Site icon Vistara News

Ugadi 2023: ಯುಗಾದಿ ಹಬ್ಬಕ್ಕಿರಲಿ ಆರೋಗ್ಯಪೂರ್ಣ ಅಭ್ಯಂಗ

ugadi 2023

ಹಬ್ಬಗಳಲ್ಲಿ ಪೂಜೆ, ನೈವೇದ್ಯದಂಥ ಕ್ರಮಗಳ ಜೊತೆಯಲ್ಲೇ ಸಲ್ಲುವುದು ಅಭ್ಯಂಗ ಸ್ನಾನ ಅಥವಾ ಅಭ್ಯಂಜನ. ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಅಭ್ಯಂಗವನ್ನು ಯುಗಾದಿಯಂಥ (Ugadi 2023) ಪ್ರಮುಖ ಹಬ್ಬಗಳಲ್ಲಿ ವಾಡಿಕೆಯಂತೆ ಮಾಡಲಾಗುತ್ತದೆ. ಉಗುರು ಬೆಚ್ಚಗಿನ ಎಣ್ಣೆಯನ್ನು ಮೈಗೆಲ್ಲಾ ಹಚ್ಚಿಕೊಂಡು ಬಿಸಿನೀರು ಸ್ನಾನ ಮಾಡುವ ಕ್ರಮಕ್ಕೆ ಆಯುರ್ವೇದದಲ್ಲಿಯೂ ಮಹತ್ವದ ಸ್ಥಾನವಿದೆ.

ಯಾವ ಎಣ್ಣೆಗಳನ್ನು ಬಳಸಬಹುದು?

ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ, ಹರಳೆಣ್ಣೆಗಳನ್ನು ಇದಕ್ಕೆ ಬಳಸಬಹುದು. ಸಾಮಾನ್ಯವಾಗಿ ಅರ್ಧ ಎಳ್ಳೆಣ್ಣೆ, ಇನ್ನರ್ಧ ಕೊಬ್ಬರಿ ಎಣ್ಣೆಯನ್ನು ಬಳಸುವುದು ಎಲ್ಲಾ ಕಾಲದಲ್ಲಿಯೂ ಉತ್ತಮ. ಅಭ್ಯಂಗ ಮಾಡುವುದಕ್ಕೆ ಯುಗಾದಿ, ದೀಪಾವಳಿಯನ್ನೇ ಕಾಯಬೇಕೆಂದಿಲ್ಲ; ವಾರಕ್ಕೊಮ್ಮೆ ಮಾಡಿದರೂ ಒಳ್ಳೆಯದೇ. ಆದರೆ ಇಷ್ಟೊಂದು ಸಮಯ ಇರಬೇಕಲ್ಲ. ಒಂದೊಮ್ಮೆ ಇಡೀ ದೇಹಕ್ಕೆ ಮಸಾಜ್‌ ಮಾಡುವಷ್ಟು ಸಮಯ ಇಲ್ಲದಿದ್ದರೆ, ಕೈ-ಕಾಲು, ತಲೆ-ಮುಖಗಳಿಗಾದರೂ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು ಒಳ್ಳೆಯದು. ಅಂತೂ ಎಣ್ಣೆ ಸ್ನಾನ ದೇಹಕ್ಕೆ ಬೇಕು.

ಇದನ್ನು ಮಾಡುವುದಕ್ಕೆ ಬೆಳಗಿನ ಜಾವ, ಅಂದರೆ ಬ್ರಾಹ್ಮೀ ಮುಹೂರ್ತ ಒಳ್ಳೆಯದು ಎನ್ನಲಾಗುತ್ತದೆ. ಆ ಹೊತ್ತಿಗೆ ಸಾಧ್ಯವಿಲ್ಲ ಎಂದಾದರೆ, ದಿನದ ಬೇರಾವುದೇ ಹೊತ್ತೂ ಆದೀತು. ಆದರೆ ಹೊಟ್ಟೆ ತುಂಬಿದಾಗ ಮಾಡುವಂತಿಲ್ಲ. ಬೆಳಗಿನ ತಿಂಡಿ ಆದ ಅಥವಾ ಮಧ್ಯಾಹ್ನದ ಊಟದ ನಂತರ ಮೂರು ತಾಸುಗಳ ಬಳಿಕ ಅಭ್ಯಂಗಕ್ಕೆ ತೊಂದರೆಯಿಲ್ಲ.

