ಮನೆಯ ವಾಸ್ತು (Vastu Tips) ಸರಿಯಾಗಿ ಇದ್ದಾಗ ಮಾತ್ರ ಮನೆಯ ಸದಸ್ಯರು ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಹೊಸ ಮನೆಗೆ ಹೋಗುವಾಗ ವಾಸ್ತುವಿಗೆ ಸಂಬಂಧಿಸ ವಿಚಾರಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗುತ್ತದೆ.
ಸ್ವಂತ ಮನೆಯೇ ಆಗಲಿ ಅಥವಾ ಬಾಡಿಗೆ ಮನೆಯೇ ಆಗಲಿ ಹೋಗುವ ಮುನ್ನ ಹಲವು ವಿಚಾರಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಮನೆಯ ದಿಕ್ಕು, ಅಡುಗೆ ಕೋಣೆ, ನೀರು, ದೇವರ ಮನೆ ಹೀಗೆ ವಾಸ್ತು ಪ್ರಕಾರ ಎಲ್ಲವೂ ಸರಿಯಾಗಿದೆಯೇ ಅಥವಾ ಸರಿ ಇಲ್ಲದಿದ್ದರೆ ಅದಕ್ಕೆ ಪರಿಹಾರ ಇದೆಯೇ ಎಂಬ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ.
ಮನೆಯ ಯಜಮಾನರ ರಾಶಿ, ನಕ್ಷತ್ರದ ಮೇಲೂ ಮನೆ ಆಗಿ ಬರುತ್ತದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು. ಹಾಗಾಗಿ ಹೊಸ ಮನೆಯ ಗೃಹ ಪ್ರವೇಶಕ್ಕೂ ಮೊದಲು ಅಥವಾ ಬಾಡಿಗೆ ಮನೆಗೆ ಹೋಗುವ ಮೊದಲು ತಿಳಿದುಕೊಳ್ಳ ಬೇಕಾದ ಕೆಲವು ಅಂಶಗಳು ಹೀಗಿವೆ;
ಶುಭ ಮುಹೂರ್ತ ನೋಡಿ
ಮನೆಯಲ್ಲಿ ನೆಮ್ಮದಿ, ಸದಸ್ಯರಲ್ಲಿ ಸಾಮರಸ್ಯ, ಸುಖ ಶಾಂತಿ ನೆಲೆಸಿರಬೇಕೆಂದರೆ ಮನೆಯ ವಾಸ್ತು ಸರಿಯಾಗಿರಬೇಕು. ಹಾಗಾಗಿ ಹೊಸ ಮನೆಗೆ ಹೋಗುವ ಮೊದಲು ವಾರ, ತಿಥಿ, ನಕ್ಷತ್ರ ಮತ್ತು ದಿನ ಚೆನ್ನಾಗಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಒಳ್ಳೆ ಮುಹೂರ್ತವನ್ನು ನೋಡಿಯೇ ಮನೆಗೆ ಪ್ರವೇಶಿಸಬೇಕು. ಮನೆಗೆ ಮೊದಲು ಕಾಲಿಡುವ ಘಳಿಗೆ ಉತ್ತಮವಾಗಿರಬೇಕು.
ಈ ಮಾಸಗಳು ಗೃಹ ಪ್ರವೇಶಕ್ಕೆ ಶುಭ
ಶಾಸ್ತ್ರದ ಪ್ರಕಾರ ಹೊಸ ಮನೆಗೆ ಹೋಗಲು ಕೆಲವು ಮಾಸಗಳು ಶುಭ ಮತ್ತು ಕೆಲವು ಮಾಸಗಳು ಅಶುಭವೆಂದು ಪರಿಗಣಿಸಲಾಗಿದೆ. ಹಾಗಾಗಿ ಆದಷ್ಟು ಗೃಹ ಪ್ರವೇಶಕ್ಕೆ ಯಾವ ಮಾಸಗಳು ಶುಭವೋ ಆ ಮಾಸಗಳಲ್ಲಿಯೇ ಹೊಸ ಮನೆ ಪ್ರವೇಶಿಸುವುದು ಒಳಿತು.
ಮಾಘ, ಫಾಲ್ಗುಣ, ವೈಶಾಖ ಮತ್ತು ಜ್ಯೇಷ್ಠ ಮಾಸಗಳು ಹೊಸ ಮನೆಯನ್ನು ಪ್ರವೇಶಿಸಲು ಉತ್ತಮ ಮಾಸಗಳೆಂದು ಹೇಳಲಾಗುತ್ತದೆ. ಅದೇ ಆಷಾಢ, ಶ್ರಾವಣ, ಭಾದ್ರಪದ, ಅಶ್ವಿನಿ ಮತ್ತು ಪುಷ್ಯ ಮಾಸಗಳು ಗೃಹ ಪ್ರವೇಶಕ್ಕೆ ಶುಭವಾದ ಮಾಸಗಳಲ್ಲ ಎಂದು ಹೇಳಲಾಗುತ್ತದೆ.
ಶುಭ ದಿನವನ್ನೇ ಆಯ್ಕೆ ಮಾಡಿಕೊಳ್ಳಿ
ಗೃಹ ಪ್ರವೇಶಕ್ಕೆ ಶುಭ ಮುಹೂರ್ತಗಳನ್ನು ನೋಡುವುದು ವಾಡಿಕೆ. ಒಂದೊಮ್ಮೆ ಅನಿವಾರ್ಯ ಕಾರಣಗಳಿಂದ ಬೇಗ ಹೊಸ ಮನೆ ಪ್ರವೇಶ ಮಾಡಬೇಕೆಂದಿದ್ದಾಗ ಶುಭವಾದ ವಾರ ಯಾವುದೆಂದು ತಿಳಿದು ಆ ದಿನಗಳಂದು ಹೊಸ ಮನೆಗೆ ಪ್ರವೇಶಿಸಬಹುದು.
