–ಅಲಕಾ ಕೆ
ಸುಮ್ಮನೆ ʻಯುಗಾದಿʼ (Ugadi 2024) ಎಂದರೆ ಆಗಲಿಕ್ಕಿಲ್ಲ… ಇದು ಹೊಸ ವರ್ಷದ ಆದಿ. ʻಹೊಹ್ಹೊ! ಯುಗಾದಿಯು, ಹರುಷಕೆಲ್ಲ ಗಾದಿಯು!ʼ ಎನ್ನುತ್ತದೊಂದು ಕವಿವಾಣಿ. ನಮ್ಮ ಭಾವನೆಗಳಿಗೂ ಪ್ರಕೃತಿಯ ಬದಲಾವಣೆಗಳಿಗೂ ಅವಿನಾಭಾವ ಸಂಬಂಧವಿದೆ. ಲೋಕವೆಲ್ಲ ತೊಳೆದು ಹೋಗುವಂಥ ಮಳೆ ಸುರಿಯುತ್ತಿದ್ದರೆ ನಮ್ಮ ಮನದಲ್ಲೂ ಮೋಡ ಮುಸುಕಿದ ವಾತಾವರಣ; ಗಡಗುಡುವ ಚಳಿ ಇದೆಯೆಂದಾದರೆ ನಮ್ಮ ಚೈತನ್ಯವೂ ಕಂಬಳಿ ಹೊದ್ದು ಕೂತಿರುತ್ತದೆ; ಕೆಟ್ಟ ಬಿಸಿಲಾದರೆ ನಮ್ಮ ಉತ್ಸಾಹವೂ ಸುಟ್ಟು ಹೋಗಿರುತ್ತದೆ. ಆದರೆ ಯುಗಾದಿಯ ಹೊತ್ತಿಗೆ ಹಾಗಲ್ಲ. ವಸಂತ ಮಾಸದ ಆರಂಭದ ಸಮಯ. ಅಪವಾದಕ್ಕೆ ಈ ಬಾರಿಯ ಬಿರುಬೇಸಿಗೆಯಂಥ ವರ್ಷಗಳನ್ನು ಹೊರತಾಗಿಸಿದರೆ, ಚೈತನ್ಯ ಹೆಚ್ಚಿಸುವಂಥ ವಾತಾವರಣವೇ ಇರುತ್ತದೆ. ಆಗಿನ್ನೂ ಪಲ್ಲವಿಸುತ್ತಿರುವ ಕೆಂಪಾದ ಚಿಗುರುಗಳು ಒಂದೆಡೆ, ಹೊಸದಾಗಿ ಮೂಡಿರುವ ಎಳೆ ಹಸಿರು ಇನ್ನೊಂದೆಡೆ. ನಡುವೆ ಮಾವು, ಬೇವು, ಹೊಂಗೆ, ಭೃಂಗ… ಹಬ್ಬಕ್ಕೆ ನಾವು ಮಾತ್ರವೇ ಅಲ್ಲ, ಇಡೀ ನಿಸರ್ಗವೇ ಹೊಸಬಟ್ಟೆ ತೊಟ್ಟು ನಿಂತಂತೆ ಕಂಡರೆ, ಸರಿಯೇ!
