Site icon Vistara News

Ugadi 2023 : ಕಾಲದ ಸಂದೇಶ ಸಾರುವ ಯುಗಾದಿ

ugadi-2023 history significance and everything you need to know about ugadi festival in kannada

ugadi

ಈ ಲೇಖನವನ್ನು ಇಲ್ಲಿ ಕೇಳಿ

https://vistaranews.com/wp-content/uploads/2023/03/ugadi-festival.mp3

ಡಾ. ಗಣಪತಿ ಆರ್‌.ಭಟ್‌
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ…

ವರಕವಿ ದ ರಾ ಬೇಂದ್ರೆಯವರ ಈ ಪ್ರಸಿದ್ಧ ಸಾಲುಗಳನ್ನು ನಾವು ಕೇಳುತ್ತಲಿರುತ್ತೇವೆ. ಸದಾ ತಿರುಗುತ್ತಿರುವ ಕಾಲಚಕ್ರದ ನಡುವಿನ ನಮ್ಮ ಜೀವನದಲ್ಲಿ ಅಮೂಲ್ಯ ಕ್ಷಣಗಳು ಕಳೆದುಹೋಗುತ್ತಿದ್ದರೂ ಮತ್ತೆ ನೂತನ ಕಾಲವು ನಮಗೊದಗಿ ಬರುತ್ತಾ ಹೊಸ ಹೊಸ ಅವಕಾಶಗಳು ನಮಗಾಗಿ ಬಾಗಿಲು ತೆರೆಯುತ್ತಲಿರುತ್ತವೆ. ಹಾಗಾಗಿ ಗತಿಶೀಲವಾದ ಕಾಲವು ನಮ್ಮಿಂದ ಕೆಲವನ್ನು ಕಸಿದುಕೊಂಡರೂ ಹೊಸ ಹೊಸ ಭರವಸೆಯನ್ನು ತರುವುದು ಸುಳ್ಳಲ್ಲ. ಇಂಥಹ ಕಾಲದ ಸಂದೇಶವನ್ನು ನೀಡುವ ಕಾಲದ ಹಬ್ಬ ನಮ್ಮ ಯುಗಾದಿ.

ಯುಗಾದಿಯ ಸಂಭ್ರಮ ನಮ್ಮ ಮನೆ ಮನಗಳಲ್ಲಿ ಮನೆಮಾಡುವ ಹೊತ್ತಿಗೆ ಪ್ರಕೃತಿಯೂ ಹೊಸತನ್ನೇ ತೋರುತ್ತಾ ನವೋನ್ಮೇಶಶಾಲಿಯಂತೆ ನಮ್ಮನ್ನು ಸೆಳೆಯುತ್ತದೆ. ಬಿಳಿಮೋಡವು ಆಗ ತಾನೆ ಶ್ಯಾಮಲದೆಡೆಗೆ ತಿರುಗಿ ಮಿಂಚು, ಗುಡುಗುಗಳಿಂದ ತನ್ನ ಮುಸ್ಸಂಜೆಯ ರಾಗವನ್ನು ನುಡಿಸುವ, ಮಳೆಸ್ಪರ್ಶಕೆ ಇಳೆಯು ಆರ್ಧ್ರಗೊಂಡು ಗಂಧವತಿಯಾಗುವ ಕಾಲವಿದು. ಚಿಗುರಿದ ಹೊಂಗೆ, ಕಂಪಬೀರುವ ಹೂವು, ಗೊನೆ ತೂಗುವ ಮಾಮರ, ಮಧುರ ದನಿ ಎತ್ತಿ ಕೂಗುವ ಕೋಗಿಲೆ ಹೀಗೆ ಬಿನ್ನಾಣಗೈದು ಪ್ರಕೃತಿಯೇ ಹೊಸತನವನ್ನು ತೋರುತ್ತಿರುವಾಗ ಇದುವೇ ಆದಿ-ಯುಗಾದಿಯೆಂದೆನ್ನದೆ ಇರಲು ಸಾಧ್ಯವೆ? ಪ್ರಕೃತಿನಿಯ ನಿಯಮದಡಿ ಬಾಳುವ ನಾವು ನಮ್ಮ ಬದುಕನ್ನು ಹೊಸತನದ ಕಡೆಗೆ ಹೊರಳಿಸುವ ಸಂದರ್ಭವೇ ಯುಗಾದಿ. ನಮ್ಮ ಪಂಚಾಂಗದ ಚಾಂದ್ರಮಾನ ರೀತ್ಯಾ ಶುಭಕೃತ್ ಸಂವತ್ಸರವು ಕಳೆದು ಈ ದಿನದಿಂದಲೇ ಶೋಭಕೃತ್ ನಾಮ ಸಂವತ್ಸರವು ಆರಂಭವಾಗುತ್ತಿದೆ.

