Site icon Vistara News

Tulsi Puja 2022 | ಉತ್ಥಾನ ದ್ವಾದಶಿಯಂದು ತುಳಸಿಯೊಂದಿಗೆ ನೆಲ್ಲಿಗಿಡಕ್ಕೇಕೆ ಪೂಜೆ?

Tulsi Puja 2022

ವಿದ್ವಾನ್ ಬಿ. ಜಿ. ಅನಂತ
ಶರದೃತು ಎಂದರೆ ಅದು ಹಬ್ಬಗಳ ಕಾಲ. ಯೋಗಾಭ್ಯಾಸವನ್ನು ಪ್ರಾರಂಭ ಮಾಡುವವರು ಶರತ್ಕಾಲದಲ್ಲಿ ಅದನ್ನು ಪ್ರಾರಂಭಿಸಬೇಕು ಎನ್ನುತ್ತದೆ ಯೋಗಶಾಸ್ತ್ರ. ಪ್ರಸ್ತುತ ಕಾರ್ತಿಕ ಮಾಸವು ಶರದೃತುವಿನಲ್ಲಿ ಬರುವ ಒಂದು ಮಾಸ ವಿಶೇಷ. ಈ ಮಾಸವನ್ನು  ಪ್ರಧಾನವಾಗಿ ಯೋಗದ ಸಾಧನೆಗೆ  ಹೇಳಲಾಗಿದೆ. “ಕಾರ್ತಿಕೇ ಜ್ಞಾನ ಸಿದ್ಧಿಃ ಸ್ಯಾತ್ʼʼ-ಎಂದರೆ ಕಾರ್ತಿಕ ಮಾಸದಲ್ಲಿ ಜ್ಞಾನ ಸಿದ್ಧಿಯು ಉಂಟಾಗುತ್ತದೆ ಎಂದು. ಅಂತೆಯೇ “ಕಾರ್ತಿಕೇ ತು ಕೃತಾ ದೀಕ್ಷಾ ನೃಣಾಂ ಜನ್ಮವಿಮೋಚಿನೀʼʼ ಎಂಬಂತೆ ಕಾರ್ತಿಕ ಮಾಸವು ಮಂತ್ರ ದೀಕ್ಷೆಯ ಸ್ವೀಕಾರಕ್ಕೂ ಪ್ರಶಸ್ತವಾದದ್ದು.

ಇನ್ನು ಚಂದ್ರನು ಕೃತಿಕಾ ನಕ್ಷತ್ರದಲ್ಲಿ ತನ್ನ ಪೂರ್ಣತೆಯನ್ನು ಎಂದರೆ ಹುಣ್ಣಿಮೆಯನ್ನು ಕಾಣುವ ಮಾಸ ಕಾರ್ತಿಕ ಮಾಸ. ಕೃತಿಕಾ ನಕ್ಷತ್ರದ ಅಧಿದೇವತೆ ಸುಬ್ರಹ್ಮಣ್ಯ. ಹಾಗಾಗಿ ಇದು ಸುಬ್ರಹ್ಮಣ್ಯನಿಗೂ ಮತ್ತು ಶಿವನಿಗೂ ಪ್ರಿಯವಾದ ಎಂದರೆ ಅವರುಗಳ ಆರಾಧನೆಗೂ ಕೂಡ ಪ್ರಶಸ್ತವಾದ ಕಾಲ ಎಂದರ್ಥ. “ಜ್ಞಾನಂ ಮಹೇಶ್ವರಾದಿಚ್ಛೇತ್ʼʼ -ಎಂದರೆ ಆತ್ಮ ಜ್ಞಾನವನ್ನು ಬಯಸುವವರು ಮಹೇಶ್ವರನಿಂದ ಅದನ್ನು ಪಡೆಯಬೇಕು ಎಂಬ ಮಾತಿದೆ. ಹಾಗಾಗಿಯೇ ಈ ಮಾಸದಲ್ಲಿ ಬರುವ ಸೋಮವಾರಗಳು ಶಿವನಿಗೆ ಅತ್ಯಂತ ಪ್ರಿಯವಾದವುಗಳಾಗಿವೆ.

