Site icon Vistara News

ವಿಸ್ತಾರ Exclusive | ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಯಾವಾಗ?: ಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ್‌ ನಾಗರಕಟ್ಟೆ ಸಂದರ್ಶನ

gopala nagarakatte
Vistara Exclusive

ಸಂದರ್ಶನ: ಅಭಿಷೇಕ್ ಬಿ.ವಿ, ವಿಸ್ತಾರ ನ್ಯೂಸ್‌
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ದೇಶದ ಪರಮ ಶ್ರದ್ಧಾ ಭಕ್ತಿಯ ಕೇಂದ್ರಗಳಲ್ಲಿ ಒಂದಾಗಿ ತಲೆ ಎತ್ತುತ್ತಿರುವ ಈ ದೇಗುಲವನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಅತ್ಯಂತ ಸೂಕ್ಷ್ಮ ಧಾರ್ಮಿಕ ಮತ್ತು ತಾಂತ್ರಿಕ ಅಂಶಗಳನ್ನು ಆಧರಿಸಿ ನಿರ್ಮಿಸಲಾಗುತ್ತಿದೆ. ಈ ದೇವಾಲಯ ನಿರ್ಮಾಣ ಕಾರ್ಯ ಈಗ ಯಾವ ಹಂತದಲ್ಲಿದೆ, ಯಾವಾಗ ರಾಮನ ದರ್ಶನಕ್ಕೆ ಅವಕಾಶ ಸಿಗಬಹುದು, ಭವ್ಯ ಮಂದಿರದ ನಿರ್ಮಾಣ ಯಾವಾಗ ಪೂರ್ಣವಾಗಲಿದೆ ಎಂಬೆಲ್ಲ ವಿಚಾರಗಳಿಗೆ ಸಂಬಂಧಿಸಿ ವಿಸ್ತಾರ ನ್ಯೂಸ್‌ ಜತೆ ವಿಸ್ತೃತವಾಗಿ ಮಾತನಾಡಿದ್ದಾರೆ ರಾಮ ಮಂದಿರ ನಿರ್ಮಾಣದ ಉಸ್ತುವಾರಿಯಾಗಿರುವ ಗೋಪಾಲ ನಾಗರಕಟ್ಟೆ ಅವರು. ಕರ್ನಾಟಕದವರೇ ಆಗಿರುವ ಗೋಪಾಲ ನಾಗರಕಟ್ಟೆ ಅವರು ಆರೆಸ್ಸೆಸ್‌ನ ಪ್ರಚಾರಕರಾಗಿದ್ದು ವಿಶ್ವ ಹಿಂದೂ ಪರಿಷತ್‌ಗೆ ನಿಯೋಜನೆಗೊಂಡಿದ್ದಾರೆ. ಅವರೊಂದಿಗಿನ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

⭕ಮೂರ್ನಾಲ್ಕು ವರ್ಷ ನೀವು ಅಯೋಧ್ಯೆಯಲ್ಲೇ ಇದ್ದು ರಾಮ ಮಂದಿರ ನಿರ್ಮಾಣ ಕಾರ್ಯ ನೋಡಿಕೊಳ್ಳುತ್ತಿದ್ದೀರಿ. ಅಲ್ಲಿನ ಚಿತ್ರಣ ಯಾವ ರೀತಿ ಇತ್ತು? ಈಗ ಹೇಗಾಗಿದೆ?
✅ದೇವಸ್ಥಾನದ ಕೆಲಸ ಬಹಳ ವೇಗವಾಗಿ ನಡೆಯುತ್ತಿದೆ. 2020ರ ಆಗಸ್ಟ್ 5ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ದೇಶದ ಪ್ರಮುಖ ಸಂತರ ಉಪಸ್ಥಿತಿಯಲ್ಲಿ‌ ಭೂಮಿ ಪೂಜೆ ನಡೆದ ನಂತರ ಅಧಿಕೃತವಾಗಿ ಮಂದಿರದ ಕೆಲಸ ಶುರುವಾಯಿತು. ಇವತ್ತು ಹಗಲು ರಾತ್ರಿ ಅಲ್ಲಿ ಕೆಲಸ ನಡೆಯುತ್ತಿದೆ. ಕೆಳಗಡೆ ಬುನಾದಿಯನ್ನು ಹಾಕಿ ಅದಾದ ಮೇಲೆ ಕರ್ನಾಟಕದಿಂದ ತರಿಸಿದ ಗ್ರಾನೈಟ್ ಸ್ಟೋನ್‌ನಿಂದ ಪ್ಲಿಂಥ್ (ಕಟ್ಟೆ) ಕಟ್ಟುವ ಕೆಲಸ ಮಾಡಿದ್ದೇವೆ. ಈಗ ಆ ಕೆಲಸವೂ ಮುಗಿಯಿತು. ಅದರ ಮೇಲ್ಭಾಗದ ಕೆಲಸ ಈಗ ಪ್ರಾರಂಭವಾಗಿದೆ. ಪ್ರಾರಂಭದಲ್ಲಿ ಸ್ವಲ್ಪ ತೊಂದರೆಗಳು ಇದ್ದವು. 70 ಎಕರೆ ಭೂಮಿಯನ್ನು ಸರ್ಕಾರ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಕೊಟ್ಟಿದೆ. ಅದರ ಈಶಾನ್ಯ ಮೂಲೆಯಲ್ಲಿ ದೇವಸ್ಥಾನ, ರಾಮನ ಜನ್ಮಭೂಮಿ ಇದೆ. ಅಲ್ಲಿ 360 ಅಡಿ ಉದ್ದ, 235 ಅಗಲ ಹಾಗೂ 161 ಅಡಿ ಎತ್ತರದ ಮಂದಿರ ನಿರ್ಮಾಣ ಮಾಡುವ ಯೋಜನೆ ಆಗಿದೆ. ಇದರ ಆರ್ಕಿಟೆಕ್ಟ್ (ವಿನ್ಯಾಸಕಾರರು) ಚಂದ್ರಕಾಂತ್ ಸೋಂಪುರ. ಗುಜರಾತ್‌ನ ಅಹ್ಮದಾಬಾದ್‌ನ ಕರ್ಣಾವತಿಯವರು. ಅವರ ಅಜ್ಜ ಗುಜರಾತ್‌ನ ಸೋಮನಾಥ ಮಂದಿರವನ್ನು ಕಟ್ಟಿದವರು. ನಾಗರೀ ಶೈಲಿಯಲ್ಲಿ ಮಂದಿರವನ್ನು ಕಟ್ಟುವ ಶಿಲ್ಪಿ ಅವರು. ಈ ಮಂದಿರದ ನಿರ್ಮಾಣ ಕಾರ್ಯವನ್ನು ನಾವು L&T ಕಂಪನಿಗೆ ಕೊಟ್ಟಿದ್ದೇವೆ. ಮೇಲ್ವಿಚಾರಣೆ ಜವಾಬ್ದಾರಿಯನ್ನು ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್‌ಗೆ ವಹಿಸಿದ್ದೇವೆ. ನಮ್ಮ ಕಡೆಯಿಂದಲೂ ನಾಲ್ಕೈದು ಜನ ಎಂಜಿನಿಯರ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.