ಯುಗಾದಿಯ ವೈಶಿಷ್ಟ್ಯ

ಯುಗಸ್ಯ ಆದಿಃ ಯುಗಾದಿಃ ಎಂಬುದಾಗಿ ಯುಗಾದಿಯನ್ನು ಯುಗದ ಆರಂಭ ಎಂದು ವ್ಯಾಖ್ಯಾನಿಸಲಾಗಿದೆ. ಕೃತಯುಗ, ತ್ರೇತಾಯುಗ, ದ್ವಾಪರಾಯುಗ, ಕಲಿಯುಗ ಎಂಬುದಾಗಿ ನಾಲ್ಕು ಯುಗಗಳನ್ನು ಕಾಲಗಣನೆಯ ಪ್ರಮುಖ ಘಟ್ಟಗಳಾಗಿ ಗುರುತಿಸಿದ್ದರೂ, ಇಲ್ಲಿ ಸಾಮಾನ್ಯಾರ್ಥದಲ್ಲಿ ಯುಗವೆಂದರೆ ವರ್ಷ ಅಥವಾ ಸಂವತ್ಸರವೆಂದು ತೆಗೆದುಕೊಳ್ಳಬೇಕು. ಹಾಗಾಗಿ ಯುಗಾದಿ ಎಂದರೆ ವರ್ಷದ ಆರಂಭ ಎನ್ನುವುದು ಸೂಕ್ತ. ಪ್ರಭವ, ವಿಭವಾದಿಯಾಗಿ ಒಟ್ಟೂ ಅರವತ್ತು ಸಂವತ್ಸರಗಳ ಹೆಸರುಗಳನ್ನು ಹೇಳಿದ್ದಾರಲ್ಲ. ಚಾಂದ್ರಮಾನ ಕಾಲಗಣನೆಯ ಪ್ರಕಾರ ಹೊಸದೊಂದು ಸಂವತ್ಸರ ಆರಂಭವಾಗುವ ದಿನವೇ ಯುಗಾದಿ. ಪಂಚಾಂಗದಲ್ಲಿ ಯುಗಾದಿಯಂದು ಎಲ್ಲವೂ ಪ್ರಥಮವೇ. ಹನ್ನೆರಡು ಮಾಸಗಳ ಪೈಕಿ ಮೊದಲನೇ ಮಾಸವಾದ ಚೈತ್ರ ಮಾಸದ ಮೊದಲದಿನ. ಅಂದೇ ಆರು ಋತುಗಳ ಪೈಕಿ ಮೊದಲನೇ ಋತುವೆನಿಸಿದ ವಸಂತದ ಆರಂಭವೂ ಹೌದು. ಈ ದಿನ ಬ್ರಹ್ಮದೇವನು ಸೂರ್ಯೋದಯದ ಕಾಲಕ್ಕೆ ಈ ಜಗತ್ತಿನ ಸೃಷ್ಟಿ ಕಾರ್ಯವನ್ನು ಆರಂಭಿಸಿದ ಎಂಬುದು ಪುರಾಣಪ್ರತೀತಿ.

ಚೈತ್ರೇ ಮಾಸಿ ಜಗದ್ ಬ್ರಹ್ಮಾ ಸಸರ್ಜ ಪ್ರಥಮೇಽಹನಿ|
ಶುಕ್ಲಪಕ್ಷೇ ಸಮಗ್ರಂ ತು ತಥಾ ಸೂರ್ಯೋದಯೇ ಸತಿ||

