Site icon Vistara News

ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಆದ ಮೊದಲ ವಿಡಿಯೊ ಯಾವುದು ಗೊತ್ತಾ? ಇಲ್ಲಿದೆ ನೋಡಿ

Youtube Video

ವಿಡಿಯೋ ಶೇರಿಂಗ್‌ ಆ್ಯಪ್‌ ಯೂಟ್ಯೂಬ್‌ ನಮ್ಮ ಜೀವನದ ಒಂದು ಭಾಗವೇ ಆಗಿದೆ ಎಂದರೂ ತಪ್ಪಾಗಲಾರದು. ಸೋಷಿಯಲ್‌ ಮೀಡಿಯಾಗಳ ಸಾಲಿನಲ್ಲಿಯೇ ಈ ಆ್ಯಪ್‌ಗೆ ಇದರದ್ದೇ ಆದ ಒಂದು ವಿಶಿಷ್ಟ ಸ್ಥಾನವಿದೆ. ಅದೆಷ್ಟೋ ಜನ ಯೂಟ್ಯೂಬ್‌ ಚಾನೆಲ್‌ ಕಟ್ಟಿಕೊಂಡು, ವಿಡಿಯೋ ಶೇರ್‌ ಮಾಡಿಯೇ ಹಣವನ್ನೂ ಗಳಿಸುತ್ತಿದ್ದಾರೆ. ಈಗಂತೂ ಬಿಡಿ ಯೂಟ್ಯೂಬ್‌ನಲ್ಲಿ ಕೋಟ್ಯಂತರ ವಿಡಿಯೋಗಳೇ ಇವೆ. ಆದರೆ ನೀವು ಎಂದಾದರೂ ಒಮ್ಮೆಯಾದರೂ ಈ ಯೂಟ್ಯೂಬ್‌ನಲ್ಲಿ ಪೋಸ್ಟ್‌ ಆದ ಅಥವಾ ಅಪ್ಲೋಡ್‌ ಆದ ಮೊಟ್ಟ ಮೊದಲ ವಿಡಿಯೋ ಯಾವುದು ಎಂದು ಯೋಚಿಸಿದ್ದೀರಾ? ಈ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಯೂಟ್ಯೂಬ್‌ ಪ್ರಾರಂಭವಾಗಿದ್ದು 2005ರಲ್ಲಿ. ಜಾವೇದ್‌ ಕರೀಮ್‌, ಸ್ವೀವ್‌ ಚೆನ್‌ ಮತ್ತು ಛಾಡ್‌ ಹರ್ಲಿ ಎಂಬುವರು ಸೇರಿ ಯೂಟ್ಯೂಬ್‌ ಸ್ಥಾಪಿಸಿದರು. ಬಳಿಕ ಅದರಲ್ಲಿ ಮೊಟ್ಟಮೊದಲು ಅಪ್‌ಲೋಡ್‌ ಆದ ವಿಡಿಯೋ ಆನೆಗಳಿಗೆ ಸಂಬಂಧಪಟ್ಟದ್ದು. ಅದು ಯಾವುದು ಎಂಬುದನ್ನು ಈಗ ಯೂಟ್ಯೂಬ್‌ ಇಂಡಿಯಾ ತನ್ನ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಶೇರ್‌ ಮಾಡಿಕೊಂಡಿದೆ. 17 ವರ್ಷಗಳ ಹಿಂದೆ ಯೂಟ್ಯೂಬ್‌ನಲ್ಲಿ ಮೊದಲ ವಿಡಿಯೋ ಅಪ್‌ಲೋಡ್‌ ಮಾಡಿದ್ದು ಸಂಸ್ಥಾಪಕರಲ್ಲಿ ಒಬ್ಬರಾದ ಜಾವೇದ್‌ ಕರೀಮ್‌. San Diego ಪ್ರಾಣಿ ಸಂಗ್ರಹಾಲಯದಲ್ಲಿ ಆನೆಗಳ ಎದುರಲ್ಲಿ ನಿಂತು ಅವರು ಮಾತನಾಡಿದ 19 ಸೆಕೆಂಡ್‌ಗಳ ವಿಡಿಯೋ ಇದು. ಇದರಲ್ಲಿ, ʼನಾವೀಗ ಆನೆಗಳ ಎದುರು ಇದ್ದೇವೆ. ಇವುಗಳಿಗೆ ತುಂಬ ತುಂಬ ಉದ್ದನೆಯ ಸೊಂಡಿಲು ಇದೆ. ಈ ಸೊಂಡಿಲುಗಳಿಂದಾಗಿ ತುಂಬ ಸುಂದರವಾಗಿಯೂ ಕಾಣುತ್ತಿವೆ.ʼ ಎಂದು ಕರೀಮ್‌ ಹೇಳಿದ್ದನ್ನು ಕೇಳಬಹುದು.

ಅಂದು ಯೂಟ್ಯೂಬ್‌ನಲ್ಲಿ ಪೋಸ್ಟ್‌ ಆದ ಈ ವಿಡಿಯೋಕ್ಕೆ 235 ಮಿಲಿಯನ್‌ (23.5 ಕೋಟಿ)ಗೂ ಜಾಸ್ತಿ ವೀವ್ಸ್‌ ಬಂದಿತ್ತು. ಈಗ ಇನ್‌ಸ್ಟಾಗ್ರಾಂನಲ್ಲಿ ಯೂಟ್ಯೂಬ್‌ ಇಂಡಿಯಾ ಶೇರ್‌ ಮಾಡಿಕೊಂಡಿರುವ ಹಳೇ ವಿಡಿಯೋ 168,236 ಕ್ಕೂ ಅಧಿಕ ವೀವ್ಸ್‌ ಕಂಡಿದೆ. ನೆಟ್ಟಿಗರು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ʼಒಹ್‌ ಯೂಟ್ಯೂಬ್‌ನ ಮೊದಲ ವಿಡಿಯೋ ಒಂದು ವ್ಲಾಗ್‌ ಆಗಿತ್ತುʼ ಎಂದು ಒಬ್ಬರು ಹೇಳಿದ್ದರೆ, ಇನ್ನೊಬ್ಬರು, ʼಈ ಯೂಟ್ಯೂಬ್‌ ಎಂಬುದು ಇಂದು ಅನೇಕರ ಬದುಕನ್ನೇ ಬದಲಿಸಿದೆʼ ಎಂದಿದ್ದಾರೆ. ಹಾಗೆ, ಒಂದಷ್ಟು ಜನರು ʼಹೌದು ಈ ವಿಷಯ ನಮಗೆ ಗೊತ್ತಿದೆʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಂಗನಾ ರಣಾವತ್‌ ಹೊಸ ಲಕ್ಷುರಿಯಸ್‌ ಮನೆ ಹೇಗಿದೆ ಗೊತ್ತಾ? ಪೋಟೊಗಳು ವೈರಲ್

Exit mobile version