ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
ಅವರು ಈಗ ಮಾತ್ರ ಹಾಗಲ್ಲ; ಅವರು ಯಾವಾಗಲೂ ಹಾಗೇನೇ!! ಅವರು ಏನೊಂದನೂ ಬೇಕೆಂದವರಲ್ಲ; ಅವರು ಯಾವೊಂದನೂ ಬೇಕೆಂದವರಲ್ಲ. “ಬೇಕು” ಎಂಬ ಪದ ಅವರ ನಿಘಂಟಿನಲ್ಲಿ ಇಲ್ಲವೇ ಇಲ್ಲ. ಅವರೊಂದು ಜ್ಞಾನ-ವಿಜ್ಞಾನದ ವಿಶ್ವಕೋಶ. ಇದರಲ್ಲಿ ಎರಡು ಮಾತಿಲ್ಲ. ಆದರೆ ಆ ವಿಶ್ವಕೋಶದಲ್ಲಿ “ಬೇಕು” ಎಂಬ ಪದವೇ ಇಲ್ಲ. ಇದು ವಿಚಿತ್ರ. ಆದರೂ ಸತ್ಯ. “ಬೇಕು” ಎಂಬ ಪದವಿಲ್ಲದ ವಿಶ್ವಕೋಶ ಅವರು (Siddheshwar Swamiji).
ತಮ್ಮ ಬದುಕಿಗೆ “ಬೇಡ ದೀಕ್ಷೆ” ಯನ್ನು ಕೊಟ್ಟುಕೊಂಡು ಬದುಕಿದ ಮಹಾನುಭಾವರವರು. ಇಡೀ ಪ್ರಪಂಚ “ಅದು ಬೇಕು”, “ಇದು ಬೇಕು” ಎನ್ನುತ್ತದೆ. ಪೂಜ್ಯ ಶ್ರೀಗಳು ಮಾತ್ರ “ಅದು ಬೇಡ”, “ಇದು ಬೇಡ” ಎನ್ನುತ್ತಾರೆ. ಅವತ್ತು ಗುರುದೇವ ಮಲ್ಲಿಕಾರ್ಜುನ ಅಪ್ಪಗಳು “ನನ್ನ ನಂತರ ನೀನೇ” ಎಂದು ಹೇಳುತ್ತಾರೆ.
ಆಗಲೂ “ಆ ಪಟ್ಟ, ಆ ಪದವಿ ನನಗೆ ಬೇಡ” ಎನ್ನುತ್ತಾರೆ. ಗುರುದೇವರಿಗೆ “ನಾನು ಸ್ಥಾವರವಾಗಲಾರೆ; ನಾನು ಜಂಗಮವಾಗಿ ಸಂಚರಿಸಬೇಕು” ಹಾಗೆಯೇ ನನಗೆ ಆಶೀರ್ವಾದಮಾಡಿ” ಎಂದು ಹೇಳುತ್ತಾರೆ.
ಗುರುದೇವರು “ಅಸ್ತು” ಎನ್ನುತ್ತಾರೆ. ಅಂದಿನಿಂದ ಗುರುಗಳ “ಅಸ್ತುʼʼವನ್ನೇ ಅಸ್ತಿತ್ವವಾಗಿಸಿಕೊಂಡು ಬದುಕಿದ ಪೂಜ್ಯರು ನಿತ್ಯಜಂಗಮರಾಗಿ ಬದುಕಿದರು. ಪೂಜ್ಯ ಗುರುದೇವ ಮಲ್ಲಿಕಾರ್ಜುನ ಅಪ್ಪಗಳು ಅನುಭವಮಂಟಪವಾದರೆ
ಪೂಜ್ಯ ಶ್ರೀಗಳು ಪ್ರವಚನಗಳ ಜೈತ್ರಯಾತ್ರೆಯಾದರು.
ಭಕ್ತರು ಅವರಿಗೆ ಉತ್ತಮ “ಉಡುಗೆ ಕೊಡಬೇಕು, ತೊಡುಗೆ ಕೊಡಬೇಕು” ಎನ್ನುತ್ತಾರೆ; ಅವರು “ಬೇಡʼʼ ಎನ್ನುತ್ತಾರೆ.