ಪ್ರವರ್ತಯಾಮಾಸ ತಥಾ ಕಾಲಸ್ಯ ಗಣನಾಮಪಿ
ಇಂದಿನ ದಿನವೇ ಚತುರ್ಮುಖ ಬ್ರಹ್ಮನು ಬ್ರಹ್ಮಾಂಡವನ್ನು ಸೃಷ್ಟಿಸಿ ಅಪರಿಮಿತವಾದ ಕಾಲವನ್ನು ಲೆಕ್ಕಾಚಾರದ ಮಿತಿಗೆ ದೊರಕುವಂತೆ ವಿಂಗಡನೆ ಮಾಡಿ ಸೃಷ್ಟಿಕಾರ್ಯವನ್ನು ಮುಂದುವರಿಸಿರೆಂದು ದೇವತೆಗಳಿಗೆ ಆದೇಶಿಸಿದ. ಅಂದೇ ಸೂರ್ಯನು ತನ್ನ ಮೊದಲ ರಶ್ಮಿಯನ್ನು ಬೀರಿದ ಎಂಬ ಪ್ರತೀತಿಯೂ ಇದೆ. ಮಹಾ ವಿಷ್ಣು ಮತ್ಸ್ಯಾವತಾರ ತಾಳಿದ್ದು ಕೂಡ ಇದೇ ಶುಭಸಂದರ್ಭದಲ್ಲಿ ಎಂಬುದು ಇನ್ನೊಂದು ಬಗೆಯ ವಿಶೇಷ. ಗೌತಮಿಪುತ್ರ ಸಾತಕರ್ಣಿ ಎಂಬ ರಾಜನು ಶಕರನ್ನು ಯುದ್ಧದಲ್ಲಿ ಹಿಮ್ಮೆಟ್ಟಿ ಶಾಲಿವಾಹನಶಕೆಯನ್ನು ಆರಂಭಿಸಿದ ದಿನವೂ ಇದು ಎಂಬ ಪ್ರತೀತಿಯಿದೆ.

Everything you need to know about ugadi festival

ವಿಶಿಷ್ಟ ಬಗೆಯ ಆಚರಣೆಗಳು

ಭಾರತೀಯರಾಗಿ ನಾವು ಹೊಸವರ್ಷವೆಂದು ಪರಿಗಣಿಸುವ ಈ ದಿನದಂದು ಶಾಸ್ತ್ರೋಕ್ತ ವಿಧಿ-ವಿಧಾನವನ್ನು ತಿಳಿದು ಆಚರಿಸುವುದು ಬಹಳ ಮುಖ್ಯ. ಯುಗಾದಿಯ ದಿನ ಶಾಸ್ತ್ರಗ್ರಂಥಗಳು ವಿಧಿಸುವ ಆಚರಣೆಯು ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆರಂಭಿಸಲು ಪೂರಕವಾಗಿದೆ. ಯುಗಾದಿಯ ದಿನ ನಮ್ಮ ದಿನಚರಿ ಹೇಗಿರಬೇಕೆಂದು ಹೇಳುವ ಈ ಶ್ಲೋಕವನ್ನು ಗಮನಿಸಿ;

ಅಬ್ದಾದಾವುಷಸಿ ಸ್ಮರನ್ ಪಶುಪತಿಂ ಚೊತ್ಥಾಯ ಚಾಂದ್ರೇಸ್ವರೇ
ವಿಪ್ರಾಶೀರನುಗೃಹ್ಯ ನಿಂಬಕದಲಾನ್ ಪ್ರಾಶಾಜ್ಯ ಪಾತ್ರೇ ಸ್ವಕಂ|
ವಕ್ತ್ರಂ ವೀಕ್ಷ್ಯ ಸುದರ್ಪಣೇ ಸುಹೃದಾ ಸ್ನಾತ್ವಾ ಸಮಂ ಭೂಷಿತಃ
ಶ್ರುತ್ವಾ ವರ್ಷಫಲಂ ದ್ವಿಜೈಃ ಸಹ ಮುದಾ ಭುಂಜೀತ ದೈವಜ್ಞಕೈಃ||

ಯುಗಾದಿಯ ದಿನ ಸೂರ್ಯೋದಯಕ್ಕಿಂತಲೂ ಎರಡು ಗಂಟೆ ಮೊದಲೇ ಅಂದರೆ ಅರುಣೋದಯ ಸಮಯದಲ್ಲಿಯೇ ಹಾಸಿಗೆಯಿಂದ ಎದ್ದು ದಿನಚರಿಯನ್ನು ಆರಂಭಿಸಬೇಕೆಂದು ಶಾಸ್ತ್ರವಾಕ್ಯವಿದೆ. ಇಂದಿನ ಜಗತ್ತಿನಲ್ಲಿ ಅನೇಕರು ಮಧ್ಯರಾತ್ರಿ ಮಲಗಿ ಸೂರ್ಯೋದಯವಾದ ಮೇಲೆ ಎದ್ದೇಳುವ ಕೆಟ್ಟ ಚಾಳಿಯನ್ನೇನೋ ಅನೇಕರು ರೂಢಿಸಿಕೊಂಡಿರುತ್ತಾರೆ. ಆದರೆ ಪ್ರಸನ್ನಮಯವಾಗಿರುವ ಅರುಣೋದಯ ಕಾಲದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿದರೆ ನಮ್ಮ ಮನಸು ಮುದಗೊಂಡು ಇಡೀ ದಿನ ಅತ್ಯಂತ ಕ್ರಿಯಾಶೀಲರಾಗಿರಬಹುದೆಂದು ಅನೇಕರಿಗೆ ತಿಳಿದಿಲ್ಲ. ಇದು ವರ್ಷದ ಮೊದಲದಿನದಿಂದಲೇ ಆರಂಭವಾಗಬೇಕು.