ಕಾರ್ತಿಕ ಮಾಸದ ಇತರ ಪರ್ವ ದಿವಸಗಳು
ಕಾರ್ತಿಕ ಶುಕ್ಲ ನವಮಿಯು ವಿಷ್ಣುತ್ರಿರಾತ್ರ ವ್ರತಕ್ಕೆ ನಿಯತವಾದ ಕಾಲವಾಗಿದೆ. ಕಾರ್ತಿಕ ಶುಕ್ಲ ಚತುರ್ದಶಿಯು ವೈಕುಂಠ ಚತುರ್ದಶಿ ಎಂದು ವೈಕುಂಠ ನಾರಾಯಣನ ಆರಾಧನೆಗೂ ಅಂತೆಯೇ ವಿಶ್ವೇಶ್ವರನ ಪ್ರತಿಷ್ಠಾ ದಿನವೆಂದು ಶಿವನ ಆರಾಧನೆಗೂ ಪ್ರಶಸ್ತವಾಗಿದೆ. 

ಕಾರ್ತಿಕ ಪೂರ್ಣಿಮೆಯು ಮತ್ಸ್ಯಾವತಾರದ ದಿನವೆಂದು ನಾರಾಯಣನ ಪೂಜೆಗೂ ತ್ರಿಪುರೋತ್ಸವ ದಿನವೆಂದು ಶಿವನ ಆರಾಧನೆಗೂ ಶ್ರೇಷ್ಠವಾಗಿದೆ. ಹೀಗೆ ಕಾರ್ತಿಕ ಮಾಸವು ಶಿವನ ಆರಾಧನೆಗೂ, ವಿಷ್ಣುವಿನ ಆರಾಧನೆಗೂ ಪ್ರಶಸ್ತವಾದ ಕಾಲವಾಗಿದೆ. ಒಟ್ಟಾರೆ ಜ್ಞಾನ ಭಕ್ತಿ ವೈರಾಗ್ಯ ಇವುಗಳ ಸಾಧನೆಗೆ ಪ್ರಶಸ್ತ ವಾಗಿರುವ ಕಾಲ ಎಂದಂತಾಯಿತು. ಇದರಲ್ಲಿ ಅತ್ಯಂತ ಪ್ರಸಿದ್ಧವಾಗಿರುವುದು ಉತ್ಥಾನ ದ್ವಾದಶೀ (Tulsi Puja 2022) ಎಂಬ ಮಹಾಪರ್ವ.

ಏನಿದು ಉತ್ಥಾನ ದ್ವಾದಶೀ?
ಹೆಸರೇ ಹೇಳುವಂತೆ ಇದು ದ್ವಾದಶೀ ತಿಥಿಯಂದು ಬರುತ್ತದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ರೇವತೀ ನಕ್ಷತ್ರದ ಯೋಗವಿಲ್ಲದೇ ಇರುವ ದಿವಸದಲ್ಲಿ ಉತ್ಥಾನ ದ್ವಾದಶಿಯನ್ನು ಆಚರಿಸಬೇಕು. ಒಂದೊಮ್ಮೆ ರೇವತಿ ನಕ್ಷತ್ರದ ಯೋಗವು ಇಲ್ಲದೇ ಇರುವ ದ್ವಾದಶಿಯು ದೊರಕದಿದ್ದರೆ, ರೇವತಿಯ ನಾಲ್ಕನೆಯ ಭಾಗವನ್ನಾದರೂ ಬಿಟ್ಟು ಆಚರಿಸಬೇಕು.

