Site icon Vistara News

Varamahalakshmi Festival | ಸಕಲ ವರವ ಕೊಡುವ ಮಹಾಲಕ್ಷ್ಮೀಯನ್ನು ಪೂಜಿಸುವ ಹಬ್ಬ

Varamahalakshmi Festival

ರಮ್ಯಾ ಗುಹಾ ದ್ವಾರಕನಾಥ್‌/ ಡಾ. ಮೇಖಲ ದ್ವಾರಕನಾಥ್‌
ಶ್ರಾವಣ ಶುಕ್ಲ ಪೂರ್ಣಿಮೆ ದಿವಸ ಶುಕ್ರ ಗ್ರಹವು ಪೂರ್ವದಲ್ಲಿ ಬೆಳಗುತ್ತಿರುವ ಸಮಯದಲ್ಲಿ, ಅರ್ಥಾತ್ ಶುಕ್ರವಾರ ಅಥವಾ ಶುಕ್ಲಪೂರ್ಣಿಮೆಯ ಅತಿ ಹತ್ತಿರದ ಶುಕ್ರವಾರದಂದು ವರಮಹಾಲಕ್ಷ್ಮೀ (Varamahalakshmi Festival) ಆರಾಧನೆ ಮಾಡಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ರಮ್ಯಾ ಗುಹಾ ದ್ವಾರಕನಾಥ್‌

ಸಾಮಾನ್ಯವಾಗಿ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಗೋಧೂಳಿ ಸಮಯದಲ್ಲಿ ಈ ವ್ರತಾಚರಣೆ ನಡೆಯುತ್ತದೆ. ಈ ಬಾರಿ ಎರಡನೇ ಶುಕ್ರವಾರವಾದ ಆಗಸ್ಟ್‌ 5 ರಂದೇ ವ್ರತಾಚರಣೆ ಕೈಗೊಳ್ಳಬೇಕೆಂದು ಜ್ಯೋತಿಷಿಗಳು, ಪಂಚಾಂಗ ಕರ್ತರು ದಿನ ನಿಗದಿ ಪಡಿಸಿದ್ದಾರೆ. ಆಗಸ್ಟ್‌ 12ರ ಶುಕ್ರವಾರದಂದು ಪೂರ್ಣಿಮೆಯ ದಿನವಾದರೂ ಬೆಳಗ್ಗೆಯ ಸಮಯ ಮಾತ್ರ ಈ ತಿಥಿ ಇರುತ್ತದೆ. ನಂತರ ಪಕ್ಷವೇ ಬದಲಾಗುವುದರಿಂದ ಇಂದೇ (ಆಗಸ್ಟ್‌ 5) ಈ ವ್ರತಾಚರಣೆ ನಡೆಯುತ್ತಿದೆ.

ಕೆಲವರು ವರಮಹಾಲಕ್ಷ್ಮೀ ಹಬ್ಬದ ಈ ದಿನ ವ್ರತಕೈಗೊಳ್ಳುತ್ತಾರೆ. ಇನ್ನು ಕೆಲವರು ಲಕ್ಷ್ಮೀಯ ವಿಗ್ರಹವಿಟ್ಟು ಕೇವಲ ಪೂಜೆ ಮಾಡುತ್ತಾರೆ. ಗೋಧೂಳಿ ಸಮಯದವರೆಗೂ ಉಪವಾಸವಿದ್ದು ಪೂಜೆ ಮಾಡುವುದು ಕಷ್ಟ ಎಂಬ ಕಾರಣಕ್ಕೆ, ಈಗಿನ ಕಾಲಕ್ಕೆ ತಕ್ಕಂತೆ ಬೆಳಗ್ಗೆಯೇ ವ್ರತಾಚರಣೆ ಅಥವಾ ಪೂಜೆ ನಡೆಯುತ್ತದೆ.

