Site icon Vistara News

Indian drugs | ಭಾರತದಲ್ಲಿ ತಯಾರಾದ ಔಷಧ ಓವರ್‌ಡೋಸ್‌ನಿಂದ ಉಜ್ಬೆಕಿಸ್ತಾನದಲ್ಲಿ 18 ಮಕ್ಕಳ ಸಾವು

indian drugs

ನವ ದೆಹಲಿ: ಭಾರತದ ಕಂಪನಿಯೊಂದು ತಯಾರಿಸಿರುವ ಸಿರಪ್‌ ಸೇವಿಸಿದ ಬಳಿಕ ಉಜ್ಬೆಕಿಸ್ತಾನದಲ್ಲಿ 18 ಮಕ್ಕಳು ಮೃತಪಟ್ಟಿದ್ದಾರೆ. ಈ ಕುರಿತು ತನಿಖೆಗೆ ಭಾರತ ಸರ್ಕಾರ ಮುಂದಾಗಿದೆ.

ಭಾರತದಲ್ಲಿ ತಯಾರಾದ ಇನ್ನೊಂದು ಕಪ್‌ ಸಿರಪ್‌ ಸೇವಿಸಿದ ಬಳಿಕ ಗ್ಯಾಂಬಿಯಾದಲ್ಲಿ 66 ಮಂದಿ ಮೃತಪಟ್ಟ ಘಟನೆ ಇನ್ನೂ ನೆನಪಿನಲ್ಲಿರುವಾಗಲೇ ಈ ದುರ್ಘಟನೆ ನಡೆದಿದೆ.

ನೋಯಿಡಾ ಮೂಲದ Marion Biotech ಎಂಬ ಕಂಪನಿ ತಯಾರಿಸಿದ Doc-1 Max ಟ್ಯಾಬ್ಲೆಟ್‌ ಹಾಗೂ ಸಿರಪ್‌ ಸೇವಿಸಿದ ಬಳಿಕ ಮಕ್ಕಳು ಅಸ್ಸವ್ಥರಾಗಿ, ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಉಜ್ಬೆಕಿಸ್ತಾನದ ಆರೋಗ್ಯ ಸಚಿವಾಲಯ ದೂರಿದೆ. ಈ ಕುರಿತು ಅಲ್ಲಿನ ಡ್ರಗ್‌ ವಿತರಕರು ಹಾಗೂ ಪ್ರಮಾಣೀಕರಣ ಸಂಸ್ಥೆಯ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ, ಕೇಂದ್ರ ಔಷಧ ನಿಯಂತ್ರಣ ಪ್ರಾಧಿಕಾರವು ಉತ್ತರ ಪ್ರದೇಶದ ಡ್ರಗ್ಸ್ ಲೈಸೆನ್ಸ್‌ ಪ್ರಾಧಿಕಾರದೊಂದಿಗೆ ಸೇರಿ, ಈ ಔಷಧಗಳ ಸ್ಯಾಂಪಲ್‌ಗಳನ್ನು ಪಡೆದು ಪರೀಕ್ಷೆ ನಡೆಸಲು ಮುಂದಾಗಿದೆ.

ಔಷಧವನ್ನು ಪರಿಶೀಲಿಸಿದಾಗ ಅದರಲ್ಲಿ ಅಪಾಯಕಾರಿ ಇಥಿಲೀನ್‌ ಗ್ಲೈಕಾಲ್‌ (ethylene glycol) ಕಂಡುಬಂದಿದೆ. ಸಾಕಷ್ಟು ಸುರಕ್ಷತೆಯಿಲ್ಲದೆ, ಅನಗತ್ಯ ಪ್ರಮಾಣದಲ್ಲಿ ಇದನ್ನು ಬಳಸಿದಾಗ ಮಾರಕವಾಗುತ್ತದೆ ಎನ್ನಲಾಗಿದೆ. ಇದೇ ರಾಸಾಯನಿಕವನ್ನು ಬಳಸಿದ ಔಷಧವನ್ನು ಸೇವಿಸಿದ ಬಳಿಕ ಗ್ಯಾಂಬಿಯಾದಲ್ಲಿ 66 ಮಂದಿಯ ಸಾವು ಉಂಟಾಗಿದ್ದು, ಈ ಕುರಿತು ನೋಯಿಡಾ ಮೂಲದ ಮೈಡೆನ್‌ ಫಾರ್ಮಾ ಎಂಬ ಔಷಧ ತಯಾರಿಕೆ ಸಂಸ್ಥೆಯ ಉತ್ಪನ್ನಗಳ ಪರೀಕ್ಷೆ ನಡೆಸಲಾಗಿತ್ತು.