ಒತ್ತಡ ನಿಯಂತ್ರಣ

ಆಯುರ್ವೇದದ ಪ್ರಕಾರ, ಮೈ-ಕೈ ನೋವು, ಸಂಧಿವಾತ ನಿರ್ವಹಣೆಯಿಂದ ಹಿಡಿದು, ಅಭ್ಯಂಗದ ಪ್ರಯೋಜನಗಳು ಬಹಳ ಇವೆ. ಆದರೆ ಸಾಮಾನ್ಯ ಮಾತುಗಳಲ್ಲಿ ಹೇಳುವುದಾದರೆ ಮನಸ್ಸಿನ ಒತ್ತಡ ನಿರ್ವಹಣೆಗೆ ಇದು ಒಳ್ಳೆಯ ಮದ್ದು. ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆ ಗಳಿಸಿರುವ ಸ್ಪಾ ಮಸಾಜ್‌ನಂಥವು ಸಹ ಇದೇ ರೀತಿಯ ತತ್ವಗಳನ್ನು ಬಳಸುತ್ತವೆ. ನವಿರಾದ ಎಣ್ಣೆ ಮಸಾಜ್‌ ಮತ್ತು ಹದವಾದ ಬಿಸಿ ನೀರ ಸ್ನಾನವು ಸಾಧಾರಣ ಎಂಥಾ ಒತ್ತಡವನ್ನೂ ಶಮನ ಮಾಡಬಲ್ಲದು.

ಚರ್ಮಕ್ಕೆ

ಎಣ್ಣೆ ಒತ್ತುವುದರಿಂದ ಚರ್ಮದ ತೇವಾಂಶವನ್ನು ಕಾಪಾಡಬಹುದು. ಒಡೆದ ಹಿಮ್ಮಡಿಗಳು, ತಲೆ ಹೊಟ್ಟು, ಚರ್ಮ ಸುಕ್ಕಾಗುವುದು ಮುಂತಾದವನ್ನು ತಡೆಗಟ್ಟು, ಇಡೀ ದೇಹವನ್ನು ಕಾಂತಿಯುತವಾಗಿ ಇರಿಸುತ್ತದೆ. ಕೀಲುಗಳಿಗೆ ಪದೇಪದೆ ಎಣ್ಣೆ ಹಚ್ಚುವುದರಿಂದ, ಅವುಗಳ ಆರೋಗ್ಯವೂ ಸುಧಾರಿಸುತ್ತದೆ. ಎಣ್ಣೆ ಮತ್ತು ಬಿಸಿನೀರಿನಿಂದ ಮೈ-ಕೈ ನೋವು ಸಹ ಕಡಿಮೆಯಾಗುತ್ತದೆ. ಹಾಗಾಗಿ ಬಾಣಂತಿಯರಿಗೆ ಎಣ್ಣೆ-ನೀರು ಹಾಕುವ ಕ್ರಮವಿದೆ.