ಡಾ. ಮೇಖಲ ದ್ವಾರಕನಾಥ್‌

ಆದಿಲಕ್ಷ್ಮೀ, ಧ್ಯಾನಲಕ್ಷ್ಮೀ, ಧೈರ್ಯ ಲಕ್ಷ್ಮೀ, ಗಜಲಕ್ಷ್ಮೀ, ಸಂತಾನಲಕ್ಷ್ಮೀ, ವಿಜಯ ಲಕ್ಷ್ಮೀ, ಐಶ್ವರ್ಯಲಕ್ಷ್ಮೀ, ಧನಲಕ್ಷ್ಮೀ ಎಂಬ ಅಷ್ಟರೂಪನಾಮಗಳಿಂದ ರರಾಜಿಸುವವಳು ಶ್ರೀ ವರಮಹಾಲಕ್ಷ್ಮೀ. ಲಕ್ಷ್ಮೀಯ ಸೌಂದರ್ಯ ವರ್ಣಾತೀತ. ಲಕ್ಷ್ಮೀ ಎಂದರೆ ಚೆಲುವು, ಶೋಭೆ ಹಾಗೂ ಸಂಪತ್ತು. ಲಕ್ಷ್ಮೀ ಎಂದರೆ ಶುಭ-ಲಾಭ. ಲಕ್ಷ್ಮೀ ಎಂದರೆ ಶುಭ ಶಕುನ-ಶುಭ ಲಕ್ಷಣ. ಆಕೆಯನ್ನು ಪೂಜಿಸುವುದೇ ಪುಣ್ಯ ಕಾಲ. ವರಮಹಾಲಕ್ಷ್ಮೀಯನ್ನು ಮನೆತನದ ದಾರಿದ್ರ್ಯ ನಾಶ ಮಾಡುವುದಕ್ಕಾಗಿ, ಆಯುರಾರೋಗ್ಯ ಲಾಭಕ್ಕಾಗಿ ಪೂಜೆ ಮಾಡಲಾಗುತ್ತದೆ.

ಲಕ್ಷ್ಮೀ ಅವತಾರ ಹೇಗೆ?
ಎಲ್ಲರಿಗೂ ಸಮುದ್ರ ಮಥನ ಕಥೆ ಗೊತ್ತಿದೆ. ದೇವಾಸುರರು ಸಮುದ್ರ ಮಥನ ನೆಸುತ್ತಿದ್ದಾಗ ಕ್ಷೀರ ಸಮುದ್ರದಿಂದ 12 ವಸ್ತುಗಳು ಹುಟ್ಟಿ ಬಂದವು. ಮೊದಲಿಗೆ ಹಾಲಾಹಲ ನಂತರ ಉಚ್ಚೈಶ್ರವಸ್ಸೆಂಬ ಕುದುರೆ, ನೆನಸಿದ್ದನ್ನು ಕೊಡುವ ಕಲ್ಪವೃಕ್ಷ, ಕಾಮಧೇನು ಮೊದಲಾದ ದಿದ್ಯವಸ್ತುಗಳು ಹುಟ್ಟಿದವು. ಹಾಗೆಯೇ ಸಮುದ್ರವನ್ನು ಕಡೆಯುತ್ತಿರುವಾಗ ಅಪ್ಸರೆಯರು ಹುಟ್ಟಿದರು.

