ಡಾ. ಡಿ.ಸಿ. ರಾಮಚಂದ್ರ
ವಿವೇಕಾನಂದರು ವಿಶ್ವಮಾನ್ಯರಾಗಿ ಹೊರಹೊಮ್ಮಿದ್ದರ ಹಿಂದೆ ಗುರು ರಾಮಕೃಷ್ಣ ಪರಮಹಂಸರ ಪ್ರಭಾವ ಎಷ್ಟಿದೆಯೋ ಅವರ ತಾಯಿಯ ಬಯಕೆಯೂ, ಪ್ರಭಾವವೂ ಅಷ್ಟೇ ಇತ್ತು. ವಿವೇಕಾನಂದರ ತಾಯಿ ಭುವನೇಶ್ವರಿ ಅವರ ಪ್ರಭಾವವಂತೂ ವಿವೇಕಾನಂದರ ಮೇಲೆ ತುಸು ಹೆಚ್ಚೇ ಇತ್ತು. ಬಾಲ್ಯದಲ್ಲಿ ನರೇಂದ್ರ ನಾಥದತ್ತ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ವಿವೇಕಾನಂದರಿಗೆ ತಾಯಿ ಭುವನೇಶ್ವರಿ ನರೇಂದ್ರನ ಬಾಲ್ಯದ ಬದುಕ ತಿದ್ದಿ, ತೀಡಿ ವಿಶ್ವ ವಿಜೇತನನ್ನಾಗಿಸಿದ ಘಟನೆಗಳು ಮಧುರಾತಿ ಮಧುರ!
ರಾಮಾಯಣ, ಮಹಾಭಾರತ, ಭಗವದ್ಗೀತೆ ಧರ್ಮಗಂಥಗಳನ್ನು ಹಿಡಿದು ಬಾಲ್ಯದಲ್ಲೇ ಬಾಲ ನರೇಂದ್ರನಿಗೆ ಧರ್ಮವ ಬಿತ್ತಿದ ಪ್ರಸಂಗಗಳೇ ಇಂದು ನಮ್ಮ ದೇಶ ಒಬ್ಬ ವಿವೇಕಾನಂದನನ್ನು ಸೂರ್ಯ-ಚಂದ್ರರಿರುವವರೆಗೂ ನೆನಪಿಸಿಕೊಳ್ಳಲು ಸಾಧ್ಯವಾಗುವಂತೆ ಮಾಡಿದೆ ಅಲ್ಲವೇ?
ನಾನು ಸಾರಥಿಯಾಗುವೆ
ನರೇಂದ್ರರ ತಂದೆ ವಿಶ್ವನಾಥ ದತ್ತರು ಕೊಲ್ಕತ್ತಾದಲ್ಲಿ ಖ್ಯಾತ ವಕೀಲರಾಗಿದ್ದವರು. ಮಗ ನರೇಂದ್ರನೂ ಕೂಡ ತಮ್ಮಂತೆಯೇ ವಕೀಲನಾಗ ಬೇಕೆಂದು ಆಸೆಪಟ್ಟಿದ್ದವರು, ಆದರೆ ಆ ಹುಡುಗನ ಆಸೆ ಬೇರೆಯದ್ದೇ ಆಗಿತ್ತು. ಆಗಿನ ಕಾಲದಲ್ಲಿ ಬ್ರಿಟೀಷ್ ಅಧಿಕಾರಿಗಳು, ಪ್ರಖ್ಯಾತರು, ಜಮೀನ್ದಾರರು ಎಲ್ಲರೂ ಸಾರೋಟಿನಲ್ಲಿ ಓಡಾಡುತ್ತಿದ್ದರು.
ಸಾರೋಟಿನಲ್ಲಿ ಪ್ರಯಾಣಿಸುವುದು ಗೌರವದ ವಿಷಯವಾಗಿದ್ದ ದಿನವದು. ಆ ಪುಟ್ಟ ಹುಡುಗ ಕುದುರೆ ಸಾರೋಟನ್ನು ನೋಡಿ-ನೋಡಿ ಅಂದೇ ಅವನ ಮನಸ್ಸಿಗೆ ಬಂದಿತ್ತು. ನಾನೊಬ್ಬ ಸಾರಥಿ ಯಾಗಬೇಕೆಂದು. ಅದೊಂದು ದಿನ ಒಮ್ಮೆ ಮನೆಗೆ ಬಂದ ಅತಿಥಿಗಳ ಮುಂದೆ ನರೇಂದ್ರರತಂದೆ ವಿಶ್ವನಾಥರು ‘ದೊಡ್ಡವನಾಗಿ ಏನಾಗಬೇಕೆಂದುಕೊಂಡಿದ್ದೀಯ ಮಗೂ?’ ಎಂದು ಕೇಳಿಯೇ ಬಿಟ್ಟರು. ‘ಸಾರೋಟಿನ ಚಾಲಕ ಆಗಬೇಕೆಂದಿದ್ದೇನೆ’ ಎಂದ ಬಾಲಕ ನರೇಂದ್ರ…! ಮಗನ ಉತ್ತರ ಕೇಳಿ ಸಿಟ್ಟು ನೆತ್ತಿಗೆ ಹತ್ತಿದ ವಿಶ್ವನಾಥರು, ನರೇಂದ್ರನಿಗೆ ಕೆನ್ನೆಗೆ ಬಾರಿಸಿದರು. ನರೇಂದ್ರ ಅಳುತ್ತಾ ಓಡಿ ಅಮ್ಮ ಭುವನೇಶ್ವರಿ ಬಳಿ ಹೋಗಿ ನಡೆದ ಘಟನೆ ಹೇಳಿದ.
