Site icon Vistara News

Ram Mandir : ಮಂದಿರ ಉದ್ಘಾಟನೆಗೆ ಅನುಷ್ಠಾನ ಸ್ವೀಕರಿಸಿದ ಪ್ರಧಾನಿ ಮೋದಿ; ಏನಿದು ಕಠಿಣ ಅಧ್ಯಾತ್ಮ ಸಾಧನೆ?

Narendra modi

ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ವಿಶ್ವಾದ್ಯಂತದ ಕೊಟ್ಯಂತರ ಹಿಂದೂಗಳು ಅದರಲ್ಲೂ ವಿಶೇಷವಾಗಿ ರಾಮಭಕ್ತರು ಈ ಅಭೂತಪೂರ್ವ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ವಿಶೇಷ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳಲಿದ್ದು, ಅದಕ್ಕಾಗಿ ಅವರು ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದ್ದಾರೆ. ಅಂತೆಯೇ ಅವರು ಶುಕ್ರವಾರ (ಜನವರಿ 12) ಉದ್ಘಾಟನೆ ಕುರಿತು ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ 11 ದಿನಗಳ ಕಾಲ ವಿಶೇಷ ಧಾರ್ಮಿಕ ಅನುಷ್ಠಾನ ಸ್ವೀಕರಿಸಿರುವುದಾಗಿ ಅವರು ಹೇಳಿದ್ದಾರೆ. ಇದೊಂದು ಅಪರೂಪದ ಕ್ಷಣ ಹಾಗೂ ಜೀವನದ ಸಾರ್ಥಕ್ಯ ಸಂದರ್ಭವೆಂದು ಬಣ್ಣಿಸಿದ್ದಾರೆ. ಹಾಗಾದರೆ, ಮೋದಿ ಕೈಗೊಂಡಿರುವ ಅನುಷ್ಠಾನವೇನು? ಈ ಪ್ರಕ್ರಿಯೆಯ ಮಹತ್ವವೇನು ಎಂಬ ಮಾಹಿತಿ ಇಲ್ಲಿದೆ.

ಅನುಷ್ಠಾನ ಎಂದರೇನು?

ಅನುಷ್ಠಾನವೇನು?

ಸನಾತನ ಸಂಪ್ರದಾಯಗಳಲ್ಲಿ ಅನುಷ್ಠಾನಕ್ಕೆ ವಿಶೇಷ ಮಹತ್ವವಿದೆ. ಧಾರ್ಮಿಕ ವಿಧಿ ವಿಧಾನಗಳನ್ನು ದೃಢ ಮನಸ್ಸಿನಿಂದ ಕೈಗೊಳ್ಳುವುದನ್ನೇ ಅನುಷ್ಠಾನ ಎನ್ನಲಾಗುತ್ತದೆ. ದೇವರ ಕಾರ್ಯಗಳನ್ನು ಮಾಡುವ ಮೊದಲು ದೃಢ ನಿಶ್ಚಯದೊಂದಿಗೆ ಹಲವಾರು ವಿಧಾನಗಳನ್ನು ಪಾಲಿಸುವುದೇ ಈ ಅನುಷ್ಠಾನ. ಪ್ರಮುಖವಾಗಿ ಅವರು ಲೌಖಿಕ ಸುಖ, ಭೋಗಗಳಿಂದ ಮುಕ್ತರಾಗಬೇಕು ಹಾಗೂ ದೇವರಿಗೆ ಹತ್ತಿರವಾಗಬೇಕು.