ಆನಂತರ ಒಂದು ಆಶ್ಚರ್ಯಕರವಾದ ದೃಶ್ಯವು ಕಾಣಿಸಿತು. ಕ್ಷೀರಸಾಗರದ ತೆರೆಗಳ ನಡುವೆ ದಿವ್ಯರೂಪವನ್ನು ಧರಿಸಿದ ಒಬ್ಬ ದೇವತೆ ಕಂಗೊಳಿಸಿದಳು. ಅವಳು ಅರಳಿದ ಕಮಲದ ಮೇಲೆ ನಿಂತಿದ್ದಳು. ಕೊರಳಲ್ಲಿ ಕಲಮಲದ ಮಾಲೆಯನ್ನು ಧರಿಸಿ, ಕೈಯಲ್ಲಿ ಕಮಲವನ್ನು ಹಿಡಿದಿದ್ದಳು. ಅವಳ ದಿವ್ಯ ಸ್ವರೂಪವನ್ನು ನೋಡಿ ದೇವತೆಗಳೇ ಬೆಚ್ಚಿ ಬಿದ್ದರು. ಮುಗಳ್ನಗೆ ಬೀರುತ್ತ ನಿಂತಿದ್ದ ಆಕೆ ಸಾಕ್ಷಾತ್‌ ಲಕ್ಷ್ಮೀ ದೇವಿಯಾಗಿದ್ದಳು. ಋಷಿಗಳು ಶ್ರೀ ಸೂಕ್ತವನ್ನು ಪಠಿಸತೊಡಗಿದರು. ಗಂಧರ್ವರು ಹಾಡಿದರು, ಅಪ್ಸರೆಯರು ನೃತ್ಯ ಮಾಡಿದರು. ಎಲ್ಲೆಡೆ ವಿಚಿತ್ರವಾದ ಬೆಳಕು ಹರಡಿತ್ತು. ಸಮುದ್ರ ರಾಜನು ತನ್ನ ನಿಜರೂಪವನ್ನು ಧರಿಸಿ ಬಂದು, ಲಕ್ಷ್ಮೀಯು ತನ್ನ ಮಗಳೆಂದು ಆದರಿಸಿದನು. ಅವಳಿಗೆ ಉತ್ತಮವಾದ ವಸ್ತ್ರಗಳನ್ನು, ಆಭರಣಗಳನ್ನು ನೀಡಿದನು. ಅವಳ ಕೈಗೆ ಒಂದು ಪದ್ಮಮಾಲೆಯನ್ನಿತ್ತನು. ಆಗ ಬ್ರಹ್ಮನ ಸೂಚನೆಯಂತೆ ವಿಷ್ಣುವು ಲಕ್ಷ್ಮೀಯನ್ನು ವರಿಸುತ್ತಾನೆ. ಲಕ್ಷ್ಮೀಯು ವಿಷ್ಣುವಿನ ವಕ್ಷಸ್ಥಳದಲ್ಲಿ ನೆಲೆಸುತ್ತಾಳೆ.

ವಿಷ್ಣು ಪುರಾಣ ಮೊದಲಾದ ಗ್ರಂಥಗಳಲ್ಲಿ ಲಕ್ಷ್ಮೀಯ ಮಹಿಮೆಯನ್ನು ಬಹಳ ಚೆನ್ನಾಗಿ ವರ್ಣಿಸಲಾಗಿದೆ. ವಿಷ್ಣುವಿನ ಪತ್ನಿಯಾದ ಅವಳು ವೈಷ್ಣವೀ ಶಕ್ತಿಯೆನಿಸಿದ್ದಾಳೆ. ಜಗತ್ತಿನಲ್ಲಿರುವ ಶ್ರೇಷ್ಠವಾದ ವಸ್ತುಗಳೂ, ಗುಣಗಳೂ ಲಕ್ಷ್ಮೀನಾರಾಯಣರ ನಿವಾಸಸ್ಥಾನಗಳೆಂದು ಹೇಳಿದ್ದಾರೆ.

ದೇವೇಂದ್ರನು ಅವತಾರವೆತ್ತಿದ ಲಕ್ಷ್ಮೀಯನ್ನು ಹೀಗೆ ಸ್ತುತಿಸಿದ್ದಾನೆ;
ಯಾ ದೇವೀ ಸರ್ವಭೂತೇಶು ಮಾತೃರೂಪೇಣ ಸಂಸ್ಥಿತಃ
ಯಾ ದೇವೀ ಸರ್ವಭೂತೇಶು ಶಕ್ತಿರೂಪೇನ ಸಂಸ್ಥಿತಃ
ಯಾ ದೇವೀ ಸರ್ವಭೂತೇಶು ಶಾಂತಿರೂಪೇನ ಸಂಸ್ಥಿತಃ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ

