Site icon Vistara News

Abu Bakr al-Baghdadi: ಇಸ್ಲಾಮಿಕ್ ಸ್ಟೇಟ್ ನಾಯಕ ಅಬು ಬಕರ್ ಅಲ್-ಬಾಗ್ದಾದಿಯ ಪತ್ನಿಗೆ ಮರಣ ದಂಡನೆ ವಿಧಿಸಿದ ಇರಾಕ್‌

Abu Bakr al-Baghdadi

Abu Bakr al-Baghdadi

ಬಾಗ್ದಾದ್‌: ಬುಧವಾರ (ಜುಲೈ 10) ಇರಾಕ್ ಕ್ರಿಮಿನಲ್ ನ್ಯಾಯಾಲಯವು ಹತ್ಯೆಗೀಡಾದ ಇಸ್ಲಾಮಿಕ್ ಸ್ಟೇಟ್ ನಾಯಕ ಅಬು ಬಕರ್ ಅಲ್-ಬಾಗ್ದಾದಿ (Abu Bakr al-Baghdadi)ಯ ಪತ್ನಿಗೆ ಮರಣ ದಂಡನೆ ವಿಧಿಸಿದೆ. ಐಸಿಸ್ (ISIS) ಗುಂಪಿನೊಂದಿಗೆ ಕೆಲಸ ಮಾಡಿದ ಮತ್ತು ಯಜಿದಿ ಮಹಿಳೆಯರನ್ನು ವಶಕ್ಕೆ ಪಡೆದ ಆರೋಪ ಆಕೆಯ ಮೇಲಿದೆ ಎಂದು ಮಹಿಳೆಯ ಹೆಸರನ್ನು ಉಲ್ಲೇಖಿಸದೆ ಕೋರ್ಟ್‌ ತೀರ್ಪು ನೀಡಿದೆ.

ಆಕೆಯನ್ನು ಬಾಗ್ದಾದಿಯ ಮೊದಲ ಪತ್ನಿ ಅಸ್ಮಾ ಮೊಹಮ್ಮದ್ (Asma Mohammed) ಅಲಿಯಾಸ್ ಅಸ್ಮಾ ಫೌಜಿ ಮೊಹಮ್ಮದ್ ಅಲ್-ಕುಬೈಸಿ ಎಂದು ಮಾಧ್ಯಮಗಳು ಗುರುತಿಸಿವೆ. ಅಮಾನವೀಯ ಕೃತ್ಯ ಮತ್ತು ಯಜಿದಿ ಜನರ ವಿರುದ್ಧದ ನರಮೇಧ, ಭಯೋತ್ಪಾದಕ ಕೃತ್ಯಗಳಿಗೆ ಕೊಡುಗೆ ನೀಡಿದ್ದಕ್ಕಾಗಿ ಬಾಗ್ದಾದಿ ಪತ್ನಿಗೆ ಮರಣ ದಂಡನೆ ವಿಧಿಸಲಾಗಿದೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಕೋರ್ಟ್‌ ತೀರ್ಪಿನಲ್ಲಿ ಏನಿದೆ?

“ಕಾರ್ಖ್ (ಪಶ್ಚಿಮ ಬಾಗ್ದಾದ್) ಕ್ರಿಮಿನಲ್ ನ್ಯಾಯಾಲಯವು ಭಯೋತ್ಪಾದಕ ಅಬು ಬಕರ್ ಅಲ್-ಬಾಗ್ದಾದಿಯ ಪತ್ನಿಗೆ ಮರಣ ದಂಡನೆ ವಿಧಿಸಿದೆ. ಈಕೆಯ ವಿರುದ್ಧ ದಾಯೆಶ್ (ಐಎಸ್) ಭಯೋತ್ಪಾದಕ ಗುಂಪಿನೊಂದಿಗೆ ಕೆಲಸ ಮಾಡಿದ ಆರೋಪವಿದೆ. ಮಾತ್ರವಲ್ಲ ಯಾಜಿದಿ ಮಹಿಳೆಯರನ್ನು ತನ್ನ ಮನೆಯಲ್ಲಿ ಬಂಧಿಸಿದ ಅಪರಾಧಕ್ಕಾಗಿ ಮರಣ ದಂಡನೆ ವಿಧಿಸಲಾಗಿದೆ” ಎಂದು ಇರಾಕ್‌ನ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಉತ್ತರ ಇರಾಕ್‌ನ ಸಿಂಜಾರ್ ಜಿಲ್ಲೆಯಲ್ಲಿ ಐಸಿಸ್ ಉಗ್ರರು ಅಪಹರಿಸಿದ್ದ ಯಾಜಿದಿಗಳನ್ನು ಅಬು ಬಕರ್ ಅಲ್-ಬಾಗ್ದಾದಿ ಪತ್ನಿ ವಶಕ್ಕೆ ಪಡೆದಿದ್ದಳು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಟರ್ಕಿಯಲ್ಲಿ ಬಂಧನಕ್ಕೊಳಗಾದ ನಂತರ ಆಕೆಯನ್ನು ಮತ್ತೆ ಇರಾಕ್‌ಗೆ ಕರೆತರಲಾಗಿತ್ತು. ಟರ್ಕಿ 2019ರ ನವೆಂಬರ್‌ನಲ್ಲಿ ಬಾಗ್ದಾದಿಯ ಪತ್ನಿಯನ್ನು ಬಂಧಿಸುವುದಾಗಿ ಘೋಷಿಸಿತ್ತು.

ಯಾರು ಈ ಅಬು ಬಕರ್ ಅಲ್-ಬಾಗ್ದಾದಿ?

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದಾಗ 2019ರ ನವೆಂಬರ್‌ನಲ್ಲಿ ಉತ್ತರ ಸಿರಿಯಾದಲ್ಲಿ ಅಮೆರಿಕ ವಿಶೇಷ ಪಡೆಗಳು ನಡೆಸಿದ ದಾಳಿಯಲ್ಲಿ ಅಬು ಬಕರ್ ಅಲ್-ಬಾಗ್ದಾದಿ ಅಸುನೀಗಿದ್ದ. ಆತ ತೀವ್ರವಾದಿ ದಾಯೆಶ್ ಗುಂಪನ್ನು ಮುನ್ನಡೆಸಿದ್ದ ಮತ್ತು ತಮ್ಮನ್ನು ಎಲ್ಲ ಮುಸ್ಲಿಮರಿಗಿಂತ ಖಲೀಫಾ ಎಂದು ಘೋಷಿಸಿಕೊಂಡಿದ್ದ. ಅಮೆರಿಕ ನೇತೃತ್ವದಲ್ಲಿ ನಡೆದ ದಾಳಿಗಳ ಬಳಿಕ ಇಸ್ಲಾಮಿಕ್ ಸ್ಟೇಟ್ ನಿಯಂತ್ರಣವು ಛಿದ್ರಗೊಳ್ಳುವ ಮೊದಲು ಅಂದರೆ 2014ರಿಂದ 2017ರವರೆಗೆ ಆತ ಇರಾಕ್ ಮತ್ತು ಸಿರಿಯಾದ ವಿಶಾಲ ಪ್ರದೇಶಗಳ ಮೇಲೆ ಹಿಡಿತ ಹೊಂದಿದ್ದ.

ಇದನ್ನೂ ಓದಿ: Sudan crisis : ಸೇನಾಪಡೆ ಮತ್ತು ಅರೆ ಸೇನಾಪಡೆ ನಡುವಿನ ಕಾಳಗಕ್ಕೆ ತತ್ತರಿಸಿದ ಬಡ ಸುಡಾನ್, ಏನಿದರ ಹಿನ್ನೆಲೆ?

ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಮುಖ್ಯಸ್ಥನ ಹತ್ಯೆ

ಟರ್ಕಿ: ಜಾಗತಿಕ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ನ ನಾಯಕ ಅಬು ಹುಸೇನ್ ಅಲ್-ಖುರಾಶಿಯನ್ನು ಟರ್ಕಿಯ ಗುಪ್ತಚರ ಪಡೆಗಳು ಸಿರಿಯಾದಲ್ಲಿ ಕೊಂದಿವೆ ಎಂದು ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಕಳೆದ ವರ್ಷ ಮಾಹಿತಿ ನೀಡಿದ್ದರು.

ಈತನನ್ನು 2023ರ ಏಪ್ರಿಲ್‌ 30ರಂದು ಸಿರಿಯಾದಲ್ಲಿ ಟರ್ಕಿಯ ರಾಷ್ಟ್ರೀಯ ಗುಪ್ತಚರ ಸಂಸ್ಥೆಯು ಮುಗಿಸಿದೆ. ಸಂಸ್ಥೆಯು ಖುರಾಶಿಯನ್ನು ಬಹಳ ಸಮಯದಿಂದ ಹಿಂಬಾಲಿಸಿತ್ತು ಎಂದು ಟರ್ಕ್ ಬ್ರಾಡ್‌ಕಾಸ್ಟರ್‌ಗೆ ನೀಡಿದ ಸಂದರ್ಶನದಲ್ಲಿ ಎರ್ಡೊಗನ್‌ ಹೇಳಿದ್ದರು. ಬಂಡುಕೋರ ಗುಂಪುಗಳಿಂದ ನಿಯಂತ್ರಿಸಲ್ಪಡುತ್ತಿರುವ ಉತ್ತರ ಸಿರಿಯನ್ ಪಟ್ಟಣವಾದ ಜಂಡರಿಸ್‌ನಲ್ಲಿ ಈ ದಾಳಿ ನಡೆದಿತ್ತು.

Exit mobile version