ಯಾರು ಇದರ ಆರಾಧ್ಯ ದೈವ?
ಪ್ರಧಾನವಾಗಿ ಧಾತ್ರಿ ಎಂದರೆ ನೆಲ್ಲಿಯ ಗಿಡ, ತುಳಸಿ ಮತ್ತು ಮಹಾವಿಷ್ಣು ಈ ಮೂವರೂ ಉತ್ಥಾನ ದ್ವಾದಶೀ ದಿವಸದಂದು ಪೂಜಿಸಲ್ಪಡುವ ದೇವರುಗಳು.  ಅದರಲ್ಲಿಯೂ ಮಹಾವಿಷ್ಣುವು ಇಂದಿನ ದಿವಸದ ಪ್ರಧಾನ ಆರಾಧ್ಯದೈವ.

ಹಬ್ಬದ ಹಿನ್ನೆಲೆ ಏನು?
ಈ ಹಬ್ಬಕ್ಕೆ ಸಂಕ್ಷೇಪವಾಗಿ ಈ ರೀತಿಯಾಗಿ ಹಿನ್ನೆಲೆಯನ್ನು ಸ್ಮರಿಸಿಕೊಳ್ಳಬಹುದು- ಉತ್ಥಾನ ದ್ವಾದಶಿಗೆ ನಾಲ್ಕು ತಿಂಗಳ ಮುಂಚೆ ವ್ಯಾಸ ಪೂರ್ಣಿಮೆ ಎಂಬ ಪರ್ವವು ಆಚರಿಸಲ್ಪಡುತ್ತದೆ. ಅದು ವರ್ಷಾಕಾಲದ ಆರಂಭ. ಅಂದು ಮೊದಲುಗೊಂಡು ಎಲ್ಲರೂ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡಿರುತ್ತಾರೆ. ಅಂದು ಶುರುವಾದ ಚಾತುರ್ಮಾಸ್ಯ ವ್ರತವನ್ನು ಉತ್ಥಾನ ದ್ವಾದಶಿಯ ದಿವಸ ಮಂಗಳ ಮಾಡಬೇಕು, ಎಂದರೆ ಕೊನೆಗಾಣಿಸಬೇಕು.

ಚಾತುರ್ಮಾಸ್ಯದ ಸಮಯದಲ್ಲಿ ಮಹಾವಿಷ್ಣುವು ತಾನು ಯೋಗ ನಿದ್ರೆಯಲ್ಲಿ ಪವಡಿಸಿರುತ್ತಾನೆ ಎನ್ನುತ್ತವೆ ಶಾಸ್ತ್ರಗಳು.  ಈ ಉತ್ಥಾನ ದ್ವಾದಶಿಯ ದಿವಸ ಮಹಾವಿಷ್ಣುವು ತನ್ನ ಅಜಾಡ್ಯ ನಿದ್ರೆಯನ್ನು ತೊರೆದು ಜಾಗರೂಕನಾಗಿ ಲೋಕವನ್ನೆಲ್ಲ ಅನುಗ್ರಹಿಸುವ ಕಾಲ. ಎಂದರೆ ಭಕ್ತರು ತಮ್ಮ ಸ್ವಾಮಿಯಾದ ಮಹಾವಿಷ್ಣುವಿಗೆ ಸುಪ್ರಭಾತವನ್ನು ಹಾಡಿ ಎದ್ದೇಳಿಸುವ ಕಾಲ. “ಎಲೈ ಜಗದೊಡೆಯನೇ ಗೋವಿಂದನೇ ದೇವೇಶನೇ ಎದ್ದೇಳು ಮೋಡಗಳು ಹೊರಟುಹೋದವು, ಆಕಾಶವು ನಿರ್ಮಲವಾಯಿತು. ನಾನು ಸಮರ್ಪಿಸುವ ಈ ಶರತ್ಕಾಲದ ಪುಷ್ಪಗಳನ್ನು ಸ್ವೀಕರಿಸು, ನಾನು ಮಾಡಿದ ಚಾತುರ್ಮಾಸ್ಯ ವ್ರತವು ನಿನ್ನ ಪ್ರೀತಿಗೆ ವಿಷಯವಾಗಲಿ ಇದರಲ್ಲಿ ಉಂಟಾಗಿರುವ ಕುಂದುಕೊರತೆಗಳು ನಿನ್ನ ಅನುಗ್ರಹದಿಂದ ಪೂರ್ಣವಾಗಲಿದೆʼʼ ಎಂದು ಭಗವಂತನ ಎದುರಿಗೆ ಚಾತುರ್ಮಾಸ್ಯ ವ್ರತಕ್ಕೆ ಸಮಾಪ್ತಿ ಮಂಗಳವನ್ನು ಮಾಡಬೇಕು.