ಎಂದಿನಂತೆ ಕರದರ್ಶನವನ್ನು ಮಾಡಿ, ಗುರುಸ್ಮರಣೆ ಹಾಗೂ ದೇವರ ಸ್ಮರಣೆಯನ್ನು ಮಾಡಿ ದಿನವನ್ನು ಆರಂಭಿಸಬೇಕು. ನಂತರ ಬೇವಿನ ಎಲೆಯನ್ನು ತುಪ್ಪ ಇಲ್ಲವೆ ಬೆಲ್ಲದೊಟ್ಟಿಗೆ ಸೇವಿಸಿ ಕನ್ನಡಿಯಲ್ಲಿ ನಮ್ಮ ಮುಖವನ್ನು ನೋಡಿಕೊಳ್ಳಬೇಕು. ಎಳ್ಳೆಣ್ಣೆಯನ್ನು ಮೈಗೆ ಲೇಪಿಸಿಕೊಂಡು ಬೆಚ್ಚಗಿನ ನೀರಿನಿಂದ ಅಭ್ಯಂಗ ಸ್ನಾನವನ್ನು ಮಾಡಿ ಹೊಸಬಟ್ಟೆಯನ್ನು ಧರಿಸಬೇಕು. ದೇವರಪೂಜೆ ಹಾಗೂ ದಾನಾದಿಗಳನ್ನು ನೆರವೇರಿಸಿ ಪಂಚಾಂಗ ಶ್ರವಣವನ್ನು ಮಾಡಿ ಬಂಧುಮಿತ್ರರಿಗೆ ಶುಭಾಶಯವನ್ನು ಕೋರಬೇಕು. ಇದು ಯುಗಾದಿ ದಿನದ ಆಚರಣೆಯ ಸಂಕ್ಷಿಪ್ತನೋಟ.

ಅಭ್ಯಂಗ ಸ್ನಾನ ಹೇಗೆ?

ಸಾಮಾನ್ಯವಾಗಿ ಅಭ್ಯಂಗ ಸ್ನಾನ ಅಥವಾ ಎಣ್ಣೆ ಸ್ನಾನವೆಂದ ತಕ್ಷಣ ನಮಗೆ ನೆನಪಾಗುವುದು ದೀಪಾವಳಿ ಹಬ್ಬ. ಆದರೆ ಯುಗಾದಿಯ ದಿನದಂದೂ ಕೂಡ ಎಣ್ಣೆಯ ಸ್ನಾನ ಮಾಡುವ ಪದ್ಧತಿಯಿದೆ. ಅದಕ್ಕಾಗಿಯೇ ವತ್ಸರಾದೌ ವಸಂತಾದೌ ಬಲಿರಾಜ್ಯೆ ತಥೈವ ಚ ತೈಲಾಭ್ಯಂಗಮಕುರ್ವಾಣಃ ನರಕಂ ಪ್ರತಿಪದ್ಯತೇ ಎಂಬುದಾಗಿ ನಿರ್ಣಯ ಸಿಂಧೂ ಗ್ರಂಥದಲ್ಲಿ ಯುಗಾದಿಯ ದಿನಂದು ಯಾರು ಅಭ್ಯಂಗಸ್ನಾನವನ್ನು ಮಾಡುವುದಿಲ್ಲವೋ ಅವರು ನರಕವನ್ನು ಹೊಂದುತ್ತಾರೆ ಎನ್ನಲಾಗಿದೆ.

ತ್ವಚೆಯ ರಕ್ಷಣೆಗಾಗಿ ಕೊಬ್ಬರಿ ಇಲ್ಲವೆ ಎಳ್ಳಿನ ಎಣ್ಣೆಯ ಬಳಕೆಯನ್ನು ಪ್ರಾಚೀನ ಕಾಲದಿಂದಲೂ ನಮ್ಮಲ್ಲಿ ಹೇಳಲಾಗಿದೆ. ಅಭ್ಯಂಜನಕ್ಕಾಗಿ ಈ ಎಣ್ಣೆಗಳನ್ನೇ ಬಳಸುವುದು ಸೂಕ್ತ. ತ್ವಚೆಯ ರಕ್ಷಣೆಯಲ್ಲದೆ ಅಭ್ಯಂಗಸ್ನಾನದಿಂದ ಚುರುಕು ದೃಷ್ಟಿ, ದೇಹದಾರ್ಢ್ಯತೆ, ದೇಹಾಯಾಸದಿಂದ ಮುಕ್ತಿ, ಸುಖನಿದ್ದೆ, ಪ್ರಸನ್ನತೆ ಇತ್ಯಾದಿ ಲಾಭಗಳನ್ನು ಪಡೆಯಬಹುದೆಂದು ಅಷ್ಟಾಂಗಹೃದಯವೆAಬ ಆಯುರ್ವೇದ ಗ್ರಂಥದಲ್ಲಿ ಹೇಳಲಾಗಿದೆ.