ವಾರದ ಏಳು ದಿನಗಳಲ್ಲಿ ಮಂಗಳವಾರ ಗೃಹ ಪ್ರವೇಶಕ್ಕೆ ಯೋಗ್ಯವಲ್ಲವೆಂದು ಹೇಳುತ್ತಾರೆ. ವಿಶೇಷ ಪರಿಸ್ಥಿತಿಗಳಲ್ಲಿ ಭಾನುವಾರ ಮತ್ತು ಶನಿವಾರವನ್ನು ಸಹ ಗೃಹ ಪ್ರವೇಶಕ್ಕೆ ಉತ್ತಮವೆಂದು ಪರಿಗಣಿಸುತ್ತಾರೆ. ಇದನ್ನು ಹೊರತು ಪಡಿಸಿದರೆ ವಾರದ ಉಳಿದ ಎಲ್ಲ ದಿನಗಳು ಹೊಸ ಮನೆಯನ್ನು ಪ್ರವೇಶಿಸಲು ಯೋಗ್ಯವಾದ ದಿನಗಳಾಗಿವೆ.
ಅಮಾವಾಸ್ಯೆ ಮತ್ತು ಹುಣ್ಣಿಮೆಯನ್ನು ಹೊರತು ಪಡಿಸಿ, ಉಳಿದ 2, 3, 5 7, 10, 11, 12 ಮತ್ತು 13 ಈ ತಿಥಿಗಳು ಪ್ರವೇಶಕ್ಕೆ ಉತ್ತಮವೆಂದು ಹೇಳಲಾಗುತ್ತದೆ.
ಹೊಸ ಮನೆಗೆ ಹೋಗುವಾಗ ಈ ಐದು ವಸ್ತುಗಳಿರಲಿ
ಹೊಸ ಮನೆಗೆ ಅದು ನೀವು ಕಟ್ಟಿಸಿದ ಹೊಸ ಮನೆಯಾಗಿರಲಿ ಅಥವಾ ಬಾಡಿಗೆ ಮನೆಯಾಗಿರಲಿ, ಮಂಗಳ ಕಲಶದ ಜೊತೆಗೇ ಹೊಸ ಮನೆಯನ್ನು ಪ್ರವೇಶಿಸಬೇಕು. ಜೊತೆಗೆ ಐದು ಬಗೆಯ ಮಂಗಳ ವಸ್ತುಗಳಾದ ತೆಂಗಿನಕಾಯಿ, ಅರಿಶಿಣ, ಬೆಲ್ಲ, ಅಕ್ಕಿ ಮತ್ತು ಹಾಲನ್ನು ತೆಗೆದುಕೊಳ್ಳಬೇಕು. ಮನೆಯನ್ನು ತೋರಣ ಮತ್ತು ರಂಗವಲ್ಲಿಯಿಂದ ಅಲಂಕರಿಸಬೇಕು.
ಜತೆಯಲ್ಲಿ ದೇವರ ಫೋಟೊ ಕೂಡ ಇರಲಿ. ವಿಘ್ನ ನಿವಾರಕ ಗಣೇಶನ ಮೂರ್ತಿಯನ್ನು ಹೊಸ ಮನೆಗೆ ತೆಗೆದುಕೊಂಡು ಹೋಗಬೇಕು. ಜೊತೆಗೆ ದಕ್ಷಿಣಾವರ್ತಿ ಶಂಖ ಮತ್ತು ಶ್ರೀ ಯಂತ್ರವನ್ನು ಸಹ ತೆಗೆದುಕೊಂಡು ಹೋಗಬಹುದಾಗಿದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಮನೆಯ ಯಜಮಾನ ಮೊದಲು ಬಲಗಾಲಿಟ್ಟು ಪ್ರವೇಶಿಸಿದ ನಂತರ ಆತನ ಪತ್ನಿಯು ಮನೆಯನ್ನು ಪ್ರವೇಶಿಸಬೇಕು. ತೆಗೆದುಕೊಂಡು ಬಂದ ಗಣೇಶನ ಮೂರ್ತಿಯನ್ನು ಈಶಾನ್ಯ ಮೂಲೆಯಲ್ಲಿ ಅಥವಾ ದೇವರ ಮನೆಯಲ್ಲಿ ಇಡಬೇಕು. ಅದರ ಜೊತೆಗೇ ಕಲಶವನ್ನು ಸಹ ಇಡಬೇಕು. ದೇವರ ಪೂಜೆಯಾದ ಬಳಿಕ ಅಡುಗೆ ಮಾಡುವ ಸ್ಟಾವ್‌ಗೆ ಪೂಜೆ ಸಲ್ಲಿಸಿ ಹಾಲು ಉಕ್ಕಿಸಬೇಕು.
ಇದನ್ನೂ ಓದಿ : Vastu Tips : ಮನೆಯ ಈ ದಿಕ್ಕಿಗೆ ಕಿಟಕಿ ಇದ್ದರೆ ಆರ್ಥಿಕ ಲಾಭ, ಸಮೃದ್ಧಿ!