ಇದರ ಅರ್ಥ “ಓ ದೇವಿ, ಸರ್ವಲೋಕಗಳಿಗೂ ಜನನಿಯಾದ ನಿನಗೆ ನಮಸ್ಕಾರ. ಸಕಲ ಕಾರ್ಯಗಳೂ ಸಿದ್ಧಿಸುವುದಕ್ಕೆ ನೀನು ಕಾರಣಳಾಗಿದ್ದೀಯೇ. ನೀನು ಲೋಕಪಾವನಿ. ಐಶ್ವರ್ಯ ಮತ್ತು ಬುದ್ಧಿಶಕ್ತಿ ನಿನ್ನಿಂದ ದೊರೆಯುತ್ತವೆ. ಸಕಲ ವಿದ್ಯಾಸ್ವರೂಪಿಣಿಯಾದ ಸರಸ್ವತಿಯೂ ನೀನೇ, ಮುಕ್ತಿದಾಯಿನಿಯಾದ ಆತ್ಮವಿದ್ಯೆ ನೀನು, ಹೇ ಮಹಾದೇವಿ, ಮಡದಿ, ಮಕ್ಕಳು, ಮನೆ, ಮಿತ್ರ, ಧನ, ಧಾನ್ಯಗಳೆಲ್ಲವೂ ನಿನ್ನ ನೋಟದಿಂದಲೇ ಭಕ್ತರಿಗೆ ಲಭಿಸುತ್ತವೆ ಎಂದು ಪ್ರಾರ್ಥಿಸುತ್ತಾನೆ. ಅಂತೆಯೇ ನಾವೆಲ್ಲರೂ ದೇವಿಯನ್ನು ಪ್ರಾರ್ಥಿಸಿದರೆ, ಆಕೆ ಎಲ್ಲರಿಗೂ ಎಲ್ಲವನ್ನೂ ಕರುಣಿಸುತ್ತಾಳೆ. ವರಗಳನ್ನು ದಯಪಾಲಿಸುವುದರಿಂದ ಮತ್ತು ಶ್ರೇಷ್ಠಳಾಗಿರುವುದರಿಂದ ಲಕ್ಷ್ಮೀಯನ್ನು ವರಮಹಾಲಕ್ಷ್ಮೀ ಎಂದೇ ಕರೆಯಲಾಗುತ್ತದೆ.

ಲಕ್ಷ್ಮೀಯ ಮಹಿಮೆ ವಿಸ್ತಾರವಾದುದು. ವಾಣಿ ಅಂದರೆ ಮಾತು, ನೀತಿ, ಬುದ್ಧಿ, ಸಂತುಷ್ಟಿ, ಸಾಮಗಾನ, ಸ್ವಾಹಾ, ಕಾಂತಿ, ಐಶ್ವರ್ಯ, ಶಕ್ತಿ, ಬಳ್ಳಿ, ನದಿ, ಗೋವು- ಇವೆಲ್ಲವೂ ಲಕ್ಷ್ಮೀಯ ಅಂಶಗಳೆಂದು ಪರಿಗಣಿಸಲಾಗಿದೆ. ಜಗತ್ತಿನಲ್ಲಿ ಇರುವ ಎಲ್ಲ ಸ್ತ್ರೀಯರೂ ಲಕ್ಷ್ಮೀ ಸ್ವರೂಪರೆಂದು ಪುರಾಣಗಳು ಹೇಳಿವೆ. ಇಂತಹ ಲಕ್ಷ್ಮೀಯನ್ನು ಹೆಂಗಳೆಯರು ಭಕ್ತಿ, ಶ್ರದ್ಧೆ ಮತ್ತು ಸಂಭ್ರಮ-ಸಡಗರದಿಂದ ಪೂಜೆಸುವ ಹಬ್ಬವೇ ಈ ವರಮಹಾಲಕ್ಷ್ಮೀ ಹಬ್ಬ.

ವ್ರತಾಚರಣೆ ಏಕೆ?
ನಾವು ಯಾವುದೇ ವ್ರತವನ್ನು ಮಾಡುವುದಾದರೂ ಏಕೆ ಈ ವ್ರತ ಮಾಡಬೇಕು, ಇದರ ಹಿಂದಿರುವ ಉದ್ದೇಶಗಳೇನು, ಆಚರಣೆಯ ಮಹತ್ವವೇನು ಎಂಬುದನ್ನು ತಿಳಿದುಕೊಳ್ಳಬೇಕು. ಇದಕ್ಕಾಗಿ ವ್ರತ ಕಥೆ ಬಹಳ ಮುಖ್ಯ. ಈ ರೀತಿ ಸರಿಯಾಗಿ ತಿಳಿದುಕೊಂಡು ವ್ರತ ಮಾಡುವುದರಿಂದ ಭಕ್ತಿ-ಭಾವನೆಗಳು ಹೆಚ್ಚಾಗುತ್ತವೆ. ಇಲ್ಲದಿದ್ದರೆ ಯಾಂತ್ರಿಕವಾಗಿ ನಡೆಸಿದಂತಾಗುತ್ತದೆ.