ಹೊಸವರ್ಷದ ಋತು
ವಸಂತದ ಆಗಮನವೆಂದರೆ ಜಗತ್ತಿನ ಹಲವಾರು ದೇಶಗಳಲ್ಲಿ, ಸಂಸ್ಕೃತಿಗಳಲ್ಲಿ ಹೊಸವರ್ಷದ, ನವಪರ್ವದ ಸಂಭ್ರಮ. ಇದು ಭಾರತಕ್ಕೆ ಸೀಮಿತವಲ್ಲ, ಕರ್ನಾಟಕಕ್ಕಂತೂ ಅಲ್ಲವೇ ಅಲ್ಲ. ನಮ್ಮಲ್ಲೇ ದಕ್ಷಿಣ ಭಾರತದ ಉದ್ದಗಲಕ್ಕೆ ಇದು ಹೊಸ ವರ್ಷದ ಋತು, ಹಬ್ಬದ ಹೆಸರು ಯಾವುದಾದರೇನು! ಎಲ್ಲೆಡೆ ಕಾಣುವುದು ಪ್ರಕೃತಿಯ ಆರಾಧನೆಯೇ. ಉಳಿದೆಲ್ಲ ಹಬ್ಬಗಳಿಗೆ ಇರುವಂಥ ಕಡುಬು, ಕಜ್ಜಾಯಗಳಲ್ಲ ಈ ಹಬ್ಬದಲ್ಲಿ. ಈಗ ಬೇವು, ಮಾವು ನಮಗೆ ಮುಖ್ಯವಾದ ವ್ಯಂಜನ. ಬೇವೆಂದರೆ ಕಠೋರ ಕಹಿಯ ಭಾಗಗಳೂ ಅಲ್ಲ, ಕಹಿಯನ್ನು ಹದವಾಗಿ ಹೊಂದಿರುವ ಚಿಗುರು ಮತ್ತು ಕಹಿ ಪರಿಮಳದ ಹೂವು. ಇದನ್ನೂ ತಿನ್ನುವುದಕ್ಕೆ ಕಳ್ಳಾಟ ಆಡುವ ನಾವು ಬೆಲ್ಲವನ್ನು ಜೊತೆಗೆ ಸೇರಿಸಿಕೊಂಡಿದ್ದೇವೆಂದರೆ ತಪ್ಪಲ್ಲ. ಇದರ ಜೊತೆಗೆ ಹುಳಿ-ಸಿಹಿಯ ಹೊಸ ಮಾವು. ಇನ್ನು ಹೊರಗಿನ ತೋರಣಕ್ಕೆ ಮೋಸವಾಗಬಾರದೆಂದು ಒಳಗಿಷ್ಟು ಹೋಳಿಗೆ-ಹೂರಣ… ಇತ್ಯಾದಿ
ಯುಗಾದಿಯ ವಿಶೇಷತೆಗಳೇನು?
ಯುಗಾದಿಯ ವಿಶೇಷತೆಗಳನ್ನು ಗಮನಿಸೋಣ. ಬೆಳಗೇಳುತ್ತಿದ್ದಂತೆ ಬಾಗಿಲಿಗೆ ಮಾವಿನೆಲೆಗಳ ತೋರಣ, ಅದಕ್ಕೆ ಬೇವಿನೆಲೆಗಳ ಅಲಂಕಾರ. ಮನೆಮಂದಿಗೆಲ್ಲ ಒಂದು ಹದವಾದ ಅಭ್ಯಂಜನ. ಈ ಸ್ನಾನಕ್ಕೆಂದೇ ಬಲಿತ ಬೇವಿನ ಎಲೆಗಳು ಹಂಡೆ ಸೇರುತ್ತವೆ. ಚರ್ಮದ ಆರೋಗ್ಯ ಸುಧಾರಿಸುವಲ್ಲಿ ಬೇವಿಗಿಂತ ಮಿಗಿಲಾದ ಟಾನಿಕ್ ಇಲ್ಲ. ಬೇಸಿಗೆಯಲ್ಲಿ ಕಾಡುವ ಬೆವರುಸಾಲೆಯಿಂದ ಹಿಡಿದು ಕಜ್ಜಿತುರಿಯವರೆಗೆ ಸರ್ವರೋಗಕ್ಕೂ ಇದೇ ಮದ್ದು. ಹಾಗಂತ ಮದ್ದು ಮಾಡಿದರೆ ಅರ್ಧಂಬರ್ಧ ಮಾಡುವಂತಿಲ್ಲ. ಕೇವಲ ಮೈಗೆ ಲೇಪಿಸಿದರೆ ಸಾಕಾಗದಲ್ಲ, ಹಾಗಾಗಿ ಹೊಟ್ಟೆಯನ್ನೂ ಸೇರಬೇಕು ಬೇವು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಸ್ವಾಸ್ಥ್ಯ ವೃದ್ಧಿಸುತ್ತದೆ ಎಂಬುದೆಲ್ಲ ತಾತ್ವಿಕವಾಗಿ ಹೌದಾದರೂ, ಅದಕ್ಕೊಂದು ಪ್ರಮಾಣ, ಕ್ರಮ ಎಂಬುದೆಲ್ಲ ಬೇಕಲ್ಲ. ನಾವೇನು ಹಬ್ಬಕ್ಕೆ ಔಷಧಿಯಾಗಿ ತಿನ್ನುವುದಿಲ್ಲ ಬೇವನ್ನು! ಹೊಸ ಸಂವತ್ಸರದಲ್ಲಿ ಸಿಹಿ-ಕಹಿಯೆಲ್ಲ ಹದವಾಗಿ ಮಿಳಿತಗೊಂಡಿರಲಿ ಬದುಕಿನಲ್ಲಿ ಎಂಬ ಸದಾಶಯ ಇದರ ಹಿಂದಿರುವುದು.