⭕ ಅಯೋಧ್ಯೆಯ ನೆಲದಲ್ಲಿ ಮಂದಿರ ಕಟ್ಟುವಲ್ಲಿ ಎದುರಾದ ತಾಂತ್ರಿಕ ಸವಾಲುಗಳು ಏನು? ಅದನ್ನು ಹೇಗೆ ನಿಭಾಯಿಸಿದಿರಿ?
✅ಅಯೋಧ್ಯೆಯ ಮಣ್ಣು ಗಟ್ಟಿಯಲ್ಲ. ಕರ್ನಾಟಕದಲ್ಲಿ ಎಲ್ಲಿ ನೋಡಿದ್ರೂ ಕಲ್ಲು ಸಿಗುತ್ತದೆ. ಅಯೋಧ್ಯೆಯಲ್ಲಿ ಕಲ್ಲು ಸಿಗೋದಿಲ್ಲ. ಯಾರಿಗಾದ್ರೂ ಕಲ್ಲು ಹೊಡೆಯಬೇಕು ಅಂದ್ರೂ ಸಿಗಲ್ಲ! ಮರಳು ಮಿಶ್ರಿತ ಮಣ್ಣು. ಅಲ್ಲಿನ ಮರಳು ಬಹಳ ಮಧುರವಾದದ್ದು ಅಂದ್ರೆ ತುಂಬಾ ಮೃದು. ಹೀಗಾಗಿ ಹೈದರಾಬಾದ್‌ನ ಭೂಗರ್ಭ ಸಂಸ್ಥೆ ಹೇಳಿದಂತೆ ಭೂಮಿಗಿಂತ 10 ಮೀಟರ್ ಕೆಳಗಡೆ ಹೋದರೆ ಮಾತ್ರ ಸರಿಯಾದ ನೆಲ ಸಿಗುತ್ತದೆ. ಹಾಗಾಗಿ ನಾವು ಸುಮಾರು 6.5 ಎಕರೆ ಭೂಮಿಯ ಪ್ರದೇಶದಲ್ಲಿ, ಕೆಳಗಿರುವ ಮಣ್ಣೆಲ್ಲ ತೆಗೆದು ಕೆರೆಯ ರೀತಿಯ ಜಾಗವನ್ನು ನಿರ್ಮಾಣ ಮಾಡಿದೆವು. ನೆಲಮಟ್ಟಕ್ಕಿಂತ 50 ಅಡಿವರೆಗೂ ನಾವು ಮಣ್ಣನ್ನು ತೆಗೆದು, ಅದನ್ನು ಲೆವಲ್ ಮಾಡಿ ಅಲ್ಲಿಂದ ಮೇಲಕ್ಕೆ ಬಂದಿದ್ದು. ಮಂದಿರ ನಿರ್ಮಾಣ ಮಾಡುವ ಮೊದಲೇ ಎರಡು ಸಂಗತಿ ನಿಶ್ಚಯ ಮಾಡಿದ್ವಿ. ಮೊದಲನೇಯದ್ದು ಮಂದಿರದಲ್ಲಿ ಎಲ್ಲೂ ಸಹ ಕಬ್ಬಿಣ ಉಪಯೋಗಿಸಬಾರದು. ಯಾಕಂದ್ರೆ ಅದರ ಆಯುಸ್ಸೇ 100 ವರ್ಷ. ಎರಡನೇದಾಗಿ ಸಿಮೆಂಟ್ ಬಳಸಬಾರದು ಅಂತ. ಅದರ ಆಯುಷ್ಯವೂ 100 ವರ್ಷ. ಅದನ್ನು ಭೂಮಿಯ ಕೆಳಗೆ ಉಪಯೋಗಿಸಬಹುದು. ಭೂಮಿಯ ಮೇಲ್ಗಡೆ ಸಿಮೆಂಟ್ ಬೇಡ ಅನ್ನೋ ನಿರ್ಣಯ ಮಾಡಿದ್ವಿ.

