Site icon Vistara News

ಶ್ರೀಲಂಕಾಕ್ಕೆ 8,269 ಕೋಟಿ ರೂ. ಸಾಲದ ನೆರವಿನ ಅವಧಿ ವಿಸ್ತರಿಸಿದ ಭಾರತ, ಯಾಕೆ ಈ ಸಾಲ?

India extends credit facility for Sri Lanka

#image_title

ನವ ದೆಹಲಿ: ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಶ್ರೀಲಂಕಾ ಸರ್ಕಾರಕ್ಕೆ 2022ರಲ್ಲಿ ಒದಗಿಸಲಾದ 8,269 ಕೋಟಿ ರೂ (1 ಬಿಲಿಯನ್ ಡಾಲರ್) ಸಾಲ ಸೌಲಭ್ಯವನ್ನು ಇನ್ನೊಂದು ವರ್ಷಕ್ಕೆ ಮುಂದುವರಿಸಲಾಗಿದೆ. ಶ್ರೀಲಂಕಾ ಸರಕಾರದ ಮನವಿಯ ಮೇರೆಗೆ ಈ ಪ್ರಕ್ರಿಯೆಯನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿಗೆ ಒಳಗಾದ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಹಾಗೂ ವಿತರಿಸಲು ಮಾರ್ಚ್ 2022ರಲ್ಲಿ ಭಾರತ ಸರಕಾರ ಸಾಲ ಸೌಲಭ್ಯವನ್ನು ನೀಡಿತ್ತು. ಆ ಒಪ್ಪಂದಕ್ಕೆ ತಿದ್ದುಪಡಿ ಮಾಡಲಾಗಿದ್ದು ಶ್ರೀಲಂಕಾದ ಹಣಕಾಸು ರಾಜ್ಯ ಸಚಿವ ಶೆಹಾನ್ ಸೆಮಾಸಿಂಘೆ ಅವರ ಸಮ್ಮುಖದಲ್ಲಿ ಸಹಿ ಹಾಕಲಾಗಿದೆ.

ಭಾರತವು ಕಳೆದ ವರ್ಷ ಶ್ರೀಲಂಕಾಕ್ಕೆ ಆಹಾರ, ಇಂಧನ ಮತ್ತು ಔಷಧಗಳನ್ನು ಖರೀದಿಸಲು ಸುಮಾರು 4 ಬಿಲಿಯನ್ ಡಾಲರ್ ಮೌಲ್ಯದ ಆರ್ಥಿಕ ಸಹಾಯವನ್ನು ನೀಡಿತ್ತು. ಭಾರತವು ಶ್ರೀಲಂಕಾದ ಜನರಿಗೆ ತನ್ನ ಬದ್ಧತೆಯನ್ನು ಮತ್ತೊಂದು ಬಾರಿ ಖಾತರಿಪಡಿಸಿದೆ. ಮಾನ್ಯ ಸಚಿವ ಶೆಹಾನ್​ ಅವರ ಉಪಸ್ಥಿತಿಯಲ್ಲಿ ಇಂದು ತಿದ್ದುಪಡಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದವು ಔಷಧ, ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಖರೀದಿಗೆ 8,269 ಕೋಟಿ ರೂ. ಸಾಲವನ್ನು ಮೂಲ ಅವಧಿಯ ನಂತರ ಇನ್ನೂ ಒಂದು ವರ್ಷ ಬಳಸಲು ಅನುವು ಮಾಡಿಕೊಟ್ಟಿದೆ ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್​ ಮಾಡಿದೆ.

ಇದನ್ನೂ ಓದಿ : ಶಾಂಘೈ ಸಹಕಾರ ಸಂಘದ ಸಭೆ ವರ್ಚುಯಲ್ ರೂಪದಲ್ಲಿ ನಡೆಸಲು ಭಾರತ ಹಠಾತ್​​ ನಿರ್ಧಾರ

ಶ್ರೀಲಂಕಾ ಸರ್ಕಾರದ ಮನವಿಗೆ ಪ್ರತಿಕ್ರಿಯೆಯಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮೂಲಕ ಸಾಲ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಇದು ಕಳೆದ ವರ್ಷ ಭಾರತ ಒದಗಿಸಿದ 4 ಬಿಲಿಯನ್ ಡಾಲರ್​ನ ಭಾಗವಾಗಿದೆ. ತಿದ್ದುಪಡಿ ಮಾಡಿದ ಒಪ್ಪಂದಕ್ಕೆ ಸಹಿ ಹಾಕಿದ ವೇಳೆ ಶ್ರೀಲಂಕಾದ ಹಣಕಾಸು ಸಚಿವಾಲಯ ಮತ್ತು ಭಾರತೀಯ ಹೈಕಮಿಷನ್​​ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು, ಎಸ್​ಬಿಐ ಅಧಿಕಾರಿಗಳು ವರ್ಚುಯಲ್ ಮೂಲಕ ಪಾಲ್ಗೊಂಡರು.

ಕಳೆದ ವರ್ಷದಿಂದ ಭಾರತ ನೀಡಿರುವ ಸಾಲ ಸೌಲಭ್ಯವನ್ನು ಶ್ರೀಲಂಕಾ ಸರ್ಕಾರ, ಆದ್ಯತೆಗಳಿಗೆ ಅನುಗುಣವಾಗಿ ಇಂಧನ, ಔಷಧಿಗಳು, ಆಹಾರ ಪದಾರ್ಥಗಳು ಮತ್ತು ಕೈಗಾರಿಕಾ ಕಚ್ಚಾ ವಸ್ತುಗಳ ಖರೀದಿಗೆ ಬಳಸುತ್ತಿದೆ.

ನೆರೆಹೊರೆಯವರಿಗೆ ಅದ್ಯತೆ ಎಂಬ ನೀತಿಗೆ ಅನುಗುಣವಾಗಿ ಈ ನೆರವು ನೀಡಲಾಗಿದೆ ಎಂದು ಕೊಲಂಬೊದಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಶ್ರೀಲಂಕಾಕ್ಕೆ ಭಾರತದ ನಿರಂತರ ಬೆಂಬಲ ನೀಡಲಾಗುತ್ತದೆ. ಶ್ರೀಲಂಕಾದ ಜನರೊಂದಿಗೆ ನಿಲ್ಲುವ ನಮ್ಮ ಬದ್ಧತೆಗೆ ಮುಂದುವರಿಯಲಿದೆ ಎಂದು ಟ್ವೀಟ್​ನಲ್ಲಿ ಬರೆಯಲಾಗಿದೆ.

Exit mobile version