ಯುಗಾದಿ ಪುರುಷನ ಆಗಮನ
ಪಂಚಾಂಗ ಶ್ರವಣದ ಕ್ರಮ ಕರ್ನಾಟಕದ ಉದ್ದಗಲಕ್ಕೆ ಇದ್ದಂತೆ ಕಾಣುತ್ತದೆ. ಹಬ್ಬದೂಟ ಉಂಡು, ಕೊಂಚ ಅಡ್ಡಾಗಿ ಏಳುತ್ತಿದ್ದಂತೆ ಆಯಾ ಊರಿನ ದೇಗುಲಗಳಲ್ಲಿ ಅಥವಾ ಪ್ರಮುಖರ ಜಗುಲಿಯಲ್ಲಿ ಪುರೋಹಿತರಿಂದ ಪಂಚಾಂಗ ಶ್ರವಣ. ಆಧುನಿಕ ಕ್ಯಾಲೆಂಡರ್‌ಗಳು ಹೆಚ್ಚು ವ್ಯಾಪಿಸದ ಕಾಲದಲ್ಲಂತೂ, ಪಂಚಾಂಗವೇ ಅವರ ಯಾವತ್ತಿನ ಕ್ಯಾಲೆಂಡರ್ ಆಗಿತ್ತು. ಆಗಷ್ಟೇ ಬಂದಿದ್ದ ಹೊಸ ಪಂಚಾಂಗದ ಪ್ರಕಾರ ಆ ವರ್ಷದ ಮುನ್ನೋಟ ತಿಳಿಯಲಾಗುತ್ತಿತ್ತು. ಇಂದಿನ ದಿನಗಳಲ್ಲಿ ಇದಕ್ಕೆ ವಿಶೇಷ ಅರ್ಥ, ಪ್ರಸ್ತುತತೆ ಇಲ್ಲದಿರಬಹುದು. ಆದರೆ ಹಿಂದೆ, ಆ ವರ್ಷದ ಮಳೆ-ಬೆಳೆ ಎಲ್ಲ ಹೇಗೆ, ಯುಗಾದಿ ಪುರುಷ ಯಾವುದರ ಮೇಲೆ ಬರುತ್ತಾನೆ, ಯಾವ ದಿಕ್ಕಿಗೆ ಹೋಗುತ್ತಾನೆ, ಯಾವ ದಿಕ್ಕನ್ನು ನೋಡುತ್ತಾನೆ, ಯಾವುದನ್ನು ತಿನ್ನುತ್ತಾನೆ ಮುಂತಾಗಿ ಅವನನ್ನು ವರ್ಣಿಸಲಾಗುತ್ತಿತ್ತು. ಆತನ ವರ್ಣನೆಯ ಆಧಾರದ ಮೇಲೆ, ಆ ವರ್ಷ ಯಾವ ಬೆಳೆಗೆ ಬೆಲೆ, ಯಾವುದು ತುಟ್ಟಿ, ಯಾವುದು ಅಗ್ಗ, ಯಾವುದನ್ನು ಬೆಳೆಯುವುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು… ಹೌದಲ್ಲ, ಕೃಷಿ ಸಂಸ್ಕೃತಿ ಮತ್ತು ನಮ್ಮ ಧಾರ್ಮಿಕ ಸಂಸ್ಕೃತಿ ಎರಡೂ ಅಂಗೈ-ಮುಂಗೈ ಇದ್ದಂತೆ!
ಮೂರೆಲೆಯೂ ಮಾಫಿ!