ಗೋಪಾಲ ನಾಗರಕಟ್ಟೆ

ಭೂಮಿಯ ಕೆಳಗಡೆ ಸ್ಟೀಲ್ ರಹಿತವಾದ ಸಿಮೆಂಟ್ ಕಾಂಕ್ರೀಟ್ ಹಾಕುತ್ತಾ ಗಟ್ಟಿ ಮಾಡ್ತಾ ಬಂದೆವು. ಒಂದು ಅಡಿಯಷ್ಟು ಸಿಮೆಂಟ್ ಹಾಕೋದು, ಆಮೇಲೆ ರೋಲ್ ಮಾಡೋದು. ರೋಲ್ ಮಾಡ್ತಾ ಮಾಡ್ತಾ 48 ಪದರಗಳನ್ನು ಎಲ್ಲೆಡೆ ಹಾಗೂ ಗರ್ಭಗುಡಿಯ ಕೆಳಗೆ 56 ಲೇಯರ್ ಹಾಕಿದೆವು. ಅದಾದ ನಂತರ ಸುಮಾರು 5 ಅಡಿ, ರಿಚ್ ಕಾಂಕ್ರೀಟ್ ಹಾಕಿ ಒಂದು ಕಟ್ಟೆ ಕಟ್ಟಿದ್ದೇವೆ. ಅಂದ್ರೆ ನಮ್ಮ ದೇವಸ್ಥಾನ ನಿರ್ಮಾಣ ಆಗುವ ಪ್ರದೇಶಕ್ಕಿಂತ ಸ್ವಲ್ಪ ದೊಡ್ಡದನ್ನು ನಿರ್ಮಾಣ ಮಾಡಿದ್ದೇವೆ. ಅಲ್ಲಿಗೆ ನೆಲದ ಕೆಲಸ ಮುಗಿಯುತ್ತದೆ. ಅದರಿಂದ ಮೇಲ್ಗಡೆ 4 ಅಡಿಯಷ್ಟು ಮಣ್ಣು ಬರೋದಿದೆ. ಅದರ ಮೇಲೆ ನಾವು ಗ್ರಾನೈಟ್ ಕಲ್ಲುಗಳನ್ನು ಹಾಕಲು ಶುರು ಮಾಡಿದೆವು. ಇದನ್ನು ಹೆಚ್ಚಾಗಿ ಕರ್ನಾಟಕದ್ದೇ ಬಳಸಿದ್ದೇವೆ. ಕಲ್ಲುಗಳನ್ನು ಒಂದರ ಮೇಲೊಂದಿಟ್ಟು ಒಟ್ಟು ನೆಲದಿಂದ 21 ಅಡಿವರೆಗೂ ಕಲ್ಲನ್ನು ಹಾಸುತ್ತಿದ್ದೇವೆ. 5 ಅಡಿ ಉದ್ದ, 2.5 ಅಡಿ ಅಗಲ ಹಾಗುಯ 3 ಅಡಿ ದಪ್ಪದ 17,000 ಕಲ್ಲುಗಳನ್ನು ಒಂದರ ಮೇಲೊಂದು ಇಡುತ್ತಿದ್ದೇವೆ. ಆ ಕೆಲಸ ಬಹುತೇಕ ಮುಗಿದಿದ್ದು, ಇನ್ನೊಂದು 300 ಕಲ್ಲುಗಳನ್ನು ಇರಿಸೋದು ಮಾತ್ರ ಬಾಕಿ ಉಳಿದಿದೆ. ಅಂದ್ರೆ ಪ್ಲಿಂಥ್ ಅಂತ ಏನು ಕರೀತಾರೆ, ಸಾಮಾನ್ಯವಾಗಿ ಮನೆ ಕಟ್ಟುವಾಗ ನೆಲಕ್ಕಿಂತ ಮನೆ ಸ್ವಲ್ಪ ಮೇಲಿರುತ್ತದೆ. ಅದನ್ನು ಪ್ರಿಂಥ್ ಅಂತಾರೆ. ನಾವು ಕಟ್ಟೆ ಅನ್ನಬಹುದು ಕನ್ನಡದಲ್ಲಿ. ಈಗ ಆ ರೀತಿಯ ಕಟ್ಟೆ ಕಟ್ಟುವ ಕೆಲಸ ಮುಗೀತು. ಈಗ ಅದರ ಮೇಲ್ಗಡೆ ಬರಬೇಕಾಗಿದ್ದು ಬನ್ಸೀ ಪಹಾಡ್‌ಪುರ್ ಅಂತ. ರಾಜಸ್ಥಾನದ ಭರತ್‌ಪುರ್ ಜಿಲ್ಲೆ ಬಯಾನಾ ತಾಲೂಕಿನ ಒಂದು ಗುಡ್ಡದ ಪ್ರದೇಶ. ಅಲ್ಲಿ, ಗುಲಾಬಿ ಬಣ್ಣದ ಸುಣ್ಣದ ಕಲ್ಲು ಸಿಗುತ್ತದೆ. ಸ್ಯಾಂಡ್ ಸ್ಟೋನ್ ಅಂತ ಕರೀತಾರೆ. ಆ ಸ್ಯಾಂಡ್ ಸ್ಟೋನ್ ಮೂಲಕ ಈ ಮಂದಿರದ ನಿರ್ಮಾಣ ಆಗ್ತಿದೆ. ಅದರ ಕೆತ್ತನೆ ಆಗಿ ಬರ್ತಿದೆ. ಈಗ ಹೆಚ್ಚುಕಮ್ಮಿ 1 ಲಕ್ಷ ಘನ ಅಡಿ ಕಲ್ಲುಗಳು ಬಂದಿವೆ. ನಾವು ಈಗೊಂದು 15,000 ಘನ ಅಡಿ ಕಲ್ಲುಗಳನ್ನು ಇಟ್ಟಾಗಿದೆ. ಗರ್ಭಗೃಹದ ಪ್ರದೇಶ ಹಾಗೂ ಸುತ್ತಲೂ, ಕೆಳಗಡೆಯ ಬೇಸ್‌ಮೆಂಟ್ ಪ್ರದೇಶ ಅಂದ್ರೆ ಪ್ರಾರಂಭದ ಭಾಗದಲ್ಲೆಲ್ಲಾ ಇಟ್ಟು ಕೆಲಸ ಮುಂದಕ್ಕೆ ಹೋಗ್ತಿದೆ.

ಮಂದಿರ ಲೋಕಾರ್ಪಣೆಗೂ ಲೋಕಸಭಾ ಚುನಾವಣೆಗೂ ಸಂಬಂಧ ಇದ್ಯಾ? ಲೋಕಸಭಾ ಚುನಾವಣೆ ನಡೆಯೋ ಕೆಲವು ತಿಂಗಳ ಮೊದಲೇ ದೇವಾಲಯ ಲೋಕಾರ್ಪಣೆ ಆಗುತ್ತದೆ ಅನ್ನೋ ಮಾತು ಕೇಳಿಬಂದಿದೆ. ಶ್ರೀ ರಾಮನ ದರ್ಶನ ಯಾವಾಗ?
✅ ಚುನಾವಣೆಗೂ ಮಂದಿರಕ್ಕೂ ಯಾವುದೇ ಸಂಬಂಧವಿಲ್ಲ. ಆದ್ರೆ, ನಾವು ದೇವಸ್ಥಾನವನ್ನು ಯಥಾಶೀಘ್ರ ಜನರ ದರುಶನಕ್ಕೆ ತೆರೆದಿಡಬೇಕು ಅಂತ ಪ್ರಯತ್ನ ಮಾಡುತ್ತಿದ್ದೇವೆ. ಮೊದಲನೇಯದಾಗಿ ಪ್ರಾಣ ಪ್ರತಿಷ್ಠಾಪನೆ ಮಾಡಬೇಕು. ಆಗ ದರ್ಶನ ಶುರುವಾಗುತ್ತದೆ. ಒಂದು ಮಹಡಿ ಕೆಲಸ ಮುಗಿದು, ಗರ್ಭಗೃಹದ ಭಾಗ ಸ್ವಲ್ಪ ಮೇಲಕ್ಕೆ ಬಂದ್ರೆ ಪ್ರಾಣ ಪ್ರತಿಷ್ಠಾಪನೆ ಮಾಡಬಹುದು. ಅದರ ನಂತರ ಬೇರೆ ಬೇರೆ ಕೆಲಸಗಳು ನಡೆಯುತ್ತಾ ಹೋಗುತ್ತದೆ. ನೆಲಮಹಡಿಯ ಕೆಲಸವನ್ನು ಡಿಸೆಂಬರ್ ಹೊತ್ತಿಗೆ ಪೂರ್ಣವಾಗಿ ಮುಗಿಸುತ್ತೇವೆ. 2024ರ ಜನವರಿ ತಿಂಗಳ ಮಕರ ಸಂಕ್ರಮಣ ಉತ್ತರಾಯಣ ಪರ್ವ ಕಾಲದ ಸಂದರ್ಭದಲ್ಲಿ ಒಳ್ಳೆಯ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದೆ.
ದೇವಸ್ಥಾನದ ಪ್ರಾಕಾರ 6.5 ಎಕರೆ ಭೂಮಿಯಲ್ಲಿ ನಿರ್ಮಾಣ ಆಗ್ತಿದೆ. 750 ಮೀಟರ್ ಉದ್ದದ ಪ್ರಾಕಾರವಾಗಿದ್ದು, ಇದು ಮುಗಿಯೋದಕ್ಕೆ 3 ವರ್ಷ ಬೇಕಾಗುತ್ತದೆ.

ಸೆಪ್ಟೆಂಬರ್‌ ೨೬ರ ಹೊತ್ತಿಗೆ ಆಗಿರುವ ಕಾಮಗಾರಿ

ಒಂದೊಳ್ಳೆ ಕೆಲಸ ಆಗಬೇಕಂದ್ರೆ ಸಾವಿರ ಕೈಗಳು ಜೊತೆಗೂಡಬೇಕು ಅಂತಾರೆ. ನಿಮ್ಮ ಜೊತೆ ಹೆಜ್ಜೆ ಹಾಕಿದವರು ಯಾರು? ಎಲ್ಲಿಂದ ಆರಂಭವಾಯ್ತು? ಈಗ ಎಲ್ಲಿಯವರೆಗೆ ಬಂದಿದ್ದೀರಾ? ದೇಣಿಗೆ ಎಷ್ಟು ಸಂಗ್ರಹವಾಗಿದೆ?
✅ ಕೇಂದ್ರ ಸರ್ಕಾರ 2020ರ ಫೆಬ್ರವರಿಯಲ್ಲಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಅಂತ ಒಂದು ಟ್ರಸ್ಟ್ ನಿರ್ಮಾಣ ಮಾಡಿತ್ತು. ಆ ಟ್ರಸ್ಟ್‌ನ ಎಲ್ಲ ಸದಸ್ಯರೂ ಸೇರಿದಂತೆ, ನಮ್ಮ ಕರ್ನಾಟಕದ ಪೇಜಾವರ ಸ್ವಾಮಿಗಳು ಅಂದ್ರೆ, ಇಂದಿನ ವಿಶ್ವಪ್ರಸನ್ನತೀರ್ಥ ಸ್ವಾಮಿಗಳೂ ಒಬ್ಬ ಟ್ರಸ್ಟಿ. ದಕ್ಷಿಣ ಭಾರತದಿಂದ ಸ್ವಾಮೀಜಿಗಳ ಪೈಕಿ ಅವರು ಏಕಮೇವ ಟ್ರಸ್ಟಿಯಾಗಿದ್ದಾರೆ. ಇನ್ನೊಬ್ಬರು ಚೆನ್ನೈನ ಒಬ್ಬ ವಕೀಲರು. ಉಳಿದವರೆಲ್ಲ ಉತ್ತರ ಪ್ರದೇಶದ ಸಂತರಾಗಿದ್ದಾರೆ. ನಮ್ಮ ಈ ಕಾರ್ಯದಲ್ಲಿ, ವಿಶೇಷವಾಗಿ ನ್ಯಾಯಾಲಯದ ಹೋರಾಟದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ ಚಂಪತ್‌ ರಾಯರು ನಮ್ಮ ಸಂಘದ ಪ್ರಚಾರಕರು. ವಿಶ್ವ ಹಿಂದೂ ಪರಿಷತ್‌ನ ಕಾರ್ಯದರ್ಶಿಯಾಗಿದ್ದರು. ಈಗ ವಿಶ್ವ ಹಿಂದೂ ಪರಿಷತ್‌ನ ಉಪ್ಯಾಧ್ಯಕ್ಷರಾಗಿದ್ದಾರೆ. ಅವರು ಈ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ. ನೃಪೇಂದ್ರ ಮಿಶ್ರಾ ಪ್ರಧಾನಿ ಮೋದಿಯವರಿಗೆ ಸಹಾಯಕರಾಗಿದ್ದರು. ಅವರು ಈ ಮಂದಿರ ನಿರ್ಮಾಣದ ಪ್ರಮುಖರಾಗಿ ಕೆಲಸ ಮಾಡ್ತಿದ್ದಾರೆ. ಅಯೋಧ್ಯೆಯವರೇ ಆದ ಡಾ. ಅನಿಲ್ ಮಿಶ್ರಾ ಹಾಗೂ ಅಲ್ಲಿನ ರಾಜ ಕುಟುಂಬಸ್ಥರೊಬ್ಬರು ಕೂಡ ಟ್ರಸ್ಟ್‌ನಲ್ಲಿದ್ದಾರೆ. ದೇಶಾದ್ಯಂತ ಕಳೆದ ವರ್ಷ ಜನವರಿಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ನಿಧಿ ಸಂಗ್ರಹದ ಅಭಿಯಾನ ನಡೆಯಿತು. ನಮಗೆ 3,200 ಕೋಟಿ ರೂಪಾಯಿ ನಿಧಿ ಬಂದಿದೆ, ಬರುತ್ತಲೇ ಇದೆ. ಅದಾದ ಮೇಲೆ ಇಂದಿಗೂ ಬರ್ತಾನೇ ಇದೆ. ವಿದೇಶಗಳಿಂದ ನಾವಿನ್ನೂ ಹಣ ತೆಗೆದುಕೊಂಡಿಲ್ಲ. ಏಕೆಂದರೆ ವಿದೇಶಗಳಿಂದ ಹಣ ತೆಗೆದುಕೊಳ್ಳಬೇಕಂದರೆ ಟ್ರಸ್ಟ್ ಆಗಿ ಮೂರು ವರ್ಷ ಕಳೆದಿರಬೇಕು. ಎಲ್ಲ ವರ್ಗದವರೂ ದೇಣಿಗೆ ನೀಡಿದ್ದಾರೆ. ಬಡವರು 10 ರೂಪಾಯಿಯನ್ನೂ ಕೊಟ್ಟಿದ್ದಾರೆ. ಅನುಕೂಲಸ್ಥರು ಕೋಟ್ಯಾಂತರ ರೂಪಾಯಿ ಕೊಟ್ಟಿದ್ದಾರೆ. ಎಲ್ಲ ರಾಮ ಭಕ್ತರ ಇದಕ್ಕೆ ಸಹಾಯ ಮಾಡಿದ್ದಾರೆ.