ಬೇವು-ಬೆಲ್ಲ ಮಿಶ್ರಣದ ಸೇವನೆ

ಆರೋಗ್ಯಯುತವಾಗಿ ಇರಲು ಕಾಲಕ್ಕೆ ತಕ್ಕಂತೆ ನಮ್ಮ ಆಹಾರ, ವಿಹಾರ ಚರ್ಯೆಗಳನ್ನು ಹೊಂದಿಸಿಕೊಳ್ಳಬೇಕೆಂಬುದನ್ನು ಆಯುರ್ವೇದ ಶಾಸ್ತ್ರವು ಹೇಳುತ್ತದೆ. ಯುಗಾದಿಯ ದಿನ ಸೇವಿಸುವ ಬೇವು-ಬೆಲ್ಲದಲ್ಲಿ ಹಾಗೂ ಭಕ್ಷ್ಯಾದಿಗಳಲ್ಲಿ ಇಂಥಹದ್ದೊಂದು ಆರೋಗ್ಯಕ್ಕಾಗಿ ಆಹಾರಸೂತ್ರವನ್ನು ಕಟ್ಟಿಕೊಡಲಾಗಿದೆ. ಯುಗಾದಿಯಂದು ಪ್ರಮುಖವಾಗಿ ಬೇವು ಬೆಲ್ಲಗಳ ಮಿಶ್ರಣವನ್ನು ನೈವೇದ್ಯ ಮಾಡಿ ಮನೆಯವರಿಗೆ, ಬಂಧು, ಹಿತಷಿಗಳಿಗೆ ಹಂಚುವುದು ಸರ್ವೇ ಸಾಮಾನ್ಯ.

Everything you need to know about ugadi festival

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ
ಸರ್ವಾರಿಷ್ಟ ವಿನಾಶಾಯ ನಿಂಬಕಂ ದಲಭಕ್ಷಣಮ್ ||

ದೀರ್ಘಾಯಸ್ಸು, ವಜ್ರದಂತೆ ಗಟ್ಟಿಮುಟ್ಟಾದ ದೇಹ, ಸಕಲ ಸಂಪತ್ತು ಇವುಗಳ ಪ್ರಾಪ್ತಿ ಹಾಗೂ ನಾನಾ ಬಗೆಯ ರೋಗರುಜಿನಗಳ ನಿವಾರಣೆ ಇವೆಲ್ಲವೂ ಬೇವು ಭಕ್ಷಣೆಯಿಂದ ಸಾಧ್ಯವಿದೆ ಎನ್ನುತ್ತದೆ ಈ ಶ್ಲೋಕ.

ಬೇವಿನಲ್ಲಿ ಅತಿ ಹೆಚ್ಚು ಬ್ಯಾಕ್ಟಿರಿಯಾದಂಥಹ ವಿಷಜಂತುಗಳನ್ನು ನಾಶಪಡಿಸುವ ಶಕ್ತಿ ಇದೆ. ವಿಷಮ ಜ್ವರ, ಚರ್ಮ ಖಾಯಿಲೆ ಇತ್ಯಾದಿಗಳ ಚಿಕಿತ್ಸೆಯಲ್ಲಿ ಆಯುರ್ವೇದದಲ್ಲಿ ಬೇವಿನ ಮಹತ್ವವನ್ನು ಹೇಳಲಾಗಿದೆ. ಇನ್ನು ಬೆಲ್ಲವನ್ನು ‘ಗುಡ’ ಎನ್ನಲಾಗಿದ್ದು, ಇದರ ಸೇವನೆಯು ದೇಹವನ್ನು ತಂಪಾಗಿ ಇರಿಸುವುದಲ್ಲದೇ ನಮ್ಮ ಶ್ವಾಸಕೋಶವನ್ನು ಶುದ್ಧಿಕರಿಸುವ ಮತ್ತು ಪಚನ ಕ್ರಿಯೆಯನ್ನು ಸುಲಭಗೊಳಿಸುವ ಸಾಮರ್ಥ್ಯವನ್ನು ಬೆಲ್ಲ ಹೊಂದಿದೆ. ಹೀಗೆ ವರ್ಷದ ಆರಂಭದ ದಿನದಿಂದಲೇ ನಾವು ನಮ್ಮ ಆರೋಗ್ಯದ ಕಾಳಜಿಯನ್ನು ವಹಿಸುವುದನ್ನು ನಮಗೆ ಯುಗಾದಿಯ ಆಚರಣೆ ಕಲಿಸಿಕೊಡುತ್ತದೆ.