ನೆಲದ ಮೇಲೆ ಮಲಗುವುದು, ದೇವರ ಪ್ರಾರ್ಥನೆಗೇ ದಿನವನ್ನು ಮೀಸಲಿಡುವುದು. ಅದಕ್ಕಾಗಿ ಬೇಗನೆ ಎದ್ದೇಳುವುದು, ಜಪ ಮತ್ತು ಧ್ಯಾನ ಮಾಡುವುದು, ಶಾಂತವಾಗಿರುವುದು, ಮೌನವಾಗಿರುವುದು, ಕಡಿಮೆ ಮತ್ತು ಕನಿಷ್ಠ ಪ್ರಮಾಣದ ಸಾತ್ವಿಕ ಆಹಾರವನ್ನು ತಿನ್ನುವುದು ಇದರ ಕೆಲವು ನಿಯಮಗಳಾಗಿರುತ್ತದೆ. ಧಾರ್ಮಿಕ ಗ್ರಂಥಗಳನ್ನು ಓದುವ ಮೂಲಕ ದೇಹ ಹಾಗೂ ಮನಸ್ಸನ್ನು ಏಕಕಾಲಕ್ಕೆ ಶುಚಿತ್ವದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಸಾಧು, ಸಂತರು ಇಂಥ ಅನುಷ್ಠಾನಕ್ಕೆ ಒಳಪಡುತ್ತಾರೆ. ದೃಢ ಮನಸ್ಸು ಇದ್ದವರಿಗೆ ಮಾತ್ರ ಇದನ್ನು ಸಾಧಿಸಲು ಸಾಧ್ಯವಿದೆ. ಪ್ರಾಣಪ್ರತಿಷ್ಠೆಯಂಥ ಕಾರ್ಯಗಳಲ್ಲಿ ಅನುಷ್ಠಾನ ಕಡ್ಡಾಯ.

ಅನುಷ್ಠಾನ ಮಾಡಿಕೊಂಡವರು ದೇವರ ಜೊತೆ ನಂಟು ಸಾಧಿಸುವಂಥ ಹಲವು ದೈವಿಕ ಕ್ರಿಯೆಗಳಿಗೆ ಒಳಗಾಗಬೇಕಾಗುತ್ತದೆ. ಪ್ರಾರ್ಥನೆ ವೇಳೆ ಇಷ್ಟ ದೇವರನ್ನು ಸ್ಮರಿಸಬೇಕು. ವೇದ ಪಠಣವೂ ಮಾಡಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಇದರಲ್ಲಿ ಏಕಾಗ್ರತೆ ಅಗತ್ಯ. ಮಿಸುಕಾಡದೇ ಕುಳಿತು ದೇವರ ಧ್ಯಾನ ತಪಗಳನ್ನು ಮಾಡಲೇಬೇಕು.

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಲಿರುವ ಮೋದಿ ರಾಮನ ಜಪವನ್ನೇ ಆರಿಸಿಕೊಳ್ಳಲಿದ್ದಾರೆ. ಶ್ರೀರಾಮನ ಗುಣಗಳನ್ನು ಸ್ಮರಿಸಿಕೊಂಡು ದೇವರಿಗೆ ಹತ್ತಿರವಾಗಲಿದ್ದಾರೆ. ದೇವರ ಸತತ ಜಪದ ಮೂಲಕ ದೇವರನ್ನು ಒಲಿಸಿಕೊಳ್ಳುವುದೇ ಇದರ ಮೂಲ ಉದ್ದೇಶವಾಗಿದೆ.

ಮೋದಿ ಅನುಷ್ಠಾನ ಆರಂಭಿಸಿದ್ದು ಎಲ್ಲಿ?

ನಾಸಿಕ್ ನ ಪಂಚವಟಿ ಪ್ರದೇಶದ ಗೋದಾವರಿ ತಟದಲ್ಲಿರುವ ಶ್ರೀ ಕಾಲ ರಾಮ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಪ್ರಧಾನಿ ಮೋದಿ ಶುಕ್ರವಾರ ತಮ್ಮ ಅನುಷ್ಠಾನ ಪ್ರಾರಂಭಿಸಿದರು. ಬಳಿಕ ಅವರು ರಾಮನ ಭಜನೆಗಳಲ್ಲಿ ಪ್ರಧಾನಿ ಪಾಲ್ಗೊಂಡಿದ್ದಾರೆ. ರಾಮಾಯಣದ ‘ಯುದ್ಧಕಾಂಡ’ ಆಲಿಸಿದ್ದಾರೆ. ಅನುಷ್ಠಾನದ ಭಾಗವಾಗಿ ಅವರು ದೇವಾಲಯದಲ್ಲಿ ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿದ್ದಾರೆ.