ದೇವಾಲಯದ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯದವರೂ ದೇಣಿಗೆ ಕೊಟ್ಟಿದ್ದಾರಾ?
✅ ಒಟ್ಟು 12 ಕೋಟಿ ಕುಟುಂಬಗಳಿಂದ ನಮಗೆ ಹಣ ಬಂದಿದೆ. ಅದರಲ್ಲಿ ಮುಸಲ್ಮಾನರೂ ಇದ್ದಾರೆ. ನಾನೂ ಬೇರೆ ಬೇರೆ ಮನೆಗಳಿಗೆ ಹೋದಾಗ, ಮುಸಲ್ಮಾನರ ಮನೆಗಳು ಬಂದಾಗ ಅವರೂ ಕೂಡ ದೇಣಿಗೆ ಕೊಟ್ಟಿದ್ದಾರೆ.

ಭಾರತ ದೇವಾಲಯಗಳಿಗೆ ಪ್ರಸಿದ್ಧವಾಗಿದೆ ಹೌದು. ದೇವಾಲಯಗಳ ಪ್ರಾಕಾರಗಳೇ ವಿಭಿನ್ನವಾಗಿವೆ. ಈ ದೇವಾಲಯ ಯಾವ ರೀತಿ ವಿಭಿನ್ನವಾಗಿರಲಿದೆ?
✅ ನಾವು ನಾಗರೀ ಶೈಲಿಯಲ್ಲಿ ದೇವಸ್ಥಾನ ಕಟ್ಟುತ್ತಿದ್ದೇವೆ. 750 ಮೀಟರ್ ಉದ್ದದ ಪ್ರಾಕಾರ ಆಯತಾಕಾರದಲ್ಲಿ ನಿರ್ಮಾಣ ಆಗಲಿದೆ. ಅಲ್ಲಿಂದ ದೇವಾಲಯದ ಪ್ರವೇಶ ಶುರುವಾಗುತ್ತದೆ. ರಾಮ ಮಂದಿರ ಮೂರು ಮಹಡಿ ಹೊಂದಿರುತ್ತದೆ. ನೆಲಮಹಡಿಯಲ್ಲಿ ರಾಮ ಬಾಲ ಸ್ವರೂಪದಲ್ಲಿ ಇರ್ತಾನೆ. ಒಂದನೇ ಮಹಡಿಯಲ್ಲಿ ರಾಮ, ಲಕ್ಷ್ಮಣ, ಭರತ, ಶತೃಘ್ನ, ಹನುಮಾನ್, ಸೀತಾ ಮಾತೆ ಸಹಿತವಾಗಿ ರಾಮ ದರ್ಬಾರ್ ಇರುತ್ತದೆ. ಸಿಂಹಾಸನದಲ್ಲಿ ಕುಳಿತ ರಾಮನ ದರ್ಶನ ಪಡೆಯಬಹುದು. 161 ಅಡಿ ಎತ್ತರದ ಶಿಖರ ಇರುತ್ತದೆ. ಇದು ಉತ್ತರ ಭಾರತದಲ್ಲೇ ಅತೀ ದೊಡ್ಡ ದೇವಾಲಯವಾಗಲಿದೆ.

⭕ ಅಕ್ಷರಧಾಮ ದೇವಾಲಯದಂತೆ ಇಲ್ಲಿಯೂ ಎಲ್‌ಇಡಿ ಗೋಡೆ ಹಾಕಿ ಭಗವಂತನ ಇತಿಹಾಸ ಅಥವಾ ಕಥೆಗಳನ್ನು ಪ್ರದರ್ಶಿಸುತ್ತೀರಾ?

ಅಯೋಧ್ಯೆಯಲ್ಲಿ ಪೂಜಿಸಲ್ಪಡುತ್ತಿರುವ ರಾಮ ಲಲ್ಲಾ

✅ ಮೂಲ ಮಂದಿರದ ಪ್ರಾಕಾರದಲ್ಲಿ ಆರು ದೇವಸ್ಥಾನಗಳು ಇರಲಿವೆ. ದೇವಸ್ಥಾನದ ಲೋವರ್ ಪ್ಲಿಂಥ್‌ನಲ್ಲಿ ದೇಶದ ಮಹಾಪುರುಷರ, ರಾಮಾಯಣಕ್ಕೆ ಸಂಬಂಧಿಸಿದಂತೆ ಮಹಾಪುರುಷರ ಚಿತ್ರಣ ಬರಲಿದೆ. ಹಾಗೆಯೇ, ಪ್ರಾಕಾರದಲ್ಲಿ ರಾಮನ ಜೀವನಚಿತ್ರಣ ಬರಲಿದೆ. ಅದು ನಮ್ಮ ವಿಶೇಷತೆಯಾಗಿದೆ. ಈ ಎರಡನ್ನೂ ಜನರಿಗೆ ತೋರಿಸಲಿದ್ದೇವೆ. ಸಂಸ್ಕೃತಿಯ ಚಿತ್ರಣವನ್ನೂ ನೀಡುತ್ತೇವೆ. ರಾಮನ ಜೀವನದ ಚಿತ್ರಣವನ್ನೂ ತೋರಿಸಲಿದ್ದೇವೆ.

