Site icon Vistara News

Vaikunta Ekadashi 2023: ಇಂದು ವೈಕುಂಠ ಏಕಾದಶಿ: ದೇವಾಲಯಗಳಲ್ಲಿ ಭಕ್ತರ ಸಂದಣಿ, ಸುಗಮ ದರ್ಶನ ವ್ಯವಸ್ಥೆ

chikka tirupathi

ಬೆಂಗಳೂರು/ಕೋಲಾರ: ಇಂದು ಪವಿತ್ರ ದಿನವಾದ ವೈಕುಂಠ ಏಕಾದಶಿ (Vaikunta Ekadashi 2023) ಹಿನ್ನೆಲೆಯಲ್ಲಿ ಎಲ್ಲಾ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ದೇವರ ದರ್ಶನಕ್ಕಾಗಿ ಭಕ್ತಾದಿಗಳ ಸರತಿ ಸಾಲು ಕಂಡುಬಂತು.

ರಾಜಧಾನಿ‌, ಗ್ರಾಮಾಂತರ ಜಿಲ್ಲೆ ಹಾಗೂ ಕೋಲಾರ ಜಿಲ್ಲೆಯ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ ಅಲಂಕಾರ ಮಾಡಲಾಗಿದೆ. ಪುರಾಣ ಪ್ರಸಿದ್ಧ, ʼಚಿಕ್ಕ ತಿರುಪತಿʼ ಎಂದು ಹೆಸರಾಗಿರುವ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕ ತಿರುಪತಿ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಭಕ್ತರಿಗೆ ವೈಕುಂಠ ದ್ವಾರ ದರ್ಶನ ಹಮ್ಮಿಕೊಳ್ಳಲಾಗಿದೆ.

ಭಕ್ತರು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಶ್ರೀ ವೆಂಕಟರಮಣ ಸ್ವಾಮಿ ದೇವರಿಗೆ ತಿರುಮಂಜನ ಆಭರಣಗಳಿಂದ ಅಲಂಕರಿಸಿ ವಿಶೇಷ ಪೂಜೆ ಮಾಡಲಾಗಿದೆ. ವೈಕುಂಠ ದ್ವಾರದಲ್ಲಿ ಉಯ್ಯಾಲೆ ಮಣೆಯ ಮೇಲೆ ಸ್ವಾಮಿಯನ್ನು ಕೂರಿಸಿ ವಿಶೇಷ ಆಸ್ಥಾನ ಸೇವೆ ನಡೆಯಲಿದೆ.

ಬೆಂಗಳೂರು ನಗರದಲ್ಲಿಯೂ ಇಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ನಾನಾ ದೇಗುಲಗಳಲ್ಲಿ ಪೂಜೆ ಹಾಗೂ ದರ್ಶನಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ಕೋಟೆ ವೆಂಕಟೇಶ್ವರ ದೇವಾಲಯ, ಇಸ್ಕಾನ್‌, ವೈಯಾಲಿಕಾವಲ್‌ನ ತಿರುಪತಿ ತಿರುಮಲ ದೇವಸ್ಥಾನ ಸೇರಿದಂತೆ ನಗರದ ಹಲವು ದೇವಾಲಯಗಳಲ್ಲಿ ವೈಕುಂಠ ದ್ವಾರದ ಮೂಲಕ ಸಾಗಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಬ್ಯಾರಿಕೇಡ್‌ ಅಳವಡಿಸಿ, ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.