ಡೈಎಥಿಲೀನ್ ಗ್ಲೈಕಾಲ್ (ಡಿಇಜಿ) ಮತ್ತು ಎಥಿಲೀನ್ ಗ್ಲೈಕಾಲ್ (ಇಜಿ) ಹೆಚ್ಚು ವಿಷಕಾರಿ, ಬಣ್ಣರಹಿತ ರಾಸಾಯನಿಕವಾಗಿದ್ದು ಸಿಹಿ ರುಚಿಯನ್ನು ಹೊಂದಿವೆ. ರೋಗ ನಿಯಂತ್ರಣ ಕೇಂದ್ರದ ಪ್ರಕಾರ, DEG ಮತ್ತು EGಯನ್ನು ಸಾಮಾನ್ಯವಾಗಿ ಗ್ಲಿಸರಿನ್‌ನಲ್ಲಿ ಕಂಡುಬರುತ್ತದೆ. ಇದನ್ನು ಅನೇಕ ಔಷಧೀಯ ಸಿರಪ್‌ಗಳಲ್ಲಿ ಸಿಹಿಕಾರಕವಾಗಿ ಬಳಸಲಾಗುತ್ತದೆ. ಡೈಥಿಲೀನ್ ಗ್ಲೈಕೋಲ್ ಮತ್ತು ಎಥಿಲೀನ್ ಗ್ಲೈಕೋಲ್, ಮೈಡೆನ್ ತಯಾರಿಸಿದ ಮತ್ತು ಗ್ಯಾಂಬಿಯಾಕ್ಕೆ ರಫ್ತು ಮಾಡಿದ ನಾಲ್ಕು ಕೆಮ್ಮು ಸಿರಪ್‌ಗಳಲ್ಲಿ ಕಂಡುಬಂದಿದೆ ಎಂದು ಈ ಕುರಿತು ಕಳವಳ ವ್ಯಕ್ತಪಡಿಸಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.‌

ಇದನ್ನೂ ಓದಿ | Coronavirus | ರೂಪಾಂತರಿ BF.7 ವೈರಸ್‌ ಎಷ್ಟು ಡೇಂಜರ್‌? ಇದರ ಸಂಶೋಧನೆ ನಡೆಯುವುದು ಬೆಂಗಳೂರಿನಲ್ಲಿ!

ಅಕ್ಟೋಬರ್‌ನಲ್ಲಿ ಗ್ಯಾಂಬಿಯಾ ಪ್ರಕರಣದ ಬಳಿಕ WHO ನಾಲ್ಕು ಕೆಮ್ಮಿನ ಸಿರಪ್‌ಗಳ ಕುರಿತು ಎಚ್ಚರಿಕೆ ನೀಡಿತ್ತು- ಪ್ರೊಮೆಥಾಜಿನ್ ಓರಲ್ ಸೊಲ್ಯೂಷನ್, ಕೋಫೆಕ್ಸ್‌ಮಾಲಿನ್ ಬೇಬಿ ಕೆಮ್ಮಿನ ಸಿರಪ್, ಮಾಕೋಫ್ ಬೇಬಿ ಕೆಮ್ಮಿನ ಸಿರಪ್ ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್- ಇವು ಮೈಡೆನ್ ಫಾರ್ಮಾದಿಂದ ತಯಾರಿಸಲ್ಪಟ್ಟಿವೆ ಮತ್ತು ರಫ್ತು ಮಾಡಲಾಗಿದೆ. ಇವುಗಳ ಮಾದರಿಗಳ ಪರೀಕ್ಷೆಯನ್ನು ಭಾರತ ನಡೆಸಿದ್ದು, ಮೈಡೆನ್ ಫಾರ್ಮಾದ ಎಲ್ಲಾ ನಾಲ್ಕು ಸಿರಪ್‌ಗಳು ಸೂಕ್ತ ನಿಯಮಾವಳಿ ಅನುಸರಿಸಿ ತಯಾರಿಸಲಾಗಿದೆ ಎಂದಿತ್ತು.

ಈ ನಡುವೆ, ಔಷಧದ ಓವರ್‌ಡೋಸ್‌ನಿಂದ ಹೀಗಾಗಿದೆ ಎಂದು ಉಜ್ಬೆಕಿಸ್ತಾನದ ಹಲವು ಮಾಧ್ಯಮಗಳು ದೂರಿವೆ. ಈ ಔಷಧಗಳನ್ನು ಯಾವುದೇ ವೈದ್ಯಕೀಯ ಶಿಫಾರಸು ಇಲ್ಲದೆ ಹಲವು ದಿನಗಳ ಕಾಲದ ಅತಿಯಾದ ಪ್ರಮಾಣದಲ್ಲಿ ಮಕ್ಕಳಿಗೆ ನೀಡಲಾಗಿತ್ತು. ಫಾರ್ಮಸಿಸ್ಟ್‌ಗಳ ಸಲಹೆಯಂತೆ ಪೋಷಕರು ಇದನ್ನು ಮಕ್ಕಳಿಗೆ ನೀಡಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ | Domestic tourism | ಕೋವಿಡ್‌ ಪೂರ್ವ ಮಟ್ಟಕ್ಕೆ ಮರಳಿದ ಟೂರಿಸಂ, ಹೋಟೆಲ್‌ ಬುಕಿಂಗ್ಸ್‌ 100% ಏರಿಕೆ

Exit mobile version