ವಿದೇಶಗಳಿಂದಲೂ ಭಕ್ತರು ಹಾಗೂ ಪ್ರವಾಸಿಗರು ಆಗಮಿಸುವುದರಿಂದ ಪ್ರವಾಸೋದ್ಯಮ ಯಾವ ರೀತಿ ಅಭಿವೃದ್ಧಿಗೊಳಿಸುತ್ತೀರಾ?
✅ ಇದೆಲ್ಲವೂ ಸರ್ಕಾರದ ಕೆಲಸವಾಗಿದೆ. ಎಲ್ಲವನ್ನೂ ನಾವೇ ಮಾಡೋದಕ್ಕಾಗಲ್ಲ. ದೇವಸ್ಥಾನದಿಂದ ಏನು ಮಾಡಬಹುದು ಎಂಬ ಚಿಂತನೆ ಈಗ ನಡೆದಿದೆ. ಕೆಲ ಗೈಡ್‌ಗಳಾದ್ರೂ ನಮ್ಮ ಕಡೆಯಿಂದ ಇರಬೇಕು ಅಂತ ನಿರ್ಧರಿಸಿದ್ದೇವೆ. ಇದನ್ನು ಪ್ರವಾಸಿ ತಾಣ ಮಾಡೋದಕ್ಕೆ ನಾವು ಹೊರಟಿಲ್ಲ. ಶ್ರದ್ಧಾ ಸ್ಥಾನ ಮಾಡೋದಕ್ಕೆ ಹೊರಟಿದ್ದೇವೆ. ವಿದೇಶದಿಂದಾದ್ರೂ ಬರಲಿ, ಎಲ್ಲಿಂದಾದ್ರೂ ಬರಲಿ, ಶ್ರದ್ಧಾ ಸ್ಥಾನವಾಗಿಯೇ ಅಯೋಧ್ಯೆಯನ್ನು ನೋಡಬೇಕು. ಅಯೋಧ್ಯೆಯನ್ನು ನೋಡಬೇಕಾದರೆ ಸರಯೂಗೆ ಹೋಗಬೇಕು. ಸರಯೂ ದರ್ಶನ ಮಾಡದಿದ್ದರೆ ಅಯೋಧ್ಯೆ ಪುಣ್ಯ ಲಭಿಸುವುದಿಲ್ಲ. ಸರಯೂ ಶ್ರೇಷ್ಠವಾದಂತ ನದಿ. ರಾಮಾಯಣದಲ್ಲಿ ವಾಲ್ಮೀಕಿ ಮಹರ್ಷಿಗಳು ಸರಯೂ ವರ್ಣನೆ ಮಾಡಿದ್ದಾರೆ. ಅದರ ಪಕ್ಕದಲ್ಲಿ ರಾಮನ ಸ್ಥಾನ ಅಂದ್ರೆ, ಅಯೋಧ್ಯೆ ನಿರ್ಮಿತವಾಗಿದೆ. ಅದರಿಂದಾಗಿಯೇ ಅಯೋಧ್ಯೆಗೆ ಒಂದು ಮಹತ್ವ ಸಿಕ್ಕಿದೆ. ಎರಡನೇಯದ್ದು, ಹನುಮಾನ್ ಗಡಿ. ಹನುಮಾನ್ ಇಲ್ಲದೇ ರಾಮನಿಲ್ಲ. ಅದನ್ನೂ ದರ್ಶನ ಮಾಡಬೇಕು. ಮೂರನೆಯದ್ದು ರಾಮಮಂದಿರ. ಇದು ಪ್ರಮುಖವಾದ 3 ಸ್ಥಳಗಳು. ಇದರ ಹೊರತಾಗಿಯೂ ಅನೇಕ ನಿರ್ಮಾಣವಾಗುತ್ತಿದೆ.

ದೇವಾಲಯಕ್ಕೆ ಬರುವ ಮಾರ್ಗದಲ್ಲೂ ಅಭಿವೃದ್ಧಿಯಾಗಬೇಕು. ಅಭಿವೃದ್ಧಿ ವಿಚಾರವಾಗಿ ಸರ್ಕಾರಕ್ಕೆ ಏನು ಸಲಹೆ ಕೊಟ್ಟಿದ್ದೀರಾ?
✅ ಅಯೋಧ್ಯೆ ಬಹಳ ಚಿಕ್ಕ ಊರು. ಕಾಶಿ, ಮಥುರಾ ಇವೆಲ್ಲಾ ದೊಡ್ಡ ದೊಡ್ಡ ನಗರಗಳು. ಅಯೋಧ್ಯೆ 50 ಸಾವಿರ ಜನಸಂಖ್ಯೆ ಇರೋ ಊರದು. ಮೊದಲು ಫೈಜಾಬಾದ್ ಅಂತ ಹೆಸರಿತ್ತು, ಈಗ ಅದನ್ನು ಅಯೋಧ್ಯೆ ಅಂತ ಮಾಡಿದ್ದಾರೆ. ಜಿಲ್ಲಾ ಕೇಂದ್ರವನ್ನೂ ಸೇರಿಸಿದ್ರೆ 3 ಲಕ್ಷ ಅಷ್ಟೇ ಅಲ್ಲಿನ ಜನಸಂಖ್ಯೆ. ಅದು ಅಭಿವೃದ್ಧಿಯಾಗಬೇಕಿದೆ. ರಸ್ತೆಗಳು ಅಗಲೀಕರಣಗೊಳ್ಳುತ್ತಿವೆ. ಸರ್ಕಾರದಿಂದಲೂ ಬಹಳ ಒಳ್ಳೆಯ ಯೋಜನೆಗಳು ನಡೆಯುತ್ತಿವೆ. ಹೊಸ ಅಯೋಧ್ಯೆಯನ್ನು ಅಭಿವೃದ್ಧಿಗೊಳಿಸಬೇಕು ಅಂತ ದೇವಸ್ಥಾನದಿಂದ 5 ಕಿ.ಮೀ ದೂರದಲ್ಲಿ ಸರ್ಕಾರ 1200 ಎಕರೆ ಪ್ರದೇಶವನ್ನು ಪಡೆಯುತ್ತಿದೆ. ಅಲ್ಲಿ ಯಾತ್ರಿ ನಿವಾಸಗಳು ನಿರ್ಮಾಣ ಆಗಲಿವೆ. ಅಯೋಧ್ಯೆಯಲ್ಲಿ ಸಾವಿರಕ್ಕೂ ಹೆಚ್ಚು ಆಶ್ರಮಗಳಿವೆ. ಅವುಗಳಿಂದಲೂ ರೂಂಗಳು ನಿರ್ಮಾಣ ಆಗಲಿವೆ.