ಬೇವು ಜೀವನದ ಕಷ್ಟಗಳನ್ನು, ಬೆಲ್ಲ ಸುಖವನ್ನು ಸಂಕೇತಿಸುವುದಲ್ಲದೇ, ಬೇವುಬೆಲ್ಲದ ಮಿಶ್ರಣವು ಜೀವನದ ಸುಖ-ದುಃಖಗಳ ಸಮ ಸ್ವೀಕಾರವನ್ನು ಸಾರಿ ಹೇಳುತ್ತದೆ. ಸುಖವನ್ನೇ ಬಯಸುತ್ತೇವಾದರೂ ಜೀವನವೆಂದರೆ ಕೇವಲ ಸುಖಮಯವಾಗಿರಲು ಸಾಧ್ಯವಿಲ್ಲ. ಸುಖದ ಅನುಭವವಾಗಲಾದರೂ ದುಃಖ ಅನುಭವಿಸಲೇ ಬೇಕು ಎನ್ನುತ್ತಾರೆ ನಮ್ಮ ಹಿರಿಯರು. ಅಂತೆಯೇ ಸುಖೇ ದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ ಎಂಬುದಾಗಿ ಗೀತೆಯ ಶ್ರೀಕೃಷ್ಣನು ಹೇಳುವಂತೆ ಸುಃಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸುವುದೇ ಭಾರತೀಯರ ಪಾಲಿಗೆ ಜೀವನ ಧರ್ಮ. ಇದನ್ನೇ ಸಾಂಕೇತಿಕವಾಗಿ ಇಲ್ಲಿ ಹೇಳಲಾಗಿದೆ. ಉಳಿದಂತೆ ಬೇಸಿಗೆಯಲ್ಲಿ ಶರೀರದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಪಾನಕ, ಕೊಸಂಬರಿ ಇತ್ಯಾದಿ ತಂಪು ಪದಾರ್ಥಗಳ ಸೇವನೆಯನ್ನು ಪಾನ-ಭೋಜನಾದಿಗಳಲ್ಲಿ ಹೇಳಲಾಗಿದೆ.

ಆತ್ಮೋನ್ನತಿಗಾಗಿ ದೃಢಸಂಕಲ್ಪ

ಯುಗಾದಿಯಂದು ದೇವರಪೂಜೆಯನ್ನು ನೆರವೇರಿಸುವದರ ಜೊತೆಗೆ ಸೃಷ್ಟಿಕರ್ತನಾದ ಬ್ರಹ್ಮನನ್ನು ಹವನಾದಿಗಳಿಂದ ಆರಾಧಿಸುವ ವಾಡಿಕೆಯೂ ಅನೇಕ ಕಡೆ ಇದೆ. ಬ್ರಹ್ಮಾಂಡವನ್ನು ಸೃಷ್ಟಿಸಿ ನಮ್ಮ ಬದುಕಿಗೊಂದು ನೆಲೆ ನೀಡಿದ ಸೃಷ್ಟಿಕರ್ತೃವಿಗೆ ಈ ಜಗತ್ತು ಸೃಷ್ಟಿಯಾದ ದಿನ ಹಾಗೂ ವರ್ಷದ ಮೊದಲದಿನವೇ ಕೃತಜ್ಞತೆಯನ್ನು ಹೇಳುವುದು ಅದೆಷ್ಟು ಅರ್ಥಪೂರ್ಣವಲ್ಲವೆ? ಇಂದು ಭಗವಂತನನ್ನು ಭಕ್ತಿಯಿಂದ ಧ್ಯಾನಿಸಿ ನಮ್ಮ ಲಕ್ಷ್ಯವನ್ನು ಸಾಧಿಸಲು ದೃಢವಾದ ಸಂಕಲ್ಪವನ್ನು ಭಗವಂತನ ಎದುರಲ್ಲಿ ತೆಗೆದುಕೊಳ್ಳುವದೂ ಕೂಡ ಆಚರಣೆಯ ಭಾಗವಾಗಿದೆ. ವಿಶೇಷವಾಗಿ ಆತ್ಮೋನ್ನತಿಗಾಗಿ ಸಂಕಲ್ಪತೊಟ್ಟು ಭಗವಂತನನ್ನು ಪ್ರಾರ್ಥಿಸುವುದು ಸೂಕ್ತ.

