ಮಂಡ್ಯ: ಅವರು ಇಂಗ್ಲೆಂಡ್ ಪ್ರಜೆ. ಅಲ್ಲಿಂದ ಕರ್ನಾಟಕಕ್ಕೆ ಬಂದಾಗ ಮೈಸೂರಿನ ನಿವಾಸಿಯೊಬ್ಬರ ಮೇಲೆ ಪ್ರೀತಿಯಾಗುತ್ತದೆ. ಬಳಿಕ ಅವರನ್ನೇ ವಿವಾಹವೂ ಆಗುತ್ತಾರೆ. ಈ ಜೋಡಿಗೆ ಮುದ್ದಾದ ಮಗುವೂ ಹುಟ್ಟುತ್ತದೆ. ಈ ನಡುವೆ ಅವರಿಗೆ ವೀರಶೈವ ಧರ್ಮದ ಮೇಲೆ ಅಪಾರವಾದ ನಂಬಿಕೆ ಬರುತ್ತದೆ. ಇದರಿಂದ ಪ್ರಭಾವಿತರಾದ ಅವರು, ಶುಕ್ರವಾರ (ಮಾ. 24) ವೀರಶೈವ ಲಿಂಗಾಯತ ದೀಕ್ಷೆಯನ್ನು ಪಡೆದುಕೊಂಡರು.
ಶ್ರೀರಂಗಪಟ್ಟಣದಲ್ಲಿರುವ ಚಂದ್ರವನ ಆಶ್ರಮದಲ್ಲಿ ತ್ರಿನೇತ್ರ ಮಹಾಂತ ಶ್ರೀಗಳಿಂದ ವೀರಶೈವ ಲಿಂಗಾಯತ ದೀಕ್ಷೆಯನ್ನು ಅವರು ಪಡೆದುಕೊಂಡರು.
ಬ್ರಿಟನ್ ಪ್ರಜೆಯಾಗಿರುವ ಜಾರ್ಜ್ ರಿಚರ್ಡ್‌ಸನ್ ದೀಕ್ಷೆ ಪಡೆದವರಾಗಿದ್ದಾರೆ. ಮೈಸೂರಿನ ಯಾದವಗಿರಿ ನಿವಾಸಿ ನೀಲಾಂಬಿಕೆ ಎಂಬುವವರನ್ನು ರಿಚರ್ಡ್‌ಸನ್ ವರಿಸಿದ್ದರು. ಆದರೆ, ಆ ವೇಳೆ ಭಾರತೀಯ ಧರ್ಮಕ್ಕೆ ಅವರು ಬದಲಾಗಿರಲಿಲ್ಲ. ನಂತರದ ದಿನಗಳಲ್ಲಿ ವೀರಶೈವ ಧರ್ಮದ ಆಚರಣೆಯಿಂದ ಪ್ರಭಾವಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು, ಪತ್ನಿ ನೀಲಾಂಬಿಕೆ ಜತೆಯಲ್ಲಿ ಆಶ್ರಮಕ್ಕೆ ಆಗಮಿಸಿ ದೀಕ್ಷೆ ಪಡೆದಿದ್ದಾರೆ.
ತ್ರಿನೇತ್ರ ಮಹಾಂತ ಶ್ರೀಗಳಿಂದ ವೀರಶೈವ ಲಿಂಗಾಯತ ದೀಕ್ಷೆಯನ್ನು ನೀಡಲಾಗಿದೆ. ಜಾರ್ಜ್ ರಿಚರ್ಡ್‌ಸನ್ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಅವರ ಹೆಸರನ್ನು ಈಗ ಯೋಗೇಶ್ವರ್ ಎಂಬ ಹೆಸರಿಗೆ ಬದಲಾಯಿಸಿಕೊಳ್ಳಲಾಗಿದೆ. ತನ್ನ ಒಂದು ವರ್ಷದ ಪುತ್ರನಿಗೆ ಗಜೇಂದ್ರ ಎಂದು ನಾಮಕರಣ ಮಾಡಿದ್ದಾರೆ.
ಇದನ್ನೂ ಓದಿ: Amit Shah visit : ಮಾದಕ ದ್ರವ್ಯದ ವಿರುದ್ಧ ತಂತ್ರಜ್ಞಾನ ಸಮರ: ಗೃಹ ಸಚಿವ ಅಮಿತ್ ಶಾ ಮಂಡಿಸಿದರು ತ್ರಿಸೂತ್ರ
ದಂಪತಿ ಸ್ವ-ಇಚ್ಚೆಯಿಂದ ಲಿಂಗದೀಕ್ಷೆ ಪಡೆದುಕೊಂಡಿದ್ದು, ವೀರಶೈವ ಧರ್ಮದ ವಿಧಿ, ವಿಧಾನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದಿದ್ದಾರೆ ಎಂಬುದಾಗಿ ಶ್ರೀಗಳು ತಿಳಿಸಿದ್ದಾರೆ.