ಉತ್ತರ ಪ್ರದೇಶದ ಸರ್ಕಾರ ಹಾಗೂ ಪ್ರಧಾನಿ ಮೋದಿಯವರ ಸಹಕಾರ ಹೇಗಿದೆ?
✅ ನಮಗೆ ಕೇವಲ ಎರಡು ಸರ್ಕಾರಗಳು ಮಾತ್ರವಲ್ಲ, ಮೂರು ಸರ್ಕಾರಗಳ ಸಹಕಾರ ಸಿಕ್ಕಿದೆ. ಉತ್ತರ ಪ್ರದೇಶ ಸರ್ಕಾರ, ಕೇಂದ್ರ ಸರ್ಕಾರಗಳ ಜತೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರದಿಂದಲೂ ಸಹಕಾರ ಲಭಿಸಿದೆ. ಒಟ್ಟು 13,50,000 ಘನ ಅಡಿ ಕಲ್ಲುಗಳು ಬೇಕಿವೆ. ಇದಿಷ್ಟೂ ಕಲ್ಲುಗಳು ರಾಜಸ್ಥಾನದಿಂದ ಬರಬೇಕು. ಆದರೆ ಆ ಕಲ್ಲುಗಳು ಇದ್ದಂಥ ಪ್ರದೇಶ ನಿಷೇಧಕ್ಕೆ ಒಳಗಾಗಿತ್ತು. ಅದನ್ನು ಕೇಂದ್ರ ಸರ್ಕಾರ ಮತ್ತು ರಾಜಸ್ಥಾನದ ಸರ್ಕಾರಗಳ ಸಹಯೋಗದಿಂದ ನಿಷೇಧ ತೆರವಾಗಿ ನಮಗೆ ಕಲ್ಲುಗಳು ಸಿಗುವಂತಾಗಿದೆ. ನಾವು ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯ ತೆಗೆದುಕೊಳ್ಳುವುದಿಲ್ಲ.‌ ಯಾವುದೇ ವಿನಾಯಿತಿ ಕೇಳಬಾರದು ಅಂತ ನಿಶ್ಚಯ ಮಾಡಿದ್ದೇವೆ. ನ್ಯಾಯಯುತವಾಗಿ ನಮಗೆ ಸಿಗಬೇಕಾದ ಅನುಕೂಲತೆಗಳನ್ನು ಸರ್ಕಾರ ಮಾಡಿಕೊಟ್ಟರೆ ಸಾಕು.

ಅಯೋಧ್ಯೆ ಹಲವಾರು ವರ್ಷಗಳ ಕಾಲ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಭದ್ರತೆಯ ವಿಚಾರವಾಗಿ ಟ್ರಸ್ಟ್ ಹಾಗೂ ಸರ್ಕಾರ ಏನು ವ್ಯವಸ್ಥೆ ಮಾಡಿಕೊಂಡಿದೆ?
✅ ಅನೇಕ ವರ್ಷಗಳಿಂದ ಅಯೋಧ್ಯೆಯಲ್ಲಿ ಸುಮಾರು 2500ಕ್ಕೂ ಅಧಿಕ ಪೊಲೀಸರು ನಿಯೋಜನೆಗೊಂಡಿದ್ದಾರೆ. ಅಯೋಧ್ಯೆಯಲ್ಲಿ ಯೆಲ್ಲೋ ಝೋನ್, ರೆಡ್ ಝೋನ್ ಎಂದು ಗುರುತಿಸಲಾಗಿದೆ. ಹೀಗಾಗಿ, ನಮ್ಮ ಪರಿಸರದ ಸುತ್ತಲೂ ಪೊಲೀಸ್ ವ್ಯವಸ್ಥೆ ಇದೆ. ಯಾವುದೇ ವಾಹನ ಪೊಲೀಸ್ ಅನುಮತಿ ಇಲ್ಲದೇ ದೇವಸ್ಥಾನಕ್ಕೆ ಬರುವ ಹಾಗಿಲ್ಲ. ಹೊರಗಡೆಯಿಂದ ಬರುವ ಎಲ್ಲ ವಾಹನಗಳೂ ತಪಾಸಣೆಗೆ ಒಳಗಾದ ನಂತರವಷ್ಟೇ ಒಳಕ್ಕೆ ಬರಲಿದೆ. ದೇವಸ್ಥಾನ ಇರುವ 70 ಎಕರೆ ಪ್ರದೇಶದ ಒಳಗೆ ಪ್ರವೇಶ ಪಡೆಯಬೇಕು ಅಂದರೆ ಮೊಬೈಲ್, ಪೆನ್‌ ತರೋದಕ್ಕೂ ಅವಕಾಶ ಇಲ್ಲ. ಯಾವುದೇ ಎಲೆಕ್ಟ್ರಾನಿಕ್ ವಸ್ತು ತರುವ ಹಾಗಿಲ್ಲ. ಹೂವನ್ನೂ ತರುವ ಹಾಗಿಲ್ಲ. ಅಭೂತಪೂರ್ವ ಭದ್ರತೆ ಇರಲಿದೆ.

ದೇವಸ್ಥಾನ ನಿರ್ಮಾಣ ಆದ ನಂತರ ನಿರ್ವಹಣೆಯ ಉಸ್ತುವಾರಿ ಯಾರದ್ದು? ವಿಶ್ವ ಹಿಂದೂ ಪರಿಷತ್ ಹಾಗು ಆರ್‌ಎಸ್‌ಎಸ್‌ನ ಪಾತ್ರ ಕೂಡ ನಿರ್ವಹಣೆಯಲ್ಲಿ ಇರಲಿದೆಯಾ? ಸರ್ಕಾರದ ಪಾತ್ರ ಏನಿರುತ್ತದೆ?
✅ ಸರ್ಕಾರ ಸುರಕ್ಷಾ ವ್ಯವಸ್ಥೆ ಮತ್ತು ಸಂಚಾರದ ವ್ಯವಸ್ಥೆ ಮಾಡುತ್ತದೆ. ದೇವಾಲಯದ ಹೊರಗಿನ ಕೆಲಸಗಳನ್ನು ಸರ್ಕಾರ ಮಾಡಲಿದೆ. ಒಳಗಿನ ಎಲ್ಲ ವ್ಯವಸ್ಥೆಗಳನ್ನು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೋಡಿಕೊಳ್ಳುತ್ತದೆ. ಅದರಲ್ಲಿ ಸಂಘದವರೂ ಇದ್ದಾರೆ, ಹೊರಗಿನವರೂ ಇದ್ದಾರೆ. ಈಗ ಟ್ರಸ್ಟ್‌ನಲ್ಲಿ 15 ಜನರಿದ್ದಾರೆ. ಅದರಲ್ಲಿ 3 ಜನ ಸರ್ಕಾರಿ ಅಧಿಕಾರಿಗಳಿದ್ದಾರೆ. ಅವರಿಗೆ ಮತದಾನದ ಅಧಿಕಾರ ಇಲ್ಲ. ದೇವಸ್ಥಾನದ ನಿರ್ವಹಣೆಗೆ ಮ್ಯಾನೇಜ್‌ಮೆಂಟ್ ಕಮಿಟಿ ಇರುತ್ತದೆ. ವಿಶ್ವ ಹಿಂದೂ ಪರಿಷತ್ ಹಾಗೂ ಆರ್‌ಎಸ್ಎಸ್ ನೇರ ಪಾತ್ರ ನಿರ್ವಹಣೆಯಲ್ಲಿ ಇರೋದಿಲ್ಲ. ಆದ್ರೆ ಈ ಸಂಘಟನೆಗಳ ಸಹಕಾರ ಇದ್ದೇ ಇರುತ್ತದೆ.