ವರಮಹಾಲಕ್ಷ್ಮೀ ವ್ರತ ಕಥೆಯ ಪ್ರಕಾರ ಕೈಲಾಸದಲ್ಲಿ ಶಿವ-ಪಾರ್ವತಿಯರು ಒಮ್ಮೆ ಹೀಗೆ ಕುಳಿತು ಮಾತನಾಡುತ್ತಿದ್ದಾಗ ಪಾರ್ವತಿ ಹೇಳುತ್ತಾಳೆ, ʼʼದಾನವರು ತಪಸ್ಸು ಮಾಡಿದರೂ ನೀನು ಅವರು ಕೇಳಿದ ವರವನ್ನು ಕೊಡುತ್ತೀಯ, ಪಾಪಾ ಜನಸಾಮಾನ್ಯರು ಸಮಯ ಸಿಕ್ಕಾಗಲೆಲ್ಲಾ ನಿನ್ನ ಸ್ಮರಣೆ ಮಾಡುತ್ತಾರೆ. ಆದರೆ ಅವರ ದಾರಿದ್ರ್ಯ ಹರಣ ಹೇಗೆ, ಅದಕ್ಕೆ ಅವರು ಯಾವ ವ್ರತ-ಪೂಜೆ ಮಾಡಬೇಕುʼʼ ಎಂದು ಕೇಳುತ್ತಾಳೆ.

ಅಲ್ಲದೆ, ಇದರ ತೀರ್ಮಾನಕ್ಕೆ ನಾನೇ ಕೈಲಾಸದಲ್ಲಿ ದೇವಾನು ದೇವತೆಗಳ ಹಾಗೂ ಋಷಿಮುನಿಗಳ ಸಭೆ ಕರೆಯುವುದಾಗಿ ಹೇಳುತ್ತಾಳೆ. ಇದಕ್ಕೆ ಶಿವನು ಒಪ್ಪಿಕೊಳ್ಳುತ್ತಾನೆ. ನಿಗದಿತ ದಿನದಂದು ಸಭೆಯು ನಡೆಯುತ್ತದೆ. ಆಗ  ಪಾರ್ವತಿ ಶಿವನ ಮುಂದೆ ತನ್ನ ಈ ಪ್ರಶ್ನೆಗೆ ಉತ್ತರ ನೀಡುವಂತೆ ಕೋರುತ್ತಾಳೆ. ಆಗ ಶಿವನು “ಶ್ರಾವಣ ಮಾಸದ ಶುಕ್ರವಾರದಂದು ವರಮಹಾಲಕ್ಷ್ಮೀಯ ವ್ರತ ಮಾಡಿದರೆ ಜನಸಾಮಾನ್ಯರ ದಾರಿದ್ರ್ಯಗಳೆಲ್ಲಾ ದೂರವಾಗುತ್ತವೆʼʼ ಎಂದು ಹೇಳುತ್ತಾನೆ.

ಆಗ ಸುಮ್ಮನಾಗದ ಪಾರ್ವತಿ ಯಾಕೆ ಈ ವ್ರತ ಮಾಡಬೇಕು, ಇದಕ್ಕಿರುವ ಮಹತ್ವವೇನು ಎಂದು ತಿಳಿಸುವಂತೆ ಶಿವನನ್ನು ಪಟ್ಟು ಹಿಡಿಯುತ್ತಾಳೆ. ಆಗ ಶಿವನು ವರಮಹಾಲಕ್ಷ್ಮೀಯ ವ್ರತ ಕಥೆಯನ್ನು ಹೇಳುತ್ತಾನೆ. ಇದರ ಸಂಕ್ಷಿಪ್ತ ರೂಪ ಹಿಂತಿದೆ;