ಹಾಗೆ ಎಚ್ಚರಗೊಂಡ ಭಗವಂತನನ್ನು ರಥದಲ್ಲಿ ಕೂರಿಸಿ ಬಿಜಯ ಮಾಡಿಸಿ (ಉತ್ಸವ) ವಾದ್ಯ ಸಮೇತವಾಗಿ ಮೆರವಣಿಗೆಯನ್ನು ಮಾಡಿಸಬೇಕು. ಉತ್ಸವದ ಸಂದರ್ಭದಲ್ಲಿ ತಮ್ಮ ತಮ್ಮ ಮನೆಯ ಬಾಗಿಲಿಗೆ ಬರುವ ಭಗವಂತನನ್ನು ಎಲ್ಲರೂ ಪರಮ ಪ್ರೀತಿಯಿಂದ ಸ್ವಾಗತಿಸಿ ನಮಸ್ಕರಿಸಬೇಕು. ಹೂವು ಹಣ್ಣು ತೆಂಗಿನಕಾಯಿ ತಾಂಬೂಲ ಇತ್ಯಾದಿಗಳನ್ನು ಭಗವಂತನಿಗೆ ಸಮರ್ಪಿಸಬೇಕು.  ಹೊಸದಾದ ನೆಲ್ಲಿಯ ಕಾಯಿಯನ್ನು ಕೊರೆದು ಅದರಲ್ಲಿ ಹಸುವಿನ ತುಪ್ಪವನ್ನು ಹಾಕಿ ದೀಪವನ್ನು ಹಚ್ಚಿ ಆ ದೀಪದಿಂದ ಭಗವಂತನಿಗೆ ಆರತಿಯನ್ನು ಎತ್ತುವ ಸಂಪ್ರದಾಯವಿದೆ.

ತುಳಸಿ ವಿವಾಹ
ಮಹಾವಿಷ್ಣುವನ್ನು ಎಚ್ಚರಗೊಳಿಸುವ ಪ್ರಬೋಧೋತ್ಸವದೊಂದಿಗೆ ತುಳಸೀ ವಿವಾಹವನ್ನು (Tulsi Puja 2022) ಮಾಡುವ ಪದ್ಧತಿಯಿದೆ.  ಶ್ರೀ ಭಗವಂತನಿಗೂ ಮತ್ತು ತುಳಸೀದೇವಿಗೂ ವಿವಾಹವನ್ನು ಮಾಡಿ, ಮಹಾವಿಷ್ಣುವಿಗೆ ತುಳಸಿಯನ್ನು ದಾನವಾಗಿ ಕೊಡಬೇಕು. ಇದರಿಂದ ನನಗೆ ಮೋಕ್ಷವು ಸಿಗಲಿ ಎಂದು ಪ್ರಾರ್ಥಿಸಬೇಕು. ಅಂತೆಯೇ ಹೊಸ ನೆಲ್ಲಿಕಾಯಿಯಿಂದ ಕೂಡಿದ ನೆಲ್ಲಿ ಕೊಂಬೆಯೊಡನೆ ತುಳಸೀ ಗಿಡವನ್ನು ಸೇರಿಸಿ ಮಧ್ಯದಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ಇಟ್ಟು ಪೂಜಿಸುವ ಪದ್ಧತಿಯೂ ಇದೆ. ಇಲ್ಲಿಯೂ ಕೂಡ ಪೂಜೆಯಲ್ಲಿ ದೀಪವನ್ನು ಹತ್ತಿಸುವಾಗ ನೆಲ್ಲಿಕಾಯನ್ನು ಬಟ್ಟಲಾಗಿ ಮಾಡಿಕೊಂಡು ಅದರಲ್ಲಿ ಶುದ್ಧವಾದ ಹಸುವಿನ ತುಪ್ಪದ ದೀಪವನ್ನು ಹಚ್ಚುವುದು ಬಹಳ ಶ್ರೇಷ್ಠ. ಹಸುವಿನ ತುಪ್ಪವು ದೊರಕದಿದ್ದರೆ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚುವ ವಾಡಿಕೆಯೂ ಇದೆ.

