ವಸಂತ ಋತುವಿನ (spring season) ಆಗಮನ ಪ್ರಾಣಿ, ಪಕ್ಷಿಗಳಿಗೆ ಹೊಸ ಉತ್ಸಾಹವನ್ನು ತುಂಬುತ್ತದೆ. ಇದನ್ನು ಸೂಚಿಸುವ ಯುಗಾದಿ (Ugadi 2024) ಹಿಂದೂಗಳಿಗೆ ಹೊಸ ವರ್ಷದ ಆರಂಭವೂ ಹೌದು. ಹಬ್ಬಗಳಲ್ಲಿ ಶ್ರೇಷ್ಠವಾದ ಯುಗಾದಿ ಹಬ್ಬವನ್ನು (Ugadi festival) ಚ್ಯೆತ್ರ ಮಾಸದ (chaitra month) ಶುಕ್ಲ ಪಕ್ಷದ ಪಾಡ್ಯದಂದು ಭಾರತದಾದ್ಯಂತ ಆಚರಿಸಲಾಗುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿ ಹಬ್ಬವು ಹೊಸ ಯುಗ, ವರ್ಷ ಮತ್ತು ಭವಿಷ್ಯದ ಆರಂಭವಾಗಿದೆ. ಯುಗದ ಆದಿ ಯುಗಾದಿ ಎಂದರೆ ಹೊಸ ವರ್ಷದ ಆರಂಭ ಎಂದರ್ಥ. ಚೈತ್ರಶುದ್ಧ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದ್ದು, ಬಳಿಕ ಅದಕ್ಕೆ ಅನುಗುಣವಾಗಿ ಗ್ರಹ- ನಕ್ಷತ್ರ- ಮಾಸ- ಋತು- ವರ್ಷ ಗಳನ್ನು ರಚಿಸದನೆಂಬ ಉಲ್ಲೇಖ ಪುರಾಣಗಳಲ್ಲಿದೆ.
ಎರಡು ಯುಗಾದಿ!
ಚಂದ್ರಮಾನ ಮತ್ತು ಸೌರಮಾನ ಎಂದು ಎರಡು ಬಾರಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಪದ್ಧತಿಗೆ ಚಂದ್ರಮಾನ ಯುಗಾದಿ ಹಾಗೂ ಸೂರ್ಯ ಮೇಷರಾಶಿಗೆ ಬಂದಾಗ ಸೌರಮಾನ ಯುಗಾದಿಯನ್ನು ಆಚರಿಸಲಾಗುವುದು. ವೈಜ್ಞಾನಿಕ ನಂಬಿಕೆಗಳ ಪ್ರಕಾರ, ಈ ದಿನದಿಂದ ವ್ಯಕ್ತಿಯ ಭವಿಷ್ಯವೂ ಬದಲಾಗುತ್ತದೆ.
ಇದನ್ನೂ ಓದಿ: Vitamin B12: ನಮ್ಮ ಹಲವು ಸಮಸ್ಯೆಗಳಿಗೆ ವಿಟಮಿನ್ ಬಿ12 ಕೊರತೆಯೇ ಕಾರಣ!
ಕರ್ನಾಟಕದಲ್ಲಿ ಮಂಗಳವಾರ ಆಚರಣೆ
ಕರ್ನಾಟಕದಲ್ಲಿ ಏಪ್ರಿಲ್ 9ರಂದು ಮಂಗಳವಾರ ಚಂದ್ರ ಮಾನ ಯುಗಾದಿಯನ್ನು ಆಚರಿಸಲಾಗುತ್ತದೆ. ಯುಗಾದಿ ಹಬ್ಬದಂದು ಸಂಜೆ ಹೊಸ ಪಂಚಾಂಗವನ್ನು ನೋಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.
ಬೇರೆಬೇರೆ ಹೆಸರಿನಿಂದ ಆಚರಣೆ
ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಗುಜರಾತ್‌ಗಳಲ್ಲಿ ಚಂದ್ರಮಾನ ಯುಗಾದಿ ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ.