ವಿಗರ್ಭ ದೇಶಕ್ಕೆ ರಾಜಧಾನಿಯಾದ ಕುಂಡಿನ ನಗರದಲ್ಲಿ ಚಾರುಮತಿ ಎಂಬ ವಿವಾಹಿತ ಮಹಿಳೆ ವಾಸವಾಗಿದ್ದಳು. ಈಕೆ ಬಹಳ ದಾರಿದ್ರ್ಯವನ್ನು ಅನುಭವಿಸುತ್ತಿದ್ದರೂ ಪತಿ ಸೇವೆ ಮುಖ್ಯವೆಂದು ಸದಾ ಸಂತೋಷ ಚಿತ್ತಾಳಾಗಿ ಪತಿಯ ಮನಸ್ಸನ್ನು ನೋಯಿಸದೆ ಇದ್ದಳು. ಇವಳನ್ನು ಮೆಚ್ಚಿದ ಮಹಾಲಕ್ಷ್ಮೀಯು ಒಂದು ದಿನ ಚಾರುಮತಿ ಮಲಗಿದ್ದಾಗ ಸ್ವಪ್ನದಲ್ಲಿ ಪ್ರತ್ಯಕ್ಷಳಾಗಿ ಹೀಗೆ ಹೇಳುತ್ತಾಳೆ; “ಪತಿ ವ್ರತೆಯಾದ ಚಾರುಮಾತಿಯೇ ನಿನ್ನ ಗುಣಶಿಲಾಗಳಿಗೆ ಮೆಚ್ಚಿ ನಿನ್ನ ಪೂರ್ಣ ಪುಣ್ಯ ಅನುಸರವಾಗಿ ನಿನ್ನಲ್ಲಿ ಅನುಗ್ರಹ ಮಾಡಲು ಬಂದಿರುವ ಮಹಾಲಕ್ಷ್ಮೀ ನಾನು. ಈಗ ನಾನು ಹೇಳುವ ವಿಷಯವನ್ನು ಗಮನವಿಟ್ಟು ಕೇಳಿ ಆಚರಿಸು. ಅದರಿಂದ ನಿನ್ನ ದಾರಿದ್ರ್ಯ ನಾಶವಾಗಿ ಅಷ್ಟ ಐಶ್ವರ್ಯವು ಪ್ರಾಪ್ತಿಯಾಗುತ್ತದೆ. ಯಾರು ನನ್ನನ್ನು ಶ್ರಾವಣ ಮಾಸದ ಎರಡೇ ಶುಕ್ರವಾರದ ದಿನ ಪ್ರದೋಷ ಸಮಯಕ್ಕೆ ಸರಿಯಾಗಿ ವಿಧಿವತ್ತಗಿ ನನ್ನನ್ನು ಪೂಜೆ ಮಾಡಿದರೆ ನಾನು ಅವರಿಗೆ ಸಕಲ ಭೊಗ ಭಾಗ್ಯಗಳನ್ನು ಕೊಡುತ್ತೇನೆ. ನೀನು ಕೂಡ ಈ ವ್ರತವನ್ನು ಮಾಡಿ ಧನ್ಯಳಾಗುʼʼ ಎಂದು ಹೇಳುತ್ತಾಳೆ.

ಆಗ ಚಾರುಮತಿ “ನಿನ್ನನ್ನು ಪೂಜಿಸುವುದು ಹೇಗೆ, ನನ್ನಲ್ಲಿ ನಿನ್ನ ಅಲಂಕಾರ ಮಾಡಲು ಆಭರಣಗಳಿಲ್ಲವಲ್ಲʼʼ ಎನ್ನುತ್ತಾಳೆ. ಆಕೆಯ ಕಷ್ಟ ಅರಿತಿದ್ದ ಲಕ್ಷ್ಮೀ “ಸಾಮಾನ್ಯ ಮಹಿಳೆಯರ ಆಭರಣವನ್ನೇ ಅಂದರೆ ಅರಿಶಿನ ಕುಂಕುಮ, ಕಣ, ಬಳೆ ಇತ್ಯಾದಿಗಳನ್ನೇ ನೀನು ಅರ್ಪಿಸಿ ಪೂಜೆ ಮಾಡಿದರೂ ಸಾಕುʼʼ ಎಂದು ಹೇಳಿ ಮಹಾಲಕ್ಷ್ಮೀಯು ಕಣ್ಮರೆಯಾಗುತ್ತಾಳೆ.

ಬೆಳಗಾದ ಮೇಲೆ ಚಾರುಮತಿಯು ಮನೆಯವರಿಗೆ ಸ್ವಪ್ನದಲ್ಲಿ ಲಕ್ಷ್ಮೀ ಬಂದಿದ್ದನ್ನು, ವ್ರತ ಮಾಡುವಂತೆ ತಿಳಿಸಿದ್ದನ್ನು ಹೇಳುತ್ತಾಳೆ. ಇದನ್ನು ತಿಳಿದ ಮನೆಯವರು ಸಹ ಆ ಮಹಾಲಕ್ಷ್ಮೀ ನಿನ್ನ ಕನಸಿನಲ್ಲಿ ಬಂದು ಈ ವಿಷಯವನ್ನು ತಿಳಿಸಿರುವಾಗ ನೀನು ಖಂಡಿತ ಈ ವ್ರತವನ್ನು ಮಾಡಲೇಬೇಕು ಎಂದು ಹೇಳಿ, ಆಕೆಯ ಕೈಯಿಂದ ಈ ವ್ರತವನ್ನು ಮಾಡಿಸುತ್ತಾರೆ.

