ಬೀಜಿಂಗ್: ಕೈತುಂಬ ಸಂಬಳ ಪಡೆದು, ಚೆಂದದೊಂದು ಹುಡುಗಿಯನ್ನು ಮದುವೆಯಾಗಿ ಜೀವನದಲ್ಲಿ ಸೆಟಲ್ ಆಗುವ, ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಲು ಉನ್ನತ ಪರೀಕ್ಷೆ ಬರೆಯುತ್ತೇವೆ. ಹಗಲಿರುಳು ಓದಿ ಪರೀಕ್ಷೆಯಲ್ಲಿ ಪಾಸಾಗುತ್ತೇವೆ. ಆದರೆ, ಚೀನಾದಲ್ಲಿ ಉದ್ಯಮಿಯೊಬ್ಬರ ಬಳಿ ಕೋಟ್ಯಂತರ ರೂಪಾಯಿ ಇದೆ, ಆಳು-ಕಾಳುಗಳೆಲ್ಲ ಇದ್ದಾರೆ, ಓಡಾಡಲು ಕಾರಿದೆ. ಆದರೇನು ಮಾಡುವುದು, ಅವರಿಗೆ ಪರೀಕ್ಷೆಯಲ್ಲಿ ಪಾಸಾಗಲು (Viral News) ಮಾತ್ರ ಆಗುತಿಲ್ಲ.
ಹೌದು, ಚೀನಾದ ಲಿಯಾಂಗ್ ಶಿ ಎಂಬ ವ್ಯಕ್ತಿಯು ಜೀವನದಲ್ಲಿ ಹಣ, ಆಸ್ತಿ, ಗೌರವ… ಎಲ್ಲವನ್ನೂ ಸಂಪಾದಿಸಿದ್ದಾರೆ. ಆದರೆ, ಅವರಿಗೆ ಚೀನಾದ ಪ್ರತಿಷ್ಠಿತ ಗಾವೋಕಾವೋ (Gaokao) (ಭಾರತದ ಜೆಇಇಗೆ ಸಮ) ಪರೀಕ್ಷೆಯಲ್ಲಿ ಮಾತ್ರ ಪಾಸಾಗಲು ಆಗುತ್ತಿಲ್ಲ. 56 ವರ್ಷದ ಇವರು ಇದುವರೆಗೆ 27 ಬಾರಿ ಗಾವೋಕಾವೋ ಪರೀಕ್ಷೆ ಬರೆದಿದ್ದಾರೆ. ಆದರೆ, ಒಂದು ಬಾರಿಯೂ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಬೇಸರದಲ್ಲಿ ಕಾಲ ಕಳೆಯುತ್ತಿದ್ದಾರೆ.
ನಾನೂ ಗಾವೋಕಾವೋ ಪರೀಕ್ಷೆ ಪಾಸಾಗಬೇಕು. ಇದಾದ ಬಳಿಕ ಪ್ರತಿಷ್ಠಿತ ಸಿಚುವನ್ ವಿಶ್ವವಿದ್ಯಾಲಯದಿಂದ ಉನ್ನತ ಪದವಿ ಪಡೆಯಬೇಕು ಎಂಬುದು ಲಿಯಾಂಗ್ ಶಿ ಅವರ ದಶಕಗಳ ಕನಸಾಗಿದೆ. ಆದರೆ, ಗಾವೋಕಾವೋ ಚೀನಾದಲ್ಲಿ ನಡೆಸುವ ಪರೀಕ್ಷೆಗಳಲ್ಲಿಯೇ ಅತಿ ಕಠಿಣ ಎನ್ನಲಾಗುತ್ತಿದೆ. ಇದೇ ಕಾರಣದಿಂದಾಗಿ ಲಿಯಾಂಗ್ ಶಿ ಅವರಿಗೆ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗುತ್ತಿಲ್ಲ. ಕಳೆದ 27 ವರ್ಷಗಳಿಂದ ಸತತವಾಗಿ ಪರೀಕ್ಷೆ ಬರೆದರೂ ಪಾಸ್ ಎಂಬ ಶಬ್ದವೇ ಇವರ ಕಿವಿಗೆ ಬೀಳುತ್ತಿಲ್ಲ.
ಇದನ್ನೂ ಓದಿ: Viral Video: ತಂಡದಿಂದ ಹೊರಬಿದ್ದ ಬೆನ್ನಲ್ಲೇ ಬ್ಯಾಟಿಂಗ್ ಅಭ್ಯಾಸ ನಡೆಸಿದ ಪೂಜಾರ; ವಿಡಿಯೊ ವೈರಲ್
“ಪ್ರತಿ ಬಾರಿ ಪರೀಕ್ಷೆ ಬರೆಯುವಾಗಲೂ ಕಷ್ಟಪಟ್ಟು ಓದುತ್ತೇನೆ. ಹಗಲು-ರಾತ್ರಿ ಎನ್ನದೆ ಅಧ್ಯಯನ ಮಾಡುತ್ತೇನೆ. ಈ ಬಾರಿ ಪಾಸಾಗುತ್ತೇನೆ ಎಂಬ ವಿಶ್ವಾಸದಿಂದಲೇ ಪರೀಕ್ಷೆಗೆ ಹಾಜರಾಗುತ್ತೇನೆ. ಆದರೆ, ಫಲಿತಾಂಶ ಮಾತ್ರ ನಕಾರಾತ್ಮಕವಾಗಿಯೇ ಇರುತ್ತದೆ. ಇದರಿಂದಾಗಿ, ಪ್ರತಿಷ್ಠಿತ ವಿವಿಯಿಂದ ಪದವಿ ಪಡೆಯಬೇಕು ಎಂಬ ಕನಸು ನನಸಾಗುತ್ತಿಲ್ಲ. ಆದರೇನಂತೆ, ನಾನು ಪ್ರಯತ್ನ ನಿಲ್ಲಿಸುವುದಿಲ್ಲ. ಮುಂದಿನ ವರ್ಷ ಮತ್ತೆ ಪರೀಕ್ಷೆ ಬರೆಯುತ್ತೇನೆ. ಒಂದಲ್ಲ ಒಂದು ದಿನ ಪಾಸಾಗಿ, ಪದವಿ ಗಳಿಸುತ್ತೇನೆ” ಎಂದು ಹೇಳುತ್ತಾರೆ ಲಿಯಾಂಗ್ ಶಿ. ಹಣ, ಆಸ್ತಿ, ಐಷಾರಾಮಿ ಸೌಕರ್ಯಗಳಿದ್ದರೂ ಪದವಿಗಾಗಿ ಪ್ರಯತ್ನಿಸುತ್ತಿರುವ ಈ ಉದ್ಯಮಿಗೆ ನಿಮ್ಮದೂ ಒಂದು ಹಾರೈಕೆ ಇರಲಿ.