ಇಲ್ಲಿ ಕೆಲವು ಪ್ರಶ್ನೆಗಳು ಬರಬಹುದು. ಭಗವಂತನು ಸದಾ ಸರ್ವದಾ ಎಚ್ಚರವಾಗಿರುವವನು. ಅವನಿಗೆ ನಿದ್ರೆಯುಂಟೆ? ಅದೂ 4 ತಿಂಗಳುಗಳ ಕಾಲ?  ಹಾಗೊಮ್ಮೆ ಅವನು ನಾಲ್ಕು ತಿಂಗಳು ಮಲಗಿಬಿಟ್ಟರೆ ಈ ಲೋಕದ ಕಥೆಯೇನು? ಎನಿಸಬಹುದು.  ಆದರೆ ಭಗವಂತನ ನಿದ್ರೆಯನ್ನು ಸಾಮಾನ್ಯರಾದ ಜೀವಿಗಳ ನಿದ್ರೆಗೆ ಹೋಲಿಸುವುದು ಸರಿಯಲ್ಲ. ಅದು ವಿಶೇಷವಾದಂತಹ ನಿದ್ರೆ. ಜಗತ್ತಿನ ರಕ್ಷಣೆಯ ವಿಷಯದಲ್ಲಿ ಎಚ್ಚರವಾಗಿಯೇ ಇದ್ದು ಭಗವಂತನು ತನ್ನ ಭಕ್ತರ ಸಂಪ್ರೀತಿಗಾಗಿ ನಿದ್ರೆಯ ಮುದ್ರೆಯನ್ನು ತೋರಿಸುತ್ತಾನೆ. ಆದ್ದರಿಂದ ಆಸ್ತಿಕ ಭಕ್ತರು ಹಾಗೆ ಮಲಗಿರುವ ಭಗವಂತನನ್ನು “ನಿದ್ರಾ ಮುದ್ರಾಭಿರಾಮಂʼʼ ಎಂದು ಸ್ತುತಿಸುವುದು ಉಂಟು. ಆ ನಿದ್ರೆಯು ಯೋಗ ನಿದ್ರೆ. ಆ ನಿದ್ರೆಯಲ್ಲಿ ನಮಗೆ ಇರುವಂತೆ ಮರೆವಿಲ್ಲ ಮೋಹವಿಲ್ಲ ಜಾಡ್ಯವಿಲ್ಲ ಮತ್ತು ಅಜ್ಞಾನದ ಲವಲೇಶವೂ ಇಲ್ಲ. ಹೆಚ್ಚೇನು, ಯಾವ ವಿಕಾರವೂ ಇಲ್ಲಿಲ್ಲ.  ಸಾಮಾನ್ಯ ಜೀವಿಗಳ ನಿದ್ರೆಯಲ್ಲಿ ಆಗುವಂತೆ ದೇಹದ ಕಾಂತಿಯು ಕುಂದುವುದಿಲ್ಲ. ಅದಕ್ಕೆ ಬದಲಾಗಿ ಅನುಪಮವಾದ ಸೌಂದರ್ಯ ಲಾವಣ್ಯಗಳಿಂದ ಅವನ ದಿವ್ಯಮಂಗಳ ವಿಗ್ರಹವು ಕಂಗೊಳಿಸುತ್ತದೆ.