ಇನ್ನು ಜುಗಾರಿ ಅಥವಾ ಜೂಜಾಡುವುದರ ಗಮ್ಮತ್ತನ್ನು ಹೇಳಲೇಬೇಕು. ಈ ಪದ್ಧತಿ ರಾಜ್ಯದ ಎಲ್ಲೆಡೆ ಪ್ರಚಲಿತ ಇದ್ದಂತಿಲ್ಲ. ಆದರೆ ಹಳೆಮೈಸೂರು ಪ್ರಾಂತ್ಯದಲ್ಲಿ ಜೂಜಿನ ಗೌಜು ಜೋರಿತ್ತು. ಉಳಿದ ದಿನಗಳಲ್ಲಿ ಹಿಡಿದು, ಬಡಿದು, ಲಾಕಪ್‌ಗೆ ಹಾಕಿಸಿಕೊಳ್ಳುತ್ತಿದ್ದ ಇಸ್ಪೀಟುಕೋರರನ್ನು ಅಂದು ಮುಟ್ಟುವಂತಿಲ್ಲ. ಯುಗಾದಿಯಂದು ಆಸಕ್ತರು ರಾಜಾರೋಷವಾಗಿ ಜೂಜಾಡುತ್ತಿದ್ದರು ಮತ್ತು ಪ್ರಶ್ನಿಸಿದವರೇ ಅಂದು ತಪ್ಪಿತಸ್ಥರು! ಹೊಸ ವರ್ಷಕ್ಕೆ ಇದೆಂಥ ಹುಚ್ಚು ಆಚರಣೆ ಎನಿಸಬಹುದು. ಆದರೆ ಸಮಾಜದ ಒಪ್ಪಿತ ಚೌಕಟ್ಟಲ್ಲೇ ತಪ್ಪು ಮಾಡುವುದಕ್ಕೂ ಅವಕಾಶವಿತ್ತು ಎಂದರೆ, ನಮ್ಮೊಳಗಿನ ರಾಗ-ದ್ವೇಷಗಳು ಹರಿದುಹೋಗಿ ಮನಸ್ಸು ಸ್ವಚ್ಛವಾಗುವುದಕ್ಕೆ ಸರಳವಾದ ಮತ್ತು ಸುರಕ್ಷಿತವಾದ ದಾರಿಯಿದಾಗಿತ್ತು ಎಂದು ಅರ್ಥ ಮಾಡಿಕೊಳ್ಳೋಣವೇ?
ಶುಭ ಹಾರೈಕೆ
ಕ್ರೋಧಿನಾಮ ಸಂವತ್ಸರ ಪ್ರಾರಂಭವಾಗಿದೆ. ಹೊಸ ಸಂವತ್ಸರದಲ್ಲಿ ನಮ್ಮೆಲ್ಲರ ಬದುಕಿನಲ್ಲಿ, ಬೇವಿರಲಿ, ಬೆಲ್ಲವೂ ಬರಲಿ; ಯಾವುದೂ ಹೆಚ್ಚಾಗದಂತೆ ಸಿಹಿ-ಕಹಿ ಹದವಾಗಿರಲಿ. ನವಚೈತ್ರ ಮೈ-ಮನ ತುಂಬಲಿ. ಬರುವ ದಿನಗಳಲ್ಲಿ ಎಲ್ಲರ ಕಂಗಳಲ್ಲಿ ಪಲ್ಲವಿಸಿರುವ ಚಿಗುರು ಬೆಳೆಯಲಿ, ಹೂವಾಗಿ, ಕಾಯಾಗಿ, ಹಣ್ಣಾಗಲಿ. ತನ್ನ ನಿರಂತರತೆಯನ್ನು ಕಾಯ್ದುಕೊಳ್ಳಲಿ ಬದುಕು. ʻನಗುತ ಬಾಳು ಜೀವವೆ ಮಾವು ಬೇವು ದಾಳಿಗೆ, ನಗುತ ಬಾಳು ಜೀವವೆ ಹುಳಿ ಬೆರೆಸದೆ ಹಾಲಿಗೆʼ ಎಂಬ ಕವಿವಾಣಿಯಂತೆ ನಮ್ಮ ಜಾಣ್ಮೆಯೇ ನಮ್ಮನ್ನು ಕಾಯಲಿ. ಹೊಸ ಸಂವತ್ಸದ ಶುಭ ಹಾರೈಕೆಗಳು.