Site icon Vistara News

Mass Shooting: ತಂದೆಯನ್ನು ಕೊಂದ ಮಗನಿಂದ ಗುಂಡಿನ ದಾಳಿ, 14 ಸಾವು

mass shooting in prague

ಪ್ರಾಗ್‌: ಝೆಕ್‌ ಗಣರಾಜ್ಯದ ರಾಜಧಾನಿ ಪ್ರಾಗ್‌ನ ವಿಶ್ವವಿದ್ಯಾನಿಲಯದಲ್ಲಿ 24 ವರ್ಷದ ವಿದ್ಯಾರ್ಥಿಯೊಬ್ಬ ಹುಚ್ಚಾಪಟ್ಟೆ ಗುಂಡು ಹಾರಾಟ ನಡೆಸಿ (Mass Shooting) 14 ಜನರನ್ನು ಬಲಿ ಪಡೆದಿದ್ದಾನೆ. ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿಗೂ ಮುನ್ನ ಈತ ತನ್ನ ತಂದೆಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ.

25 ಜನರಯ ಗುಂಡಿನ ದಾಳಿಯಲ್ಲಿ ಗಾಯಗೊಂಡರು. ನಂತರ ಈ ದಾಳಿಕೋರನನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ. ಜೆಕ್ ರಿಪಬ್ಲಿಕ್‌ನ ಡೌನ್‌ಟೌನ್ ಪ್ರಾಗ್‌ನಲ್ಲಿರುವ ಚಾರ್ಲ್ಸ್ ವಿಶ್ವವಿದ್ಯಾಲಯದ ಫಿಲಾಸಫಿಕಲ್ ಫ್ಯಾಕಲ್ಟಿಯ ಕಟ್ಟಡದ ಬಳಿ ಈ ಘಟನೆ ನಡೆದಿದೆ.

ಪ್ರೇಗ್‌ನ ಪಶ್ಚಿಮದ ಹೋಸ್ಟೌನ್ ಎಂಬ ಗ್ರಾಮದಲ್ಲಿ ಈ ಬಂದೂಧಾರಿಯ ತಂದೆ ಶವವಾಗಿ ಪತ್ತೆಯಾಗಿದ್ದರು. ಆ ಬಳಿಕ ಈತ ನಾಪತ್ತೆಯಾಗಿದ್ದ. ಈತ ತಂದೆಯನ್ನು ಕೊಂದ ಬಳಿಕ ಹತ್ಯಾಕಾಂಡಕ್ಕಾಗಿ ತೆರಳಿದ್ದಾನೆ ಎಂದು ಶಂಕಿಸಲಾಗಿದೆ. ತಂದೆಯ ಶವ ಪತ್ತೆಯಾದ ಬಳಿಕ ಪೊಲೀಸರು ಈತನಿಗಾಗಿ ಹುಡುಕಾಟ ಆರಂಭಿಸಿದ್ದರು.

ಝೆಕ್ ಗಣರಾಜ್ಯದಲ್ಲಿ ದಶಕಗಳ ಇತಿಹಾಸದಲ್ಲಿ ನಡೆದ ಅತ್ಯಂತ ಬರ್ಬರ ಗುಂಡಿನ ದಾಳಿ ಇದಾಗಿದೆ. ನಗರದ ಐತಿಹಾಸಿಕ ಕೇಂದ್ರದಲ್ಲಿ ನಡೆದ ಈ ಹಿಂಸಾಚಾರದ ಪರಿಣಾಮ ನೂರಾರು ಜನರನ್ನು ಸ್ಥಳಾಂತರಿಸಲಾಯಿತು. ಶಸ್ತ್ರಸಜ್ಜಿತ ಪೊಲೀಸರು ಸ್ಥಳಕ್ಕೆ ಧಾವಿಸಿ ಗುಂಡಿನ ದಾಳಿಗೆ ಪ್ರತ್ಯುತ್ತರ ನೀಡಿದರು. ಜನರಿಗೆ ಮನೆಯೊಳಗೇ ಇರುವಂತೆ ಎಚ್ಚರಿಕೆ ನೀಡಿದರು.

14ನೇ ಶತಮಾನದ ಚಾರ್ಲ್ಸ್ ಸೇತುವೆಯಂತಹ ಪ್ರಮುಖ ಪ್ರವಾಸಿ ತಾಣಗಳ ಬಳಿ ಇರುವ ಚಾರ್ಲ್ಸ್ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ಆರ್ಟ್ಸ್‌ನಲ್ಲಿ ಶೂಟಿಂಗ್ ನಡೆದಿದೆ. “ಈ ಭೀಕರ ಅಪರಾಧದಲ್ಲಿ 14 ಮಂದಿ ಸತ್ತಿದ್ದಾರೆ ಮತ್ತು 25 ಮಂದಿ ಗಾಯಗೊಂಡಿದ್ದಾರೆ. 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ” ಎಂದು ಪೊಲೀಸ್ ಮುಖ್ಯಸ್ಥ ಮಾರ್ಟಿನ್ ವೊಂಡ್ರಾಸೆಕ್ ತಿಳಿಸಿದ್ದಾರೆ.

ಬಲಿಯಾದ ಎಲ್ಲರೂ ವಿಶ್ವವಿದ್ಯಾಲಯದೊಳಗಿನವರೇ ಆಗಿದ್ದು, ಅದರಲ್ಲಿ ಬಹು ಮಂದಿ ಬಂದೂಕುಧಾರಿಯ ಸಹ ವಿದ್ಯಾರ್ಥಿಗಳಾಗಿದ್ದರು. ಗಾಯಗೊಂಡವರಲ್ಲಿ ಒಬ್ಬ ಡಚ್ ಪ್ರಜೆ. ಬಂದೂಕುಧಾರಿ ಸಾಕಷ್ಟು ಗನ್‌ ಹಾಗೂ ಮದ್ದುಗುಂಡುಗಳನ್ನು ಹೊಂದಿದ್ದ ಎಂದು ತಿಳಿದುಬಂದಿದೆ. ತ್ವರಿತ ಪೋಲೀಸ್ ಕ್ರಮದಿಂದಾಗಿ ಇನ್ನಷ್ಟು ಜೀವಹಾನಿ ತಪ್ಪಿದೆ.

ಇದನ್ನೂ ಓದಿ: Germany Shooting: ಜರ್ಮನಿಯಲ್ಲಿ ಬಂದೂಕುಧಾರಿಯ ಗುಂಡಿನ ದಾಳಿ, ಏಳು ಮಂದಿ ಸಾವು

Exit mobile version