ಪಂಚಾಂಗ ಶ್ರವಣ

ಯುಗಾದಿಯ ದಿನ ಸಾಯಂಕಾಲ ಮನೆ ಮಂದಿಯೆಲ್ಲ ಜಗುಲಿಯಲ್ಲಿ ಕುಳಿತು ಅಥವಾ ಊರವರೆಲ್ಲ ಗುಡಿಯ ಕಟ್ಟೆಯ ಬಳಿ ಸೇರಿ ಆ ವರ್ಷದ ಪಂಚಾಂಗವನ್ನು ಪುರೋಹಿತರಿಂದ ಕೇಳಿಸಿಕೊಳ್ಳುವ ಸಂಪ್ರದಾಯ ಅನಾದಿಕಾಲದಿಂದ ಬಂದಿದೆ.

ಇಂದು ನಾವು ಗ್ರೆಗೋರಿಯನ್ ಎಂಬ ಅಸಮಂಜಸವಾದ ಕ್ಯಾಲೆಂಡರ್ ಪದ್ಧತಿಗೆ ನಮ್ಮ ದಿನಚರಿಯನ್ನು ಒಗ್ಗಿಸಿಕೊಂಡು ಬಿಟ್ಟಿದ್ದೇವೆ. ಆದರೆ ಭಾರತೀಯ ಕಾಲಗಣನೆಯ ಪದ್ಧತಿಯು ಆಕಾಶಕಾಯಗಳ ದೃಗ್ಗೋಚರ ಚಲನೆಯ ಆಧಾರದ ಮೇಲೆ ರಚಿತವಾದುದು. ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎಂಬುದಾಗಿ ಆಕಾಶಕಾಯಗಳಿಂದ ಸಂಭವಿಸುವ ಬದಲಾವಣೆಗಳನ್ನು ಗಮನಿಸಿ ಅತ್ಯಂತ ವೈಜ್ಞಾನಿಕವಾಗಿ ಕ್ಯಾಲೆಂಡರ್ ತಯಾರಿಸುವ ಪದ್ಧತಿ ನಮ್ಮ ಭಾರತಿಯರಿಗೆ ಕರಗತವಾಗಿತ್ತು. ಅದು ಅತ್ಯಂತ ನಿಖರವಾಗಿ ನಮಗೆ ಕಾಲದ ಪ್ರಜ್ಞೆಯನ್ನು ಮೂಡಿಸಬಲ್ಲದು. ಕಾಲಬದಲಾವಣೆಯ ಎಲ್ಲಬಗೆಯ ಸೂಕ್ಷ್ಮತೆಯನ್ನು ನಮ್ಮ ಪಂಚಾಂಗವು ಹೊಂದಿದೆ ಎಂಬುದು ಮಹತ್ವದ ವಿಚಾರ.

ಹೀಗೆ ವೈಜ್ಞಾನಿಕ ದೃಷ್ಟಿಕೋನವಿರಿಸಿಕೊಂಡು ತಯಾರಿಸಲಾಗುವ ಪಂಚಾಂಗದಲ್ಲಿ ಆ ಇಡೀ ವರ್ಷ ಸಂಭವಿಸುವ ಶುಭ-ಅಶುಭ ಫಲಗಳ ಲೆಕ್ಕಾಚಾರ, ಪ್ರಕೃತಿ ಅನಾಹುತಗಳು, ಹಬ್ಬ ಹರಿದಿನಗಳು ಬರುವ ಕಾಲ, ನೇಮವ್ರತಾದಿಗಳ ಆಚರಣೆ ಇತ್ಯಾದಿ ವಿಷಯಗಳು ಅಡಕವಾಗಿರುತ್ತದೆ. ಈ ಎಲ್ಲ ವಿಚಾರಗಳನ್ನು ವರ್ಷದ ಮೊದಲನೇ ದಿನವೇ ಕೇಳಿ ತಿಳಿದುಕೊಳ್ಳುವ ನಮ್ಮವರಿಗೆ ಮುಂಬರುವ ಸಂಭ್ರಮ-ಅವಘಡಗಳಿಗೆ ಮಾನಸಿಕವಾಗಿ ಮೊದಲೇ ಅಣಿಯಾಗುವ ಹವಣಿಕೆ ಇದೆ ಎಂತಲೇ ಹೇಳಬೇಕು.