ಮಂದಿರ ನಿರ್ಮಾಣ ಕಾರ್ಯದಲ್ಲಿ ಹಿನ್ನಡೆಯಾದ ಸಂದರ್ಭವೇನಾದ್ರೂ ಇತ್ತಾ?
✅ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಮ್ಮ ಒಳಗಿನ ಸಮಸ್ಯೆಯಿಂದ ಕೆಲಸಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ ಬೇರೆ ಬೇರೆಯವರು ಸಣ್ಣಪುಟ್ಟ ವಿವಾದಗಳನ್ನು ಬೇರೆ ಬೇರೆ ಕಾರಣಕ್ಕಾಗಿ ಸೃಷ್ಟಿ ಮಾಡ್ತಾ ಇರ್ತಾರೆ. ಅದೆಲ್ಲವೂ ಕ್ಷಣಿಕವಷ್ಟೇ. ಚುನಾವಣೆ ಬಂದಾಗ ಸೃಷ್ಟಿ ಮಾಡ್ತಾರೆ. ಒಂದು ಸಂದರ್ಭದಲ್ಲಿ ನಮ್ಮ ಮೇಲೂ ಜಾಗದ ವಿಚಾರವಾಗಿ ಆರೋಪ ಕೇಳಿಬಂತು. ಆದ್ರೆ, ನಾವೆಲ್ಲ ರೀತಿಯಿಂದಲೂ ಶುದ್ಧವಿರೋದ್ರಿಂದ ಸಮಸ್ಯೆ ಆಗಿಲ್ಲ. ನಮ್ಮದು ಬಹಳ ಪಾರದರ್ಶಕ ವ್ಯವಹಾರವಾಗಿದೆ. ನಮ್ಮ ಬಳಿ ಚೆಕ್‌ಬುಕ್ ಅಕೌಂಟ್ ಕೂಡ ಇಲ್ಲ. ಚೆಕ್‌ಬುಕ್ ರಹಿತ ಅಕೌಂಟ್‌ ಬಳಸುತ್ತಿದ್ದೇವೆ. ಅಂದರೆ ನಮ್ಮ ಕಾರ್ಯದರ್ಶಿ ಬ್ಯಾಂಕ್‌ಗೆ ಹೋಗಿ ಸಹಿ ಹಾಕಿದರೆ ಮಾತ್ರ ಬ್ಯಾಂಕ್‌ನಿಂದ ಹಣ ಹೊರಹೋಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ನಾವು ಫಿಸಿಕಲ್ ಟ್ರಾನ್ಸಾಕ್ಷನ್ ಕೂಡ ಮಾಡ್ತಿಲ್ಲ. ಜಿಎಸ್‌ಟಿ ಕಟ್ಟದೇ ಯಾವುದೇ ವ್ಯವಹಾರವನ್ನೂ ಮಾಡಿಲ್ಲ. ಇಡೀ ದೇಶ ನಮ್ಮನ್ನು ನೋಡುತ್ತಿದೆ. ನಾವು ಎಚ್ಚರಿಕೆಯಿಂದ, ನ್ಯಾಯಸಮ್ಮತವಾಗಿ, ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ.

೨೦೨೨ರ ಜೂನ್‌ ೧ರಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು ಗರ್ಭಗುಡಿಗೆ ಶಂಕುಸ್ಥಾಪನೆ ನೆರವೇರಿಸಿದ ಕ್ಷಣ

ಸ್ವರ್ಣ ಕಳಶ ಸ್ಥಾಪನೆ ಹೊಣೆಯನ್ನು ಕರ್ನಾಟಕಕ್ಕೆ ನೀಡಬೇಕೆಂಬ ಕೋರಿಕೆ ಇದೆ. ಇದರ ಬಗ್ಗೆ ನಿರ್ಣಯವಾಗಿದೆಯಾ?
✅ ಸ್ವರ್ಣ ಕಳಶ ನಿರ್ಮಿಸುವ ವಿಚಾರವನ್ನು ಟ್ರಸ್ಟ್‌ನಲ್ಲಿ ಪೇಜಾವರ ಸ್ವಾಮಿಗಳು ಇಟ್ಟಿದ್ದಾರೆ. ಟ್ರಸ್ಟ್ ಇದಕ್ಕೆ ಒಪ್ಪಿದೆ. ಸ್ವರ್ಣ ಕಳಶ ನಿಶ್ಚಿತ. ಟ್ರಸ್ಟ್‌ನಲ್ಲಿ ಈಗ ಕಳಶದ ವಿಚಾರವಾಗಿ ಪರಾಮರ್ಶೆ ನಡೆಯುತ್ತಿದೆ. ಶಿಖರ ನಿರ್ಮಾಣವಾಗೋದೇ 2024ರ ಆಗಸ್ಟ್ ವೇಳೆಗೆ. ಇನ್ನೂ 2 ವರ್ಷಗಳು ಇರುವುದರಿಂದ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ.

ಅಯೋಧ್ಯೆ ರಾಮ ಮಂದಿರಕ್ಕೂ ಕರ್ನಾಟಕಕ್ಕೂ ಇರುವ ವಿಶಿಷ್ಟ ನಂಟೇನು?
✅ ರಾಜ್ಯದ ಪ್ರತಿನಿಧಿಯಾಗಿ ನಾನು ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕರ್ನಾಟಕದಿಂದ ಬಂದ ಗ್ರಾನೈಟ್ ಕಲ್ಲುಗಳನ್ನು ದೇವಾಲಯಕ್ಕೆ ಬಳಸಲಾಗಿದೆ. ಅದರಲ್ಲೂ ರಾಮಮಂದಿರದ ಬುನಾದಿಯನ್ನು ಕರ್ನಾಟಕದ ಕಲ್ಲುಗಳಿಂದಲೇ ಹಾಕಲಾಗಿದೆ. ರಾಜ್ಯದವರೇ ಆದ ಪೇಜಾವರ ಸ್ವಾಮಿಗಳು ಟ್ರಸ್ಟಿಯಾಗಿದ್ದಾರೆ. ಹಾಗಾಗಿ ರಾಮ ಮಂದಿರ ನಿರ್ಮಾಣ ಇತಿಹಾಸದಲ್ಲಿ ಕರ್ನಾಟಕದ ಹೆಸರೂ ಅಚ್ಚಳಿಯದೇ ಉಳಿಯಲಿದೆ.

ಇದನ್ನೂ ಓದಿ | Ayodhya Ram Temple | ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 1,800 ಕೋಟಿ ರೂ. ವೆಚ್ಚ

Exit mobile version