ಚಾರುಮತಿಯು ಭಕ್ತಿಯಿಂದ ಶ್ರದ್ಧೆಯಿಂದ ನಿಯಮದಂತೆ ವ್ರತವನ್ನು ಆಚರಿಸಿದಳು. ಆಕೆಗೆ ವರಮಹಾಲಕ್ಷ್ಮೀ ಕೃಪಾ ಕಟಾಕ್ಷದಿಂದ ಅಷ್ಟ ಐಶ್ವರ್ಯ ಪ್ರಾಪ್ತಿಯಾದವು. ಈ ವ್ರತಾಚರಣೆ ಮಾಡಿದರೆ… ಚಾರುಮತಿಯ ಕಥೆ ಕೇಳಿದರೆ ಅಂತವರ ಕಷ್ಟ ಕಾರ್ಪಣ್ಯಗಳನ್ನು ಲಕ್ಷ್ಮೀಯೇ ಕಳೆಯುತ್ತಾಳೆ ಎಂದು ಈಶ್ವರ ಪಾರ್ವತಿಗೆ ಹೇಳುತ್ತಾನೆ. ಹೀಗೆ ನಾವು ಕೂಡ ಭಕ್ತಿ ಭಾವನೆಯಿಂದ ಇದ್ದಿದ್ದನ್ನೇ ದೇವರಿಗೆ ಅರ್ಪಿಸಿ, ಈ ವ್ರತ ಮಾಡಿದರೆ ನಮ್ಮ ಕಷ್ಟಕಾರ್ಪಣ್ಯಗಳು ಕೂಡ ದೂರವಾಗುತ್ತವೆ ಎಂದು ಈ ವ್ರತ ಕಥೆ ಹೇಳುತ್ತದೆ.

ವ್ರತಾಚರಣೆ ಹೇಗೆ?
ವ್ರತ ಮಾಡುವವರು ವ್ರತದ ದಿನದಂದು ಬೆಳಗ್ಗೆ ಎದ್ದು ಮಂಗಳಸ್ನಾನ (ಎಣ್ಣೆ ನೀರು) ಮಾಡಿ, ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಬಾಳೆಕಂದು, ಮಾವಿನ ಎಲೆಗಳಿಂದ ಸಿಂಗರಿಸಬೇಕು. ಅಷ್ಟದಳ ಪದ್ಮ ರಂಗೋಲಿ ಹಾಕಿ, ಅದರ ಮೇಲೆ ಅಕ್ಕಿ ತುಂಬಿದ ತಟ್ಟೆಯನ್ನು ಇಡಬೇಕು. ಅದರ ಮೇಲೆ ಒಂದು ಕಳಶವನ್ನಿಟ್ಟು, ಅದರಲ್ಲಿ ಸ್ವಲ್ಪ ನೀರು, ಆಲದ ಕಡ್ಡಿಯನ್ನಿಟ್ಟು, ಏಲಕ್ಕಿ, ಪಚ್ಚ ಕರ್ಪೂರ, ಅರಿಶಿನ ಕೊಂಬು, ನಾಣ್ಯವನ್ನು ಹಾಕಬೇಕು. ನಂತರ ಕಳಶದ ಮೇಲೆ ಅರಿಶಿನ ಹಚ್ಚಿದ ತೆಂಗಿನ ಕಾಯಿ ಇಟ್ಟು, ಕಳಶವನ್ನು ಮಾವಿನ ಎಲೆ, ಕಮಲದ ಹೂವುಗಳಿಂದ ಅಲಂಕರಿಸಿ, ಅರಿಶಿನ-ಕುಂಕುಮ ಅರ್ಪಿಸಿ, ವಿಧಿವತ್‌ ಶೋಡಶ (16) ಪೂಜಾದಿಗಳಿಂದ ಪೂಜಿಸಿ, ಗವ್ಯ ಉತ್ಪನ್ನಗಳಾದ ಹಾಲು, ಮೊಸರು, ತಪ್ಪುಗಳಿಂದ ಮತ್ತು ಬೆಲ್ಲದಿಂದ ತಯಾರಿಸಿದ ಪಂಚಭಕ್ಷ್ಯಗಳನ್ನು (ನೈವೇದ್ಯಕ್ಕೆ ಬೆಲ್ಲದಿಂದ 12 ವಿಧದ ಭಕ್ಷ್ಯ ಮಾಡಬೇಕೆಂದು ಪುರಾಣದಲ್ಲಿ ಹೇಳಲಾಗಿದೆ) ನೈವೇದ್ಯ ಮಾಡಬೇಕು.