ಶಾಂತವಾಗಿ ಕೇಳಿಸಿಕೊಂಡ ಭುವನೇಶ್ವರಿ, ಗೋಡೆಯ ಮೇಲೆ ತೂಗು ಹಾಕಲಾಗಿದ್ದ ಶೀಕೃಷ್ಣ ಅರ್ಜುನನ್ನು ಕೂರಿಸಿಕೊಂಡು ಸಾರೋಟು ಓಡಿಸುತ್ತಿದ್ದ ಚಿತ್ರ ತೋರಿಸಿ, ‘ಮಗು ಸಾರೋಟು ಓಡಿಸುವುದು ಕೆಟ್ಟ ಉದ್ಯೋಗವಲ್ಲ, ಆದರೆನೀನು ಓಡಿಸಬೇಕಾದುದು ಜನರು ಓಡಾಡುವ ರಥವನ್ನಲ್ಲ, ಬದಲಿಗೆ ಧರ್ಮದ ಸಾರೋಟನ್ನು’ ಎಂದ, ಆ ತಾಯಿಯ ಮಾತು ನರೇಂದ್ರನಬದುಕಿನ ದಿಕ್ಕನ್ನೇ ಬದಲಿಸಿತೆಂದರೆ ಆ ಮಾತಿನ ಶಕ್ತಿ ಅಂತಹದಾಗಿತ್ತು.
ಅಮ್ಮ ಹೇಳಿದ ಮಾತು ನರೇಂದ್ರರ ಮನದಲ್ಲಿ ಅಚ್ಚೊತ್ತಿತು. ಅಂತೆಯೇ ತಂದೆ ವಿಶ್ವನಾಥರಿಗೂ ತಮ್ಮ ತಪ್ಪಿನ ಅರಿವಾಯಿತು. ಶ್ರೀಕೃಷ್ಣನೇ ಮಾಡಿದ ಸಾರೋಟು ಚಾಲಕನ ಉದ್ಯೋಗವನ್ನು ನಾನು ನೀಚನೆಂಬಂತೆ ಕಂಡೆ ಎಂದು ಬೇಸರಿಸಿಕೊಂಡು, ಮಗ ನರೇಂದ್ರ ನನ್ನು ಮುದ್ದಿಸಿದರು.
ದೇವರನ್ನು ಕಾಣಬೇಕು ಎಂದು ಹುಚ್ಚನಂತೆ ಅಲೆಯುತ್ತಾ ಚಿಕ್ಕಂದಿನಲ್ಲೇ ತಪಸ್ಸಿಗೆ ಕುಳಿತ ವಿವೇಕಾನಂದರು ತದೇಕ ಚಿತ್ತದಿಂದ ಧ್ಯಾನಮಗ್ನನಾಗಿ ಆಧ್ಯಾತ್ಮ ಶಕ್ತಿಯನ್ನು ಹುಡುಕುತ್ತಾ ಕುಂತ ಬಾಲಕನೆದುರಿಗೆ ಸರ್ಪ ಬಂದರು ಅರಿವಿಲ್ಲದೆ ಧ್ಯಾನ ಮಗ್ನನಾಗಿ ಕುಳಿತಿದ್ದ ಆ ಬಾಲಕ ಮುಂದೊಂದು ದಿನ ಭಾರತ ಭೂಶಿರ ಕನ್ಯಾಕುಮಾರಿಯ ಸಾಗರದಲೆಗಳ ಬಂಡೆಯ ಮೇಲೆ ತುತ್ತತುದಿಯಲ್ಲಿ ಕುಳಿತು ದೇಶ ಹಾಗೂ ವಿಶ್ವಶಾಂತಿಗಾಗಿ ಧ್ಯಾನ ಮಗ್ನರಾಗಿ ಕುಂತರಲ್ಲಾ ನಮ್ಮ ವಿವೇಕಾನಂದರ ತತ್ವ-ಸಿದ್ಧಾಂತಗಳು ಮಹಾಭಾರತದ ಶ್ರೀ ಕೃಷ್ಣ ಪರಮಾತ್ಮನ ಮಾದರಿಯಲ್ಲಿಯೇ ಇಂದಿಗೂ ಸುಭಾಷಿತ ನುಡಿಗಳಾಗಿ ಜನಮಾನಸದಲ್ಲಿ ಅನುಕರಣೀಯವಾಗಿರುವುದು.
ಅವರು ಎಳೆ ವಯಸ್ಸಿನಲ್ಲಿ ಅವರ ತಾಯಿಯಿಂದ ಪಡೆದ ಧರ್ಮೋಪದೇಶ ನಮ್ಮ ದೇಶದ ಸಂಸ್ಕೃತಿ ಕಾಪಾಡಲೆಂದು ಜನ್ಮವಿತ್ತ ಭಾರತ ಮಾತೆಯ ಹೆಮ್ಮೆಯ ಪುತ್ರ ನಮ್ಮ ವಿವೇಕಾನಂದರಲ್ಲವೇ? ಅವರ ಚರಿತ್ರೆಯನ್ನು ಮತ್ತಷ್ಟು ಓದಿದರು ಅದೊಂದು ಮುಗಿಯದ ಪುಸ್ತಕ.
ಇದನ್ನೂ ಓದಿ | Vivekananda Jayanti 2023 | ವಿವೇಕಾನಂದ ಜಯಂತಿ ಅಂಗವಾಗಿ ಜ.13ರಂದು ವಿಸ್ತಾರ ನ್ಯೂಸ್‌ನಿಂದ ವಿವೇಕ ವಂದನೆ ಕಾರ್ಯಕ್ರಮ