ಇನ್ನು ಉತ್ಥಾನ ದ್ವಾದಶಿಯಂದು ನೆಲ್ಲಿಕಾಯಿಗಳ ಹಾರವನ್ನು ದೇವರಿಗೆ ಸಮರ್ಪಿಸುತ್ತಾರೆ, ನೆಲ್ಲಿಯ ಗಿಡವನ್ನು ನೆಟ್ಟು ಪೂಜೆ ಮಾಡುತ್ತಾರೆ, ನೆಲ್ಲಿಯ ಕಾಯಿಯಲ್ಲಿ ಹಸುವಿನ ತುಪ್ಪವನ್ನು ಸುರಿದು ಅದರಿಂದ ದೀಪವನ್ನು ಹತ್ತಿಸುತ್ತಾರೆ, ನೆಲ್ಲಿಕಾಯಿಯಿಂದ ಸ್ನಾನ ಮಾಡುತ್ತಾರೆ, ಅದನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಪ್ರಸಾದವಾಗಿ ಭೋಜನದಲ್ಲಿ ಮೊಟ್ಟಮೊದಲಿಗೆ ಸ್ವೀಕರಿಸುತ್ತಾರೆ. ಇಷ್ಟೆಲ್ಲಾ ರೀತಿಯಲ್ಲಿ ನೆಲ್ಲಿ ಯನ್ನು ಭಾವಿಸಲು ಕಾರಣವೇನು? ಈ ಪರ್ವದಲ್ಲಿ ನೆಲ್ಲಿಗೆ ಯಾಕೆ ಅಷ್ಟು ಪ್ರಾಮುಖ್ಯ? ಎಂಬ ಪ್ರಶ್ನೆ ಮೂಡಬಹುದು.

ಅದಕ್ಕೆ ಶಾಸ್ತ್ರಗಳು ಮತ್ತು ಹಿರಿಯರು ಈ ಕೆಳಕಂಡಂತೆ ಸಮಾಧಾನವನ್ನು ಕೊಟ್ಟಿರುತ್ತಾರೆ- ನೆಲ್ಲಿಯಲ್ಲಿ ಭಾವಿಸಲು ಯೋಗ್ಯವಾದ ಅನೇಕ ಗುಣಗಳು ಹೇರಳವಾಗಿರುವುದರಿಂದಲೇ ಅದನ್ನು ಹಾಗೆ ಭಾವಿಸಲಾಗಿದೆ. ಆಧಿಭೌತಿಕ ಆಧಿದೈವಿಕ ಮತ್ತು ಆಧ್ಯಾತ್ಮಿಕ ಈ ಮೂರು ದೃಷ್ಟಿಗಳಿಂದಲೂ ಅತ್ಯಂತ ಶ್ರೇಷ್ಠವಾದ ದ್ರವ್ಯವಾಗಿದೆ ನೆಲ್ಲಿ. ಇದಕ್ಕೆ ಶ್ರೀಫಲ,ಧಾತ್ರಿ ಆಮಲಕೀ, ಅಮೃತಾ, ಶಿವಾ, ಶಾಂತಾ,ವೃಷ್ಯಾ ರೋಚನೀ ಎಂಬ ಬೇರೆ ಬೇರೆ ಹೆಸರುಗಳಿವೆ.

ಈ ಹೆಸರುಗಳೇ ಅದರ ಮಹಿಮೆಯನ್ನು ಸಾರುತ್ತಿವೆ ಕೂಡ. ನೆಲ್ಲಿಯು ಶ್ರೀ ದೇವೀ ಸ್ವರೂಪವಾದ ಮತ್ತು ಶ್ರೀಯನ್ನು ಅನುಗ್ರಹಿಸುವ ಹಣ್ಣು, ಬ್ರಹ್ಮಶಕ್ತಿ ಸ್ವರೂಪಿಣೀ, ಧಾರಣೆ ಪೋಷಣೆ ಮಾಡುವ ತಾಯಿ, ಶುದ್ಧ ತೀರ್ಥದಿಂದ ಉಂಟಾದುದು ಮತ್ತು ಶುದ್ಧವಾದ ಹುಳಿಯನ್ನು ಹೊಂದಿರುವುದು ಅಮೃತತ್ವವನ್ನು ಉಂಟುಮಾಡುವುದು, ಮಂಗಳಕರ, ಶಾಂತ, ವೀರ್ಯವೃದ್ಧಿಯನ್ನು ಉಂಟು ಮಾಡುವುದು ಮತ್ತು ರುಚಿಕರವಾದುದು ಎಂದು ಕ್ರಮವಾಗಿ ಮೇಲಿನ ಹೆಸರುಗಳಿಗೆ ಅರ್ಥವಿದೆ.