ಇದನ್ನೂ ಓದಿ : Narendra Modi: ಭರ್ಜರಿ ರೋಡ್‌ ಶೋ, ಪ್ರಾರ್ಥನೆ, ಭಜನೆ; ನಾಶಿಕ್‌ನಲ್ಲಿ ಮೋದಿ ಹವಾ

ಭಗವಾನ್ ರಾಮ, ಸೀತೆ ಮತ್ತು ಲಕ್ಷ್ಮಣರು ಪಂಚವಟಿ ಪ್ರದೇಶದಲ್ಲಿರುವ ದಂಡಕಾರಣ್ಯ ಅರಣ್ಯದಲ್ಲಿ ಕೆಲವು ವರ್ಷಗಳನ್ನು ಕಳೆದಿದ್ದರಿಂದ ರಾಮಾಯಣದ ಹಲವಾರು ಪ್ರಮುಖ ಘಟನೆಗಳು ಇಲ್ಲಿ ನಡೆದಿವೆ. ಹೀಗಾಗಿ ಪಂಚವಟಿಗೆ ವಿಶೇಷ ಸ್ಥಾನವಿದೆ. ಪಂಚವಟಿ ಎಂದರೆ ಐದು ಆಲದ ಮರಗಳ ಭೂಮಿ ಎಂದರ್ಥ. ಹೀಗಾಗಿ ಮೋದಿ ಇಲ್ಲಿಂದ ಅನುಷ್ಠಾನ ಕೈಗೊಂಡಿದ್ದಾರೆ. ಮುಂದೆ ಮೋದಿ ಅವರು ರಾಮನಿಗೆ ನಿಕಟವಾಗಿರುವ ವಿವಿಧ ಸ್ಥಳಗಳಿಗೆ ಹೋಗಬಹುದು ಎಂದೂ ಹೇಳಲಾಗಿದೆ. ಭಾರತದಲ್ಲಿ ಇಂತಹ ಅನೇಕ ಸ್ಥಳಗಳಿವೆ.

ಅನುಷ್ಠಾನ ಸ್ವೀಕರಿಸಿರುವ ಪ್ರಧಾನಿ ಮೋದಿ 11 ದಿನ ಏನು ಮಾಡಲಿದ್ದಾರೆ?

ಋಷಿ, ಮುನಿಗಳು ಜೀವನ ಪರ್ಯಂತ ಹಲವು ವರ್ಷಗಳ ಕಾಲ ಅನುಷ್ಠಾನ ಮಾಡುತ್ತಾರೆ. ಆದರೆ ಮೋದಿಯವರು ಕೈಗೊಂಡಿರುವುದು ಅಲ್ಪಾವಧಿಯ ಅನುಷ್ಠಾನ. 1 ತಿಂಗಳು, ಏಳು ದಿನ, 11 ದಿನ, 21 ದಿನ. ಹೀಗೆ ಹಲವು ದಿನಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಅನುಷ್ಠಾನ ಸಂಕಲ್ಪ ಕೈಗೊಂಡು ಅದನ್ನು ಜಾರಿಗೆ ತರುವ ಹಂತದಲ್ಲಿ ಹಲವು ಅಡ್ಡಿ ಆತಂಕಗಳು ಎದುರಾಗಬಹುದು. ಅದನ್ನು ಮೀರಿದಷ್ಟು ಪ್ರಾಪ್ತಿ ಹೆಚ್ಚು. ಪ್ರಧಾನಿ ಮೋದಿ ಅವರು 11 ದಿನಗಳ ಕಾಲ ಅನುಷ್ಠಾನ ಕೈಗೊಳ್ಳುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟ ಮಾಡಿರುವ ಹಿನ್ನೆಲೆಯಲ್ಲಿ ವಿಧಿ, ವಿಧಾನಗಳನ್ನು ಹೇಳಲಾಗಿದೆ. ಆದರೆ ಅವರ ಆಯ್ಕೆಗಳ ಬಗ್ಗೆ ಮಾಹಿತಿ ಇಲ್ಲ. ಯಾಕೆಂದರೆ ತಮ್ಮ ಕಾರ್ಯದೊತ್ತಡದ ನಡುವೆಯೂ ಪ್ರಧಾನಿ ಮೋದಿ ಅವರು ಅನುಷ್ಠಾನ ಸ್ವೀಕರಿಸಿದ್ದು ದೊಡ್ಡ ಸಂಗತಿಯೇ ಸರಿ.

Exit mobile version