ಭಕ್ತರು ಅವರಿಗೆ ಮೃಷ್ಟಾನ್ನ ಭೋಜನವನ್ನು ಉಣಬಡಿಸಬೇಕೆನ್ನುತ್ತಾರೆ;
ಅವರು “ಬೇಡʼʼ ಎನ್ನುತ್ತಾರೆ.
ಭಕ್ತರು ಅವರಿಗೆ ಮಠ, ಮಹಲು, ವಿಲ್ಲಾಗಳನ್ನು ಕಟ್ಟಿಕೊಡಬೇಕೆನ್ನುತ್ತಾರೆ;
ಅವರು “ಬೇಡʼʼ ಎನ್ನುತ್ತಾರೆ.
ಭಕ್ತರು ಅವರಿಗೆ ಲಿಮೋಜಿನ್, ಲೋಂಬಾರ್ಡಿಯಂತ ಲಕ್ಝುರಿಯಸ್ ಕಾರುಗಳನ್ನು ಕೊಡಬೇಕೆನ್ನುತ್ತಾರೆ;
ಅವರು “ಬೇಡ” ಎನ್ನುತ್ತಾರೆ.
ವಿದೇಶದಲ್ಲಿನ ಅವರು ಭಕ್ತರು ಅವರಿಗೆ “ವಿದೇಶದಲ್ಲಿಯೇ ಇದ್ದು ಬಿಡಿ; ತಮಗೆಲ್ಲ ಅನುಕೂಲತೆಗಳನ್ನು ಮಾಡಿಕೊಡುತ್ತೇವೆ” ಎನ್ನುತ್ತಾರೆ;
ಅವರು “ಬೇಡʼʼ ಎನ್ನುತ್ತಾರೆ.
ಅವರು ಆ ನಮ್ಮ ಶ್ರೀರಾಮಚಂದ್ರನ ಹಾಗೆ “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ” ಎಂದು ಹೇಳಿ ಬರುತ್ತಾರೆ; ಭಕ್ತರು ಅವರಿಗೆ ಒಂದೆಡೆ ಇದ್ದುಬಿಡಿ. ನಾವೆಲ್ಲ ಚೆನ್ನಾಗಿ ನೋಡಿಕೊಳ್ಳುತ್ತೇವೆ
” ಎನ್ನುತ್ತಾರೆ; ಅವರು "ಬೇಡ" ಎನ್ನುತ್ತಾರೆ. ಭಕ್ತರು ಅವರಿಗೆ "ಇಷ್ಟು ದಿನ ಪ್ರವಚನ ಮಾಡಿದ್ದೀರಿ. ಇನ್ನು ಹಾಗೆ ಆರಾಮಾಗಿ ಇರಿ" ಎನ್ನುತ್ತಾರೆ; ಅದಕ್ಕೂ ಪೂಜ್ಯರು "ಹಾಗಿರುವುದು ಸರಿಯಲ್ಲ; ಹಾಗಿರುವುದು ಬೇಡ" ಎನ್ನುತ್ತಾರೆ. ಕೇಂದ್ರ ಸರಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲು ಬರುತ್ತದೆ; ಅವರು "ಬೇಡ" ಎನ್ನುತ್ತಾರೆ. ರಾಜ್ಯ ಸರಕಾರಗಳು ಪ್ರಶಸ್ತಿಯನ್ನು ಹಿಡಿದುಕೊಂಡು ಅವರ ಬಳಿ ಬರುತ್ತವೆ; ಅವರು "ಬೇಡ" ಎನ್ನುತ್ತಾರೆ. ಮಾಧ್ಯಮಗಳು ಸ್ವಯಂಸ್ಫೂರ್ತಿಯಿAದ ಅವರನ್ನು ಇನ್ನಷ್ಟು, ಮತ್ತಷ್ಟು ಪ್ರಚಾರಿಸಲು, ಪ್ರಸಾರಿಸಲು ಮುಂದೆ ಬರುತ್ತವೆ; ಅವರು
ಬೇಡ” ಎನ್ನುತ್ತಾರೆ.