ಹೆಚ್ಚಿನ ದೇಗುಲಗಳಲ್ಲಿ ಮುಂಜಾನೆಯಿಂದ ರಾತ್ರಿಯವರೆಗೂ ವೈಕುಂಠದ್ವಾರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೆ.ಪಿ.ನಗರದ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ದೇಗುಲ, ಸಂಜಯನಗರದ ರಾಧಾಕೃಷ್ಣ ಮಂದಿರ, ಶ್ರೀನಗರ ವೆಂಕಟರಮಣ ದೇವಸ್ಥಾನ, ವಿವಿಪುರದ ಲಕ್ಷ್ಮೀ ವೆಂಕಟರಮಣ, ಶ್ರೀನಿವಾಸನಗರದ ಲಕ್ಷ್ಮೀ ವೆಂಕಟೇಶ್ವರ, ರಾಜಾಜಿನಗರದ ಗುರುವಾಯುಪುರ ಪತಿ ದೇವಾಲಯ, ಚಾಮರಾಜಪೇಟೆಯ ಸತ್ಯನಾರಾಯಣ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಪಾರಾಯಣ, ಪ್ರಸಾದ ವಿತರಣೆ, ಪಲ್ಲಕ್ಕಿ ಉತ್ಸವ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ವೈಯಾಲಿ ಕಾವಲ್‌ನ ತಿರುಪತಿ ತಿರುಮಲ ದೇವಸ್ಥಾನದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಶೇಷಚೇತನರಿಗೆ ಆಧಾರ್‌ ಕಾರ್ಡ್‌ ತೋರಿಸಿ ಒಳ ಹೋಗುವ ವ್ಯವಸ್ಥೆ ಮಾಡಲಾಗಿದೆ. ಮುಜರಾಯಿ ಮತ್ತು ಟ್ರಸ್ಟ್‌ ಆಧಾರಿತ ದೇವಾಲಯಗಳಲ್ಲಿ ಹಿರಿಯ ನಾಗರಿಕರಿಗೆ ನೇರ ದೇವರ ದರ್ಶನಕ್ಕೆ ಕ್ರಮ ವಹಿಸಲಾಗಿದೆ.

ಇಸ್ಕಾನ್‌ ಬೆಂಗಳೂರು ವತಿಯಿಂದ ಹರೇಕೃಷ್ಣ ಬೆಟ್ಟ ಮತ್ತು ವೈಕುಂಠ ಬೆಟ್ಟದ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂಜಾನೆ 3 ಗಂಟೆಗೆ ಹರೇ ಕೃಷ್ಣ ಬೆಟ್ಟದಲ್ಲಿರುವ ಶ್ರೀನಿವಾಸ ಗೋವಿಂದ ಹಾಗೂ ವೈಕುಂಠ ಬೆಟ್ಟದಲ್ಲಿರುವ ರಾಜಾಧಿರಾಜ ಗೋವಿಂದರಿಗೆ ಸುಪ್ರಭಾತ ಸೇವೆಯೊಂದಿಗೆ ಉತ್ಸವಗಳು ಆರಂಭವಾಗಲಿವೆ. ಶ್ರೀಕೃಷ್ಣ, ರುಕ್ಮಿಣಿ ಮತ್ತು ಸತ್ಯಭಾಮಾ ಕಲ್ಯಾಣೋತ್ಸವವನ್ನು ನಡೆಸಲಾಗುವುದು.

ಶ್ರೀ ಕೃಷ್ಣನ 1 ಲಕ್ಷ ನಾಮಸ್ಮರಣೆ ಮಾಡುವ ಮೂಲಕ ಲಕ್ಷಾರ್ಚನೆ ಸೇವೆ ನಡೆಯಲಿದೆ. ವೈಕುಂಠ ಬೆಟ್ಟದ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನದಲ್ಲಿ ರಾಜಲಕ್ಷ್ಮೀ ಪದ್ಮಾವತಿ ದೇವಿಗೆ ಕುಂಕುಮಾರ್ಚನೆ ಸೇವೆ ಸಲ್ಲಿಸಲಾಗುವುದು. ಬೆಳಗ್ಗೆ 8 ಗಂಟೆಯಿಂದಲೇ ದೇವಾಲಯಗಳು ಭಕ್ತರಿಗೆ ದರ್ಶನಕ್ಕಾಗಿ ತೆರೆದಿರುತ್ತವೆ. ಸಂದರ್ಶಕರು ಮತ್ತು ಯಾತ್ರಾರ್ಥಿಗಳಿಗೆ 80 ಸಾವಿರಕ್ಕೂ ಹೆಚ್ಚು ಲಡ್ಡು ಮತ್ತು ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಸಾದ ವಿತರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Vaikunta ekadasi : ಶರವಣ ಚಾರಿಟೇಬಲ್ ಟ್ರಸ್ಟ್​​ನಿಂದ 1 ಲಕ್ಷ ಲಡ್ಡು ವಿತರಣೆ

Exit mobile version