ಬೆಂಗಳೂರು: ಪುತ್ತಿಗೆ ಮಠದ (Puttige Matt) ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು (Sri Sugunendra theertha seer) ವಿದೇಶದಲ್ಲಿ ಜ್ಞಾನ ಪ್ರಸಾರ ಮಾಡಿದರೆ ತಪ್ಪೇನು?: ಹೀಗೆಂದು ರಾಜ್ಯ ಹೈಕೋರ್ಟ್‌ನ (Karnataka High Court) ವಿಭಾಗೀಯ ಪೀಠ ಪ್ರಶ್ನೆ ಮಾಡಿದೆ. ಉಡುಪಿಯ ಅಷ್ಟ ಮಠಗಳ ಪರ್ಯಾಯ ಮಹೋತ್ಸವ (Udupi Paryaya 2024) ಜನವರಿ 18ರಂದು ನಡೆಯಲಿದ್ದು, ಅಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳು ಪರ್ಯಾಯ ಪೀಠ ಏರಬೇಕಾಗಿದೆ. ಈ ಮಹೋತ್ಸವಕ್ಕೆ ತಡೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ (Public Interest Ligitigation) ವಿಚಾರಣೆಯ ಸಂದರ್ಭದಲ್ಲಿ ವಿಭಾಗೀಯ ಪೀಠ ಅರ್ಜಿದಾರರನ್ನು ಉದ್ದೇಶಿಸಿ ಈ ಪ್ರಶ್ನೆಯನ್ನು ಕೇಳಿದೆ.
ಗುರುರಾಜ ಜೀವನರಾವ್ ಎಂಬುವರು ಉಡುಪಿಯ ಅಷ್ಟ ಮಠಗಳ ಪರ್ಯಾಯ ಮಹೋತ್ಸವಕ್ಕೆ ತಡೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನಡೆಸುತ್ತಾ ಹಲವು ಪ್ರಶ್ನೆಗಳನ್ನು ಕೇಳುತ್ತಾ ಅಂತಿಮವಾಗಿ, ಧಾರ್ಮಿಕ ಆಚರಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿ, ಅರ್ಜಿಯನ್ನು ವಜಾಗೊಳಿಸಿತು.
ಮಾಧ್ವ ಪರಂಪರೆಯಲ್ಲಿ ಯತಿಗಳು ವಿದೇಶ ಪ್ರಯಾಣ ಮಾಡಬಾರದು ಎನ್ನುವ ನಿಯಮವಿದೆ. ಸಾಗರೋಲ್ಲಂಘನ ಸಲ್ಲದು ಎನ್ನುವುದು ಹಿಂದೆ ಮಾಡಿದ ನಿಯಮ. ಈಗ ಪರ್ಯಾಯ ಪೀಠವೇರಬೇಕಾಗಿರುವ ಪುತ್ತಿಗೆ ಶ್ರೀಗಳು ದಶಕಗಳ ಹಿಂದೆಯೇ ವಿದೇಶಕ್ಕೆ ಹೋಗಿದ್ದರು. ಮತ್ತು ಅಲ್ಲಿ ಹಲವು ಕೃಷ್ಣ ದೇವಾಲಯಗಳನ್ನು ಆರಂಭಿಸಿದ್ದರು. ಸಮುದ್ರ ದಾಟಿದವರಿಗೆ ಕೃಷ್ಣ ಪೂಜೆಯ ಅವಕಾಶ ನೀಡಬಾರದು ಎನ್ನುವುದು ಈಗ ಇರುವ ಸ್ವಾಮೀಜಿಗಳ ಅಭಿಮತ. 16 ವರ್ಷಗಳ ಹಿಂದಿನ ಪರ್ಯಾಯ ಆವರ್ತನೆಯಲ್ಲೂ ಇದೇ ರೀತಿಯ ವ್ಯಕ್ತವಾಗಿತ್ತು. ಆದರೆ, ಎಲ್ಲ ವಿರೋಧಗಳನ್ನು ಮೆಟ್ಟಿನಿಂತು ಸುಗುಣೇಂದ್ರ ತೀರ್ಥರು ಪೀಠಾರೋಹಣ ಮಾಡಿದ್ದರು. ಆದರೆ, ಅವರು ನೇರವಾಗಿ ಪೂಜೆ ಮಾಡದೆ ಆಗ ಶಿರೂರು ಮಠಾಧೀಶರಾಗಿದ್ದ ಲಕ್ಷ್ಮೀಂದ್ರ ತೀರ್ಥರು ಪೂಜೆ ನಿರ್ವಹಿಸಿದ್ದರು.
ಇದೀಗ ಪೀಠಾರೋಹಣಕ್ಕೆ ದಿನ ಸನ್ನಿಹಿತವಾಗುತ್ತಿದ್ದಂತೆಯೇ ಮತ್ತೊಮ್ಮೆ ಪ್ರಕರಣ ಮೇಲೆದ್ದು ಬಂದಿದೆ. ಇದೇ ಮೊದಲ ಬಾರಿಗೆ ಈ ವಿಚಾರ ಕೋರ್ಟ್ ಕಟಕಟೆಯನ್ನೂ ಹತ್ತಿದೆ.