ರಾಜಕಾರಣಿಗಳು ಪೂಜ್ಯರ ಸಹವಾಸ ಬೇಕು, ಬೇಕು ಎನ್ನುತ್ತಾರೆ;
ಪೂಜ್ಯರು ನನಗವರ ಸಹವಾಸ ಬೇಡ'' ಎನ್ನುತ್ತಾರೆ. ಇದೀಗ ಅಸಂಖ್ಯಾತ ಭಕ್ತರು ಪೂಜ್ಯರು ಇನ್ನಷ್ಟು, ಮತ್ತಷ್ಟು ದಿನ ಇರಬೇಕೆನ್ನುತ್ತಾರೆ; ಅವರು
ಬೇಡ, ಬೇಡ” ಎನ್ನುತ್ತಿದ್ದಾರೆ.
ಅನುಭವೀ ವೈದ್ಯರು ಅವರಿಗೆ ಮಾತ್ರೆ, ಔಷದಿ, ಇಂಜಕ್ಶನ್‌ಗಳನ್ನು ಕೊಡಲು ಮುಂದೆ ಬರುತ್ತಿದ್ದಾರೆ;
ಪೂಜ್ಯರು ಅವರಿಗೂ ಬೇಡ, ಬೇಡ'' ಎನ್ನುತ್ತಿದ್ದಾರೆ. ಪೂಜ್ಯರ ಅಸಂಖ್ಯಾತ ಭಕ್ತರ ಪೂಜೆ, ಪ್ರಾರ್ಥನೆ, ಜಪ, ತಪಗಳಿಗೆ ಒಲಿದು ಆ
ಕಾಲರಾಯ” ಪೂಜ್ಯರ ಆಯುಷ್ಯ ಮತ್ತು ಆರೋಗ್ಯವನ್ನು ಇನ್ನಷ್ಟು, ಮತ್ತಷ್ಟು ಹೆಚ್ಚಿಸಬೇಕು ಎಂದು ಅಂದುಕೊಳ್ಳುತ್ತಿದ್ದಾನೆ;ಪೂಜ್ಯರು ಅವನಿಗೂ ಸಹ ಬೇಡ, "ಬೇಡ" ಎನ್ನುತ್ತಿದ್ದಾರೆ. ಪೂಜ್ಯರು ಬೇಕು ದೀಕ್ಷಿತರಲ್ಲ; ಅವರು ಬೇಡ ದೀಕ್ಷಿತರು; ಅವರು ಸಾಕು ದೀಕ್ಷಿತರು!! ಪೂಜ್ಯರು ತಮ್ಮ ಬದುಕಿನುದ್ದಕ್ಕೂ ಕಾಂಚನಕ್ಕೂ
ಬೇಡ” ಎಂದರು. ಅವರು ಲಾಂಛನಕ್ಕೂ ಬೇಡ'' ಎಂದರು.
ಭಕ್ತರನ್ನು ಪೂಜ್ಯರನ್ನು ಆಡಂಬರ, ಅದ್ದೂರಿಗಳ ಮಧ್ಯದಲ್ಲಿ ನೋಡಬೇಕೆನ್ನುತ್ತಾರೆ; ಅದಕ್ಕೆ ಪೂಜ್ಯರು
ಬೇಡ” ಎನ್ನುತ್ತಾರೆ. ಕಾಂಚನ ಮತ್ತು ಲಾಂಛನಗಳ ಹಂಗು ತೊರೆದು ಬದುಕಿದ ಮಹಾನುಭಾವರವರು!!ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ; ಬೆಲ್ಲ-ಸಕ್ಕರೆಯಾಗು ದೀನದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ ಪೂಜ್ಯರು, ಡಿವಿಜಿ ಯವರು ಹೇಳಿದ ಹಾಗೆ ಎಲ್ಲರೊಳಗೊಂದಾಗಿ ಬದುಕಿದರು. ಪೂಜ್ಯರು ಬೆಟ್ಟದಡಿಯ ಹುಲ್ಲಾದರು; ಅವರು ಜನಗಳ ಮನೆ, ಮನಗಳ ಮಲ್ಲಿಗೆಯಾದರು. ಅವರು, ವಿಧಿ ಕಷ್ಟಗಳ ಮಳೆಯನ್ನು ಸುರಿದಾಗ ಕಲ್ಲಾಗಿ ನಿಂತುಕೊಂಡರು. ಅವರು ದೀನ, ದುರ್ಬಲರ ಬದುಕಲ್ಲಿ ಸ್ಫೂರ್ತಿ ತುಂಬಿ ಬೆಲ್ಲ-ಸಕ್ಕರೆಯಾದರು. ಪರಮಪೂಜ್ಯರನ್ನು ತುಂಬ ಜನಗಳು ತಮ್ಮ ಬದುಕಿನ
ಐಕಾನ್” ಮತ್ತು “ಐಡಿಯಲ್” ಆಗಿಸಿಕೊಂಡಿದ್ದಾರೆ. ತುಂಬ ಜನ ಪ್ರಚಲಿತ ಸ್ವಾಮೀಜಿಗಳು ಅವರ ಪ್ರವಚನ ಶೈಲಿಯನ್ನು ಅನುಸರಿಸುತ್ತಾರೆ.