ಧಾತ್ರಿಯು (ಎಂದರೆ ನೆಲ್ಲಿಕಾಯಿಯು) ನಿಜವಾಗಿಯೂ ಮನುಷ್ಯರಿಗೆ ತಾಯಿಯೇ ಆಗಿದೆ. ಧಾತ್ರಿ ಎಂಬ ಶಬ್ದಕ್ಕೆ ಪಾಲನೆ-ಪೋಷಣೆ ಮಾಡುವವಳು ಎಂದು ಸಂಸ್ಕೃತದಲ್ಲಿ ಅರ್ಥವಿದೆ. ನೆಲ್ಲಿಯು ಮನುಷ್ಯರಲ್ಲಿ ತಾಯಿಯಂತೆ ವಾತ್ಸಲ್ಯವನ್ನು ತೋರಿಸುತ್ತದೆ. ಅದರ ನೀರನ್ನು ಕುಡಿದರೆ ಆಯಸ್ಸು ವೃದ್ಧಿ ಹೊಂದುತ್ತದೆ. ಅದರಿಂದ ಸ್ನಾನ ಮಾಡಿದರೆ ಧರ್ಮ ಸಂಗ್ರಹವಾಗುತ್ತದೆ. ಅದು ಅಲಕ್ಷ್ಮಿಯನ್ನು ಎಂದರೆ ದಾರಿದ್ರ್ಯವನ್ನು ನಾಶಪಡಿಸುತ್ತದೆ ಅಷ್ಟೇ ಅಲ್ಲ ಕೊನೆಯಲ್ಲಿ ಮೋಕ್ಷವನ್ನೂ ಕೊಡುತ್ತದೆ.  ಬಿಲ್ವದಲ್ಲಿ ಮತ್ತು ತುಳಸಿಯಲ್ಲಿ ಯಾವ ಯಾವ ಗುಣಾತಿಶಯಗಳು ಉಂಟೋ ಅವೆಲ್ಲವೂ ನೆಲೆಯಲ್ಲಿಯೂ ಇವೆ.

ಅಂದಮಾತ್ರಕ್ಕೆ ನೆಲ್ಲಿಕಾಯಿಯನ್ನು ತಿನ್ನುವವರಿಗೆಲ್ಲಾ ಮೋಕ್ಷಸಿದ್ಧಿಯು ಆಗಿಬಿಡುತ್ತದೆ ಎಂದು ಇದರ ಅರ್ಥವಲ್ಲ.  ಆದರೆ ಕ್ರಮವರಿತು ಸೇವಿಸಿದರೆ ಪರಮಾತ್ಮ ಸಾಕ್ಷಾತ್ಕಾರಕ್ಕೆ ಅದರಿಂದ ಸಹಾಯವಾಗುತ್ತದೆ ಎಂಬ ಅಭಿಪ್ರಾಯವನ್ನು ಗ್ರಹಿಸಬೇಕು.