ಕರ್ನಾಟಕದಲ್ಲಿ ಯುಗಾದಿ, ಮಹಾರಾಷ್ಟ್ರದಲ್ಲಿ ಗುಢಿಪಾಡವಾ, ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಲ್ಲಿ ಹೊಸ ವರ್ಷದ ಹಬ್ಬವೆಂದು, ಉತ್ತರ ಭಾರತದಲ್ಲಿ ಬೈಸಾಖಿ’ ಎಂದು ಕರೆಯಲಾಗುತ್ತದೆ.
ಬೇವು ಬೆಲ್ಲ ಸಂಪ್ರದಾಯ
ಯುಗಾದಿ ಹಬ್ಬದಲ್ಲಿ ಬೇವು ಬೆಲ್ಲ ತಿನ್ನುವುದು ಸಂಪ್ರದಾಯ. ಬೇವು ಜೀವನದ ಹಾದಿಯಲ್ಲಿ ಎದುರಾಗುವ ತೊಡಕು ಮತ್ತು ದುಃಖಗಳನ್ನು ಸಾಂಕೇತಿಸಿದರೆ, ಬೆಲ್ಲವು ಸಂತೋಷವನ್ನು ಪ್ರತಿನಿಧಿಸುತ್ತದೆ. ಇದರ ಅರ್ಥ ಸುಖ-ದುಃಖಗಳನ್ನು ಜೀವನದ ಅವಿಭಾಜ್ಯ ಅಂಗಗಳಾಗಿರುತ್ತದೆ. ಅದನ್ನು ನಾವು ಸಮಾನವಾಗಿ ಸ್ವೀಕರಿಸಬೇಕು ಎನ್ನುವುದು ಇದರ ಅರ್ಥ. ಬೇವು ಮತ್ತು ಬೆಲ್ಲವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಆರೋಗ್ಯ ಪ್ರಯೋಜನಗಳೂ ಇವೆ.
ಔಷಧೀಯ ಗುಣಗಳ ಬೇವು
ಔಷಧೀಯ ಗುಣಗಳ ಆಗರವಾಗಿರುವ ಬೇವು ವಸಂತ ಋತುವಿನ ಆರಂಭದೊಂದಿಗೆ ಸಮೃದ್ಧವಾಗಿ ಬೆಳೆಯುತ್ತದೆ. ವಾತಾವರಣವನ್ನು ಶುದ್ಧಗೊಳಿಸುವ ಬೇವಿನಲ್ಲಿ ಕಹಿಯಾಗಿದ್ದು, ರಸದಲ್ಲಿ ಸಮೃದ್ಧವಾಗಿದೆ. ಬೆಲ್ಲದೊಂದಿಗೆ ಇದನ್ನು ಸೇವಿಸಿದರೆ ದೇಹದಲ್ಲಿ ಪಿತ್ತದ ಅಂಶ ಕಡಿಮೆಯಾಗಿ ದೇಹ ತಂಪಾಗುತ್ತದೆ.
ಚೈತನ್ಯ ತುಂಬುವ ಬೆಲ್ಲ
ತೂಕ ನಷ್ಟ ಮಾಡಲು ಬೆಲ್ಲ ದೇಹಕ್ಕೆ ಒಳ್ಳೆಯದು. ಊಟದ ಬಳಿಕ ಒಂದು ತುಂಡು ಬೆಲ್ಲವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಪೊಟ್ಯಾಸಿಯಮ್ ಬೆಲ್ಲದಲ್ಲಿ ಸಾಕಷ್ಟು ಸಮೃದ್ಧವಾಗಿದೆ. ಇದು ದೇಹದಲ್ಲಿ ನೀರಿನ ಕೊರತೆಯಾಗದಂತೆ ತಡೆಯುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.
ಕಾರ್ಬೋಹೈಡ್ರೇಟ್ ಸಮೃದ್ಧವಾಗಿರುವ ಬೆಲ್ಲವು ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಆಯಾಸವಾದಾಗಲೆಲ್ಲ ಒಂದು ತುಂಡು ಬೆಲ್ಲವನ್ನು ಸೇವಿಸಿದರೆ ಕೂಡಲೇ ಚೈತನ್ಯವನ್ನು ಪಡೆಯಬಹುದು.