ತುಂಬ ಜನ ಪ್ರವಚನಕಾರರು ಅವರ ಧ್ವನಿಯನ್ನು ಅನುಸರಿಸುತ್ತಾರೆ. ಪೂಜ್ಯರ ಧ್ವನಿಯನ್ನು ಅನುಸರಿಸಬಹುದು; ಅದು ಸುಲಭ. ಪೂಜ್ಯರ ಪ್ರವಚನ ಶೈಲಿಯನ್ನು ಅನುಸರಿಸಬಹುದು; ಅದು ಸುಲಭ. ಆದರೆ ಪೂಜ್ಯರನ್ನು ಅನುಸರಿಸುವುದು ಕಷ್ಟ ಕಷ್ಟ, ಅಹೋಕಷ್ಟ, ಕರಕಷ್ಟ, ಮಹಾಕಷ್ಟ!!
ಪೂಜ್ಯರು ಬರೀ ಸಂತರು ಮಾತ್ರವಲ್ಲ; ಅವರು ನಿಶ್ಚಿಂತರು ಕೂಡ ಅಹುದು. ಅವರು ತಲೆಯಲ್ಲಿ ಸಂತೆ ಇಲ್ಲದ ನಿಶ್ಚಿಂತ ಸಂತ. ಪೂಜ್ಯರು ನಿತ್ಯವಸಂತ; ಅವರೊಂದು ನಿತ್ಯಕೋಗಿಲೆ. ಲೌಕಿಕ ಕೋಗಿಲೆ ವಸಂತ ಸಮಯದಲ್ಲಿ ಮಾತ್ರ ಕೂಗುತ್ತದೆ. ಈ ಅಲೌಕಿಕ ಕೋಗಿಲೆ ಅನುಗಾಲವೂ ಕೂಗುತ್ತ ಬಂದಿದೆ.
ಪೂಜ್ಯ ಸಿದ್ಧೇಶ್ವರ ಶ್ರೀಗಳು ಸಿದ್ಧರೂ ಅಹುದು; ಅವರು ಈಶ್ವರರೂ ಅಹುದು; ಪೂಜ್ಯ ಸಿದ್ಧೇಶ್ವರ ಶ್ರೀಗಳು ಶುದ್ಧೇಶ್ವರರೂ ಅಹುದು; ಅವರು ಬುದ್ಧೇಶ್ವರರೂ ಅಹುದು. ಪೂಜ್ಯರು ಶುದ್ಧರೂ ಅಹುದು; ಅವರು ಈಶ್ವರರೂ ಅಹುದು. ಅವರು ಬುದ್ಧರೂ ಅಹುದು; ಅವರು ಈಶ್ವರರೂ ಅಹುದು. ಪೂಜ್ಯರು ಸಿದ್ಧೇಶ್ವರ, ಶುದ್ಧೇಶ್ವರ, ಬುದ್ಧೇಶ್ವರರ ತ್ರಿವೇಣಿಸಂಗಮ!!
ಮೊನ್ನೆ ತಾನೆ 27. 12. 2022, ಮಂಗಳವಾರದಂದು ನಾವು ಜ್ಞಾನಯೋಗಾಶ್ರಮಕ್ಕೆ ಹೋಗಿ ಪರಮಪೂಜ್ಯರ ದರ್ಶನ ಮಾಡಿಬಂದೆವು. ಪೂಜ್ಯರು ನಮ್ಮ ಜೊತೆಯಲ್ಲಿ ತುಂಬ ಲವಲವಿಕೆಯಿಂದ ಮಾತನಾಡಿದರು. ನಮ್ಮ ಬರವಣಿಗೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಮಾಡಿದರು. “ಯಾವಾಗಲೂ ನೀವು ಬರೆಯುತ್ತ ಇರಬೇಕು” ಎಂದು ಆದೇಶಮಾಡಿದರು.