ಲಕ್ಷ್ಮೀ ಪೂಜೆಗೆ ಅತ್ಯಂತ ಶ್ರೇಷ್ಠ ಎಂದರೆ ಕಮಲದ ಹೂವು. ಇದನ್ನು ಪೂಜೆ ಮಾಡುವಾಗ ಅರ್ಪಿಸುವುದು ಬಹಳ ಮುಖ್ಯ. ಅಲಂಕಾರದ ಸಂದರ್ಭದಲ್ಲಿ 12 ಗಂಟುಗಳುಳ್ಳ ದೋರ (ದಾರ) ಅರಿಶಿನ ದಾರವನ್ನು ಗೆಜ್ಜೆ ವಸ್ತ್ರದೊಂದಿಗೆ ದೇವಿಗೆ ಅಲಂಕರಿಸಿ, ಪೂಜೆಯ ನಂತರ ಆ ದಾರವನ್ನು ಪ್ರಸಾದದ ರೂಪದಲ್ಲಿ ಬಲಗೈಗೆ ಕಟ್ಟಿಕೊಳ್ಳಬೇಕು. ಈ ಸಂದರ್ಭದಲ್ಲಿ ವ್ರತಕಥೆಯನ್ನು ಓದಬೇಕು. ಪೂಜೆ ಮುಗಿದ ಮೇಲೆ ದೇವಿಯ ವಿಸರ್ಜನೆ ಕೂಡ ಬಹಳ ಮುಖ್ಯ. ವಿಸರ್ಜನೆಯಾದ ನಂತರ ಕಳಶದಲ್ಲಿರುವ ನೀರನ್ನು ಹೂವಿನ ಗಿಡಗಳಿಗೆ ಅಥವಾ ಮರಗಳ ಬುಡಕ್ಕೇ ಹಾಕಬೇಕು. ಕಳಶದಲ್ಲಿಟ್ಟ ತೆಂಗಿನ ಕಾಯಿಯಿಂದ ಸಿಹಿ ತಿನಿಸು ಸಿದ್ಧಪಡಿಸಿ, ಮನೆಯವರೆಲ್ಲರೂ ತಿನ್ನಬೇಕು.

ಯಾರು ಶ್ರದ್ಧಾ ಭಕ್ತಿಗಳಿಂದ ಲಕ್ಷ್ಮೀಯನ್ನು ಹೀಗೆ ಪೂಜಿಸುತ್ತಾರೋ, ಅವರಿಗೆ ಲಕ್ಷ್ಮೀ ದೇವಿಯು ಆಯುಷ್ಯ ಆರೋಗ್ಯ, ಐಶ್ವರ್ಯ ಭಾಗ್ಯ, ಸೌಭಾಗ್ಯಗಳನ್ನು ಅನುಗ್ರಹಿಸುತ್ತಾಳೆ. ಎಲ್ಲರಿಗೂ ವರಮಹಾಲಕ್ಷ್ಮೀಯ ಕೃಪ ಕಟಾಕ್ಷ ದೊರೆಯಲಿ. ಹಬ್ಬದ ಶುಭಾಶಯಗಳು.

ಇದನ್ನೂ ಓದಿ| Varamahalakshmi Festival | ಆಗಸ್ಟ್‌ 5ರ ಶುಕ್ರವಾರದಂದೇ ವ್ರತಾಚರಣೆ; ಗೊಂದಲ ಬೇಡ ಎಂದರು ರಾಜಗುರು

Exit mobile version