ಬೆಂಗಳೂರು: ಸ್ವಾಮಿ ವಿವೇಕಾನಂದರ 160ನೇ ಜನ್ಮ ದಿನಾಚರಣೆ (Vivekananda Jayanti 2023) ಅಂಗವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ನಿಮ್ಮ ನೆಚ್ಚಿನ ಸುದ್ದಿ ಸಂಸ್ಥೆ ವಿಸ್ತಾರ ನ್ಯೂಸ್ ಶುಕ್ರವಾರ ಏರ್ಪಡಿಸಿದ್ದ “ವಿವೇಕ ವಂದನೆʼʼ ಕಾರ್ಯಕ್ರಮದಲ್ಲಿ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತೀ ಅವರು ವಿವೇಕ ಶಪಥ ಬೋಧಿಸಿದರು.
ವಿಧಾನ ಸೌಧದ ಮುಂಭಾಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ ಸಿ ನಾಗೇಶ್, ಸಚಿವರಾದ ಮುರುಗೇಶ್ ನಿರಾಣಿ, ಬಿ. ಶ್ರೀರಾಮುಲು ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರು ಹಾಗೂ ವಿದ್ಯಾರ್ಥಿಗಳು “ವಿವೇಕ ಶಪಥʼʼ ಸ್ವೀಕರಿಸಿದರು.
ಸ್ವಾಮಿ ವೀರೇಶಾನಂದ ಸರಸ್ವತೀ ಅವರು ಬೋಧಿಸಿದ ಶಪಥ ಹೀಗಿದೆ;
- ನಾನು ಶೀಲವೇ ನನ್ನ ಪರಮಶಕ್ತಿ ಎಂದು ಅರಿತು ಉತ್ತಮ ಚಾರಿತ್ರ್ಯವಂತನಾಗುತ್ತೇನೆ.
- ನನ್ನ ಗುರುಹಿರಿಯರು ಹಾಗೂ ಪರಂಪರೆ ತೋರಿದ ಅತ್ಯುನ್ನತ ಆದರ್ಶದೆಡೆ ಆತ್ಮವಿಶ್ವಾಸ, ಏಕಾಗ್ರತೆ ಹಾಗೂ ನಿರ್ಭೀತಿಯಿಂದ ಋಜುಮಾರ್ಗದಲ್ಲಿ ಜವಾಬ್ದಾರಿಯುತನಾಗಿ ಮುನ್ನಡೆಯುತ್ತೇನೆ.
- ಸಕಲರೊಂದಿಗೂ ಸೌಜನ್ಯದಿಂದ ವರ್ತಿಸುತ್ತೇನೆ.
- ಜೀವನೋಪಾಯಕ್ಕಾಗಿ ಯಾವುದೇ ವೃತ್ತಿಯನ್ನು ಕೈಗೊಂಡರೂ ನಿಷ್ಠೆಯಿಂದ ಅದನ್ನು ನಿರ್ವಹಿಸುವುದರ ಮೂಲಕ ನನ್ನ ತಾಯ್ನಾಡಿನ ಗೌರವವನ್ನು ಎತ್ತಿ ಹಿಡಿಯುತ್ತೇನೆ.
- ನನಗೆ ಸಕಲವನ್ನೂ ನೀಡಿದ ನನ್ನ ತಾಯ್ನಾಡಿನ ಗೌರವಕ್ಕೆ ಯಾರಿಂದಲೂ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನನ್ನ ಆದ್ಯಕರ್ತವ್ಯವೆಂದು ತಿಳಿದಿದ್ದೇನೆ.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಸ್ವಾಮಿ ವೀರೇಶಾನಂದ ಸರಸ್ವತೀ ಅವರು ಮಕ್ಕಳಿಗೆ ವಿವೇಕಾನಂದರ ವಿವೇಕದ ಹೇಳಿಕೆಯೊಂದನ್ನು ಕೂಡ ಈ ಸಂದರ್ಭದಲ್ಲಿ ಬೋಧಿಸಿದರು. ಆ ಹೇಳಿಕೆ ಹೀಗಿದೆ;
“ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ. ಶಕ್ತಿಯೇ ಆನಂದ, ಶಕ್ತಿಯೇ ಅಮೃತ, ಅದೊಂದೇ ಶಾಶ್ವತ. ದೌರ್ಬಲ್ಯವು ಮರಣವೇ ಸರಿ. ಜನ ಹೇಳುತ್ತಾರೆ, ಅವನನ್ನು ನಂಬು, ಇವನನ್ನು ನಂಬು ಎಂದು. ಆದರೆ ಆದರೆ ನಾನು ಹೆಳುತ್ತೇನೆ. ಮೊದಲು ನಿನ್ನನ್ನು ನೀನು ನಂಬು. ನಿನಗೆ ೩೩ ಕೋಟಿ ದೇವರುಗಳಲ್ಲಿ ನಂಬಿಕೆ ಇದ್ದು, ಪಾಶ್ಚಿತ್ಯರಿಂದ ಎರವಲು ಪಡೆದ ದೇವರುಗಳಲ್ಲಿಯೂ ನಂಬಿಕೆ ಇದ್ದು, ನಿನ್ನಲ್ಲಿ ನಿನಗೆ ನಂಬಿಕೆ ಇರದಿದ್ದರೆ ನೀನು ಏನನ್ನೂ ಸಾಧಿಸಲಾರೆ. ಹಳೆಯ ವೇದಂತ ಹೇಳುತ್ತದೆ, ಯಾರಿಗೆ ದೇವರಲ್ಲಿ ನಂಬಿಕೆ ಇದೆಯೋ ಅವನು ಆಸ್ತಿಕ, ಯಾರಿಗೆ ದೇವರಲ್ಲಿ ನಂಬಿಕೆ ಇಲ್ಲವೋ ಅವನು ನಾಸ್ತಿಕ ಎಂದು. ಆದರೆ ನಾನು ಹೇಳುತ್ತೇನೆ. ಯಾರಿಗೆ ದೇವರಲ್ಲಿ ನಂಬಿಕೆ ಇದ್ದೂ ತನ್ನಲ್ಲಿ ತನಗೆ ನಂಬಿಕೆ ಇಲ್ಲದಿದ್ದರೆ ಅವನು ನಾಸ್ತಿಕʼʼ
ಇದನ್ನೂ ಓದಿ | Vivekananda Jayanti | ನಿಮ್ಮ ಮೇಲೆ ನಂಬಿಕೆಯಿದ್ದರೆ ಮಾತ್ರವೇ ಬದಲಾವಣೆ ಸಾಧ್ಯ: ವಿದ್ಯಾರ್ಥಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಕರೆ