯಲ್ಲಿ ಟೋಕನ್ ರಹಿತ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ 30-40 ಗಂಟೆ ಬೇಕಾಗುತ್ತದೆ. ಹೀಗಾಗಿ ವಿಐಪಿ ಬ್ರೇಕ್ ದರ್ಶನ್ ಮತ್ತು ಆರ್ಜಿತ ಸೇವೆಗಳಲ್ಲಿ ಕೆಲ ಬದಲಾವಣೆ ತರಲಾಗಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಸುಪ್ರಭಾತ ಸೇವೆಯಲ್ಲಿ ವಿವೇಚನಾ ಕೋಟಾ (discretionary quota) ಅನ್ನು ಹಿಂತೆಗೆದುಕೊಳ್ಳಲಾಗಿದೆ. ಇದರಿಂದ ಸಾಮಾನ್ಯ ಭಕ್ತರಿಗೆ ದೇವರ ದರ್ಶನಕ್ಕೆ ತಗಲುವ ಸಮಯದಲ್ಲಿ 20 ನಿಮಿಷ ಉಳಿತಾಯವಾಗಲಿದೆ.
ಅದೇ ರೀತಿ ತಿರುಪ್ಪವಾಡ ಸೇವೆಯನ್ನು ಗುರುವಾರ ನಡೆಸಲು ಟಿಟಿಡಿ ನಿರ್ಧರಿಸಿದೆ. ಇದರಿಂದ 30 ನಿಮಿಷ ಸಮಯ ಉಳಿತಾಯವಾಗಲಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಐಪಿ ರೆಕಮಂಡೇಶನ್ ಲೆಟರ್‌ಗಳನ್ನೂ ಟಿಟಿಡಿ ಸ್ವೀಕರಿಸದಿರಲು ನಿರ್ಧರಿಸಿದೆ. ಆದರೆ ಸೆಲ್ಫ್-ವಿಐಪಿಗಳಿಗೆ ಮಾತ್ರ ಬ್ರೇಕ್ ದರ್ಶನ್‌ಗೆ ಅನುಮತಿ ನೀಡಲಾಗಿದೆ. ಎಲ್ಲ ಭಕ್ತರು, ವಿಐಪಿಗಳು ಸಹಕರಿಸಬೇಕು ಎಂದು ಟಿಟಿಡಿ ಕೋರಿದೆ.
ಟಿಟಿಡಿ ಪ್ರಕಾರ ವೆಂಕಟೇಶ್ವರನ ಸನ್ನಿಧಿಯಲ್ಲಿ ನಿತ್ಯ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮೂರು ಪ್ರಧಾನ ಪೂಜೆಗಳು ನಡೆಯುತ್ತವೆ. ರಾತ್ರಿಯ ಪೂಜೆಯಲ್ಲಿ ಅರ್ಚಕರು, ಪರಿಚಾರಕರು, ಆಚಾರ್ಯರು ಮಾತ್ರ ಭಾಗವಹಿಸುತ್ತಾರೆ. ಉಳಿದ ಪೂಜೆಗಳನ್ನು ಎಲ್ಲ ಭಕ್ತಾದಿಗಳೂ ವೀಕ್ಷಿಸಬಹುದು.
ಇದನ್ನೂ ಓದಿ: Tirupati Temple: ಮಾರ್ಚ್ 1ರಿಂದ ತಿರುಪತಿ ದೇಗುಲದಲ್ಲಿ ಫೇಸ್ ರಿಕಗ್ನೇಷನ್ ವ್ಯವಸ್ಥೆ