ಕಣ್ಣಿನ ಆರೋಗ್ಯಕ್ಕೆ

ದಿನದ ಹೆಚ್ಚಿನ ಹೊತ್ತು ಸ್ಕ್ರೀನ್‌ ನೋಡುವುದರಿಂದ ಕಣ್ಣುಗಳ ಸಹಜವಾಗಿ ಹೆಚ್ಚು ಆಯಾಸಗೊಳ್ಳುತ್ತವೆ. ಹಾಗಾಗಿ ತಲೆ ತಂಪಾಗುವಂತೆ ಎಣ್ಣೆ ಮಸಾಜ್‌ ಮಾಡುವುದರಿಂದ, ತಲೆ, ಕಣ್ಣಿನ ನರಗಳ ಆಯಾಸವೆಲ್ಲಾ ಶಮನವಾಗುತ್ತದೆ. ದೃಷ್ಟಿ ಚುರುಕಾಗುತ್ತದೆ. ಇಡೀ ದೇಹದ ಒತ್ತಡ ನಿವಾರಣೆಯಲ್ಲಿ ಇದರ ಪಾತ್ರವೂ ಮಹತ್ವದ್ದು.

ಕಣ್ತುಂಬಾ ನಿದ್ದೆ

ನಿದ್ರಾಹೀನತೆಯಲ್ಲಿ ಒತ್ತಡದ್ದೇ ಮುಖ್ಯ ಭೂಮಿಕೆ. ಒತ್ತಡ ನಿವಾರಣೆ ಆಗುತ್ತಿದ್ದಂತೆ ನಿದ್ದೆಯೂ ಸುಲಲಿತವಾಗುತ್ತದೆ. ಅದರಲ್ಲೂ, ಎಣ್ಣೆ- ಬಿಸಿನೀರಿನ ಸ್ನಾನವು ನಿದ್ದೆಯನ್ನು ಉದ್ದೀಪಿಸುತ್ತವೆ. ಹಾಗಾಗಿ ನಿದ್ರಾಹೀನತೆಯ ಸಮಸ್ಯೆ ಇದ್ದವರು ಪದೇಪದೆ ಅಭ್ಯಂಗ ಮಾಡುವುದು ಒಳ್ಳೆಯ ಪರಿಹಾರ ಆಗಬಲ್ಲದು.

ಯಾರಿಗೆ ಸೂಕ್ತವಲ್ಲ?

ಅಭ್ಯಂಗವನ್ನು ಸಾಮಾನ್ಯವಾಗಿ ಎಲ್ಲರೂ ಮಾಡಬಹುದಾದರೂ ಅದಕ್ಕೆ ಕೆಲವು ಅಪವಾದಗಳಿವೆ. ಸೋಂಕು, ಜ್ವರ, ನೆಗಡಿಯಿಂದ ಬಳಲುತ್ತಿರುವವರಿಗೆ ಅಭ್ಯಂಗ ಸಲ್ಲದು. ಆರೋಗ್ಯ ಸುಧಾರಿಸಿದ ನಂತರ ಎಣ್ಣೆ-ನೀರು ಸೂಕ್ತ. ಜೋರು ಮಳೆಗಾಲದಲ್ಲಿ ಅಥವಾ ವಾತಾವರಣದಲ್ಲಿ ಬಹಳ ಥಂಡಿಯಿದ್ದಾಗ ಎಣ್ಣೆ ಸ್ನಾನ ಬೇಕಾಗುವುದಿಲ್ಲ.

ಎಣ್ಣೆ ಲೇಪಿಸಿಕೊಂಡ ಮೇಲೆ ತಾಸುಗಟ್ಟಲೆ ನೆನೆಯುತ್ತಾ ಕುಳಿತುಕೊಳ್ಳಬೇಕಿಲ್ಲ. ಹತ್ತಾರು ನಿಮಿಷಗಳ ನಂತರ ಬಿಸಿನೀರಿನ ಸ್ನಾನ ಮಾಡಬಹುದು. ಜೊತೆಗೆ ಕಡಲೆಹಿಟ್ಟು, ಹೆಸರಿಟ್ಟು, ಸೀಗೆಪುಡಿಯಂಥವುಗಳ ಬಳಕೆ ಒಳ್ಳೆಯದು.

ಇದನ್ನೂ ಓದಿ: Health Tips: ನಾರು ಒಳ್ಳೆಯದು; ಆದರೂ ಅತಿಯಾಗಿ ತಿನ್ನಬೇಡಿ!

Exit mobile version