ನಮ್ಮನ್ನು ನೋಡುತ್ತಲೇ ಪೂಜ್ಯರ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತು. ಅವರ ಕಣ್ಣಂಚಿನಿAದ ಆನಂದಭಾಷ್ಪಗಳು ಮಿನುಗಿದವು. ಪೂಜ್ಯರಿಗೆ ನಮ್ಮ ಮೇಲೆ ಅಪಾರ ಪ್ರೀತಿ, ಅಭಿಮಾನ ಮತ್ತು ವಾತ್ಸಲ್ಯ.
ಅದು ಸುಖಾಸುಮ್ಮನೆಯದಲ್ಲ; ಅದಕ್ಕೆ ಕಾರಣವಿದೆ. ನಮ್ಮ ಬಾಲ್ಯ ಮಲ್ಲಿಕಾರ್ಜುನ ಅಪ್ಪಗಳ ಮಡಿಲಲ್ಲಿ ಮತ್ತು ಸಿದ್ಧೇಶ್ವರ ಬುದ್ಧೀಜಿಯವರ ಕೈಯಲ್ಲಿ ಬೆಳೆದಿದೆ. ಶ್ರೀ ಜಗದ್ಗುರು ಶಂಕರಾಚಾರ್ಯರು ಹೇಳಿದ ಹಾಗೆ ನಾವು ಬಾಲಸ್ತಾವತ್ ಕ್ರೀಡಾಸಕ್ತರೂ ಅಲ್ಲ; ತರುಣಸ್ತಾವತ್ ತರುಣೀರಕ್ತರೂ ಅಲ್ಲ; ನಾವು ಬಾಲ್ಯದಲ್ಲಿ ಮಲ್ಲಿಕಾರ್ಜುನ ಅಪ್ಪಗಳವರ ಪ್ರವಚನಾಸಕ್ತರಾಗಿ ಮತ್ತು ಸಿದ್ಧೇಶ್ವರ ಬುದ್ಧಿಗಳವರ ಪಾಠಾಸಕ್ತರಾಗಿ ಬೆಳೆದಿದ್ದೇವೆ.
ಇನ್ನೊಂದು ವಿಷಯವನ್ನು ನಾವು ಇಲ್ಲಿ ಹೇಳಲೇಬೇಕು.
ಇಡೀ ನಾಡು ಪರಮಪೂಜ್ಯರಿಗೆ ಒಂದು ಅಪರೂಪದ ಗೌರವವನ್ನು ಸಲ್ಲಿಸಿದೆ. ಅದು ಬಾಗಿದ ತಲೆಯ ಮತ್ತು "ಮುಗಿದ ಕೈ" ಗೌರವ. ಜಾತ್ಯತೀತವಾಗಿ, ಪಕ್ಷಾತೀತವಾಗಿ, ವೃತ್ತಿ, ಪ್ರವೃತ್ತಿಗಳಿಗೆ ಅತೀತವಾಗಿ ಬರೀ ಜನಗಳು ಮಾತ್ರವಲ್ಲ, ಸರಕಾರಗಳು ಕೂಡ ಅವರಿಗೆ
ಬಾಗಿದ ತಲೆಯ ಮುಗಿದ ಕೈ ಗೌರವ ಸಲ್ಲಿಸಿವೆ. ಇದಕ್ಕಿಂತ ಮಿಗಿಲಾದ ಭಾರತರತ್ನ, ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿಗಳು ಉಂಟೆ? ಇದಕ್ಕಿಂತ ಮಿಗಿಲಾದ ಪಾರಿತೋಷಕ, ನೋಬಲ್ ಪಾರಿತೋಷಕಗಳುಂಟೆ, ಈ ದೇಶದಲ್ಲಿ ಮತ್ತು ಈ ಧರಣಿ ಮಂಡಲ ಮಧ್ಯದೊಳಗೆ?!!
ಇದನ್ನೂ ಓದಿ | Siddheshwar Swamiji | ಮೌಲ್ಯಗಳನ್ನೇ ಜೀವನವನ್ನಾಗಿಸಿಕೊಂಡಿದ್ದ ಸಂತ; ಅವರ ಆದರ್ಶಗಳು ಅನಂತ