ಅಲ್ಲದೆ ಹಿಂದಿನ ದಿನ ಏಕಾದಶಿ ಉಪವಾಸವನ್ನು ಮಾಡಿದ್ದರಿಂದ ಪ್ರಕೃತಿಯಲ್ಲಿ ಉಂಟಾಗಿರುವ ಏರು ಪೇರುಗಳನ್ನು ದ್ವಾದಶಿಯಂದು ಮಾಡುವ ನೆಲ್ಲಿಕಾಯಿಯ ಸೇವನೆಯು ಸರಿಪಡಿಸುತ್ತದೆ ಎಂಬುದು ಅನುಭವ ಸಿದ್ಧವಾದ ವಿಷಯ. ಪೂಜೆಯನ್ನು ಮಾಡಿ ಪ್ರಸಾದ ಬುದ್ಧಿಯಿಂದ ಸೇವಿಸಿದರೆ ತಾನೇ ಅದರಿಂದ ವಿಶೇಷ ಲಾಭವೂ ಉಂಟಾಗುತ್ತದೆ. ಆದ್ದರಿಂದಲೇ ದ್ವಾದಶಿಗೆ ಸ್ವಲ್ಪ ಮೊದಲು ನೆಲ್ಲಿಕಾಯಿಯು ಬಿಟ್ಟಿದ್ದರೂ ಅದನ್ನು ತಿನ್ನಬಾರದು.  ಬದಲಾಗಿ, ಅದನ್ನು ಭಗವಂತನಿಗೆ ಸಮರ್ಪಿಸಿದ ನಂತರವೇ ಸೇವಿಸಬೇಕು ಎಂಬ ಸಂಪ್ರದಾಯವಿದೆ.

ಈ ಮೇಲ್ಕಂಡ ವರ್ಣನೆ ಮತ್ತು ವಿವರಣೆ ಗಳನ್ನು ಗಮನಿಸಿದರೆ ನೆಲ್ಲಿಯ ಸೇವನೆಯು ಆಧಿಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕ ಎಂಬ ಮೂರೂ ಕ್ಷೇತ್ರಗಳಲ್ಲಿಯೂ ಲಾಭದಾಯಕವಾಗಿದೆ ಮತ್ತು ಪುರುಷಾರ್ಥಕರವಾಗಿದೆ ಎಂಬುದು ಮನವರಿಕೆಯಾಗುತ್ತದೆ.

ನೆಲ್ಲಿಕಾಯಿಯಷ್ಟೇ ಅಲ್ಲದೆ ನೆಲ್ಲಿಯ ಮರವು ಕೂಡ ಪೂಜಾ ಯೋಗ್ಯವಾದುದಾಗಿದೆ. ನೆಲ್ಲಿಯ ಮರದ ನೆರಳಿನಲ್ಲಿ ನಿಲ್ಲುವುದರಿಂದ ಪಾಪಗಳು ಪರಿಹಾರವಾಗುತ್ತವೆ, ಇದರ ಗಾಳಿಯೂ ಕೂಡ ರೋಗಪರಿಹಾರಕ ಎನ್ನುತ್ತದೆ ಆಯುರ್ವೇದ.

ಹೀಗೆ ಅತ್ಯಂತ ಮಂಗಳಕರವಾದ ಮಹಾವಿಷ್ಣುವಿನ ಪೂಜೆ, ತುಳಸಿ ಮತ್ತು ನೆಲ್ಲಿಯ ಪೂಜೆ ಈ ಮೂರೂ ಉತ್ಥಾನ ದ್ವಾದಶಿಯ ಪ್ರಧಾನವಾದ ಅಂಶಗಳು. ಈ ಹಬ್ಬವೂ ಇನ್ನಿತರ ಭಾರತೀಯ ಹಬ್ಬಗಳಂತೆಯೇ ಇಹಕ್ಕೂ- ಪರಕ್ಕೂ ಸಾಧನವಾಗಿದ್ದು ಆಸ್ತಿಕರ ಶ್ರದ್ಧೆಗೆ ವಿಷಯವಾಗಿದೆ.

ಲೇಖಕರು: ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
 ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ| Chandra Grahan 2022 | ಚಂದ್ರ ಗ್ರಹಣ ಎಷ್ಟು ಹೊತ್ತಿಗೆ ಸಂಭವಿಸಲಿದೆ? ಆಹಾರ ಸೇವನೆ ಯಾವಾಗ?

Exit mobile version