ಇದನ್ನೂ ಓದಿ : Naadageethe row : ಹಾಗಿದ್ದರೆ ಕಿಕ್ಕೇರಿಯವರು ಮರದ ಮೇಲೇರಿ ಜೌನ್‌ಪುರಿ ರಾಗದಲ್ಲಿ ನಾಡಗೀತೆ ಹಾಡಬಹುದಾ?
ʻʻಸರದಿ ಪ್ರಕಾರ ಈ ಬಾರಿಯ ಪರ್ಯಾಯ ಪೀಠವನ್ನು ಪುತ್ತಿಗೆ ಶ್ರೀಗಳು ಏರಬೇಕಾಗಿದೆ. ಅವರು ವಿದೇಶಕ್ಕೆ ಪ್ರಯಾಣ ಮಾಡಿ ಸಂಪ್ರದಾಯ ಉಲ್ಲಂಘಿಸಿದ್ದಾರೆ. ಆದ ಕಾರಣ ಅವರಿಗೆ ಪರ್ಯಾಯ ಅಧಿಕಾರ ನೀಡಬಾರದುʼʼ ಎಂದು ಪಿಐಎಲ್ ಸಲ್ಲಿಸಲಾಗಿತ್ತು.
ಅರ್ಜಿಯ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠವು ಯತಿಗಳು ವಿದೇಶದಲ್ಲಿ ಜ್ಞಾನ ಪ್ರಸಾರ ಮಾಡಿದರೆ ತಪ್ಪೇನು ಎಂದು ಅರ್ಜಿದಾರರಿಗೆ ಪ್ರಶ್ನೆ ಮಾಡಿತು.
ರಾಷ್ಟ್ರಕವಿ ಕುವೆಂಪು ಅವರ ಕವಿತೆ ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಕವಿತೆಯನ್ನು ಉಲ್ಲೇಖಿಸಿದ ನ್ಯಾಯಪೀಠವು ಮನೆ ಕಟ್ಟಿ ಕೂರುವುದಕ್ಕಿಂತ ಹೊರಗೆ ಓಡಾಡುವುದು ಲೇಸು ಎಂದಿತು. ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಓ ಅನಂತವಾಗಿರು ಎಂಬ ಚರಣವನ್ನು ಉಲ್ಲೇಖಿಸಿತು. ಅಂತಿಮವಾಗಿ ಧಾರ್ಮಿಕ ಆಚರಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿ, ಅರ್ಜಿಯನ್ನು ವಜಾಗೊಳಿಸಿತು.
ಕೋರ್ಟ್ ಅಭಿಪ್ರಾಯವನ್ನು ಸ್ವಾಗತಿಸಿದ ಪುತ್ತಿಗೆ ಶ್ರೀಗಳು
ಪರ್ಯಾಯದಂಥ ಧಾರ್ಮಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಹೈಕೋರ್ಟ್ ಅಭಿಪ್ರಾಯವನ್ನು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸ್ವಾಗತಿಸಿದ್ದಾರೆ.
ʻʻಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಅನುಗ್ರಹ, ಕೃಷ್ಣನ ಅನುಗ್ರಹ ಇದ್ದರೆ ಎಲ್ಲವೂ ಒಳ್ಳೆಯದಾಗುತ್ತದೆ. ನ್ಯಾಯಮೂರ್ತಿಗಳು ಒಳ್ಳೆಯ ವಿಚಾರವನ್ನೇ ಹೇಳಿದ್ದಾರೆʼʼ ಎಂದು ಹೇಳಿದರು ಪುತ್ತಿಗೆ ಶ್ರೀಗಳು.
ʻʻನಾವು ಯಾವುದೇ ದೈಶಿಕ ವಿಚಾರಕ್ಕೆ ಒಳಪಟ್ಟವರಲ್ಲ. ಆಧ್ಯಾತ್ಮಿಕ ವಿಚಾರ ಗಡಿ ದಾಟಬೇಕು. ದೈಶಿಕ ನಿರ್ಬಂಧಕ್ಕೆ ಧಾರ್ಮಿಕ ವಿಚಾರ ಒಳಗಾಗಬಾರದು. ಯಾವುದೇ ಬ್ಯಾರಿಕೇಡ್ ಇರಬಾರದು. ಒಳ್ಳೆಯ ವಿಚಾರ ಎಲ್ಲಾ ಕಡೆ ಪಸರಿಸಬೇಕು. ಸದ್ವಿಚಾರಗಳು ಪ್ರಪಂಚದಲ್ಲಿ ವ್ಯಾಪ್ತವಾಗಬೇಕು. ಆಧ್ಯಾತ್ಮಿಕ ವಿಚಾರ ವಿಶ್ವವ್ಯಾಪಿ ಆಗಬೇಕುʼʼ ಎಂದು ಹೇಳಿದ ಅವರು, ಧಾರ್ಮಿಕ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಲ್ಲ ಎಂದಿರುವುದು ಒಳ್ಳೆಯ ವಿಚಾರ. ಧಾರ್ಮಿಕ ವಿಚಾರ ಧಾರ್ಮಿಕ ವ್ಯಕ್ತಿಗಳಿಗೆ ಸಂಬಂಧಪಟ್ಟದ್ದು. ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಧರ್ಮ ಎನ್ನುವುದು ದೇಶಾತೀತ ಎಂದು ಹೇಳಿದರು.