Everything you need to know about ugadi festival

ವಿಭಿನ್ನ ಆಚರಣೆಗಳು

ಪೂರ್ವೋಕ್ತ ಎಲ್ಲ ಆಚರಣೆಗಳು ದೇಶದಾದ್ಯಂತ ಎಲ್ಲೆಡೆಯೂ ಇದೆ. ಇವುಗಳೊಟ್ಟಿಗೆ ಬಗೆ ಬಗೆಯ ಆಚರಣೆಗಳನ್ನು ದೇಶದುದ್ದಗಲಕ್ಕೂ ಯುಗಾದಿಯಂದು ಆಚರಿಸುತ್ತಾರೆ. ಆಗ ತಾನೆ ಹೊಸ ಫಸಲು ಬರುವುದರಿಂದ ಹೊಸ ಬೆಳೆಯನ್ನು ಕ್ಷೇತ್ರದಿಂದ ತಂದು ಪೂಜಿಸಿ ಸಂಭ್ರಮಿಸುವ ವಾಡಿಕೆ ನಮ್ಮ ರಾಜ್ಯದ ಮಲೆನಾಡು ಸೇರಿದಂತೆ ಅನೇಕ ಕಡೆಗಳಲ್ಲಿವೆ. ಇದೇ ಮಾದರಿಯಲ್ಲಿ ಕೇರಳದಲ್ಲಿ ವಿಶುವನ್ನು ಆಚರಿಸಲಾಗುತ್ತದೆ. ಯುಗಾದಿಯ ದಿನ ಮನೆಯ ಮೇಲೆ ಅಥವಾ ಗುಡಿಯ ಮೇಲೆ ಧ್ವಜಾರೋಹಣ ಮಾಡುವ ಪದ್ಧತಿಯೂ ಇದೆ.

ಮಹಾರಾಷ್ಟ್ರದಲ್ಲಿ ಇದನ್ನೇ ಗುಡಿ ಪಡ್ವಾ ಎಂಬುದಾಗಿ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ಗಂಗಾ ಸೇರಿ ಹಲವಾರು ನದಿಗಳಲ್ಲಿ ಜನರು ಪುಣ್ಯಸ್ನಾನ ಮಾಡುವುದು ಸರ್ವೇ ಸಾಮಾನ್ಯ. ಆಚರಣೆಯಲ್ಲಿ ಭಿನ್ನತೆಯಿದ್ದರೂ ಹೊಸವರ್ಷವನ್ನು ಸ್ವಾಗತಿಸುವ ಭಾವನೆಯಲ್ಲಿ ಎಂದಿಗೂ ನವೀನತೆಯೇ ಇರುವುದಂತೂ ಸುಳ್ಳಲ್ಲ.

ಕಾಲವು ನಿಂತಿರುವುದಿಲ್ಲ. ಕಳೆದು ಹೋದ ಸಮಯವು ಮತ್ತೆ ಬರುವುದಿಲ್ಲ. ಹಾಗಂತ ಅನೇಕ ಸಂದರ್ಭಗಳು, ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಮತ್ತೆ ಬರಬಹುದು. ಅದಕ್ಕಾಗಿಯೇ ನಮ್ಮ ಪ್ರಾಚೀನ ರು ಕಾಲವನ್ನು ಚಕ್ರದ ರೂಪದಲ್ಲಿ ಕಂಡಿದ್ದಾರೆ. ಗತಿಸಿದ ಕಾಲದ ಬಗ್ಗೆ ಹೆಚ್ಚು ಕೊರಗದೆ ಮುಂಬರುವ ಹಿತವನ್ನು ಎದುರು ನೋಡುತ್ತಾ ಭರವಸೆಯಿಂದ ಬದುಕಬೇಕೆನ್ನುವುದನ್ನೇ ನಮಗೆ ಯುಗಾದಿಯು ಸಂದೇಶ ರೂಪದಲ್ಲಿ ತಿಳಿಸುತ್ತದೆ. ಈ ಕಾಲದ ಸಂದೇಶವನ್ನು ಅರ್ಥೈಸಿಕೊಂಡು ನೆಮ್ಮದಿಯಿಂದ ಬದುಕೋಣ.

ಲೇಖಕರು ಸಂಸ್ಕೃತ ಪ್ರಾಧ್ಯಾಪಕರು,
ಎ.ಎಸ್.ಸಿ. ಪದವಿ ಮಹಾವಿದ್ಯಾಲಯ, ಬೆಂಗಳೂರು

ಇದನ್ನೂ ಓದಿ: Ugadi 2023 : ಜಗದ ಆದಿ ಈ ಯುಗಾದಿ!

Exit mobile version